ನರರಾಕ್ಷಸ

ನರರಾಕ್ಷಸ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್. ನರಸಿಂಹಯ್ಯ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೫೫.೦೦, ಮುದ್ರಣ : ಜುಲೈ ೨೦೨೦

‘ನರರಾಕ್ಷಸ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು. ಇವರು ಹಲವಾರು ಕಾಲ್ಪನಿಕ ಪತ್ತೇದಾರರಿಗೆ ಜನ್ಮದಾತರು. ಮಧುಸೂದನ, ಅರಿಂಜಯ, ಗಾಳೀರಾಯ, ಪುರುಷೋತ್ತಮ ಎಂಬೆಲ್ಲಾ ಹೆಸರಿನ ಪತ್ತೇದಾರರ ನೂರಕ್ಕೂ ಮಿಗಿಲಾದ ಸಾಹಸ ಕಥೆಗಳನ್ನು ಓದುಗರಿಗೆ ಉಣಬಡಿಸಿದ ಖ್ಯಾತಿ ಇವರದ್ದು. 

‘ನರರಾಕ್ಷಸ' ಒಂದು ಸಣ್ಣ ರೋಚಕ ಕಾದಂಬರಿ. ಈ ಕಾದಂಬರಿಯ ಒಳಗೊಂದು ಪುಟ್ಟ ಕಥೆ ಇದೆ. ದ್ವೇಷಾಸೂಯೆಯ ಮತ್ಸರವು ಅಂತ್ಯದಲ್ಲಿ ಯಾವ ಘಟ್ಟವನ್ನು ಮುಟ್ಟುವುದೆಂದು ತಿಳಿಸುವುದೇ ಈ ಕಾದಂಬರಿಯ ಮರ್ಮ. ತಮ್ಮ ಮುನ್ನುಡಿಯಲ್ಲಿ ಎನ್. ನರಸಿಂಹಯ್ಯನವರು ಹೀಗೆ ಬರೆಯುತ್ತಾರೆ “ಈ ಪತ್ತೇದಾರಿ ಕಾದಂಬರಿಯಲ್ಲಿ ಕ್ರೋಧ-ಮತ್ಸರದಿಂದಾಗುವ ದುಷ್ಪರಿಣಾಮಗಳನ್ನು, ಜನತೆಯ ಮೇಲೆ ಪರಿಣಾಮಕಾರಿಯಾಗುವಂತೆ ಬರೆದಿದ್ದೇನೆ. ಚಿತ್ರ ವಿಚಿತ್ರವಾದ ಸನ್ನಿವೇಶಗಳನ್ನು ಅಳವಡಿಸಿದ್ದೇನೆ. ನೂತನ ಪತ್ತೇದಾರನಾದ ಅರಿಂಜಯನು ನಡೆದ ವಿದ್ಯಮಾನಗಳನ್ನರಿತು, ತನ್ನ ನೈಪುಣ್ಯತೆಯ ಚತುರತೆಯಿಂದ ಅಪರಾಧಿಯು ಇಂತಹವನೇ ಇರಬಹುದೆಂದು ಊಹೆ ಮಾಡಿ, ತನ್ನ ಊಹಾಯೋಚನೆಯಂತೆ ಪತ್ತೇದಾರಿಕೆ ನಡೆಯಿಸಿ ಅಪರಾಧಿಯನ್ನು ಪತ್ತೆ ಮಾಡಿ ಹಿಡಿಯುವ ವಿಧಾನವನ್ನು ವಿನೂತನವಾಗಿ ಓದುಗರ ಮನ ಮೆಚ್ಚುವಂತೆ ಬರೆದಿರುತ್ತೇನೆ.”   

ಇವರ ಬರವಣಿಗೆ ಬಹಳ ಸರಳ. ಆಗಿನ ಕಾಲದ ಓದುಗರಿಗೆ ಇದು ಬಹಳವಾಗಿ ರುಚಿಸಿದರೂ ಈಗಿನ ಜನಾಂಗಕ್ಕೆ ಇದು ಇಷ್ಟವಾಗುವುದು ಕಷ್ಟ. ಆದರೂ ಹಿಂದಿನ ಓದಿನ ನೆನಪುಗಳನ್ನು ತಾಜಾ ಮಾಡಲು ಅಂದಿನ ಓದುಗರಿಗೆ ಇದೊಂದು ಸುವರ್ಣಾವಕಾಶ. ೨೦೧೦ರಿಂದ ಬೆಂಗಳೂರಿನ ಸಪ್ನ ಬುಕ್ ಹೌಸ್ ಅವರು ಎನ್.ನರಸಿಂಹಯ್ಯನವರ ಬಹಳಷ್ಟು ಕಾದಂಬರಿಗಳನ್ನು ಮರುಮುದ್ರಣ ಮಾಡಲು ಪ್ರಾರಂಭ ಮಾಡಿರುವರು. ಸಾಹಿತಿ ಕುಂ.ವೀರಭದ್ರಪ್ಪನವರು ಬೆನ್ನುಡಿ ಬರೆದಿದ್ದಾರೆ. ೮೪ ಪುಟಗಳ ಈ ಕಾದಂಬರಿಯನ್ನು ಸರಾಗವಾಗಿ ಒಮ್ಮೆಲೇ ಕುಳಿತು ಓದಿ ಮುಗಿಸಬಹುದಾಗಿದೆ.