ನವದುರ್ಗೆಯರನ್ನು ಆರಾಧಿಸುವ ನವರಾತ್ರಿ ಹಬ್ಬದ ವೈಶಿಷ್ಟ್ಯ

ನವದುರ್ಗೆಯರನ್ನು ಆರಾಧಿಸುವ ನವರಾತ್ರಿ ಹಬ್ಬದ ವೈಶಿಷ್ಟ್ಯ

ನಮ್ಮಲ್ಲಿ ಹಲವು ಹಬ್ಬಗಳು ಆಚರಣೆಯಲ್ಲಿದ್ದು, ಅವುಗಳು ಪುರಾಣ ಇತಿಹಾಸಕ್ಕೆ ಸಾಕ್ಷಿಗಳಾಗಿವೆ. ಅವುಗಳು ಈ ಕೆಳಗಿನಂತಿವೆ. 

ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ, ಶ್ರೀ ರಾಮನವಮಿ, ಹನುಮ ಜಯಂತಿ, ಬುದ್ಧಪೂರ್ಣಿಮಾ, ಪತ್ತನಾಜೆ, ಆಟಿ ಅಮಾವಾಸ್ಯೆ, ನಾಗರ ಪಂಚಮಿ, ಋಗುಪಾಕರ್ಮ, ರಕ್ಷಾ ಬಂಧನ, ಸಮುದ್ರ ಪೂಜೆ, ತೀರ್ಥಸ್ನಾನ, ವರಮಹಾಲಕ್ಷ್ಮಿ ವೃತ, ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ಗಣೇಶ ಚತುರ್ಥಿ, ಓಣಂ, ಮಹಾಲಯ, ನವರಾತ್ರಿ, ನರಕ ಚತುರ್ದಶಿ, ದೀಪಾವಳಿ, ಬಲೀಂದ್ರ ಪೂಜೆ, ಲಕ್ಷ್ಮೀ ಪೂಜೆ, ಗೋ ಪೂಜೆ, ಅಂಗಡಿ ಪೂಜೆ, ತುಳಸಿ ಪೂಜೆ, ಸುಬ್ರಹ್ಮಣ್ಯ ಷಷ್ಠಿ, ಮಕರ ಸಂಕ್ರಾಂತಿ, ಮಹಶಿವರಾತ್ರಿ... ಮೊದಲಾದವುಗಳು. ಪ್ರತಿಯೊಂದಿಕ್ಕೂ ಬೇರೆ ಬೇರೆ ವಿಶೇಷಗಳಿವೆ.

ಭಾರತ ದೇಶದಾದ್ಯಂತ ಆಚರಿಸುವ ಹಬ್ಬವೇ ನವರಾತ್ರಿ. ಆಶ್ವಯುಜ ಶುಕ್ಲ ಪಕ್ಷದ ಪಾಡ್ಯದಿಂದ ದಶಮಿವರೆಗೆ ಹತ್ತು ದಿನಗಳು ಶ್ರೀ ದುರ್ಗಾಮಾತೆಯ ಅನುಗ್ರಹಕ್ಕಾಗಿ ವೇದ ಘೋಷದಿಂದ, ಭಯ ಭಕ್ತಿ ಶ್ರದ್ಧೆಗಳಿಂದ ಮಂತ್ರ ತಂತ್ರ, ಕರ್ಮಾನುಷ್ಠಾನಗಳಿಂದ ಆಚರಿಸುವ ಹಬ್ಬವೇ ನವರಾತ್ರಿ. ನಮ್ಮ ಕರ್ನಾಟಕದಲ್ಲಿ ನಾಡ ಹಬ್ಬವೆಂದೇ ಪ್ರಸಿದ್ಧಿಯಾಗಿದೆ. ದಸರಾ ಶರನ್ನವರಾತ್ರಿ ಹತ್ತು ದಿನಗಳ ಶಕ್ತಿ ದೇವತೆ ಶ್ರೀದೇವಿಯ ಆರಾಧನೆ, ದುಷ್ಟ ಶಕ್ತಿಗಳ ನಾಶ, ಶಿಷ್ಟರ ರಕ್ಷಣೆಯೇ ಶ್ರೀ ದೇವಿಯ ಆರಾಧನೆಯ ಉದ್ದೇಶವಾಗಿದೆ. ಈ ನವರಾತ್ರಿ ಪೂಜೆ, ದೇವೀ ಪೂಜೆ, ಶಕ್ತಿ ಪೂಜೆ ಎಂಬೆಲ್ಲಾ ಹೆಸರುಗಳಿಂದ ಕರೆಯಲ್ಪಡುತ್ತಿದೆ. ವಿಜಯ ದಶಮಿಯ ದಿನ ಮಕ್ಕಳ ವಿದ್ಯಾರಂಭ (ಶಾರದಾ ಪೂಜೆ) ಮಾಡಿಸುತ್ತಾರೆ.

ಈ ನವರಾತ್ರಿಯ ಅದಿದೇವತೆ ಯಾರು? ಆಕೆಯನ್ನು ಆರಾಧಿಸುವ ಉದ್ದೇಶಗಳೇನು ಎಂಬುದರ ಬಗ್ಗೆ ಆಸ್ತಿಕರು ತಿಳಿದುಕೊಂಡಿರಬೇಕು. ಇವಳೇ ಆದಿಶಕ್ತಿ. ಶ್ರೀ ಮಹಾವಿಷ್ಣು, ಶಂಕರ, ಅಗ್ನಿದೇವತೆಯರ ತೇಜಸ್ಸಿನಿಂದ ಉದ್ಭವಗೊಂಡು ದೇವಾಧಿದೇವತೆಗಳಿಂದ ಚಕ್ರ, ಪಿನಾಕ, ನಳಿಕ ಮೊದಲಾದ ಮೂವತ್ತೆರಡು ಆಯುಧಗಳನ್ನು ಪಡೆದು ಲೋಕ ಕಂಟಕರಾದ ಮಹಿಷಾಸುರ, ಶುಂಭ, ನಿಶುಂಭ, ದೂಮ್ರಲೋಚನ, ಚಂಡಮುಂಡ, ರಕ್ತಬೀಜ ಮೊದಲಾದ ದುಷ್ಟ ದೈತ್ಯರ ಸಂಹಾರ ಮಾಡಿದ ದುರ್ಗಾದೇವಿಯನ್ನು ಶರತ್ನಾಲದ ಆರಂಭ ದಿನಗಳಿಂದ ಆಷಾಢ ಶುಕ್ಲಪಕ್ಷ ಪಾಡ್ಯ ಮೊದಲ್ಗೊಂಡು ದಶಮಿಯ ತನಕ ಒಂದೊಂದು ವಿಶೇಷ ನಾಮಗಳಿಂದ ಪೂಜಿಸಿ ಭಕ್ತರ ಅಭೀಷ್ಟಗಳನ್ನು ನೆರವೇರಿಸುವಂತೆ ಪ್ರಾರ್ಥಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. 

ಒಂಭತ್ತು ದಿನಗಳಲ್ಲಿ ನವದುರ್ಗೆಯರ ಪೂಜೆಗೊಳ್ಳುತ್ತದೆ. ಶಾರದೆ ಆದಿಶಕ್ತಿ ಜಗನ್ಮಾತೆಯ ಪೂಜೆ ಈ ಸಂದರ್ಭದಲ್ಲಿ ವಿಶೇಷ. ಎಲ್ಲಾ ದೇವಿ ರೂಪ ಒಂದೇ ಆದಿಶಕ್ತಿಯ ಹಲವು  ರೂಪಗಳಾಗಿವೆ. ದೇವಿಯ ರೂಪದಲ್ಲೂ ಶ್ರೀ ಆದಿಶಕ್ತಿ ಜಗನ್ಮಾತೆಯನ್ನು ಆರಾಧಿಸುವುದು ಪದ್ಧತಿ. ಈ ಶಕ್ತಿ ಸ್ವರೂಪಿಣಿ ಮಹಾಮಾತೆಯನ್ನು ನವರಾತ್ರಿಯ ಒಂಭತ್ತು ದಿನಗಳಲ್ಲಿ ಶ್ರದ್ಧಾಭಕ್ತಿ, ವೃತ, ನೇಮ ನಿಷ್ಠೆಗಳಿಂದ ಪೂಜಿಸಿ ಹತ್ತನೇ ದಿನ ಶ್ರೀ ಶಾರದಾಂಭೆಯ ರೂಪದಲ್ಲಿ ಅರ್ಚಿಸಿ ಪ್ರಸಾದ ಸೇವಿಸಿದರೆ ಪಾಮರನು ಪಂಡಿತನಾಗುವನು. ಸಕಲ ಇಷ್ಟಾರ್ಥಗಳು ನೆರವೇರುವವು ಎಂಬ ನಂಬಿಕೆ ಇದೆ.

ನವದುರ್ಗೆಯಾಗಿ, ಅಷ್ಟಲಕ್ಷ್ಮಿಯಾಗಿ, ದುಷ್ಟ ಸಂಹಾರಿಣಿಯಾಗಿ, ಶಿಕ್ಷ ರಕ್ಷಕಿಯಾಗಿ ನಂಬಿದ ಭಕ್ತಾದಿಗಳನ್ನು ಸಂರಕ್ಷಿಸಿ ಮೋಕ್ಷವನ್ನು ನೀಡುವ ಮೂವತ್ತ ಮೂರು ಕೋಟಿ ದೇವತೆಗಳಿಂದ ಸರ್ವ ಕಾಲದಲ್ಲೂ ಆರಾಧಿಸಲ್ಪಡುವ ಪರಾಶಕ್ತಿ ಆದಿಮಾಯೆಗೆ ಶ್ರದ್ಧಾಭಕ್ತಿ ಪೂರ್ವಕ ಸಾಷ್ಟಾಂಗ ಪ್ರಣಾಮಗಳು.         

-ವಾಸುದೇವ ಉಪ್ಪಳ

ಚಿತ್ರ ಕೃಪೆ: ಇಂಟರ್ನೆಟ್ ತಾಣ