ನಮ್ಮ ಹೆಮ್ಮೆಯ ಭಾರತ (87)

ನಮ್ಮ ಹೆಮ್ಮೆಯ ಭಾರತ (87)

೮೭.ಕೇರಳದ ಅಚ್ಚರಿ: ಆರಣ್ಮೂಲ ಕನ್ನಡಿ
ಜಗತ್ತಿನಲ್ಲೇ ಅದ್ಭುತವಾದ ಲೋಹಕನ್ನಡಿ ತಯಾರಾಗುವುದು ಕೇರಳದ ಒಂದು ಪುಟ್ಟ ಹಳ್ಳಿಯಲ್ಲಿ. ಅದುವೇ ಪಟ್ಟನಾಮ್‌ತಿಟ್ಟ ಜಿಲ್ಲೆಯ ಚೆಂಗನ್ನೂರು ಹತ್ತಿರದ ಆರಣ್ಮೂಲ.

ಬೆಳ್ಳಿ ಲೇಪದ ಸಾಮಾನ್ಯ ಕನ್ನಡಿಗಳಲ್ಲಿ ಗಾಜಿನ ಹಿಂಭಾಗದಿಂದ ಬೆಳಕಿನ ಪ್ರತಿಫಲನ ಮೂಡುತ್ತದೆ. ಇದರಿಂದಾಗಿ ಪ್ರತಿಬಿಂಬದಲ್ಲಿ ಲೋಪ ಗುರುತಿಸಬಹುದು. ಆದರೆ, ಮಿಶ್ರಲೋಹದಿಂದ ಮಾಡುವ ಆರಣ್ಮೂಲ ಹೊಳಪುಕನ್ನಡಿಯಲ್ಲಿ, ಕನ್ನಡಿಯ ಮೇಲ್ಭಾಗದಿಂದಲೇ ಬೆಳಕು ಪ್ರತಿಫಲಿಸುತ್ತದೆ. ಹಾಗಾಗಿ ಪರಿಪೂರ್ಣ ಪ್ರತಿಬಿಂಬ ಮೂಡುವುದೇ ಇದರ ವಿಶೇಷ.

ಸಿಂಧೂ ಕಣಿವೆ, ಈಜಿಪ್ಟ್, ಸುಮೇರಿಯಾದ ಪ್ರಾಚೀನ ನಾಗರಿಕತೆಗಳ ಜನಾಂಗಗಳಿಗೆ ಲೋಹಗನ್ನಡಿ ತಯಾರಿಸುವ ತಂತ್ರಜ್ನಾನ ತಿಳಿದಿತ್ತು. ಆದರೆ, ಶತಮಾನಗಳ ನಂತರ ಆ ತಂತ್ರಜ್ನಾನ ಕಳೆದುಹೋಯಿತು.

ಇದೀಗ, ಈ ತಂತ್ರಜ್ನಾನ ಆರಣ್ಮೂಲದ ಕೇವಲ ನಾಲ್ಕು ಕುಟುಂಬಗಳಿಗೆ ತಿಳಿದಿರುವ ರಹಸ್ಯ. ಹಿತ್ತಾಳೆ ಮತ್ತು ಸತುವಿನ ಮಿಶ್ರಣದಿಂದ ಈ ಕನ್ನಡಿಗಳನ್ನು ತಯಾರಿಸುತ್ತಾರೆ ಎಂಬುದು ಲೋಹಶಾಸ್ತ್ರಜ್ನರ ಅಭಿಪ್ರಾಯ. ಆದರೆ, ಈ ಲೋಹಗಳನ್ನು ಬೆರೆಸುವ ಪ್ರಮಾಣ ಅಥವಾ ಬೇರೆ ಯಾವುದನ್ನಾದರೂ ಬೆರೆಸಲಾಗುತ್ತದೆಯೇ ಎಂಬುದು ಇಂದಿಗೂ ನಿಗೂಢ. ಲೋಹಮಿಶ್ರಣ ತಯಾರಿ, ಅದನ್ನು ಹದ ಮತ್ತು ಪಾಲಿಷ್ ಮಾಡುವ ವಿಧಾನ ಈಗಲೂ ಗುಟ್ಟು.
ಆರಣ್ಮೂಲದ ಪಾರ್ಥಸಾರಥಿ ದೇವಸ್ಥಾನದ ಹತ್ತಿರ ನೆಲೆಸಿರುವ ನಾಲ್ಕು ತಮಿಳು ವಿಶ್ವಕರ್ಮ ಕುಟುಂಬಗಳಿಗೆ ಮಾತ್ರ ಗೊತ್ತಿರುವ ಗುಟ್ಟು ಇದು. ಒಂದು ದೊಡ್ದ ಲೋಹಗನ್ನಡಿ ತಯಾರಿಸಲು ತಿಂಗಳುಗಳೇ ತಗಲುತ್ತವೆ. ಈ ಕನ್ನಡಿಗಳ ಅಚ್ಚುಗಳನ್ನು ತಯಾರಿಸುವುದು ಆರಣ್ಮೂಲದ ಗದ್ದೆಗಳ ಮಣ್ಣು, ಹಂಚಿನ ಚೂರುಗಳ ಪುಡಿ ಮತ್ತು ಸೆಣಬಿನ ನಾರಿನ ಮಿಶ್ರಣದಿಂದ. ಎರಡು ಅಚ್ಚುಗಳ ನಡುವೆ, ಕನ್ನಡಿಯ ದಪ್ಪಕ್ಕೆ ತಕ್ಕ ಮೇಣ ಹಾಕಿ, ಅಚ್ಚುಗಳನ್ನು ಜೋಡಿಸುತ್ತಾರೆ. ಇದನ್ನು ಕುಲುಮೆಯಲ್ಲಿ ಕಾಯಿಸಿದಾಗ, ಮೇಣ ಕರಗುತ್ತದೆ. ಅನಂತರ, ಆ ಜಾಗದಲ್ಲಿ ಹಿತ್ತಾಳೆ ಮತ್ತು ಸತುವಿನ ಮಿಶ್ರಣ ಸುರಿದು, ಕುಲುಮೆಯಲ್ಲಿ ಎಂಟು ಗಂಟೆ ಕಾಯಿಸಿ, ಮೂರುದಿನ ತಣಿಸುತ್ತಾರೆ. ಆಗ ಅಚ್ಚಿನೊಳಗೆ ಲೋಹದ ಹಾಳೆ ತಯಾರು. ಇದನ್ನು ಸೆಣಬು ಮತ್ತು ವೆಲ್ವೆಟ್ ಬಟ್ಟೆಯಿಂದ ಪಾಲಿಷ್ ಮಾಡಿದಾಗ ಲೋಹಗನ್ನಡಿ ರೆಡಿ!

ಆರಣ್ಮೂಲ ಕನ್ನಡಿಗಳ ತಯಾರಿಯಲ್ಲಿ ಅತ್ಯಂತ ಹೆಚ್ಚು ಸಮಯ ತಗಲುವುದು ಪಾಲಿಷ್ ಮಾಡುವುದಕ್ಕೆ. ೧೨ ಇಂಚು ಅಗಲದ ಒಂದು ಕನ್ನಡಿ ಪಾಲಿಷ್ ಮಾಡಲಿಕ್ಕೆ ಆರು ತಿಂಗಳು ಬೇಕಾದೀತು! ಅಲ್ಲಿ ಪ್ರತಿ ವರುಷ ಸುಮಾರು ೧೫,೦೦೦ ಲೋಹಗನ್ನಡಿಗಳು ತಯಾರಾಗುತ್ತಿವೆ. ಅಗ್ಗದ ಗಾಜಿನ ಕನ್ನಡಿಗಳು ಮಾರುಕಟ್ಟೆಗೆ ಬಂದಾಗಿನಿಂದ ಮೂಲೆಗುಂಪಾಗಿದ್ದ ಆರಣ್ಮೂಲ ಲೋಹಗನ್ನಡಿಗಳು ಎರಡು ದಶಕಗಳಿಂದೀಚೆಗೆ ಮತ್ತೆ ಪ್ರಚಾರಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ.