ನಳಂದಾ - ಆಕ್ರಮಣಕಾರರಿಂದ ನಾಶವಾದ ಭಾರತದ ಜಾಗತಿಕ ವಿದ್ಯಾಕೇಂದ್ರ

ನಳಂದಾ - ಆಕ್ರಮಣಕಾರರಿಂದ ನಾಶವಾದ ಭಾರತದ ಜಾಗತಿಕ ವಿದ್ಯಾಕೇಂದ್ರ

ನಳಂದಾದ ಹೆಸರು ಕೇಳದವರಾರು? ಭಾರತದ ಜಗತ್ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ನಳಂದಾದಲ್ಲಿ ಈಗ ಉಳಿದಿರುವುದು ಕೆಂಪು ಬಣ್ಣದ ಭವ್ಯ ಕಟ್ಟಡಗಳು ಮಾತ್ರ.

ಆಕ್ಸ್-ಫರ್ಡ್ ವಿಶ್ವವಿದ್ಯಾಲಯವು ಸ್ಥಾಪನೆಯಾಗುವ ಐನೂರು ವರುಷಗಳ ಮುಂಚೆಯೇ ನಳಂದಾ ವಿಶ್ವವಿದ್ಯಾಲಯದಲ್ಲಿ 90 ಲಕ್ಷ ಪುಸ್ತಕಗಳ ಬೃಹತ್ ಗ್ರಂಥಾಲಯವಿತ್ತು. ಪೂರ್ವ ಮತ್ತು ಮಧ್ಯ ಏಷ್ಯಾದ ವಿವಿಧ ದೇಶಗಳಿಂದ ಆಗಮಿಸಿದ್ದ 10,000 ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಿದ್ದರು. ಔಷಧಿ ಶಾಸ್ತ್ರ, ತರ್ಕ ಶಾಸ್ತ್ರ, ಗಣಿತ ಮತ್ತು ಬೌದ್ಧ ಮತ ತತ್ವಗಳನ್ನು ಆಗಿನ ಕಾಲದ ಶ್ರೇಷ್ಠ ವಿದ್ವಾಂಸರಿಂದ ಅವರು ಅಲ್ಲಿ ಕಲಿಯುತ್ತಿದ್ದರು. ಬೌದ್ಧರ ಧಾರ್ಮಿಕ ಗುರು ದಲೈ ಲಾಮಾ "ನಮ್ಮ (ಬೌದ್ಧರ) ಎಲ್ಲ ಜ್ನಾನವೂ ಬಂದಿರುವುದು ನಳಂದಾದಿಂದ” ಎಂದೊಮ್ಮೆ ಹೇಳಿದ್ದಾರೆ.

ಏಳ್ನೂರು ವರುಷಗಳ ಅವಧಿಯಲ್ಲಿ ಏಷ್ಯಾದ ವಿವಿಧ ದೇಶಗಳಿಂದ ಬಂದ ಜ್ನಾನಾರ್ಥಿಗಳಿಗೆ ನಳಂದಾ ವಿಶ್ವವಿದ್ಯಾಲಯ ಜ್ನಾನದ ಧಾರೆ ಎರೆಯಿತು. ಆ ದೀರ್ಘ ಅವಧಿಯಲ್ಲಿ ನಳಂದಾವನ್ನು ಸರಿಗಟ್ಟುವ ಬೇರೊಂದು ವಿಶ್ವವಿದ್ಯಾಲಯ ಜಗತ್ತಿನಲ್ಲಿ ಬೇರೆಲ್ಲೂ ಇರಲಿಲ್ಲ. ಬೊಲೊಂಗಾ ವಿಶ್ವವಿದ್ಯಾಲಯ ಯುರೋಪಿನ ಅತ್ಯಂತ ಹಳೆಯ ವಿಶ್ವವಿದ್ಯಾಲಯ. ನಳಂದಾ ವಿಶ್ವವಿದ್ಯಾಲಯ ಅದಕ್ಕಿಂತಲೂ ಐನೂರು ವರುಷ ಹಳೆಯದು ಎಂಬುದು ಗಮನಾರ್ಹ. ನಳಂದಾ ವಿಶ್ವವಿದ್ಯಾಲಯದಲ್ಲಿ ಅಲ್ಲಲ್ಲಿ ಮುಕ್ತ ವಾತಾವರಣದಲ್ಲಿ ಕಲಿಕಾ ಸ್ಥಳಗಳಿದ್ದು, ಅವುಗಳ ಸುತ್ತಲೂ ಪ್ರಾರ್ಥನಾ ಮಂದಿರಗಳು ಮತ್ತು ಅಧ್ಯಯನ ಕೊಠಡಿಗಳು ಇದ್ದವು.

ನಳಂದಾ ವಿಶ್ವವಿದ್ಯಾಲಯದ ಪ್ರಚಂಡ ಕೊಡುಗೆಗಳು
ಸಸ್ಯಾಧಾರಿತ ಪ್ರಾಚೀನ ಚಿಕಿತ್ಸಾ ಪದ್ಧತಿ ಆಯುರ್ವೇದವನ್ನು ನಳಂದಾದಲ್ಲಿ ಪ್ರಧಾನವಾಗಿ ಕಲಿಸಲಾಗುತ್ತಿತ್ತು. ಇಲ್ಲಿ ಅದನ್ನು ಕಲಿತವರಿಂದಲೇ ಅದು ಭಾರತದ ಉದ್ದಗಲದಲ್ಲಿ ಪಸರಿಸಿತು. ಥೈಲೆಂಡಿನ ಅಧ್ಯಾತ್ಮಿಕ ಚಿತ್ರಕಲೆಗೆ ಮತ್ತು ಟಿಬೆಟ್ ಹಾಗೂ ಮಲೇಷ್ಯಾದ ಲೋಹದ ಕಲೆಗೆ ನಳಂದಾವೇ ಮೂಲ.

ಎಲ್ಲದಕ್ಕಿಂತ ಮುಖ್ಯವಾಗಿ ಗಣಿತ ಮತ್ತು ಖಗೋಲ ವಿಜ್ನಾನದ ಬೆಳವಣಿಗೆಗೆ ನಳಂದಾ ವಿಶ್ವವಿದ್ಯಾಲಯದ ಕೊಡುಗೆ ವಿಶೇಷ. ಭಾರತದ ಗಣಿತ ಶಾಸ್ತ್ರದ ಪಿತಾಮಹ ಆರ್ಯಭಟ ಆರನೆಯ ಶತಮಾನದಲ್ಲಿ ನಳಂದಾ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದರೆಂದು ನಂಬಲಾಗಿದೆ. "ಶೂನ್ಯವನ್ನು ಒಂದು ಅಂಕೆಯನ್ನಾಗಿ ಪ್ರಪ್ರಥಮ ಬಾರಿಗೆ ಪರಿಚಯಿಸಿದ್ದು ಆರ್ಯಭಟ ಎಂದು ನಾವು ನಂಬುತ್ತೇವೆ. ಈ ಕ್ರಾಂತಿಕಾರಿ ಪರಿಕಲ್ಪನೆ ಗಣಿತದ ಲೆಕ್ಕಾಚಾರಗಳನ್ನು ಸರಳಗೊಳಿಸಿತು ಮತ್ತು ಬೀಜಗಣಿತ ಹಾಗೂ ಕಲನಶಾಸ್ತ್ರದಂತಹ ಸಂಕೀರ್ಣ ಶಾಸ್ತ್ರಗಳ ಅಭಿವೃದ್ಧಿಗೆ ಕಾರಣವಾಯಿತು” ಎನ್ನುತ್ತಾರೆ ಕೊಲ್ಕತಾದ ಗಣಿತದ ಪ್ರೊಫೆಸರ್ ಅನುರಾಧಾ ಮಿತ್ರ. "ಶೂನ್ಯ ಇಲ್ಲದಿದ್ದರೆ ಇಂದಿನ ಕಂಪ್ಯೂಟರುಗಳು ಇರಲು ಸಾಧ್ಯವಿಲ್ಲ” ಎಂದವರು ಬೊಟ್ಟು ಮಾಡಿ ತೋರಿಸುತ್ತಾರೆ. “ವರ್ಗಮೂಲ ಮತ್ತು ಘನಮೂಲಗಳ ಲೆಕ್ಕಾಚಾರ ಮತ್ತು ಗೋಳೀಯ ಜ್ಯಾಮಿತಿಗೆ ತ್ರಿಕೋನಮಿತಿಯ ಫಲನಗಳ ಬಳಕೆಗೆ ಅಪ್ರತಿಮ ಕೊಡುಗೆ ಸಲ್ಲಿಸಿದವರು ಆರ್ಯಭಟ. ಚಂದ್ರನ ಪ್ರಕಾಶಕ್ಕೆ ಸೂರ್ಯನ ಪ್ರತಿಫಲಿತ ಬೆಳಕು ಕಾರಣವೆಂದು ಮೊಟ್ಟಮೊದಲಾಗಿ ತಿಳಿಸಿದ್ದು ಆರ್ಯಭಟ” ಎನ್ನುತ್ತಾರೆ ಅವರು. ಆತನ ಒಳನೋಟಗಳು ಭಾರತದಲ್ಲಿ ಗಣಿತ ಮತ್ತು ಖಗೋಳ ವಿಜ್ನಾನದ ಪ್ರಚಂಡ ಬೆಳವಣಿಗೆಗೆ ಕಾರಣವಾದವು.

ಬೌದ್ಧ ಮತದ ಬೋಧನೆ ಮತ್ತು ತತ್ವಗಳ ಪ್ರಚಾರಕ್ಕಾಗಿ ಚೀನಾ, ಕೊರಿಯಾ, ಜಪಾನ್, ಇಂಡೋನೇಷ್ಯಾ, ಶ್ರೀಲಂಕಾ ಇತ್ಯಾದಿ ದೇಶಗಳಿಗೆ ನಳಂದಾ ವಿಶ್ವವಿದ್ಯಾಲಯವು ವಿದ್ವಾಂಸರನ್ನು ಕಳಿಸುತ್ತಿತ್ತು. ಈ ಸಾಂಸ್ಕೃತಿಕ ವಿನಿಮಯವು ಏಷ್ಯಾ ಖಂಡದಲ್ಲಿ ಬೌದ್ಧ ಮತದ ಪ್ರಸಾರಕ್ಕೆ ಸಹಕಾರಿಯಾಯಿತು.

ದುಷ್ಟ ರಾಜನ ಸೈನ್ಯದ ನೀಚ ಕೃತ್ಯ: ನಳಂದಾ ವಿಶ್ವವಿದ್ಯಾಲಯದ ನಾಶ
1190ರಲ್ಲಿ ಟರ್ಕಿ-ಅಫಘಾನಿಸ್ಥಾನದ ದಳಪತಿ ಭಕ್ತಿಯಾರ್ ಖಿಲ್ಜಿ ಮುನ್ನಡೆಸಿದ ದುಷ್ಟ ಸೈನ್ಯದ ಆಕ್ರಮಣದಿಂದ ನಳಂದಾ ವಿಶ್ವವಿದ್ಯಾಲಯ ನಾಶವಾಯಿತು. ಅಲ್ಲಿನ ಬೌದ್ಧ ಜ್ನಾನ ಕೇಂದ್ರವನ್ನು ನಿರ್ನಾಮ ಮಾಡುವುದೇ ಪೂರ್ವ ಮತ್ತು ಉತ್ತರ ಭಾರತಕ್ಕೆ ಧಾಳಿ ಮಾಡಿದ ಆ ನೀಚ ದಳಪತಿಯ ಉದ್ದೇಶವಾಗಿತ್ತು. ಅವನ ರಾಕ್ಷಸೀ ಪ್ರವೃತ್ತಿಯ ಸೈನಿಕರು ನಳಂದಾ ವಿಶ್ವವಿದ್ಯಾಲಯದಲ್ಲಿ ಸಿಕ್ಕಸಿಕ್ಕಲ್ಲಿ ಹಚ್ಚಿದ ಬೆಂಕಿ ಮೂರು ತಿಂಗಳುಗಳ ಕಾಲ ಉರಿಯುತ್ತಿತ್ತು ಎಂದರೆ ಅವರು ಮಾಡಿದ ಅಪಾರ ಹಾನಿಯನ್ನು ಕಲ್ಪಿಸಿಕೊಳ್ಳಬಹುದು. ಈಗ ನಳಂದಾ ವಿಶ್ವವಿದ್ಯಾಲಯದಲ್ಲಿ ಪುರಾತತ್ವ ಅಧ್ಯಯನಕ್ಕಾಗಿ 23 ಹೆಕ್ಟೇರ್ ಪ್ರದೇಶದಲ್ಲಿ ಉತ್ಖನನ ನಡೆಸಲಾಗಿದೆ. ಇದು ಶತಮಾನಗಳ ಮುಂಚಿನ ಜಗತ್ತಿನ ಪರಮೋನ್ನತ ವಿಶ್ವವಿದ್ಯಾಲಯದ ಒಂದು ಪುಟ್ಟ ಭಾಗ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನಗಳು ಮತ್ತು ಬೌದ್ಧ ಗುರುಕುಲಗಳು ತುಂಬಿರುವ ಈ ಪ್ರದೇಶದಲ್ಲಿ ನಡೆದಾಡಿದರೆ, ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯದ ಭವ್ಯ ಪರಿಸರದಲ್ಲಿ ಸಾವಿರಾರು ಜ್ನಾನದಾಹಿಗಳ ಅಧ್ಯಯನ ಹೇಗಿದ್ದಿರಬಹುದು ಎಂಬುದನ್ನು ಊಹಿಸಬಹುದು.

ನಳಂದಾ ವಿಶ್ವವಿದ್ಯಾಲಯದ ತಾಣ: ಈಗ ಜಾಗತಿಕ ಪಾರಂಪರಿಕ ತಾಣ
ನಳಂದಾ ವಿಶ್ವವಿದ್ಯಾಲಯ ಪ್ರದೇಶವನ್ನು ಯುನೆಸ್ಕೋ “ಜಾಗತಿಕ ಪಾರಂಪರಿಕ ತಾಣ”ವೆಂದು ಗುರುತಿಸಿದೆ. ಅಲ್ಲಿನ ಕಲಿಕಾ ಭವನಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಅಂತಹ ಒಂದು ಆಯಾತಾಕಾರದ ಕಲಿಕಾ ಭವನದ ಮಧ್ಯದಲ್ಲಿ ಕಲ್ಲಿನ ವೇದಿಕೆಯಿದೆ. ಅದು ಅಂದಿನ ಕಾಲಮಾನದಲ್ಲಿ ಪ್ರಾಧ್ಯಾಪಕರು ಪಾಠ ಮಾಡುತ್ತಿದ್ದ ವೇದಿಕೆ. ಆ ಕಲಿಕಾ ಭವನದಲ್ಲಿ 300 ವಿದ್ಯಾರ್ಥಿಗಳು ಪಾಠ ಕೇಳಲು ಕುಳಿತಿರುತ್ತಿದ್ದರು ಎಂದು ಅಂದಾಜಿಸಬಹುದು. ಅಲ್ಲಿನ ಹೊರಭಾಗದಲ್ಲಿ ಸಾಲಾಗಿರುವ ಸಣ್ಣಸಣ್ಣ ಕೋಣೆಗಳನ್ನು ಕಾಣಬಹುದು. ಅವು ವಿದ್ಯಾರ್ಥಿಗಳ ವಾಸದ ಕೋಣೆಗಳು.

ನಳಂದಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕಾಗಿ ಪ್ರವೇಶ ಪಡೆಯುವುದು ಸುಲಭವಾಗಿರಲಿಲ್ಲ. ಪ್ರವೇಶ ಬಯಸುವ ವಿದ್ಯಾರ್ಥಿಗಳು ನಳಂದಾದ ಉನ್ನತ ಪ್ರಾಧ್ಯಾಪಕರು ನಡೆಸುವ ಕಠಿಣ ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಿತ್ತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಭಾರತದ ವಿವಿಧ ಭಾಗಗಳಿಂದ ಆಗಮಿಸಿದ ಶ್ರೇಷ್ಠ ಪ್ರಾಧ್ಯಾಪಕರು ಶಿಕ್ಷಣ ನೀಡುತ್ತಿದ್ದರು. ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿದ್ದ ವಿಶ್ವವಿದ್ಯಾಲಯವನ್ನು ಧರ್ಮಪಾಲ, ಶೀಲಭದ್ರ ಮುಂತಾದ ಮಹಾಗುರುಗಳು ಮುನ್ನಡೆಸುತ್ತಿದ್ದರು.

ನಳಂದಾ ವಿಶ್ವವಿದ್ಯಾಲಯದ ಗ್ರಂಥಾಲಯ: 90 ಲಕ್ಷ ತಾಳೆಗರಿ ಗ್ರಂಥಗಳ ಜ್ನಾನಖಜಾನೆ
ನಳಂದಾ ವಿಶ್ವವಿದ್ಯಾಲಯದ ಬೃಹತ್ ಗ್ರಂಥಾಲಯದಲ್ಲಿದ್ದ ಕೈಬರಹದ ತಾಳೆಗರಿ ಗ್ರಂಥಗಳ ಸಂಖ್ಯೆ ತೊಂಬತ್ತು ಲಕ್ಷ. ಅದು ಜಗತ್ತಿನಲ್ಲೇ ಸರಿಸಾಟಿಯಿಲ್ಲದ ಅಮೋಘ ಗ್ರಂಥಭಂಡಾರವಾಗಿತ್ತು. ಅವುಗಳಲ್ಲಿ ಕೆಲವೇ ಕೆಲವು ತಾಳೆಗರಿ ಗ್ರಂಥಗಳು ಮತ್ತು ಬಣ್ಣದಲ್ಲಿ ರಚಿಸಿದ ಮರದ ಫಲಕಗಳು ಬೆಂಕಿಯಲ್ಲಿ ಸುಟ್ಟು ಹೋಗದೆ ಉಳಿದಿವೆ - ನಳಂದಾಕ್ಕೆ ದುಷ್ಟ ಸೈನಿಕರು ಆಕ್ರಮಣ ಮಾಡಿದಾಗ, ವಿಶ್ವವಿದ್ಯಾಲಯವನ್ನು ತೊರೆದು ಓಡಿ ಹೋದ ಕೆಲವು ಬೌದ್ಧ ಭಿಕ್ಷುಗಳು ಅವನ್ನು ಹೊತ್ತೊಯ್ದ ಕಾರಣ. ಈಗ ಅವನ್ನು ಯುಎಸ್‌ಎ ದೇಶದ ಲಾಸ್ ಏಂಜಲೀಸ್ ಕೌಂಟಿ ಮ್ಯೂಸಿಯಮ್ ಆಫ್ ಆರ್ಟ್ಸ್ ಮತ್ತು ಟಿಬೇಟಿನ ಯಾರ್ಲಂಗ್ ಮ್ಯೂಸಿಯಮ್‌ನಲ್ಲಿ ಕಾಣಬಹುದು. ಚೀನಾದ ಹೆಸರುವಾಸಿ ಪ್ರವಾಸಿ ಮತ್ತು ಬೌದ್ಧ ಭಿಕ್ಷು ಜ್ಸುವಾನ್‌ಜಂಗ್ ನಳಂದಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮತ್ತು ಪಾಠ ಮಾಡಿದವರು. ಅವರು ಕ್ರಿ.ಶ. 645ರಲ್ಲಿ 657 ಬೌದ್ಧಗ್ರಂಥಗಳನ್ನು ಚೀನಾಕ್ಕೆ ಸಾಗಿಸಿದ್ದ ಕಾರಣ, ನಳಂದಾದ ಮಹಾನ್ ಗ್ರಂಥಾಲಯದ ಕೆಲವು ಅಮೂಲ್ಯ ಗ್ರಂಥಗಳು ಉಳಿದವು.

ರಕ್ಕಸ ಮನೋಭಾವದ ದಳಪತಿಯೂ ಅವನ ಸೈನಿಕರೂ ನಳಂದಾ ವಿಶ್ವವಿದ್ಯಾಲಯವನ್ನು ನಾಶ ಮಾಡಿದಾಗ ಅಲ್ಲಿದ್ದ ಹಲವರು ಮೃತರಾದರು ಮತ್ತು ಉಳಿದವರು ತೊರೆದು ಹೋದರು. ಅದಾಗಿ ಮುಂದಿನ ಆರು ಶತಮಾನಗಳಲ್ಲಿ ನಳಂದಾದ ಅವಶೇಷಗಳಲ್ಲಿ ಯಾರೂ ಆಸಕ್ತಿ ವಹಿಸಲಿಲ್ಲ. ಕೊನೆಗೆ 1861ರಲ್ಲಿ ಅಲ್ಲಿನ ಅವಶೇಷಗಳು ನಳಂದಾ ವಿಶ್ವವಿದ್ಯಾಲಯದವು ಎಂದು ಗುರುತಿಸಲಾಯಿತು. ತದನಂತರ ಅಲ್ಲಿ ಉತ್ಖನನಗಳನ್ನು ನಡೆಸಲಾಯಿತು. ಆಗ ಪತ್ತೆಯಾದ 13,000 ವಸ್ತುಗಳಲ್ಲಿ       350 ವಸ್ತುಗಳನ್ನು ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಬುದ್ಧನ ಕಂಚಿನ ಮೂರ್ತಿಗಳು, ಶಿಲ್ಪಗಳು ಮತ್ತು ಆನೆದಂತದ ವಸ್ತುಗಳು ಅವುಗಳಲ್ಲಿ ಸೇರಿವೆ.

ಸಾವಿರಾರು ವರುಷಗಳ ಮುಂಚೆ ನಮ್ಮ ಭಾರತ "ವಿಶ್ವ ಗುರು ದೇಶ”ವಾಗಿತ್ತು ಎಂಬುದಕ್ಕೆ ಮಗದೊಂದು ಪುರಾವೆ ಜಗದ್ವಿಖ್ಯಾತ ನಳಂದಾ ವಿಶ್ವವಿದ್ಯಾಲಯ. ಈಗ ಇನ್ನೊಮ್ಮೆ "ವಿಶ್ವ ಗುರು ದೇಶ”ವಾಗಲು ನಮ್ಮ ರಾಷ್ಟ್ರ ಸನ್ನದ್ಧವಾಗಿರುವಾಗ, ನಳಂದಾದ ಭವ್ಯ ಪರಂಪರೆಯಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ, ಅಲ್ಲವೇ? ನಮ್ಮ ವಿಶ್ವವಿದ್ಯಾಲಯಗಳ ಬಗೆಗಿನ ತಪ್ಪು ಕಲ್ಪನೆಗಳನ್ನೂ ವಿದೇಶೀ ವಿಶ್ವವಿದ್ಯಾಲಯಗಳ ಬಗೆಗಿನ ಭ್ರಾಂತುಗಳನ್ನೂ ತೊರೆದು, ಇನ್ನಾದರೂ ನಮ್ಮ ಜ್ನಾನ ದೇಗುಲಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳೋಣ. ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲಿಕ್ಕಾಗಿ ಲಕ್ಷಗಟ್ಟಲೆ ರೂಪಾಯಿ ವೆಚ್ಚ ಮಾಡುವ ಬದಲಾಗಿ, ಅವನ್ನು ಮೀರಿಸುವಂತಹ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಕಲಿತು, ಅವು ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ವಿದ್ಯಾಸಂಸ್ಥೆಗಳಾಗಲು ಸಹಕರಿಸೋಣ.

ಫೋಟೋ 1: ನಳಂದಾ ವಿಶ್ವವಿದ್ಯಾಲಯದ ಭವ್ಯ ಕಟ್ಟಡಗಳ ಈಗಿನ ಸ್ಥಿತಿ

ಫೋಟೋ 2: ನಳಂದಾ ವಿಶ್ವವಿದ್ಯಾಲಯದ ಉತ್ಖನನ ಪ್ರದೇಶದ ನೋಟ