ನವರಾತ್ರಿ ಏಳನೇ ದಿನದ ಆರಾಧನೆ - ಕಾಲರಾತ್ರಿ ದೇವಿ

*ಏಕವೇಣೀ ಜಪಾಕರ್ಣಾಪೂರಾ ನಗ್ನಾ ಖರಸ್ಥಿತಾ*
*ಲಂಬೋಷ್ಟೀ ಕರ್ಣಿಕಾಕರ್ಣೇ ತೈಲಾಭ್ಯಕ್ತಶರೀರಿಣೀ|*
*ವಾಮಪಾದೋಲ್ಲಸಲ್ಲೋಹಲತಾ ಕಂಟಕ ಭೂಷಣಾ*
*ವರ್ಧನಾ ಮೂರ್ಧ್ವಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ||*
ನವರಾತ್ರಿಯ ಸಪ್ತಮಿ ದಿನ ದೇವಿ ಶಕ್ತಿ ಮಾತೆ ಕಪ್ಪು ಬಣ್ಣದ ತನುವ ಮೈಕಾಂತಿಯಿಂದ ಕಾಣಿಸುತ್ತಾಳೆ. ಕೆದರಿದ ತಲೆಕೂದಲುಗಳು. ಕೊರಳಲ್ಲಿ ಮಿರಿಮಿರಿ ಮಿಂಚುವ ಆಭರಣಗಳಿವೆ. ಆಕೆಯ ನಾಸಿಕದ ಎರಡೂ ಹೊಳ್ಳೆಗಳಿಂದ ಬೆಂಕಿಯ ಉಂಡೆಯ ಹಾಗೆ ಉಚ್ಛಾಸ, ನಿಶ್ವಾಸದ ಗಾಳಿ ಹೊರಹೊಮ್ಮುತ್ತದೆ. ನಾಲ್ಕು ಭುಜಗಳನ್ನು ಹೊಂದಿದ ದೇವಿ ಅಭಯಮುದ್ರೆ, ಖಡ್ಗ ,ಕಬ್ಬಿಣದ ಮುಳ್ಳುಗಳನ್ನು ಕೈಯಲ್ಲಿ ಹಿಡಿದು ಭಕುತರಿಗೆ ಆಶೀರ್ವಾದ ನೀಡುವಳು. ವರಮುದ್ರೆಯನ್ನು ಕರದಲಿ ಪಿಡಿದು ಶುಭವನ್ನು ಕರುಣಿಸುವ ಕಾರಣ ಶುಭಂಕರಿಯಾಗಿದ್ದಾಳೆ. ದುಷ್ಟರನ್ನು ಶಿಕ್ಷಿಸಿ, ಸಜ್ಜನರನ್ನು ಪೊರೆಯುವವಳು ಮಾತೆ.
ನವರಾತ್ರಿಯ ಈ ದಿನ ನೀಲಿವಸ್ತ್ರಧಾರಣೆ ಪ್ರಶಸ್ತ.ದುಃಖ, ನೋವು, ಸಾವು, ವಿನಾಶ ಇದೆಲ್ಲ ಬದುಕಿನ ಅವಿಭಾಜ್ಯ ಅಂಗಗಳು. ಒಪ್ಪಿಕೊಳ್ಳುವ ಸತ್ಯಗಳು. ಆದರೆ ತಾಯಿಯ ಉಪಾಸನೆಯಿಂದ ಶಮನ ಮಾಡಿಕೊಳ್ಳಬಹುದು.
ತಂತ್ರಸಾಧಕರು, ದೇವೀ ಉಪಾಸಕರು, ಯೋಗಿಗಳು ವಿಶೇಷವಾಗಿ ರಾತ್ರಿ ಹೊತ್ತು ಪೂಜಿಸಿ ಫಲಗಳನ್ನು ಪಡೆದು, ಸಹಸ್ರಚಕ್ರವನ್ನು ಸಾಧನೆಯಲ್ಲಿ ನೆಲೆಗೊಳಿಸುವರು. ಮನದಲಿರುವ ಭೀತಿ, ಅಧೈರ್ಯ, ಹೆದರಿಕೆಯನ್ನು ದೂರಮಾಡಲು ದೇವಿಯನ್ನು ಆರಾಧಿಸೋಣ. ಗ್ರಹ ಬಾಧೆ, ಶತ್ರುಭಯ, ಅಗ್ನಿಭಯ, ನೀರಿನಿಂದ ಹೆದರಿಕೆಯನ್ನು ದೂರಮಾಡುವಳು. ಕಾಳರಾತ್ರಿಯಲಿ ಪೂಜಿಸಿ ಪುನೀತರಾಗುವರು. ರಾತ್ರಿಯ ಪ್ರಶಾಂತತೆ ಮಾತೆಯ ಆರಾಧನೆಗೆ ಪ್ರಶಸ್ತಕಾಲ. ‘ಓಂ ದೇವೀ ಕಾಲರಾತ್ರಿಯೇ ನಮಃ’
-ರತ್ನಾ ಕೆ.ಭಟ್ ತಲಂಜೇರಿ
(ಆಕರ ಗ್ರಂಥ ‘ಪುರಾಣ ಮಾಲಿಕಾ’’ದೇವಿಪುರಾಣ’)
ಚಿತ್ರ ಕೃಪೆ: ಇಂಟರ್ನೆಟ್ ತಾಣ