ನರಮಾನವನಾಗಿ ರಾಮನ ಜನುಮ...(೦೧ / ೦೫)

ನರಮಾನವನಾಗಿ ರಾಮನ ಜನುಮ...(೦೧ / ೦೫)

ಪ್ರತಿ ಬಾರಿಯಂತೆ ಈ ಬಾರಿಯೂ ಉರಿಬಿಸಿಲಿನ ನಡುವೆ ಕಾಲಿಡುತ್ತಿದೆ ಶ್ರೀ ರಾಮನವಮಿ (08. ಏಪ್ರಿಲ್. 2014). ಈಚಿನ ಕೆಲವಾರು ದಿನಗಳಲ್ಲಿ ಸೀತೆ, ಊರ್ಮಿಳೆ, ಮಂಡೋದರಿ, ಶೂರ್ಪನಖಿ, ಭಾನುಮತಿಯಂತಹ ಕೆಲವು ಸ್ತ್ರೀ ಪಾತ್ರಗಳನ್ನು ಕುರಿತು ಬರೆಯುತ್ತಿದ್ದಾಗೆಲ್ಲ ನಮ್ಮ ರಾಮಾಯಣ ಮಹಾಭಾರತಗಳ ಪ್ರಮುಖ ಪುರುಷ ಪಾತ್ರಗಳನ್ನು ಕುರಿತೂ ಅಷ್ಟಿಷ್ಟು ಜಾಲಾಡಿಸಬೇಕೆಂಬ ಅನಿಸಿಕೆ ಮೂಡಿ ಬರುತ್ತಿತ್ತು. ಅದರಲ್ಲೂ ಶ್ರೀ ರಾಮನ ಕುರಿತಾದ ಪುಟ್ಟದೊಂದು ಕವನ ಬರೆದಿದ್ದರೂ (ಶ್ರೀ ರಾಮನಿಗೇನಿತ್ತನಿವಾರ್ಯ?) ಆ ಪಾತ್ರದ ಅರ್ಥ ವ್ಯಾಪ್ತಿಗೆ ಆ ಗಾತ್ರ ತೀರಾ ಸಣ್ಣದೆನಿಸಿತ್ತು. ಅದೇ ಹೊತ್ತಿನಲ್ಲಿ ಸೀತೆಯ ಪಾತ್ರ ಕುರಿತಾದ ಬರಹಕ್ಕೆ ಪ್ರತಿಕ್ರಿಯಿಸುತ್ತ ಸಂಪದಿಗ ಶ್ರೀ ಗಣೇಶ್ ಜಿ, ರಾಮನ ಪಾತ್ರವಾದರೂ ಯಾವ ರೀತಿ ಕಮ್ಮಿ? ಎಂದು ದಬಾಯಿಸಿ ಕೇಳಿದ್ದು ಇನ್ನು ಮನಸಿನಲ್ಲಿ ಹಸಿರಾಗಿದ್ದ ಕಾರಣ, ಈ ಬಾರಿಯ ರಾಮ ನವಮಿಗಾದರೂ ರಾಮನ ಪಾತ್ರದ ಕುರಿತು ಏನಾದರೂ ಬರೆಯಲೆ ಬೇಕೆಂಬ ತುಡಿತ ಹೆಚ್ಚಾದಾಗ ಮೂಡಿದ ಬರಹ "ನರಮಾನವನಾಗಿ ರಾಮನ ಜನುಮ..." ( ಹೀಗೆ ಭಾನುಮತಿಯ ಬರಹಕ್ಕೆ ಪ್ರೇರಣೆಯಾದವರು ಸಂಪದಿಗ ಸಪ್ತಗಿರಿಗಳು). ಪುರುಷನೆಂಬ ಕಾರಣಕ್ಕೊ ಏನೊ ಸ್ತ್ರೀ ಪಾತ್ರಗಳಿಗೆ ದಕ್ಕುವ ಅನುಕಂಪ, ಧನಾತ್ಮಕ ಪರಿಗಣನೆಗಳಿಂದ ಹೊರಗುಳಿಯುವ ಅನೇಕ ಪ್ರಮುಖ ಪಾತ್ರಗಳಲ್ಲಿ ರಾಮನೂ ಒಬ್ಬನೆಂದು ನನ್ನ ಅನಿಸಿಕೆ. ಜತೆಗೆ ಪುರುಷ ಪ್ರಧಾನ ಸಾಮಾಜಿಕ ಕಟ್ಟಳೆಗಳ ಕನ್ನಡಿಯಲ್ಲಿ ನೋಡಿದಾಗ ಕಾಣುವ ಪ್ರತಿಬಿಂಬ ರಾಮನ ಪಾತ್ರದ ಸಮಗ್ರತೆಯನ್ನು ಸಂಪೂರ್ಣವಾಗಿ ಚಿತ್ರಿಸುವುದಿಲ್ಲ. ಆ ಪಾತ್ರದ ಗುಣಾವಗುಣಗಳ ನಿಜವಾದ ಸಂತುಲಿತ ತುಲನೆ ಸಾಧ್ಯವಾಗುವುದು ಸಮಗ್ರ-ಸಮಷ್ಟಿತ ದೃಷ್ಟಿ ಕೋನದಿಂದ ನೋಡಿದಾಗ ಮಾತ್ರ. ಅಂತಹ ಒಂದು ಕಿರು ಯತ್ನ - ಈ ಕಾವ್ಯ ಬರಹ. ಒಟ್ಟು ಚತುಷ್ಪಾದದ ಇಪ್ಪತ್ತೈದು ಪದ್ಯಗಳಾಗಿ ಬಿಟ್ಟ ಕಾರಣ ಓದುವ ಲಹರಿಗೆ ಪೂರಕವಾಗಿರಲೆಂದು ಐದೈದು ಪದ್ಯಗಳ ಕಂತುಗಳಾಗಿಸಿ ಪೂರಕ ವಿವರಣೆಯೊಂದಿಗೆ ಪ್ರಕಟಿಸುತ್ತಿದ್ದೇನೆ. ಇದು ಆ ಸರಣಿಯ ಮೊದಲ ಕಂತು. ರಾಮಾವತಾರಕ್ಕೆ ರಾಮಾಯಣದ ರಾಮನ ಮೂಲಕ ಆರಂಭಿಸುವುದೆ ಆ ಪಾತ್ರದ ಸಮಗ್ರತೆಗೆ ತೊಡಿಸುವ ದೋಷವಾಗುವ ಕಾರಣ, ಅದರ ಸಂಪೂರ್ಣ ಹಿನ್ನಲೆ - ಅಂದರೆ ದಶಾವತಾರದ ಹಿನ್ನಲೆಯಿಂದಲೆ ಆರಂಭಿಸಬೇಕಾಗುತ್ತದೆ.  

ಮೂರ್ಖತೆಯ ತೆಗುಳು, ದ್ವಾರಪಾಲರ ಅಹಂಕಾರಗಳು
ನೆಮ್ಮದಿಯ ವೈಕುಂಠ, ಕಿಚ್ಚನ್ಹಚ್ಚಿಸಿ ಮಹಾಲಕ್ಷ್ಮಿಗೆ ದಿಗಿಲು 
ಸನಕಾದಿ ಮುನಿಗಳ ಶಾಪ, ಭೂಲೋಕದ ಜನ್ಮಪರಿತಾಪ
ಸೇವೆಯಾಳುಗಳ ವತಿಯಿಂದ, ಶ್ರೀ ಹರಿಗೂ ಬಿಡದ ಕೂಪ || ೦೧ ||

ಬರಿಯ ರಾಮಾಯಣದ ರಾಮಾವತಾರ ಮಾತ್ರವಲ್ಲದೆ ಮತ್ತೆ ಹಲವು ಅವತಾರಗಳಿಗೆ ನಾಂದಿಯಾದದ್ದೆ ಈ ಒಂದು ಸಂಘಟನೆಯಿಂದ. ಶ್ರೀ ಹರಿ ವೈಕುಂಠವಾಸಿಯಾಗಿ ಮಾತೆ ಮಹಾಲಕ್ಷ್ಮಿಯ ಜತೆ ಹಾಯಾಗಿ ಕ್ಷೀರಸಾಗರದಲ್ಲಿ ವಿಹರಿಸುತ್ತಲೊ, ವಿಶ್ರಮಿಸುತ್ತಲೊ ಇದ್ದವನನ್ನು ಈ ಅವತಾರಗಳ ವ್ಯವಹಾರಕ್ಕೆ ದೂಡಿದ್ದು ಕೇವಲ ಕೆಲವು ಮುರ್ಖ ತೆಗಳುವಿಕೆಯ ಮಾತುಗಳು. ಹೋಗಲಿ,  ಆ ಮಾತುಗಳನ್ನು ಆಡಿದ್ದಾದರೂ ಯಾರು - ಶ್ರೀ ಹರಿಯೆ ? ಅಂದರೆ ಅದೂ ಇಲ್ಲ. ಎಲ್ಲಾ ತಲೆಹರಟೆಗೆ ಕಾರಣಕರ್ತರು ಅಹಂಕಾರ ಮದದಿಂದ ಕೊಬ್ಬಿದ್ದ ದ್ವಾರಪಾಲಕರು. ಮನೆ ಬಾಗಿಲ ಪೊರೆವವರಿಗಿರಬೇಕಾಗಿದ್ದ ಸಹಜ ನಯವಿನಯಗಳ ಎಲ್ಲೆ ಮೀರಿ, ಅಹಂಕಾರ, ಧೂರ್ತತೆಯ ದಾಸರಾಗಿಹೋಗಿದ್ದ ಈ ಜಯ-ವಿಜಯರು ಶ್ರೀಮನ್ನಾರಾಯಣ ದರ್ಶನಕ್ಕೆಂದು ಬಂದಿದ್ದ ಸನಕಾದಿ ಬ್ರಹ್ಮ ಮಾನಸ ಪುತ್ರರನ್ನು ಶ್ರೀ ವಿಷ್ಣುವಿನ ವಿಶ್ರಾಂತಿಯ ಹೊತ್ತೆಂಬ ನೆಪವೊಡ್ಡಿ ಒಳಗೆ ಬಿಡದೆ ತಡೆದು ಅವಮಾನಿಸಿದಾಗ ಕುಪಿತಗೊಂಡ ಮುನಿ ಬಳಗ ಸುಮ್ಮನೆ ಬಿಟ್ಟೀತೆ? ಒಲೈಕೆಯ ಮಾತಿಗೂ ಬಗ್ಗಲಿಲ್ಲ, ಎಚ್ಚರಿಕೆ-ಬೆದರಿಕೆಗಳನ್ನು ಲಕ್ಷಿಸಲಿಲ್ಲ. ಸರಿ, ಕಮಂಡಲದ ಮಂತ್ರಾಜಲ ಹಸ್ತಮುಖೇನ ಪ್ರೋಕ್ಷಿಸಿಯೆಬಿಟ್ಟಿತು ಹನಿಗಳ ರೂಪದಲ್ಲಿ ಶಾಪದ ತುಣುಕುಗಳನ್ನು... ಶಾಪ ದಕ್ಕಿದ್ದೇನೊ ಯಕಶ್ಚಿತ್ ದ್ವಾರಪಾಲಕರಿಗೆ ಆದರೂ ಬಿಸಿ ತಟ್ಟಿದ್ದು ಮಾತ್ರ ಇಡಿ ವೈಕುಂಠದ ಶಾಂತಿಗೆ. ಹಾಯಾಗಿ ಪತಿಯೊಡನಿದ್ದ ಶ್ರೀ ಮಹಾಲಕ್ಷ್ಮಿಗೂ ದಿಗಿಲಿನ ಕಿಚ್ಚನ್ಹಬ್ಬಿಸಿ ಪತಿ ವಿಯೋಗದ ಉಣಿಸನ್ನು ಬಡಿಸಿದ್ದು ಮಾತ್ರ ಸಾಲದೆಂಬತೆ, ಆ ಅವತಾರಗಳಲ್ಲಿ ತಾನೂ ಪಾತ್ರಧಾರಿಣಿಯಾಗುವ ಅನಿವಾರ್ಯಕ್ಕೊಳಗಾಗಬೇಕಾಯ್ತು. ಇನ್ನೂ ಸಾಕ್ಷಾತ್ ಶ್ರೀ ಹರಿಗೊ - ತನ್ನದೇನೂ ನೇರ ಕೈವಾಡ ತಪ್ಪಿರದಿದ್ದರೂ, ಕೇವಲ ತನ್ನಡಿಯಾಳುಗಳಾಡಿದ ಮಾತುಗಳೆಂಬ ಹೊಣೆಗಾರಿಕೆಗೆ ಬಲಿಬಿದ್ದು ತಾನೂ ಪರಿತಾಪ ಅನುಭವಿಸುವ ಕೂಪದಲ್ಲಿ ಬೀಳಬೇಕಾಯ್ತು. ಹೋಗಲಿ, ಅದೇನು ಕಾಶಿಗೊ, ರಾಮೇಶ್ವರಕ್ಕೊ ತೀರ್ಥಯಾತ್ರೆಗೆ ಹೋಗಿ ಬಂದ ತರವೆ? ಎಂದರೆ ಅದೂ ಇಲ್ಲ - ಇಡೀ ಶಾಪಗಳೆ ಜೀವಮಾನಾಂತರ ವಿಸ್ತಾರದಲ್ಲಿ ನಡೆಯಬೇಕಿರುವ ಜಗನ್ನಾಟಕಗಳು. ಜಗವನ್ನು ಸುಸ್ಥಿತಿಯಲ್ಲಿಡುವ ಹೊಣೆ ಹೊತ್ತ ಶ್ರೀ ವಿಷ್ಣುವೆ ತಾನೆ ಅಸಹಾಯಕನಂತೆ ಭೂಮಿಯಲ್ಲಿ ಅವತಾರಗಳನ್ನು ಎತ್ತಿ ಪಾಡು ಪಡಬೇಕಾದ ಅನಿವಾರ್ಯಗಳು. ಲೋಕ ಕಲ್ಯಾಣಾರ್ಥವೆಂದೊ, ಭೂ ಭಾರ ಇಳಿಸುವ ಹೊಣೆಗಾರಿಕೆಯಿಂದ ಎಂತಲೊ ತರತರದ ವಿಶ್ಲೇಷಣೆ ಕೊಡುವ ಸಾಧ್ಯತೆಯಿದ್ದರೂ, ಕೇವಲ ಸಾಮಾನ್ಯ ಮಾನವನೊಬ್ಬನ ದೃಷ್ಟಿಯಿಂದ ನೋಡುವಾಗ ಮೂಡಿಬರುವ ಪ್ರಶ್ನೆ - ಇದರಲ್ಲಿ ಶ್ರೀ ಹರಿಯ ತಪ್ಪಾದರೂ ಏನಿತ್ತು? ಊಳಿಗದವರ ತಪ್ಪಿಗೆ ತಾನೇಕೆ ದಂಡನೆ ಅನುಭವಿಸುವಂತಾಯ್ತು ಭಕ್ತವತ್ಸಲ ಶ್ರೀ ಮನ್ನಾರಾಯಣ?

ಸೇವಕರ ತಪ್ಪಿಗೆ ಮಾಲೀಕನೆ, ಹೊತ್ತಂತೆ ಹೊಣೆ ಯಾತನೆ
ಭೂಭಾರವಿಳಿಸೆ ಅವತಾರವನೆತ್ತೊ, ಅಪೂರ್ವ ಸಂಘಟನೆ
ದುಷ್ಟರಾದರು ಸರಿ ದೂರವಿರಲಾರೆವೆಂದಾ ಜಯ ವಿಜಯ
ಅವರ ಕರ್ಮಕೆ ಭೂಲೋಕದಲಿ ಜನಿಸಿದ ಅದ್ಬುತ ವಿಷಯ || ೦೨ ||

ಒಟ್ಟಾರೆ ತಪ್ಪು ಅವನದೊ, ಅವನ ನಂಬಿಕೆಯ ಭಟರದೊ - ನೈತಿಕತೆಯ ದೃಷ್ಟಿಯಿಂದ ಒಡೆಯನಾಗಿ ಅವರ ತಪ್ಪಿಗೆ ತಾನೂ ಪರೋಕ್ಷ ಕಾರಣವೆಂಬ ಕಾರಣಕ್ಕೊ, ತಾನೂ ತಪ್ಪಿತಸ್ಥನ ರೀತಿ ಭಾಗಿಯಾಗುತ್ತಾನೆ ಪರಮಾತ್ಮ. ಇಲ್ಲೊಂದು ಬಲು ಸೋಜಿಗದ ಧರ್ಮ ಸೂಕ್ಷ್ಮವನ್ನು ಕಾಣಬಹುದು -  ತುಸು ಆಳವಾಗಿ ಗಮನಿಸಿ ನೋಡಿದರೆ. ದೇವಾಧಿದೇವನಾಗಿ ಸಮಸ್ತ ಸೃಷ್ಟಿಯ ಪರಿಪಾಲನೆಯ ಹೊಣೆಗಾರಿಕೆ ಹೊತ್ತ ಶ್ರೀ ವಿಷ್ಣು ಸೇವಕರ ತಪ್ಪಿಗನುಸಾರ ದಂಡನೆಯಾಯಿತೆಂದು ಅನುಭವಿಸಲು ಬಿಟ್ಟುಬಿಡಬಹುದಿತ್ತು. ಆದರೆ ಸ್ವಲ್ಪ ತಾರ್ಕಿಕವಾಗಿ ನೋಡಿದರೆ ಯಾಕೆ ಶ್ರೀ ಹರಿಯೆ ತಾನೂ ಇದರಲ್ಲಿ ಭಾಗಿಯೆಂದು ಹೊಣೆಗಾರಿಕೆ ಹೊತ್ತನೆಂಬ ತರ್ಕದ ಹಿನ್ನಲೆ ಅರಿವಾಗುತ್ತದೆ. ಹೇಳಿ ಕೇಳಿ ಉಳಿಗದವರಾದ ಜಯವಿಜಯರು ಕೇವಲ ತಮ್ಮೊಡೆಯನ ಆಜ್ಞೆಯನ್ನು ವಿವೇಚನಾರಹಿತರಾಗಿ ಶಿರಸಾವಹಿಸಿ ಪಾಲಿಸುತ್ತಿದ್ದಿರಬೇಕು. ವಿಶ್ರಾಂತಿ, ವಿರಾಮದ ಹೊತ್ತಲ್ಲಿ ಯಾರನ್ನೂ ಬಿಡಬಾರದೆಂಬ ಆಜ್ಞೆಯನ್ನು ಅವರು ಅಕ್ಷರಶಹಃ ಪಾಲಿಸುವಾಗ ದ್ವಾರಪಾಲಕರ ಬುದ್ದಿಮಟ್ಟದಲ್ಲಿ ಆ ನಿಯಮ ಅನ್ವಯವಾಗದ ಕೆಲವು ವಿಶೇಷ ಸಂಧರ್ಭಗಳು, ವ್ಯಕ್ತಿತ್ವಗಳು ಇರುತ್ತವೆಂದು ಅಲೋಚಿಸಲಾರರು. ಆಲೋಚಿಸಿದರೂ ಕೂಡ, ಯಾರಿಗೆ , ಯಾವ ಸಂಧರ್ಭಕ್ಕೆ ಆ ನೀತಿ ನಿಯಮಾವಳಿ ಅನ್ವಯ ಅಥವಾ ವಿನಾಯತಿಯಾದೀತು ಎಂದು ನಿರ್ಧರಿಸುವುದು ಅವರ ಅರಿವಿನ ವ್ಯಾಪ್ತಿಗೆ ಮೀರಿದ ವಿಷಯ. ಇದನ್ನು ತಪ್ಪಿಸಬಹುದಿದ್ದ ಒಂದೆ ಸಾಧ್ಯತೆಯೆಂದರೆ ನಿಖರವಾಗಿ ಯಾರನ್ನು ಬಿಡಬಹುದು, ಯಾರನು ಬಿಡುವಂತಿಲ್ಲ ಎಂಬ ಸೂಚನೆಯನ್ನು ಮೊದಲೆ ಕೊಟ್ಟಿರಬೇಕು.  ಆದರೆ ಅದು ಸುಲಭದ ಮಾತಲ್ಲ - ಎಲ್ಲರನ್ನೂ ಸಮಾನವಾಗಿ ನೋಡುವ ಮೂಲ ದೈವ ಸಿದ್ದಾಂತಕ್ಕೆ ಸರಿ ಹೊಂದದ ವಿಚಾರ - ತಾನಾಗೆ ಯಾರು ತನಗೆ ಪ್ರಿಯರು, ಯಾರು ಹೆಚ್ಚು ಅಧಿಕಾರ, ಸಲಿಗೆ ಉಳ್ಳವರೂ ಎಂದು ಪರೋಕ್ಷವಾಗಿ ಹೇಳಿದಂತಾಗುತ್ತದೆ. ಬಹುಶಃ ಈ ರೀತಿಯ ಕಾರಣಗಳ ಸಲುವಾಗಿಯೆ ಜಯವಿಜಯರು ತಾವಾಗಿಯೆ ವಿವೇಚಿಸುವುದು ಸಾಧ್ಯವಿರಲಿಲ್ಲ. ಯಾರನ್ನೂ ಒಳಗೆ ಬಿಡಬಾರದ ಸಮಯದಲ್ಲಿ ಅವರೂ ಕೂಡ ಹೋಗುವಂತಿಲ್ಲ - ಸ್ವಾಮಿಯನ್ನೆ ಕೇಳಿ ನಿರ್ಧಾರ ಕೈಗೊಳ್ಳುವ ಹಾಗೂ ಇಲ್ಲ. ಅಂದ ಮೇಲೆ ಅವರ ನಡುವಳಿಕೆಯ ಪ್ರಕ್ರಿಯೆಯಲ್ಲಿ ಅವರಿಗೆ ವಹಿಸಿದ ಜವಾಬ್ದಾರಿಯನ್ನು ಅಂಧರಂತೆ ನಿಭಾಯಿಸಿದ ಕರ್ತವ್ಯ ಪಾರಾಯಾಣತೆಯೂ ಇದೆ. ಹೀಗಾಗಿ ಅವರ ತಪ್ಪಿಗೆ ಅವರಿಬ್ಬರು ಮಾತ್ರರೆ ನೇರ ಹೊಣೆಯಲ್ಲ, ಪರೋಕ್ಷವಾಗಿ ವೈಕುಂಠಾಧಿಪತಿಯಾಗಿ ತಾನೂ ಸಹ. ಹಾಗಂತಲೆ ಅವರೊಡನೆ ತಾನೂ ಶಾಪದ ಪಾಲು ಪಡೆದು ಅನುಭವಿಸಲ್ಹೊರಡುವ ಶ್ರೀ ಹರಿಯ ಪಾತ್ರವೂ ವಿಶಿಷ್ಠ. ಸಾಲದ್ದಕ್ಕೆ ಆ ಸೇವಕರ ಮೇಲಿನ ಕರುಣೆಯೂ ಅಪರಿಮಿತವೆನ್ನಬೇಕು. ಹೆಚ್ಚು ಕಾಲ ದೂರವಿರಲಾರೆವೆಂಬ ಆಸೆಯನ್ನು ಪುರಸ್ಕರಿಸಿ ದುಷ್ಟರಾಗಿ, ಶತ್ರುಗಳಾಗಿ ಮೂರೆ ಜನ್ಮದಲ್ಲಿ ಶಾಪ ತೀರಿಸುವ ಬಯಕೆಗೂ ತಥಾಸ್ತು ಅನ್ನುತ್ತಾನೆ. ಇಡೀ ಪ್ರಕರಣದಲ್ಲಿ ಎದ್ದು ಕಾಣುವ , ಗಮನಿಸಬೇಕಾದ ಅಂಶವೆಂದರೆ ಉನ್ನತ ಸ್ಥಾನದಲ್ಲಿದ್ದೂ ತನ್ನ ನೈತಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳದೆ, ತಾನೂ ಪಾಲುದಾರನಾಗಿ ಭೂಮಿಯಲ್ಲವತಾರ ಎತ್ತುವ ಅಸಾಧಾರಣ ನೀತಿ ಸಂಹಿತೆಯ ಸ್ಪಷ್ಟ ನಿದರ್ಶನ.

ಸ್ಥಿತಿಕರ್ತನ ತಪ್ಪೇನಿಲ್ಲಿ, ಕರುಣೆಯ ಕ್ಷೀರಸಾಗರ ಹೊನಲು
ಭಕ್ತರಂತೆ ಕೈಂಕರ್ಯದವರಿಗು ಹೃದಯವೈಶಾಲ್ಯ ಕಡಲು
ಮುಕ್ತರನಾಗಿಸಲವರನೆ ಪಡಬಾರದ ಪಾಡು ಭೂಲೋಕದೆ
ಭುವಿ ಮನುಜರ ಹಾಗೆ ನೋವು-ಬವಣೆ-ವಿಷಾದ-ಬೇಸರದೆ || ೦೩ ||

ಹಾಗೆ ನೋಡಿದರೆ ಇಲ್ಲಿ ಎದ್ದು ಕಾಣುವ ಅಂಶವೆಂದರೆ ಶ್ರೀ ಹರಿಯ ಹೃದಯ ವೈಶಾಲ್ಯ ಮತ್ತು ಕರುಣೆಯ ಆಳ. ಭಕ್ತರಾಗಲಿ, ಕೈಂಕರ್ಯದಲ್ಲಿರುವ ಭೃರ್ತರಲ್ಲಾಗಲಿ ಇಟ್ಟ ಅದೆ ಸಮಾನ ಪ್ರೇಮ ಮನೋಭಾವ. ಅವರು ತಪ್ಪೆಸಗಿದ್ದಾಯ್ತು, ಪ್ರಬಲ ಮುನಿಜನರ ಶಾಪಕ್ಕೆ ಸಿಲುಕಿದ್ದೂ ಆಯಿತು. ಇನ್ನವರನು ಆಡಿ, ಅಂದು ಫಲವೇನಿದೆ? ಅವರಿಗವರ ತಪ್ಪಿನ ಮನವರಿಕೆಯಾದರಷ್ಟೆ ಸಾಲದು, ಅದಕ್ಕೆ ತಕ್ಕ ಪ್ರಾಯಶ್ಚಿತವೂ ಆಗಬೇಕಲ್ಲ? ಆದರೆ ತನ್ನವರಿಗಾಗಿ ಮರುಗುವ ಹೃದಯ ಸುಮ್ಮನೆ ಶಿಕ್ಷಿಸಲೂ ಬಿಡದು. ಹೇಗಾದರೂ ಅದರ ಯಾತನೆ, ಬವಣೆಗಳ ಭಾರವನ್ನಿಳಿಸಿ ಸುಲಭವಾಗಿಸುವ ದಾರಿ ಹುಡುಕಬೇಕು. ಜತೆಯಲ್ಲೆ ತನ್ನದೇನ್ನುವ ಪರೋಕ್ಷ ನಿರ್ಲಕ್ಷ್ಯದ ಫಲಿತ ಶಿಕ್ಷೆಯೂ ನಿರ್ಲಕ್ಷಿತವಾಗಬಾರದು. ಸರಿ, ಹೇಗೂ ಜಯ ವಿಜಯರ ಮನುಜಾವತಾರ ನಿರ್ಧಾರವಾಯಿತು. ಇನ್ನು ತಾನೂ ಅದೇ ಶಿಕ್ಷೆಯನ್ನುಭವಿಸಿದರೆ ಹೆಚ್ಚು ಕಡಿಮೆ ಸಮರೂಪದ ದಂಡನೆ ಅನುಸರಿಸಿದಂತಾಯ್ತು. ಜತೆಗೆ ಅವರಿಬ್ಬರ ಶೀಘ್ರ ಶಾಪ ವಿಮೋಚನೆಯಾಗಿಸಲಿಕ್ಕೂ ದಾರಿ ಹುಡುಕಿದಂತಾಯ್ತು. ಹಾಗೆಂದುಕೊಂಡೆ ಅವರ ಹಾಗೆ ಮನುಜರೂಪಿಯಾಗಿ ಭುವಿಯಲ್ಲಿ ಜನಿಸಿದರೂ ಅವರಂತೆ ರಾಜ ವೈಭವ, ಪದವಿ, ಸುಖ, ಶಾಂತಿ, ದರ್ಪಗಳ ನೆರಳಲ್ಲಿ ಬದುಕದೆ ಕೇವಲ ಸಾಮಾನ್ಯ ಮಾನವನ ಹಾಗೆ ಬಾಳಿ ಬವಣೆ ಪಡಬೇಕಾಯಿತು - ರಾಜ ಮನೆತನದಲ್ಲಿ ಹುಟ್ಟಿದ್ದರು ಕೂಡಾ. ಒಟ್ಟಾರೆ ಮುಕ್ತಿಯಾಗಿಸಬಯಸಿದ್ದು ಕೈಂಕರ್ಯದವರನ್ನ. ಅದಕ್ಕಾಗಿ ಪಡಬಾರದ ಪಾಡು ಪಟ್ಟಿದ್ದು ಮಾತ್ರ ಶ್ರೀ ರಾಮನವತಾರದಲ್ಲಿದ್ದ ಶ್ರೀ ಹರಿ. ಆ ಅವತಾರದಲ್ಲಿ ತಾನು ಸಾಮಾನ್ಯ ಮನುಜನ ಪಾತ್ರ ವಹಿಸಿದ್ದರೂ ತನ್ನ ಮೂಲ ಶಕ್ತಿ, ಬಲ, ಸಾಮರ್ಥ್ಯಗಳಾವುವೂ ಪ್ರಭಾವ ಬೀರದಂತೆ ದೂರೀಕರಿಸಿ ಕೇವಲ ನರನ ಹಾಗೆ ಈ ಭುವಿಯ ನೋವು, ಬವಣೆ, ವಿಷಾದ, ಬೇಸರಕ್ಕೆಲ್ಲ ನರರಂತೆಯೆ ತಲೊಗೊಟ್ಟು ನಿಭಾಯಿಸಿದ ಅಸೀಮ ಪಾತ್ರ. ಮಾಯೆಯ ಬಲೆಗೆ ಸಿಲುಕಿದ ಸಾಮಾನ್ಯನಷ್ಟೆ ಸಾಮಾನ್ಯನಾಗಿ ನಡೆದುಕೊಂಡ ಉದಾತ್ತ ನಡೆ.

ಅವತಾರವ ಹೊರುವ ಕರ್ಮಕೆ ಮಾನವ ಜನ್ಮವೆ ಬೇಕಿತ್ತಾ
ದುಷ್ಟರ ದಮನಿಸಿ ಹಣಿಯೆ, ಬರಿಗಾಲಲೆ ಹೊಸಕೆ ಸಾಕಿತ್ತ
ಮಾದರಿಯಾಗುತ ಸೂಕ್ತ ಆದರ್ಶಗಳ ಬೆಂಬಲಿಸುವ ಧರ್ಮ
ನಿಭಾಯಿಸೆ ಹಡೆದನೆ ಸಂಕಟ ಮರ್ಯಾದಾಪುರುಷೋತ್ತಮ || ೦೪ ||

ಆದರಿಲ್ಲಿನ್ನೊಂದು ಧರ್ಮ ಸೂಕ್ಷ್ಮವನ್ನು ಗಮನಿಸಬೇಕು. ಹೇಳಿ ಕೇಳಿ ಸ್ಥಿತಿ ಪರಿಪಾಲಕನ ಅಧಿಕಾರಿಯಾದವನು ಶ್ರೀ ವಿಷ್ಣು. ಇಡೀ ಜಗದ ಪಾಲನೆ , ಪೋಷಣೆ ಅವನ ವ್ಯಾಪ್ತಿಗೆ ಬರುವ ವಿಷಯ - ಅದರೊಳಗಡೆಯೆ ಬರುವ ನರ ಮಾನವ ಜನ್ಮದ ಪಾಲನೆ, ರಕ್ಷಣೆಯೂ ಸೇರಿದಂತೆ. ಹೀಗಿರುವಲ್ಲಿ ಮಾನವ ಜನ್ಮದ ಪರಿಪಾಡಲು ಅವನಿಗೆ ತಿಳಿಯದ್ದೇನಲ್ಲ. ತಾನೂ ಕೂಡ ಅದೇ ಜನ್ಮವನ್ನೆತ್ತುವ ಪ್ರಾಯಶ್ಚಿತದ ಬದಲು ಬೇರೆ ಯಾವುದಾದರೂ ಸುಲಭದ ದಾರಿ ಹುಡುಕಬಹುದಿತ್ತು. ಆದರೆ ಅನುಭವಿಸುವ ಶಿಕ್ಷೆಯಲ್ಲಿ ಸಮಾನತೆಯಿರಬೇಕೆಂದೊ, ಈ ನೆಪದಲ್ಲಿ ದುಷ್ಟರ ದಮನಿಸಿ ಭೂಭಾರ ಹಗುರಾಗಿಸುವ ಅವಕಾಶ ಸಿಗುವುದೆಂದೊ ಅಥವಾ ತಾನೆ ಮನುಜನಾಗಿ ಮಾದರಿ ಬದುಕಿನ ರೀತಿಯನ್ನು ತೋರಬೇಕೆಂಬ ಆಳದ ಹೊಣೆಗಾರಿಕೆಯ ಪ್ರಜ್ಞೆಯೊ - ತಾನೂ ನರ ಮಾನವನಾಗೆ ಜನಿಸಲು ನಿರ್ಧರಿಸಿಬಿಟ್ಟ. ಬಹುಶಃ ಈ ನಿರ್ಧಾರದ ಹಿಂದೆ ಕರ್ತವ್ಯ ಪಾಲನೆಯ ಗುರುತರ ಜವಾಬ್ದಾರಿಯೂ ಇರಬೇಕು. ತಾನೆ ಸ್ಥಿತಿ ಪರಿಪಾಲಕನಾಗಿ ನೇರ ಹೊಣೆಗಾರಿಕೆಯಲ್ಲಿರುವಾಗ ಭುವಿಯಲ್ಲಿನ ಆಗು ಹೋಗುಗಳ ನಿರ್ಧಾರಗಳೆಲ್ಲ ತನ್ನ ಕೈಯಲ್ಲಿರುವುದು ಸಹಜ ತಾನೆ? ಆ ಪಾಲನೆ ಯಾವುದೇ ದೋಷಗಳಿಲ್ಲದೆ ಪರಿಪೂರ್ಣವಾಗಿರುವುದು ಮಾತ್ರವಲ್ಲದೆ, ಸ್ಥಳೀಯವಾಗಿರುವ ವಾತಾವರಣ, ಸಾಧ್ಯಾಸಾಧ್ಯತೆಯ ಅಂಶಗಳಿಗೂ ಪೂರಕವಾಗುವಂತಿರಬೇಕು. ವೇದಾವೇದ ನೀತಿ, ನಿಯಮಾವಳಿಗಳ ಕಡತ - ಸಹಜದಲ್ಲಿ, ಸುಲಭದಲ್ಲಿ ಅನುಕರಿಸಲು ಸಾಧ್ಯವಾಗುವಂತೆ ಭುವಿಯ ಅಂತಃಸತ್ವಕ್ಕೆ ಹೊಂದಿಸುವಂತಿರಬೇಕು. ಆದರೆ ಅದನ್ನು ಮಾಡುವುದು ಹೇಗೆ? ಈ ನೀತಿಸೂಕ್ತಿ, ನಿಯಮಾವಳಿಯ ಮಾರ್ಗ ಇಡೀ ಭೂಖಂಡದ ನಡೆನುಡಿಯ ಬುನಾದಿಯಾಗುವ ಮಹತ್ವವಿರುವುದರಿಂದ ಈ ಕಾರ್ಯವನ್ನು ಇನ್ನಾರಿಗೊ ವಹಿಸಲು ಮನಸೊಪ್ಪಿರಲಿಕ್ಕಿಲ್ಲ ಶ್ರೀ ಹರಿಗೆ. ತಾನೆ ಅನುಭವಿಸಿ ಅದರ ಯಾತನೆ, ಬವಣೆ, ಒಳಿತು, ಕೆಡಕುಗಳನ್ನೆಲ್ಲ ಆಳವಾಗಿ ಪರಾಮರ್ಶಿಸಿ , ವಿಮರ್ಶಿಸಿ, ಸಾಧಕಭಾಧಕಗಳನ್ನೆಲ್ಲ ತೂಗಿ ಸಮತೋಲಿಸಿ ತದನಂತರವೆ ನೀತಿ ಸಂಹಿತೆಯಾಗಿ ದಾಖಲಿಸುವ ನಿಶ್ಚಯ ಮಾಡಿರಬೇಕು. ಅದನ್ನು ಸೂಕ್ತವಾಗಿ ಮಾಡಬೇಕೆಂದರೆ ಇರುವ ಅತೀ ಸುಲಭದ ದಾರಿ - ತಾನೆ ಮಾನವನಾಗಿ ಅವತಾರವನ್ನೆತ್ತಿ ಅದರ ಸೂಕ್ತಾಸೂಕ್ತತೆಯ ತುಲನೆ ಮಾಡಿಬಿಡುವುದು. ಮಾನವಾವತಾರದ ಮೂಲ ಬೀಜವಿರುವುದು ಈ ಸೈದ್ದಾಂತಿಕ ನೆಲೆಗಟ್ಟಿನ ಹಿನ್ನಲೆಯಲ್ಲೆ ಎನ್ನಬಹುದೇನೊ.

ಆಯಿತು, ಅವತಾರದ ನಿರ್ಧಾರವೇನೊ ಮಾಡಿದ್ದಾಯ್ತು. ಆದರೆ ಇದೇನು ಸಾಮಾನ್ಯ ಪಯಣವೆ? ಮಾನವನ ಹಾಗೆ ಇದ್ದು ಬದುಕಬೇಕೆಂದರೆ ಒಂದು ಜನ್ಮಾಂತರ ಯಾನವನ್ನೆ ಕೈಗೊಳ್ಳಬೇಕು. ಅಂದ ಮೇಲೆ ಬೆಳಗಾಗೆದ್ದು ಪ್ರಯಾಣಕ್ಕೆ ಹೊರಟು ಕಾರ್ಯ ಮುಗಿಸಿ ರಾತ್ರಿಯೊಳಗಡೆ ಮನೆ ಸೇರಿದಂತಲ್ಲಾ ಲೆಕ್ಕ. ಅದಕ್ಕಾಗೆ ಸಾಕಷ್ಟು ಸಿದ್ದತೆಯಲ್ಲೆ ಹೊರಡಬೇಕಲ್ಲಾ? ಬೇರೆಲ್ಲಾ ಸಿದ್ದತೆಯಷ್ಟೆ ಪ್ರಮುಖವಾದದ್ದು ಮಾತೆ ಮಹಾಲಕ್ಷ್ಮಿಯ ಕುರಿತದ್ದು. ಸ್ವಾಮಿಯಿಲ್ಲದ ವೈಕುಂಠದಲ್ಲಿ ತಾಯಿಗೇನು ಕೆಲಸ? ಸರಿಯೆ, ಅದಕ್ಕೇಕೆ ಚಿಂತಿಸಬೇಕು - ಅದಕ್ಕೆಂದೆ ಮತ್ತೊಂದು ಪಾತ್ರ ಸೃಷ್ಟಿಸಿದರಾಯ್ತಲ್ಲ? ಶ್ರೀ ಹರಿಯ ಜತೆಯಲ್ಲೆ ಇದ್ದ ಹಾಗೂ ಆಯಿತು, ದೂರವಿರುವ ವಿರಹದ ಸನ್ನಿವೇಶವನ್ನು ತಡೆದಂತೆಯೂ ಆಯ್ತು. ಜತೆಗೆ ಸ್ವಾಮಿಯ ಕಾರ್ಯದಲ್ಲಿ ಸಹಕರಿಸುತ್ತ ಪಾಲು ಪಡೆದ ಹಾಗೂ ಆಯ್ತು. ಹೀಗಾಗಿಯೆ ಹುಟ್ಟಿರಬೇಕು ಸೀತೆಯ ಪಾತ್ರದಲ್ಲಿ ಮಹಾಲಕ್ಷ್ಮಿಯ ಅವತಾರವಾದ ಹಿನ್ನಲೆ. ಆದರೆ ಇಲ್ಲೆ ಬರುವುದು ನೋಡಿ ವಿಪರ್ಯಾಸ - ವೈಕುಂಠದಲ್ಲಿರದೆ ಬೇರೆಲ್ಲಿದ್ದರೂ ಸರಿ ಜತೆಯಾಗಿದ್ದರೆ ಸಾಕೆಂಬ ಸದಾಶಯದಲ್ಲಿ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿಯೆ ಸೀತಾಮಾತೆಯ ರೂಪಿನಲ್ಲಿ ಮಾನವಳಾಗಿ ಜನಿಸಿದರೆ, ಆದದ್ದಾದರೂ ಏನು? ಆ ಮಾನವ ಜನ್ಮದಲ್ಲೂ ಒಂದಾಗಿರಲು ಬಿಡದ ಪಾಡು, ಸಂಕಟಗಳಿಗೊಳಗಾಗಿ ಬಹುತೇಕ ಬೇರೆಯಾಗಿಯೆ ಜೀವನ ಸವೆಸುವ ಅನಿವಾರ್ಯಕ್ಕೊಳಗಾಗಬೇಕಾಯ್ತು. ವನವಾಸದ ತ್ರಾಸ, ಅಪಹರಣದ ಕ್ಲೇಷ, ದೋಷಾರೋಪಣೆಗೊಳಗಾಗಿ ಗರ್ಭೀಣಿಯಾಗಿ ಋಷ್ಯಾಶ್ರಮದಲ್ಲಿ ಜನ್ಮವೀವ ಪರದಾಟ - ಎಲ್ಲವೂ ಸಾಲುಸಾಲಾಗಿ ಬಂದ ಕಷ್ಟಗಳ ಪರಂಪರೆಯಂತೆ ಕಾಡಿದ್ದ ಪಾತಕಗಳೆ ಹೊರತು ಸುಖ ಸಂಪದಗಳನ್ನಲ್ಲ. ಹೀಗಾಗಿ ಮನದಲ್ಲಿ ಪ್ರಶ್ನೆ ಬರುವುದು ಸಹಜ - ಹೀಗೆ ಜತೆಯಾಗಿ ಜನಿಸಿಯೂ ಪಾಡು ಪಡಲೆಂದೆ ಜನ್ಮವೆತ್ತಿ ಬರುವ ಅಗತ್ಯವಾದರೂ ಏನಿತ್ತು ಸೀತಾರಾಮರಿಗೆ?

ಬಹುಶಃ ಇಲ್ಲೆ ಬರುವುದು ಅತ್ಯಂತ ಕ್ಲಿಷ್ಟಕರ ಧರ್ಮಸೂಕ್ಷ್ಮದ ವಿಷಯ. ಈ ಮೊದಲೆ ಹೇಳಿದ್ದಂತೆ ಈ ಅವತಾರದ ಮರ್ಮ ಬರಿ ಶಾಪ ವಿಮೋಚನೆಯ ಪ್ರಾಯಶ್ಚಿತವಲ್ಲ. ತಾನೆ ಮಾದರಿಯಾಗಿ ಬದುಕಿದ್ದು ಸುಖ, ದುಃಖ, ಯಾತನೆ, ನೋವುಗಳ ನೇರ ಅನುಭವಗಳನ್ನು ಪರಿಗ್ರಹಿಸಿ ಅದಕ್ಕೆಲ್ಲ ಹೇಗೆ ಪ್ರತಿಕ್ರಿಯಿಸಬೇಕು, ಹೇಗೆ ನಿಭಾಯಿಸಬೇಕು ಎಂಬು ಮನುಕುಲಕ್ಕೆ ಮೇಲ್ಪಂಕ್ತಿ ಹಾಕಿ ತೋರಿಸಿಕೊಡಬೇಕಾದ ಮಹತ್ತರ ಜವಾಬ್ದಾರಿ. ದೇವತೆಗಳು ಮಾನವರಾಗಿ ಅವತರಿಸಿದ ಪರಿಗಣನೆಯ ಮೇಲೆ ಇಡಿ ಬದುಕಿನ ಕಾಲವನ್ನು ಹೂವಿನ ಹಾಸಿಗೆಯನ್ನಾಗಿ ಮಾಡಿಕೊಳ್ಳುವುದು ಕಷ್ಟವೇನಿರಲಿಲ್ಲ. ಆದರೆ ಹಾಗಾಗುವ ಬದಲು ಯಾಕೆ ಇಡೀ ಕಥಾನಕ ಅನಿರೀಕ್ಷಿತ ಆಘಾತ, ಸಂಕಟಗಳ ಮೇನೆಯನ್ನು ಹೊತ್ತೆ ನಡೆಯುವ ದಾರುಣತೆಯಾಗಿ ಮಾರ್ಪಾಡಾಗಿಬಿಟ್ಟಿತು? ಇದು ಆ ಭಗವಂತನೇ ನಿರೀಕ್ಷಿಸಿರದಿದ್ದ ಅನಿರೀಕ್ಷಿತ ಮಾಯ ಸಂಘಟನೆಯೆ ಅಥವಾ ಇದರ ಹಿಂದೆಯೂ ಯಾವುದಾದರೂ ಜಗದೋದ್ದಾರದ ಮಹತ್ತರ ಕಾರಣವಿತ್ತೆ? ತುಸು ಆಳವಾಗಿ ಯೋಚಿಸಿದರೆ ಅನಿಸುವ ವಿಚಾರ - ಬಹುಶಃ ಇದು ಅನಿರೀಕ್ಷಿತದಂತೆ ಕಾಣುವ ಸಂಘಟನೆಗಿಂತ ಹೆಚ್ಚು ಶ್ರೀ ಹರಿಯೆ ಇಚ್ಛೆಪಟ್ಟು ಆಯ್ದುಕೊಂಡ ದಾರಿ. ಈ ಕಠಿಣತೆಯ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯವಾದರೂ ಏನಿತ್ತು ವಿಷ್ಣುವಿಗೆ? ಅಲ್ಲಿ ಮತ್ತೆ ಎದುರಾಗುವ ಸ್ಪಷ್ಟ ಕಾರಣ - ಅವನು ಮಾನವನಾಗಿಯೆ ಬದುಕಿ ಸಾಧಿಸಿ ತೋರಿಸಬೇಕಾಗಿದ್ದ ಸಿದ್ದಾಂತ. ತನ್ನ ಮುಂದಿನ ಜನಾಂಗಕ್ಕೊಂದು ಅನುಕರಣೀಯ ಆದರ್ಶದ ಮುನ್ನುಡಿ ಬರೆಯಬೇಕಾದರೆ ಬರಿ ಸರಳ ಸುಖ ಸಂಸಾರದ ಸೂತ್ರಗಳ ಮಾದರಿ ಒದಗಿಸಿದರೆ ಸಾಲದು. ಅದನ್ನು ಎಲ್ಲರೂ ಹೇಳಿಕೊಡದೆಲೆಯೆ ಕಲಿತುಕೊಳ್ಳಬಲ್ಲರು ಅಥವ ಅರಿಯಬಲ್ಲರು. ಆದರೆ ನೀತಿ ಸಂಹಿತೆಯನುಕರಣೆಯ ನಿಜವಾದ ಸತ್ವ ಅಡಗಿರುವುದು - ಆ ಸಂಹಿತೆ ತೀರಾ ಕಠಿಣ ಪರಿಸ್ಥಿತಿಯಲ್ಲಿ, ತೀರಾ ದಾರುಣ ಪರಿಸ್ಥಿತಿ - ಪರಿಸರಗಳಲ್ಲಿ, ಅತೀವ ಆಳದ ಕಠಿಣಾತ್ಕಠಿಣ ಪರೀಕ್ಷಾ ಸಂಧರ್ಭಗಳಲ್ಲಿ ಸಹ ಗೆದ್ದು ಬರುವಂತಾದ್ದಾಗಿರಬೇಕು. ಅಂದರೆ ಸ್ವತಃ ತಾನೆ ಮಾರ್ಗದರ್ಶಕ ಪಾತ್ರ ವಹಿಸುತ್ತಿದ್ದರೂ ಆ ಕಾರಣಕ್ಕೆ ಸರಳ, ಸುಲಭದ ಸುಖದ ದಾರಿ ಹಿಡಿಯದೆ ಅತ್ಯಂತ ದುರ್ಗಮ, ಜಟಿಲತೆಯ ದಾರಿ ಆರಿಸಿಕೊಂಡ ಶ್ರೀ ಹರಿ. ಇದರಿಂದ ಅತ್ಯಂತ ದಾರುಣ ಪರಿಸ್ಥಿತಿಯಲ್ಲೂ ಹೇಗೆ ಧೃತಿಗೆಡದೆ, ಮಾನವ ಜನ್ಮ ನೀತಿ ಸಂಹಿತೆಯನ್ನು ಮೀರದೆ, ಬವಣೆಗಳನ್ನು ಕರ್ಮಜಾಲದ ಸಹಜಾತರೆಂದು ಒಪ್ಪಿಕೊಂಡು, ತನ್ನ ಪಾಲಿನ ಕರ್ಮ, ಕರ್ತವ್ಯಗಳನ್ನು ನಿಭಾಯಿಸಿಕೊಂಡು ಹೋದ ಉದಾಹರಣೆ ಸೃಷ್ಟಿಯಾಗಲಿಕ್ಕೆ ಸಾಧ್ಯವಾಯ್ತು. ತೀರ ಸರಳ ತರ್ಕದಿಂದ ನೋಡಿದರೂ, ಕಠಿಣವಾದ ಜಟಿಲ ಪ್ರಶ್ನೆ ಬಗೆಹರಿಸಲು ಕಲಿತಿದ್ದರೆ ಸುಲಭದ ಪ್ರಶ್ನೆ ನಿಭಾಯಿಸುವುದು ಕಷ್ಟವೇನಲ್ಲವಲ್ಲ - ಕಠಿಣ ಪ್ರಶ್ನೆ ಪತ್ರಿಕೆಗೆ ಸಿದ್ದವಾಗಿದ್ದರೂ ಪರೀಕ್ಷೆಯಲ್ಲಿ ಸುಲಭದ ಪ್ರಶ್ನೆ ಪತ್ರಿಕೆ ಬಂದಾಗ ಲೀಲಾಜಾಲದಲ್ಲಿ ನಿಭಾಯಿಸುವ ಹಾಗೆ. ಅದೇ ಮಾದರಿಯಲ್ಲಿ ತೀರಾ ಕ್ಲಿಷ್ಟ ಪರಿಸ್ಥಿತಿಯ ಉದಾಹರಣೆಗೆ ತಾನು ಮೇಲ್ಪಂಕ್ತಿ ಹಾಕಿಕೊಟ್ಟರೆ ಅದು ನೀತಿ ಸಂಹಿತೆಯ ಅಪರೂಪದ ತುದಿಗಳನ್ನು ನಿಖರವಾಗಿ ತೋರಿಸುವುದು ಮಾತ್ರವಲ್ಲದೆ, ಸರಳ ನಿಭಾವಣೆಯ ಅಗತ್ಯಗಳನ್ನು ಆರಾಮವಾಗಿ ಪೂರೈಸುತ್ತದೆ. ಮಾತ್ರವಲ್ಲದೆ 'ಆಚಾರ ಹೇಳಲು, ಬದನೆ ಕಾಯಿ ತಿನ್ನಲು' ಅನ್ನುವ ಮನಸತ್ವದ ಹೊರತಾಗಿ 'ನುಡಿದಂತೆ ನಡೆವ' ಮಹಾನ್ ವ್ಯಕ್ತಿತ್ವದ ಮೂಲರೂಪಾಗಿಬಿಡುತ್ತದೆ. ಇದೆಲ್ಲಾ ಅರಿವಿನಿಂದಲೆ ತಮಗೆ ವಿಯೋಗದ ದಾರುಣತೆಯನ್ನು ತಂದಿಟ್ಟರೂ ಈ ದುರ್ಗಮ ಹಾದಿಯಲ್ಲೆ ಸಾಗುವ ಲೋಕೋದ್ಧಾರದ ನಿರ್ಧಾರ ಕೈಗೊಂಡಿರಬೇಕು ಶ್ರೀ ಹರಿ, ಮಹಾಲಕ್ಷ್ಮಿಯರು - ಸೀತಾ ರಾಮರಾಗಿ ಹುಟ್ಟಿ ಬದುಕುವ ನಿರ್ಧಾರದ ಮೂಲಕ.

ಅಂತೆಯೆ ಆಳಕ್ಕಿಳಿದು ಗಮನಿಸಿ ನೋಡಿದರೆ ಇಲ್ಲೊಂದು ಮಹೋನ್ನತ ಉದಾತ್ತತೆಯ ಕ್ಲಿಷ್ಟ ಸೌಂದರ್ಯವೂ ಸಮ್ಮಿಳಿತವಾಗಿದೆ. ಅದು ನಾಯಕತ್ವಕ್ಕೆ ಸಂಬಂಧಿಸಿದ್ದು ; ಬೇರಾವುದೆ ಉದಾಹರಣೆ ತೆಗೆದುಕೊಂಡರೂ - ಈಗಿನ ಸಮಕಾಲೀನ ಯಾ ಪ್ರಾಚೀನ ಮಾನದಂಡದಿಂದ ನೋಡಿದರೂ - ಕ್ಲಿಷ್ಟ ಮತ್ತು ಕಠಿಣತರದ ಕೆಲಸ ಸಾಧಿಸಬೇಕಾದರೆ ನಾಯಕರು ಸಾಮಾನ್ಯವಾಗಿ ಮಾಡುವ ಮೊದಲ ಕೆಲಸವೆಂದರೆ ಅದಕ್ಕೆ ಸೂಕ್ತ ಅರ್ಹತೆಯುಳ್ಳವರನ್ನು ಹುಡುಕುವುದು. ಎರಡನೆಯದೆಂದರೆ ನೀತಿ ಸಂಹಿತೆಯ ವಿಷಯಕ್ಕೆ ಸಂಬಂಧಿಸಿದ್ದು - ಎಲ್ಲೆಡೆಯೂ ಏನು ಮಾಡಬೇಕು, ಏನು ಮಾಡಬಾರದು, ಯಾವುದು ಸರಿ, ಯಾವುದು ತಪ್ಪು ಎಂದೆಲ್ಲ ಭೋಧಿಸುವ ಸಹಸ್ರಾರು ಕಡತ ಸೂಕ್ತಿಗಳು ಸಿಕ್ಕುತ್ತವೆ. ಆದರೆ ತಾನೆ ನಾಯಕನಾಗಿ, ತನ್ನ ಚಾರರನ್ನು ಸಂಕಷ್ಟಕ್ಕೆ ದೂಡದೆ, ಅಥವಾ ಬರಿ ಒಣ ಭೋಧನೆಯ ಹಾದಿ ಹಿಡಿಯದೆ, ಸ್ವಯಂ ತಾನೆ ಪ್ರಾಯೋಗ ಪಶುವಾದಂತೆ ತನ್ನನ್ನೆ ಎಲ್ಲಾ ಸಂಕಷ್ಟಕ್ಕೆ ಒಳಪಡಿಸಿಕೊಂಡ ಉದಾಹರಣೆಗಳು ಬಹುತೇಕ ಎಲ್ಲಿಯೂ ಇಲ್ಲವೆಂದೆ ಹೇಳಬೇಕು. ಹಾಗೆ ಒಳಪಡಿಸಿಕೊಂಡ ಪ್ರಕ್ರಿಯೆಯೆ ಪುಸ್ತಕದ ಒಣ ಬರಹವಾಗುವುದರ ಬದಲು ಜೀವಂತ ದಂತ ಕಥೆಯಾಗುತ್ತ ನೀತಿ ಸಂಹಿತೆಯನ್ನು ಬರಿ 'ಸಿದ್ಧಾಂತ (ಥಿಯರಿ)' ಯಲ್ಲಿ ಮಾತ್ರವಲ್ಲದೆ, 'ಪ್ರಾಯೋಗಿಕ (ಪ್ರಾಕ್ಟಿಕಲ್)' ನೆಲೆಯಲ್ಲಿಯು ಸಹ ಸ್ವತಃ ನಾಯಕನ ಜೀವನ ಚಿತ್ರಣವಾಗಿ, ಇಡಿ ಬದುಕಾಗಿ ರೂಪುಗೊಂಡಿದ್ದಂತೂ ಎಲ್ಲಿಯೂ ಕಾಣುವುದಿಲ್ಲವೆಂದೆ ಹೇಳಬಹುದು. ಹೀಗಾಗೀ ಈ ಪಾತ್ರ ನಿಭಾವಣೆಯಲ್ಲಿ ಬರಿ ಒಣ ಥಿಯರಿ ಕಾಣುವ ಬದಲು ಜೀವಂತ ಉದಾಹರಣೆಗಳು ಜ್ವಲಿಸುತ್ತವೆ ಸೀತಾರಾಮರ ಪಾತ್ರಗಳ ರೂಪದಲ್ಲಿ. ಈಗ ಬರಹ ರೂಪದಲ್ಲಿ ರಾಮಾಯಣದಂತ ಗ್ರಂಥಗಳಿರಬಹುದಾದರೂ ಅದರ ಮೂಲಾಧಾರ ಈ ಮಾನವವತಾರದ ಬದುಕೆ ಎಂಬುದು ವಿಶಿಷ್ಠವಾದ ಅಂಶ. ಆ ಬದುಕೆ ಬರಹಕ್ಕೆ ಪ್ರೇರಣೆ ಮತ್ತು ಒತ್ತಾಸೆಯಾದ ಅಪರೂಪದ ಪ್ರಸಂಗವೂ ಹೌದು. ಕೊನೆಯದಾಗಿ, ಇದೆಲ್ಲವನ್ನು ಸಮಗ್ರವಾಗಿ ನೋಡಿದಾಗಲಷ್ಟೆ - ದ್ವಾರಪಾಲಕರ ಶಾಪ, ವಿಮೋಚನಾ ಹುನ್ನಾರ, ಸ್ವಯಂ ಅವತಾರದ ನಿರ್ಧಾರ, ದುರ್ಬರ ಬದುಕಿನ ಆಯ್ಕೆ, ಸ್ವಯಂ ನೀತಿ ಸಂಹಿತೆಯಾಗುವ ಪ್ರಾಮಾಣಿಕ ನಾಯಕತ್ವದ ಘನತೆ - ಈ ಅವತಾರದ ಮಹತ್ವ ಅರಿವಾಗುವುದು. ಅವತಾರವಾದದ್ದು ನಿಜವೊ ಸುಳ್ಳೊ ಎಂಬ ಜಿಜ್ಞಾಸೆಯನ್ನು ಮೀರಿ ಅದರಲ್ಲಡಗಿರುವ ನೀತಿ ಸಂಹಿತೆಯನ್ನು ಅನುಕರಿಸಿ, ಅಳವಡಿಸಿಕೊಳ್ಳುವ ಪ್ರೇರಣೆಯಾಗಿ , ಸ್ಪೂರ್ತಿಯಾಗಿ, ಉತ್ತೇಜಕ ಶಕ್ತಿಯಾಗಿ ಯುಗಯುಗಗಳ ಅಳತೆಯನ್ನು ದಾಟಿ ಪ್ರತಿ ಯುಗದಲ್ಲೂ ಪ್ರಸ್ತುತವೆನಿಸುವುದು - ಪರ ವಿರೋಧಗಳ ಚರ್ಚೆಯ ನಡುವೆಯೂ.

ಪುತ್ರಕಾಮೇಷ್ಟಿಯಾಗ ರಾಜ ದಶರಥನಿಗೆ ಸಿಕ್ಕಿ ಸುಯೋಗ
ಹರಿಯೆ ಹಿರಿ ಮಗನಾಗಿ ಹುಟ್ಟಿದಪರೂಪ ಯೋಗಾಯೋಗ
ಹುಟ್ಟಿದರೇನು ಬಂತು ಪಟ್ಟಕೆ ಕೂರಲು ಬಿಡದೆಲೆ ಕಿರಿಯಮ್ಮ
ಕಾನನ ವಾಸಕೆ ಅಟ್ಟಿದರೂ, ನಗುನಗುತಲೆ ಕರ್ತವ್ಯಕೆ ರಾಮ || ೦೫ ||

ಇನ್ನು ಇಷ್ಟೆಲ್ಲ ಹಿನ್ನಲೆಯನ್ನು ದಾಟಿ ಸೀತಾರಾಮಾವತಾರದ ವಿಚಾರಕ್ಕೆ ನೇರ ಪ್ರಕ್ಷೇಪಿಸಿದರೆ ಅಲ್ಲಿ ನಡೆಯುವ ಘಟಿತಗಳೂ ಅಭೂತಪೂರ್ವವಾದಂತವೆ.  ಮೊದಲಿಗೆ ಮಕ್ಕಳಿಲ್ಲವೆಂಬ ಯಾಗದ ನೆಪದಲ್ಲಿ ನಾಲ್ಕು ಪುತ್ರರತ್ನರನ್ನು ಪಡೆದ ಸೌಭಾಗ್ಯ ದಶರಥನದಾದರೂ ಹಿರಿಯ ಮಗ ಶ್ರೀ ರಾಮನನ್ನು ಅವನ ಸಹಜಾಧಿಕಾರದ ಬಳಕೆಗೆ ಸುಲಭದಲ್ಲಿ ಅನುವು ಮಾಡಿಕೊಡಲಿಲ್ಲ ಆ ವಿಧಿ. ಎಲ್ಲಾ ತರದ ಅಡ್ಡಿ ಆತಂಕಗಳನ್ನು ತಂದೊಡ್ಡುವ ಹುನ್ನಾರದಲ್ಲಿ ಮೊದಲಂಕವಾಗಿ ಶುರುವಾಗಿದ್ದು ಪಟ್ಟಾಭಿಷೇಕದ ಕುರಿತಾದ ಕೈಕಯೀ ಪ್ರಸಂಗ. ಮಾತು ಕೊಟ್ಟ ತಪ್ಪಿಗೆ ಮಗನನ್ನೆ ಕಾಡಿಗಟ್ಟಬೇಕಾದ ಪ್ರಸಂಗವಾದರೂ, ನಗುನಗುತ್ತಲೆ ಕಿರಿಯಮ್ಮನ ಅಣತಿಗೆ ಬೆಲೆಯಿತ್ತು ತಂದೆಯ ಸಾವಿಗೂ ವಿಚಲಿತನಾಗದೆ ಕರ್ತವ್ಯ ನಿರ್ವಹಿಸುವ ಕಾರ್ಯಭಾರ ಶ್ರೀ ರಾಮನ ಹೆಗಲಿಗೆ ಮತ್ತು ಅವನ ಬೆನ್ನಿಗೆ ಬಿದ್ದ ಸೀತಾ, ಲಕ್ಷ್ಮಣರಿಗೆ. ಮುಂದಿನೆಲ್ಲಾ ದುರಂತ ನಾಟಕದ ಮೊದಲಂಕವಿದೆಂದು ಅವರಿಗೆಲ್ಲರಿಗೂ ಅದು ಪ್ರಜ್ಞಾಪೂರ್ವಕವಾಗಿ ಅರಿವಿತ್ತೊ, ಅಥವಾ ಮಾನವ ಜನ್ಮದ ಮಾಯೆಯ ಮುಸುಕಿನಡಿಯಲ್ಲಿ ಎಲ್ಲಾ ಕರಗಿಹೋಗಿ, ಬರಿಯ ಹುಲು ಮಾನವ ಪ್ರಜ್ಞೆಯ ಸಂಸರ್ಗದ ನೆರವಿತ್ತೊ ಹೇಳಬಲ್ಲವರಾರು? ಒಟ್ಟಾರೆ ಆ ಘಟ್ಟದಲ್ಲಿ ಕಾನನದತ್ತ ಅವರಿಟ್ಟ ಹೆಜ್ಜೆ ಮನುಕುಲದ ಪರಂಪರೆಯು,  ಭೂತ-ಪ್ರಸ್ತುತ-ಭವಿತದ ನೀತಿಸಂಹಿತೆಯ ಸಿದ್ದತೆ ಮತ್ತು ಅನುಷ್ಠಾನದಲಿಟ್ಟ ಮೊದಲ ದಿಟ್ಟ ಹೆಜ್ಜೆಯಾಗಿತ್ತೆಂಬ ಅರಿವು ಅವರೀಗೂ ಇತ್ತೊ, ಇಲ್ಲವೊ ಹೇಳುವುದು ಕಷ್ಟ.

(ಇನ್ನೂ ಇದೆ)

=========================
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
=========================

ಪದ್ಯ / ಕವನಗಳ ಸಂಗ್ರಹಿತ ರೂಪ
_________________________

00190. ನರಮಾನವನಾಗಿ ರಾಮನ ಜನುಮ...(೦೧ - ೦೫)
______________________________________

ಮೂರ್ಖತೆಯ ತೆಗುಳು, ದ್ವಾರಪಾಲರ ಅಹಂಕಾರಗಳು
ನೆಮ್ಮದಿಯ ವೈಕುಂಠ, ಕಿಚ್ಚನ್ಹಚ್ಚಿಸಿ ಮಹಾಲಕ್ಷ್ಮಿಗೆ ದಿಗಿಲು 
ಸನಕಾದಿ ಮುನಿಗಳ ಶಾಪ, ಭೂಲೋಕದ ಜನ್ಮಪರಿತಾಪ
ಸೇವೆಯಾಳುಗಳ ವತಿಯಿಂದ, ಶ್ರೀ ಹರಿಗೂ ಬಿಡದ ಕೂಪ || ೦೧ ||

ಸೇವಕರ ತಪ್ಪಿಗೆ ಮಾಲೀಕನೆ, ಹೊತ್ತಂತೆ ಹೊಣೆ ಯಾತನೆ
ಭೂಭಾರವಿಳಿಸೆ ಅವತಾರವನೆತ್ತೊ, ಅಪೂರ್ವ ಸಂಘಟನೆ
ದುಷ್ಟರಾದರು ಸರಿ ದೂರವಿರಲಾರೆವೆಂದಾ ಜಯ ವಿಜಯ
ಅವರ ಕರ್ಮಕೆ ಭೂಲೋಕದಲಿ ಜನಿಸಿದ ಅದ್ಬುತ ವಿಷಯ || ೦೨ ||

ಸ್ಥಿತಿಕರ್ತನ ತಪ್ಪೇನಿಲ್ಲಿ, ಕರುಣೆಯ ಕ್ಷೀರಸಾಗರ ಹೊನಲು
ಭಕ್ತರಂತೆ ಕೈಂಕರ್ಯದವರಿಗು ಹೃದಯವೈಶಾಲ್ಯ ಕಡಲು
ಮುಕ್ತರನಾಗಿಸಲವರನೆ ಪಡಬಾರದ ಪಾಡು ಭೂಲೋಕದೆ
ಭುವಿ ಮನುಜರ ಹಾಗೆ ನೋವು,ಬವಣೆ,ವಿಷಾದ,ಬೇಸರದೆ || ೦೩ ||

ಅವತಾರವ ಹೊರುವ ಕರ್ಮಕೆ ಮಾನವ ಜನ್ಮವೆ ಬೇಕಿತ್ತಾ
ದುಷ್ಟರ ದಮನಿಸಿ ಹಣಿಯೆ, ಬರಿಗಾಲಲೆ ಹೊಸಕೆ ಸಾಕಿತ್ತ
ಮಾದರಿಯಾಗುತ ಸೂಕ್ತ ಆದರ್ಶಗಳ ಬೆಂಬಲಿಸುವ ಧರ್ಮ
ನಿಭಾಯಿಸೆ ಹಡೆದನೆ ಸಂಕಟ ಮರ್ಯಾದಾಪುರುಷೋತ್ತಮ || ೦೪ ||

ಪುತ್ರಕಾಮೇಷ್ಟಿಯಾಗ ರಾಜ ದಶರಥನಿಗೆ ಸಿಕ್ಕಿ ಸುಯೋಗ
ಹರಿಯೆ ಹಿರಿ ಮಗನಾಗಿ ಹುಟ್ಟಿದಪರೂಪ ಯೋಗಾಯೋಗ
ಹುಟ್ಟಿದರೇನು ಬಂತು ಪಟ್ಟಕೆ ಕೂರಲು ಬಿಡದೆಲೆ ಕಿರಿಯಮ್ಮ
ಕಾನನ ವಾಸಕೆ ಅಟ್ಟಿದರೂ, ನಗುನಗುತಲೆ ಕರ್ತವ್ಯಕೆ ರಾಮ || ೦೫ ||

==========================================
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
==========================================