ನವರಾತ್ರಿ ಆರನೇ ದಿನದ ಆರಾಧನೆ - ಕಾತ್ಯಾಯಿನೀ ಮಾತೆ

ನವರಾತ್ರಿ ಆರನೇ ದಿನದ ಆರಾಧನೆ - ಕಾತ್ಯಾಯಿನೀ ಮಾತೆ

*ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನಾ|*

*ಕಾತ್ಯಾಯಿನೀ ಶುಭಂ ದದ್ಯಾದೇವೀ ದಾನವಘಾತಿನೀ||*

*ಕಾತ್ಯಾಯಿನೀ ಮಾತೆ*

ಆದಿಶಕ್ತಿಯು ತಳೆದ ನವರೂಪಗಳಲ್ಲಿ ಆರನೆಯ ರೂಪ ಇಂದಿನದು ‘ಕಾತ್ಯಾಯಿನೀ ಮಾತೆ’. ವರರುಚಿ ಎಂಬ ಮಹಾತಪಸ್ವಿಗಳಿಗೆ  ಕಾತ್ಯಾಯನ ಎಂಬ ಹೆಸರಿತ್ತು. ದೇವಿಯು ತನ್ನ ಪುತ್ರಿಯಾಗಿ ಜನಿಸಬೇಕೆಂಬ ಸಂಕಲ್ಪ ಕೈಗೊಂಡು ತಪಸ್ಸನ್ನು ಆಚರಿಸಿದರು. ಆ ವರದ ಫಲಸ್ವರೂಪವೇ ‘ದೇವಿ ಕಾತ್ಯಾಯಿನೀ ಜನನ’. ಋಷಿಗಳ ಆಶ್ರಮದ ಪರಿಸರ ಅತ್ಯಂತ ಶಾಂತ. ಸೂಕ್ಷ್ಮವಾದ ಶಕ್ತಿ ಲಹರಿಗಳ ಒಂದು ಅಂಶವೇ ಪುಟ್ಟ ಬಾಲಕಿಯ ಜನನಕ್ಕೆ ನಾಂದಿಯಾಯಿತು.

ಮಹಿಷಾಸುರನ ಉಪಟಳ, ಅಟ್ಟಹಾಸಕ್ಕೆ ಕೊನೆ ಮೊದಲಿರಲಿಲ್ಲ. ಅವನನ್ನು ಬಗ್ಗುಬಡಿಯಲು ದೇವತೆಗಳು ಹರಸಾಹಸಪಡುತ್ತಿದ್ದರು. ಋಷಿಮುನಿಗಳು ಸಹಾಯಕ್ಕಾಗಿ ದೇವಿಯನ್ನು ಮೊರೆ ಹೊಕ್ಕರು. ಕಾತ್ಯಾಯನ ಋಷಿಯು ಮೊದಲಾಗಿ ಧ್ಯಾನಿಸಿದ ಕಾರಣ ‘ಕಾತ್ಯಾಯಿನೀ ದೇವಿ’ ಎಂದೇ ಪ್ರಸಿದ್ಧಳಾದಳು. ಎಲ್ಲಾ ದೇವತೆಗಳೂ ತಮ್ಮ ಆಯುಧ ಮತ್ತು ವಿಶೇಷಶಕ್ತಿಯನ್ನು ದೇವಿಗೆ ನೀಡಿದರು. ಈ ರೀತಿಯಾಗಿ ಎರಡು ಹೇಳಿಕೆಗಳನ್ನು ನಾವು ಪುರಾಣಗಳಲ್ಲಿ ಕಾಣಬಹುದು. ಭಾದ್ರಪದ ಕೃಷ್ಣ ಚತರ್ದಶಿಗೆ ಜನಿಸಿ, ಅಶ್ವಯುಜ ಶುಕ್ಲ ಸಪ್ತಮಿ, ಅಷ್ಟಮಿ, ನವಮಿ ದಿನಗಳಲ್ಲಿ ಜನಕನಾದ ಕಾತ್ಯಾಯನ ಋಷಿಯ ಪೂಜೆ ‌ಸ್ವೀಕರಿಸಿ ದಶಮಿಯಂದು ಖೂಳ ಮಹಿಷನ ವಧಿಸಿದಳೆಂದು ಪ್ರತೀತಿ.

ನವರಾತ್ರಿಯ ಆರನೇ ದಿನ ಷಷ್ಠೀ ತಿಥಿಗೆ ದೇವಿಯ ಪೂಜೆಯು ನಡೆಯುವುದು. ಇಲ್ಲಿ ಸಾಧಕನ ಮನಸ್ಸು ‘ಆಜ್ಞಾ ಚಕ್ರ'  ದಲ್ಲಿ ನೆಲೆಗೊಳ್ಳುತ್ತದೆ. ಶ್ರದ್ಧಾಭಕ್ತಿಗಳಿಂದ ಪೂಜಿಸಿದ ಭಕುತರ ಚತುರ್ವಿದ ಪುರುಷಾರ್ಥಗಳನ್ನು ತಾಯಿ ಈಡೇರಿಸಿ ಹೊಂದುವಂತೆ ಮಾಡುತ್ತಾಳೆ. ಶಾರ್ದೂಲ ವಾಹನವಾಗಿ, ಮಂದಸ್ಮಿತೆ ಮುಖಾರವಿಂದದ ಮಾತೆ, ದಾನವರನ್ನು ಸಂಹರಿಸಿ ಲೋಕಕ್ಷೇಮ ನೀಡಿ ಹರಸಿದಳು. ರಾಹುಗ್ರಹ ದೋಷ ನಿವಾರಣೆ, ಉತ್ತಮ ಸಂತಾನ ಫಲಪ್ರಾಪ್ತಿ ದೇವಿಯ ಆರಾಧನೆಯಿಂದ ಲಭಿಸುವುದು. ಕಾತ್ಯಾಯಿನೀ ರೂಪದ, ಮಹಾಮಹಿಮಾನ್ವಿತೆಗೆ, ಪಾಪವನ್ನು ಕಳೆಯುವವಳಿಗೆ, ಭವ್ಯದಿವ್ಯ ರೂಪಿಣಿಗೆ ತಾಯಿ ಜಗನ್ಮಾತೆಗೆ ನಮಸ್ಕರಿಸುವೆ.

*ಕಾತ್ಯಾಯಿನೀ ಮಹಾಮಾಯೆ* *ಮಹಾ ಯೋಗಿನ್ಯಧೀಶ್ವರಿ|*

*ನಂದಗೋಪ ಸ್ತುತಂದೇವಿ ಪತಿಮೇ ಕುರುತೇನಮ||*

*ನಮಸ್ತಸ್ಯೈ ನಮಸ್ತಸೈ ನಮಸ್ತಸ್ಯೈನಮೋ ನಮಃ*//

ಓಂ ನಮೋ ಕಾತ್ಯಾಯಿನೀ ದೇವಿಯೇ ನಮ

-ರತ್ನಾ ಕೆ.ಭಟ್ ತಲಂಜೇರಿ

(ಆಧಾರ: ಪುರಾಣ ಮಾಲಿಕಾ)

ಚಿತ್ರ ಕೃಪೆ: ಇಂಟರ್ನೆಟ್ ತಾಣ