ನಮ್ಮ ಹೆಮ್ಮೆಯ ಭಾರತ (5 - 6)

ನಮ್ಮ ಹೆಮ್ಮೆಯ ಭಾರತ (5 - 6)

೫.ಜಗತ್ತನ್ನು ಬೆರಗಾಗಿಸಿದ ನಾಗರಿಕತೆ: ಭಾರತದ ಸಿಂಧೂ ಕಣಿವೆ ನಾಗರಿಕತೆ
ಸಿಂಧೂ ನದಿಯ ದಡದಲ್ಲಿ ಬೆಳೆದ ಪ್ರಾಚೀನ ನಾಗರಿಕತೆ ಸಿಂಧೂ ಕಣಿವೆ ನಾಗರಿಕತೆ. ಇದು ಸುಮಾರು ಒಂದು ಸಾವಿರ ವರುಷ (ಕ್ರಿ.ಪೂ.೨,೫೦೦ರಿಂದ ಕ್ರಿ.ಪೂ.೧,೫೦೦ ವರೆಗೆ) ಮೆರೆದ ನಾಗರಿಕತೆ. ಇಲ್ಲಿನ ಜನವಸತಿ ಈಗಿನ ಭಾರತ ಹಾಗೂ ಅಫಘಾನಿಸ್ಥಾನಗಳ ಭಾಗಗಳನ್ನು ಮತ್ತು ಈಗಿನ ಇಡೀ ಪಾಕಿಸ್ಥಾನವನ್ನು ಒಳಗೊಂಡಿತ್ತು.

ಸಿಂಧೂ ನಾಗರಿಕತೆಯ ಇಂಜಿನಿಯರುಗಳ ಕೌಶಲ್ಯ ನಮ್ಮನ್ನು ಬೆರಗಾಗಿಸುತ್ತದೆ. ಅವರು ಸೀಸ, ತಾಮ್ರ ಮತ್ತು ಸತು ಸಂಶೋಧಿಸಿದರು; ಅಲ್ಲಿನ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಇಟ್ಟಿಗೆಗಳನ್ನು ಉಪಯೋಗಿಸುತ್ತಿದ್ದರು. ರಸ್ತೆಯ ಪಕ್ಕಗಳಲ್ಲಿ ಅತ್ಯುತ್ತಮ ಒಳಚರಂಡಿ ಜಾಲವನ್ನು ರಚಿಸಿದ್ದರು.

ಸಿಂಧೂ ಕಣಿವೆ ಪ್ರದೇಶದಲ್ಲಿ ನಡೆಸಿದ ಉತ್ಖನನದಲ್ಲಿ ಧಾನ್ಯ ಸಂಗ್ರಹ ಕೋಠಿಗಳೂ ಕಂಡು ಬಂದಿವೆ. ಒಂದು ಅಚ್ಚುಕಟ್ಟಾದ, ವಿಶಾಲವಾದ ಸಾರ್ವಜನಿಕ ಸ್ನಾನಗೃಹವೂ ಕಂಡುಬಂದಿದೆ.

ಅಲ್ಲಿ ಬಳಕೆಯಲ್ಲಿದ್ದ "ಸಿಂಧೂ ಲಿಪಿ”ಯನ್ನು ಜಗತ್ತಿನ ಪ್ರಾಚೀನ ಲಿಪಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಸುಮಾರು ಒಂದು ಶತಮಾನದ ಸಂಶೋಧನೆಯ ಫಲವಾಗಿ ಆ ಲಿಪಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು.
೬.ಬಹುಭಾಷೆಗಳ ದೇಶ ಭಾರತ
ಭಾರತದ ಸಂಪನ್ನ ವೈವಿಧ್ಯತೆಗೆ ಒಂದು ಉದಾಹರಣೆ ಇಲ್ಲಿ ಬಳಕೆಯಲ್ಲಿರುವ ಭಾಷೆಗಳು: ೭೮೦ ಭಾಷೆಗಳು ಮತ್ತು ೮೬ ಲಿಪಿಗಳು. ನಮ್ಮ ಭಾಷೆಗಳನ್ನು ಇಂಡೋ-ಆರ್ಯನ್ ಮತ್ತು ದ್ರಾವಿಡ ಭಾಷೆಗಳೆಂದು ೨ ವರ್ಗಗಳಾಗಿ ವರ್ಗೀಕರಿಸಲಾಗಿದೆ.

ಭಾರತದ ಸಂವಿಧಾನ ೨೨ ಭಾಷೆಗಳನ್ನು ಷೆಡ್ಯೂಲ್ ಭಾಷೆಗಳೆಂದು ಗುರುತಿಸಿದೆ. ಭಾರತ ಸರಕಾರದ ಅಧಿಕೃತ ಭಾಷೆ ಹಿಂದಿ. ಇಂಗ್ಲಿಷನ್ನು ಒಂದು ಅಸೋಸಿಯೇಟ್ ಒಫಿಷಿಯಲ್ ಭಾಷೆ ಎಂದು ಕರೆಯಲಾಗಿದೆ. ಹಿಂದಿ ಮತ್ತು ಉರ್ದು ಸಹಿತ ಹಲವು ಭಾರತೀಯ ಭಾಷೆಗಳಿಗೆ ಸಂಸ್ಕೃತವೇ ಮೂಲ ಭಾಷೆ.

ಫೋಟೋ ೧: ಸಿಂಧೂ ಕಣಿವೆಯ ಉತ್ಖನನದಲ್ಲಿ ಕಂಡು ಬಂದ ಅಧ್ಬುತ ರಚನೆಗಳು

ಫೋಟೋ ೨: ಅಲ್ಲಿನ ಉತ್ಖನನದಲ್ಲಿ ಸಿಕ್ಕಿದ ಕೆಲವು ಮುದ್ರೆಗಳು