ನಯನ ಮನೋಹರ ಮಾವಿನ ಕುರ್ವೆ ದ್ವೀಪ

ನಯನ ಮನೋಹರ ಮಾವಿನ ಕುರ್ವೆ ದ್ವೀಪ

ನಯನ ಮನೋಹರ ಶರಾವತಿ ನದಿಯ ದಡದಲ್ಲಿರುವ ಹೊನ್ನಾವರ. ಬ್ರಿಟಿಷರ ಆಳ್ವಿಕೆಯ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿತವಾಗಿರುವ ಕರ್ನಲ್ ಹಿಲ್ ಒಂದೆಡೆಯಾದರೆ, ಶರಾವತಿ ನದಿಗೆ ಹೊಂದಿಕೊಂಡಿರುವ ನಿಸರ್ಗವೇ ನಿರ್ಮಿಸಿಕೊಂಡಿರುವ ಒಂದು ಪುಟ್ಟ ದ್ವೀಪ ಮಾವಿನಕುರ್ವೆ ಇನ್ನೊಂದೆಡೆ. 

ಕ್ರಿ.ಶ. 1854 ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಹಣವನ್ನು ವ್ಯಾಪಾರಕ್ಕಾಗಿ ತೊಡಗಿಸಿದ್ದರು. ರಾಣಿಯ ಆಡಳಿತದಲ್ಲಿದ್ದ ಸ್ವತಂತ್ರವಾಗಿದ್ದ ಗೇರುಸೊಪ್ಪೆಯನ್ನು ಆಕ್ರಮಿಸಿಕೊಂಡರು. ಮುಂದೆ ನಡೆದ ಯುದ್ಧದಲ್ಲಿ ಅವರ ಮುಖ್ಯ ಕಮಾಂಡರ್ ಆದ ಕರ್ನಲ್ ಅವರನ್ನು ಕೊಂದರು. ಆಗ ಬ್ರಿಟಿಷರು ಕರ್ನಲ್‌ ರವರ ಸವಿನೆನಪಿಗಾಗಿ ಬೆಟ್ಟದ ಮೇಲೆ ಒಂದು ಸ್ತಂಭವನ್ನು ಸ್ಥಾಪಿಸಿ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಿದರು. ಇದೇ ಕರ್ನಲ್ ಹಿಲ್, ಇತ್ತೀಚಿನ ದಿನಗಳಲ್ಲಿ ಇದು ಒಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ಹೊನ್ನಾವರದ ರೋಟರಿ ಕ್ಲಬ್‌ನವರು ಇಂದು ಇದನ್ನು ಒಂದು ದೊಡ್ಡ ಉದ್ಯಾನವನವಾಗಿ ಮಾರ್ಪಡಿಸಿ ಎಲ್ಲ ಪ್ರವಾಸಿಗರ ಗಮನಸೆಳೆಯುವಂತೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ದ್ವೀಪ ಮಾವಿನಕುರ್ವೆ, ದ್ವೀಪ ಚಿಕ್ಕದಾದರೂ ಇಲ್ಲಿ ನೆಲೆಸಿರುವವರ ಸಂಖ್ಯೆ ತುಂಬಾ ಇದೆ. ಕೃಷಿ ಮುಖ್ಯ ಉದ್ಯೋಗವಾದರೂ ಕೈಕಸುಬನ್ನು ಮಾಡಿಕೊಂಡಿದ್ದಾರೆ. ಇಲ್ಲಿ ನಾಮಧಾರಿ, ಕೊಂಕಣ ಆಭಾರಿಯರೂ, ಹವ್ಯಕರೂ, ಕೊಂಕಣಿಗಳು, ಗೌಡರು, ಶೆಟ್ಟರು, ಅಂಬಿಗರು, ಹಲವಾರು ಜನರು ವಾಸವಾಗಿದ್ದಾರೆ. 

'ಮಾವಿನ ಕುರ್ವೆ' ಚಿಕ್ಕ ದ್ವೀಪವಾದರೂ ಇದರ ಹೆಸರು ಇತಿಹಾಸದ ಪುಟಗಳಲ್ಲಿ ಬಿಂಬಿತ. ಕಾರಣ ಇಲ್ಲಿಯ 'ಬೀಗ'... ರಾಜರು, ವರ್ತಕರು, ಜನಸಾಮಾನ್ಯರ ಮೆಚ್ಚುಗೆ ಮಾತ್ರವಲ್ಲ ಒಂದು ನಂಬಿಕೆಯ ವಸ್ತುವಾಗಿತ್ತು. ಈ ಬೀಗ ಇದು 'ಮಾವಿನಕುರ್ವೆ ಬೀಗ' ಎಂದೇ ಇಂದಿಗೂ ಪ್ರಸಿದ್ಧಿ. ಒಂದು ಕಾಲದಲ್ಲಿ ಕೈಯಿಂದಲೇ ತಯಾರಿಸಿದ ಮಾವಿನಕುರ್ವೆ ಬೀಗ ಎಲ್ಲರ ಗಮನಸೆಳೆದಿತ್ತು. ಗಜಗಾತ್ರದ ಬೀಜ, ಚಿಕ್ಕಬೀಗ ಹೀಗೆ ವಿವಿಧ ಆಕೃತಿಯ ಬೀಗಗಳು ಎಲ್ಲರ ಮನೆಯಲ್ಲೂ ಬಳಕೆಯಾಗುತ್ತಿತ್ತು. ಮಾವಿನ ಕುರ್ವೆ ಬೀಗ ಕೈಯಿಂದ ತಯಾರಿಸುವಂಥದ್ದು, ಮಡಗಿ ಎಂಬ ಪ್ರದೇಶದಲ್ಲಿ ವಾಸವಾಗಿರುವ ಕೊಂಕಣ ಆಬಾರಿಯವರ ಕುಟುಂಬಸ್ಥರು ಈ ಬೀಗವನ್ನು ಕೈಯಿಂದ ತಯಾರಿಸಿ ಗ್ರಾಹಕರ ಬೇಡಿಕೆ ಮೇರೆಗೆ ಒದಗಿಸುತ್ತಿದ್ದರು.

"ಮಾವಿನ ಕುರ್ವೆ ಚಿಕ್ಕ- ಚೊಕ್ಕ ದ್ವೀಪ. ಇತಿಹಾಸದ ಪುಟಗಳಲ್ಲಿ ಬಿಂಬಿತವಾಗಿರುವ ಮಾವಿನಕುರ್ವೆ ಬೀಗದಿಂದ... ರಾಜರ, ವರ್ತಕರ, ಜನಸಾಮಾನ್ಯರ ಮೆಚ್ಚುಗೆಯ ತಾಣ. ಆಚೆ - ಈಚೆ ಜಲಧಾರೆಯ ನಡುವೆ ನಮ್ಮ ಪಯಣ ಸಾಗಿದರೆ ಆಹಾ! ಹಾ... ಎಂಥ ಅದ್ಭುತ ಅನುಭವ, ಐತಿಹಾಸಿಕ ಕುರುಹುವನ್ನು ಹೊತ್ತಿರುವ ಹೊನ್ನಾವರದ ಹೊನ್ನು ಎಂದರೆ ತಪ್ಪಾಗಲಾರದು." ಬನ್ನಿ... ಒಮ್ಮೆ... ಪ್ರವಾಸಕ್ಕೆ... 

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು