ನವಕರ್ನಾಟಕ ಪ್ರಕಾಶನಕ್ಕೆ ರಾಷ್ಟ್ರೀಯ ಪ್ರಶಸ್ತಿ

ಭಾರತೀಯ ಪ್ರಕಾಶಕರ ಒಕ್ಕೂಟವು ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಭಾರತದ ಪ್ರಮುಖ ಭಾಷೆಗಳ ಪ್ರಕಾಶನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ನೀಡುತ್ತಿರುವ ಪ್ರತಿಷ್ಠಿತ ಪ್ರಕಾಶಕ ಪ್ರಶಸ್ತಿಗೆ ಕನ್ನಡಿಗರ ಹೆಮ್ಮೆಯ ನವಕರ್ನಾಟಕ ಪ್ರಕಾಶನ ಆಯ್ಕೆಯಾಗಿದೆ.
ಕನ್ನಡದಲ್ಲಿ ಕಳೆದ 63 ವರ್ಷಗಳಿಂದ ಪುಸ್ತಕಗಳ ಮೂಲಕ ‘ಮನು ಕುಲದ ಸೇವೆ ಎಂಬ ಧ್ಯೇಯದೊಂದಿಗೆ’ ಸುಮಾರು 6500 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈಲಿ ಸಂಸ್ಥೆಯನ್ನು ಆಯ್ಕೆ ಮಾಡಿದೆ. ನವದೆಹಲಿಯಲ್ಲಿ ಇದೇ ತಿಂಗಳ 11 ಮತ್ತು12 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪುರಸ್ಕಾರವನ್ನು ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷರಾದ ರಮೇಶ್ ಮಿತ್ತಲ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರ ಕಟ್ಟುವಲ್ಲಿ ಪುಸ್ತಕಗಳ ಮಹತ್ವ, ಹೊಸ ಶಿಕ್ಷಣ ನೀತಿ ಮತ್ತು ಪುಸ್ತಕಗಳ ಗುಣಮಟ್ಟ ಗ್ರಂಥಸ್ವಾಮ್ಯ ಹೀಗೆ ಹಲವು ವಿಷಯಗಳನ್ನೊಳಗೊಂಡ ಸಂವಾದ ಗೋಷ್ಟಿಗಳು ನಡೆಯಲಿವೆ.
ನವಕರ್ನಾಟಕ ಪ್ರಕಾಶನ ಸಂಸ್ಥೆಯು ರಾಜ್ಯದಲ್ಲಿ 6 ಪುಸ್ತಕ ಮಾರಾಟ ಕೇಂದ್ರಗಳನ್ನು ಹೊಂದಿದ್ದು, ನೂರಾರು ಲೇಖಕರು, ಪ್ರಕಾಶಕರು, ಅನುವಾದಕರು ಮತ್ತು ಸಂಪಾದಕರಿಗೆ ನೆರವಾಗಿದೆ. ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂಕಿತ ಪುಸ್ತಕ ಪ್ರಶಸ್ತಿ, ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹಿರಿಮೆ ಮತ್ತು ತನ್ನ ಪ್ರಾಮಾಣಿಕ ಮತ್ತು ಪಾರದರ್ಶಕ ನಡೆಯಿಂದ ವಾಚನಾಭಿರುಚಿಯನ್ನು ಹೆಚ್ಚಿಸುತ್ತಿರುವ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದೆ.
(ಸುದ್ದಿ ಮಾಹಿತಿ ಸಂಗ್ರಹ) - ಅಮರನಾಥ್ ದೇವಧರ್, ಬೆಂಗಳೂರು