ನಲ್ನುಡಿ ರತ್ನಹಾರ

ನಿವೃತ್ತ ಮುಖ್ಯ ಶಿಕ್ಷಕಿಯಾಗಿರುವ ಕವಯತ್ರಿ, ಲೇಖಕಿ, ಯಕ್ಷಗಾನ ಕಲಾವಿದೆ ಶ್ರೀಮತಿ ರತ್ನಾ ಕೆ ಭಟ್, ತಲಂಜೇರಿ ಅವರ ನೂತನ ಸುವಿಚಾರ ಬರಹಗಳ ಸಂಗ್ರಹ ‘ನಲ್ನುಡಿ ರತ್ನಹಾರ’ ಹೊರಬಂದಿದೆ. ಈ ಕೃತಿಯಲ್ಲಿ ೧೧೬ ನಲ್ನುಡಿಗಳಿವೆ. ಪ್ರತೀ ಪುಟಕ್ಕೆ ಒಂದು ಅಥವಾ ಎರಡರಂತೆ ಪ್ರಕಟವಾಗಿರುವ ನಲ್ನುಡಿಯನ್ನು ಓದುವುದೇ ಒಂದು ಚೆಂದ.
‘ನಲ್ನುಡಿ ರತ್ನಹಾರ' ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಗಝಲ್ ಕವಿ, ವೈದ್ಯರಾದ ಡಾ. ಸುರೇಶ ನೆಗಳಗುಳಿ. ಅವರು ತಮ್ಮ ಮುನ್ನುಡಿಯಲ್ಲಿ “ಡಿ ವಿ ಗುಂಡಪ್ಪನವರ ಆಧುನಿಕ ಭಗವದ್ಗೀತೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರ ಕಗ್ಗದ ಸ್ಪೂರ್ತಿ ನನ್ನಿಂದ ಧೀರತಮ್ಮನ ಕಬ್ಬ ಎಂಬ ತದ್ ರೂಪಿ ಮುಕ್ತಕ ಗಳನ್ನು ಬರೆಸಿದ್ದನ್ನು ನೆನಪಿಸುತ್ತ ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ' ಎನುವಂತೆ ಮತ್ತೂ ದೃಢವಾಗಬೇಕು, ಗಟ್ಟಿಯಾಗಬೇಕು ಎಂದು ಜೀವನದಲ್ಲಿ ಬರುವ ಎಡರು ತೊಡರುಗಳನ್ನು ಎದುರಿಸುವ ಬಗ್ಗೆ ಹೇಳಿದ್ದಾರೆ.
ಹಾಗೆಯೇ ನಮ್ಮ ಜೀವನದಲ್ಲಿ ಭಾವವೇಶಕ್ಕೆ ಒಳಗಾಗದೆ ಇರಬೇಕು ಎನ್ನುತ್ತಾ ಹಿಂದಿನಿಂದ ಮಾತನಾಡಿ ವ್ಯಂಗ್ಯವಾಡುವ ಗುಂಪೊಂದಿರುತ್ತದೆ. ಸಹಕಾರ ಇಲ್ಲ,ಚುಚ್ಚುವ ಮಾತಿಗೆ ಭರವಿಲ್ಲ. ಸರಿಯಾದ ರೀತಿಯಲ್ಲಿ ಸಂಘಟಿಸಿ ಮಾಡುವ ಕಾರ್ಯಕ್ರಮಕ್ಕೆ ಸಾಧ್ಯವಾದರೆ ಸಹಕರಿಸಿ, ಇಲ್ಲವಾದರೆ ಸಮಾರಂಭವನ್ನು ವೀಕ್ಷಿಸಿ, ಶುಭಹಾರೈಸಿ,ಆಡಿಕೊಂಡು ನಗುವುದು ಬೇಡ ಎಂದು ಒಂದೆಡೆ ಹೇಳಿದ್ದಾರೆ. ಅಂತೆಯೇ ನಾವು ಮಾಡುವ ಸಹಾಯ 'ಹನಿಹನಿಗೂಡಿದರೆ ಹಳ್ಳ'ದಂತೆ. ಪೈಸೆ ಪೈಸೆ ಒಟ್ಟಾಗಿಯೇ ರೂಪಾಯಿ ಎನ್ನುತ್ತಾ ಹಣದ ಪೋಲು ಹಾಗೂ ಉಳಿತಾಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಹೀಗೆ ಒಳುಡಿ,ನಲ್ನುಡಿಗಳ ಮಾಲೆ ಹೆಣಿದು ಹೆಣಿದು ಸದ್ಭಾವನಾಪೇಕ್ಷಿ ಗಳಿಗೆ ತೊಡಿಸಿದ ರತ್ನಾ ಭಟ್ ತಲಂಜೇರಿ ಇವರ ಲೇಖನಿ ಬತ್ತದಿರಲಿ, ಆಯುರಾರೋಗ್ಯ ಪೂರಿತಾರಾಗಿ ಹಲವು ಪ್ರಶಸ್ತಿ ಪುರಸ್ಕಾರ, ಉತ್ತಮ ಶಿಕ್ಷಕಿ ಪುರಸ್ಕಾರ ಪಡೆದವರೂ ಅದ ನನ್ನ ಆತ್ಮೀಯ ರತ್ನಕ್ಕನವರಿಗೆ ಇನ್ನಷ್ಟು ಮನ್ನಣೆ ಸಿಗಲಿ” ಎನ್ನುತ್ತಾ ಶುಭ ಹಾರೈಸಿದ್ದಾರೆ.
ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಲತೀಶ್ ಸಂಕೋಳಿಗೆ. ಇವರು ಬರೆದ ಬೆನ್ನುಡಿಯಲ್ಲಿ ಕಂಡ ಸಾಲುಗಳು…
“ಹಿರಿಯ ಕವಯಿತ್ರಿ, ಮಾತೃಸ್ವರೂಪಿ ಶ್ರೀಮತಿ ರತ್ನಾ ಕೆ. ಭಟ್ ತಲಂಜೇರಿ ಇವರ ಹನ್ನೊಂದನೆಯ ಕೃತಿ ಸುವಿಚಾರಗಳನ್ನೊಳಗೊಂಡ "ನಲ್ನುಡಿ ರತ್ನಹಾರ" ಪರಿಶುದ್ಧ ಕ್ಷೀರವಾಗಿ, ಅಮೃತದ ಸಾರವಾಗಿ, ಮುತ್ತಿನ ಹಾರವಾಗಿ ಸಾಹಿತ್ಯ ಸರಸ್ವತಿಯ ಕೊರಳೇರಿ ವಿಜೃಂಭಿಸಲು ಅಣಿಯಾಗುತ್ತಿರುವುದು ಸಂತಸದ ವಿಚಾರ. ಇದರಲ್ಲಿರುವ ಬಹುತೇಕ ಸುವಿಚಾರಗಳು ಅಪೂರ್ಣತೆಯಿಂದ ಪರಿಪೂರ್ಣತೆಯೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಕಂದೀಲಿನಂತಿದ್ದು, ಉತ್ತಮ ವಿಚಾರಧಾರೆಗಳನ್ನು, ಭಾರತೀಯ ಸಂಸ್ಕಾರ ಸಂಸ್ಕೃತಿಯ ಮೌಲ್ಯಯುತ ಸಾರವನ್ನು ಎತ್ತಿ ಹಿಡಿದಿವೆ. ಬಾಹ್ಯದಲ್ಲಿ ಬಣ್ಣ ಬಣ್ಣದ ದಿರಿಸಿನಲ್ಲಿ ಜಗಮಗಿಸುತ್ತಿದ್ದರೂ ಆಂತರ್ಯದ ಹುಳುಕನ್ನು ಸೂಕ್ಷ್ಮವಾಗಿ ಎತ್ತಿ ತೋರಿಸಿ, ಮನುಷ್ಯನಲ್ಲಿರುವ ಕೆಟ್ಟ ಯೋಚನೆಗಳನ್ನು ಬೆತ್ತಲುಗೊಳಿಸಿ, ಹಾಲಾಹಲವೆ ತುಂಬಿರುವ ಈ ಸ್ವಾರ್ಥ ಜಗದ ಹುತ್ತದೊಳಗೆ ಒಂದು ರೀತಿಯಲ್ಲಿ ತನಿಹಾಲು ಎರೆದಂತಹ ಅನುಭವ ನೀಡುತ್ತದೆ.
ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯಾ....
ಎನ್ನುವ ಬಸವಣ್ಣನವರ ವಚನವನ್ನೆ ಆದರ್ಶವಾಗಿಟ್ಟುಕೊಂಡು ಪಡಿಮೂಡಿ ಬಂದಂತಿರುವ ಈ ನಲ್ನುಡಿಗಳ ರತ್ನಹಾರವನ್ನು ಹಗಲಿರುಳು ಶ್ರಮವಹಿಸಿ ಬರೆದಿರುವ ಹಿರಿಯ ಕವಯಿತ್ರಿಯ ಪರಿಶ್ರಮಕ್ಕೆ ಶಿರಬಾಗಿ ನಮನಗಳು.”
ರತ್ನಾ ಭಟ್ ಅವರ ಸ್ವಂತ ಸಹೋದರ ಕವಿ, ನಿವೃತ್ತ ದೈಹಿಕ ಶಿಕ್ಷಕ ಹಾ ಮ ಸತೀಶ್ ಅವರು ಅಕ್ಕನ ಈ ಕೃತಿಗೆ ‘ಶುಭನುಡಿ’ ಗಳನ್ನು ಬರೆದಿದ್ದಾರೆ. "ರತ್ನಾ ಕೆ ಭಟ್ ಇವರು, ಯುವ ಮನಸ್ಸುಗಳೂ ಆಶ್ಚರ್ಯ ಪಡುವಂತೆ ಬರಹದಲ್ಲಿ ತನ್ಮಯತೆ. ಈ ವಯಸ್ಸಿನಲ್ಲೂ ನಿರಂತರ ಬರವಣಿಗೆ ಮನೋಜ್ಞವಾದ ಸಮಾಜದ ಹಿರಿಯ ಕಿರಿಯರಿಗೆ ತಿಳುವಳಿಕೆಯನ್ನು ಕೊಡುವ ಇವರ ಬರಹಗಳನ್ನು ಎಲ್ಲರೂ ಮೆಚ್ಚಿದವರೆ. ಇಂತಹ ಖುಷಿಯ ಸಂದರ್ಭದಲ್ಲಿ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಹತ್ತು ಸಂಕಲನಗಳನ್ನು ಹೊರ ತಂದಿರುವ ಇವರು ಈಗ ನಲ್ನುಡಿ ರತ್ನ ಹಾರ ಸುವಿಚಾರಗಳ ಸಂಕಲನವೊಂದನ್ನು ಖುಷಿಯಲ್ಲಿ ಹೊರತರುತ್ತಿದ್ದು, ಈ ಸಂಕಲನಕ್ಕೆ ಶುಭ ನುಡಿ ಬರೆಯಲು ನನಗೂ ಸಂತೋಷವೆನಿಸುತ್ತಿದೆ.
ರತ್ನಕನೆಂದೇ ಪ್ರೀತಿಯಿಂದ ಕರೆಯುವ ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು ಇವರು ಕನ್ನಡ ಸಾರಸ್ವತ ಲೋಕದ ಮರೆಯಲ್ಲಿ ಮಿನುಗುತ್ತಿರುವ ಕವಯಿತ್ರಿ ತಮ್ಮ ವೈವಾಹಿಕ ಬದುಕಿನಲ್ಲಿ ಮನೆಯ ಹಿರಿಯ ಮಗ, ಕೃಷಿಕ, ಮುಖ್ಯೋಪಾಧ್ಯಾಯ, ಯಕ್ಷಗಾನ ಕಲಾವಿದ (ಸವ್ಯಸಾಚಿ), ಕಷ್ಟಜೀವಿ ಪತಿ ತಲಂಜೇರಿ ಕೃಷ್ಣ ಭಟ್ಟರ ಪೂರ್ಣ ಸಹಕಾರದಿಂದ ಮೊದಲೇ ಪ್ರತಿಭೆಯ ಗಣಿಯಾಗಿದ್ದ ಇವರು ಮತ್ತಷ್ಟು ಮಗದಷ್ಟು ಸಾಹಿತ್ಯ, ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲಾ ರಂಗಗಳಲ್ಲಿ ಮಿಂಚತೊಡಗಿ ಅದರಲ್ಲಿ ಯಶಸ್ವಿಯಾದರು. ಅದರಲ್ಲೂ ಸುಮಾರು ಮೂವತ್ತು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಎಂಬ ಸಣ್ಣ ಊರಿನಲ್ಲಿ ದ.ಕ ದಲ್ಲಿಯೇ ಪ್ರಥಮವಾಗಿ ಮಹಿಳಾ ಯಕ್ಷಗಾನ ತಂಡವನ್ನು ಕಟ್ಟಿ ಬೆಳೆಸಿದವರು. ಅಲ್ಲಿಂದ ಇಲ್ಲಿಯವರೆಗೆ ರಾಜ್ಯದ ಅನೇಕ ಕಡೆ ತಮ್ಮ ತಂಡ ಸದಸ್ಯೆಯರೊಂದಿಗೆ ಸುಮಾರು 660 ಯಕ್ಷಗಾನ ಪ್ರದರ್ಶನವನ್ನು ನೀಡಿದವರು.”
ಲೇಖಕಿಯಾದ ರತ್ನಾ ಭಟ್ ಅವರು ತಮ್ಮ ನೂತನ ಕೃತಿಯ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡದ್ದು ಹೀಗೆ… “ಬಾಲ್ಯಕಾಲದಲ್ಲಿ ಕಂಡ ಕನಸುಗಳಿಗೆ ರೆಕ್ಕೆ ಪುಕ್ಯಗಳು ಹುಟ್ಟಿಕೊಂಡು ಹಾರಾಡುವ ಸ್ಥಿತಿಗೆ ತಾಯಿ ಶ್ರೀದುರ್ಗೆ, ವಿಘ್ನವಿನಾಯಕ ಗಣೇಶ, ಸರಸ ಆಯಿತೆನ್ನಬಹುದು. ವಿಮಾನವು ಆಗಸದಲ್ಲಿ ಹಾರಾಡುವಾಗ ನೆಲದಿಂದ ನೋಡುವುದಷ್ಟೇ ಸರಸ್ವತಿ ಮಾತೆಯ ಕೃಪಾಕಟಾಕ್ಷದಿಂದ ಸಂತಸ. ಮುಂದೆ ಅದೇ ವಿಮಾನದಲ್ಲಿ ಕುಳಿತು ಬಾನ ದಾರಿಯಲ್ಲಿ ಪಯಣಿಸುವ ಆನಂದ ವರ್ಣನೆಗೆ ನಿಲುಕದು. ಹುಟ್ಟು ಬಡತನದ ಮನೆಯಲ್ಲಿ ಪುತ್ರೋಡಿ ಈಶ್ವರ ಭಟ್ ಶಂಕರಿ ಅಮ್ಮನಿಗೆ ನಾಲ್ಕನೆಯ ಮಗಳಾಗಿ ಜನಿಸಿದವಳು. ಹೇಗೋ ಕಷ್ಟದಲ್ಲಿ ತಂದೆಯವರು ಹತ್ತನೇ ತರಗತಿಯವರೆಗೆ ವಿದ್ಯೆ ಕೊಡಿಸಿದರು.ಮುಂದೆ ಅಡ್ಯನಡ್ಕದ ಜನತಾ ವಿದ್ಯಾಸಂಸ್ಥೆಯಲ್ಲಿ ಸಹಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಕಾಲೇಜ್ ವಿಭಾಗದಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯದಲ್ಲಿದ್ದ ಮಧ್ಯಮವರ್ಗದ ಮನೆಯ ಹನ್ನೊಂದು ಮಕ್ಕಳಲ್ಲಿ ಹಿರಿಯವರಾದ ತಲಂಜೇರಿ ಕೃಷ್ಣಭಟ್ಟರನ್ನು ವಿವಾಹವಾಗಿ ಒಂದಷ್ಟು ವರ್ಷ ಮನೆ, ಸಂಸಾರ ಮಕ್ಕಳೆಂದು ಇದ್ದವಳನ್ನು, ಶಿಕ್ಷಕ ತರಬೇತಿ ಕೊಡಿಸಿ 'ರತ್ನ ಟೀಚರ್" ಎಂದು ಸಮಾಜದಲ್ಲಿ ಗುರುತಿಸಲು ಕಾರಣರಾದ ನನ್ನವರನ್ನು ಸದಾ ನೆನಪಿಸುತ್ತೇನೆ.
ಮೊದಲೇ ತೋಚಿದ್ದನ್ನು ಗೀಚುವವಳಾದ ನಾನು ಕೊರೋನಾ ಸಮಯದಲ್ಲಿ ಬರವಣಿಗೆಯತ್ತ ವಾಲಿದೆ. ವಾಟ್ಸಪ್ ಬಳಗಗಳಲ್ಲಿ ಸಾಹಿತ್ಯದ ವಿವಿಧ ಮಜಲುಗಳ ಪರಿಚಯವಾಯಿತು. 2017ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಮೇಲೆ ಈ ಹವ್ಯಾಸಕ್ಕೆ ಹೆಚ್ಚಿನ ಸಮಯವನ್ನು ನೀಡಿದ ಪರಿಣಾಮವಾಗಿ ಇದೀಗ ಲೋಕಾರ್ಪಣೆಗೊಳ್ಳಲು ಸಿದ್ಧತೆ ನಡೆಸುತ್ತಿರುವ (ಸುವಿಚಾರಗಳ ಸಂಗ್ರಹ) ಕೃತಿ ನಲ್ನುಡಿ ರತ್ನಹಾರ. “
ನಲ್ನುಡಿ ರತ್ನಹಾರ ಕೃತಿಗೆ ಸದಾಶಯದ ನುಡಿಗಳನ್ನು ಬರೆದಿದ್ದಾರೆ ಪದವಿನಂಗಡಿಯ ಕೆ ಪಿ ಅಶ್ವಿನ್ ರಾವ್. ಸುಮಾರು ೮೪ ಪುಟಗಳಿರುವ ಈ ಕೃತಿಯನ್ನು ರತ್ನಾ ಭಟ್ ತಮ್ಮ ಪತಿ ಕೀರ್ತಿಶೇಷ ತಲಂಜೇರಿ ಕೃಷ್ಣ ಭಟ್ ಅವರಿಗೆ ಅರ್ಪಣೆ ಮಾಡಿದ್ದಾರೆ.