ನವರಾತ್ರಿ ಐದನೇ ದಿನದ ಆರಾಧನೆ - ಸ್ಕಂದಮಾತಾ

ನವರಾತ್ರಿ ಐದನೇ ದಿನದ ಆರಾಧನೆ - ಸ್ಕಂದಮಾತಾ

*ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಮ್|*

*ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ*|

ನವರಾತ್ರಿಯ ಐದನೆಯ ದಿನ ಶಕ್ತಿ ದೇವತಾ ಸ್ವರೂಪಿಣಿ ಶ್ರೀ ದುರ್ಗೆ ‘ಸ್ಕಂದಮಾತಾ’ ರೂಪವನ್ನು ತಾಳುತ್ತಾಳೆ. ಬ್ರಹ್ಮ ದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ವ್ಯವಸ್ಥೆಯಿಂದ ಸ್ಕಂದ ಎಂಬ ನಾಮಾಂಕಿತ ಕಿರಣ ಸಮೂಹವೊಂದರ ಉತ್ಪನ್ನವಾಯಿತು. ಬುವಿಯಿಂದ ಸತ್ಯಲೋಕದವರೆಗೆ ಸ್ಕಂದ ರೇಖೆಯ ನಿಯಂತ್ರಣವೇರ್ಪಟ್ಟಿತು. ಏಳು ಲೋಕಗಳನ್ನು ನಿಯಂತ್ರಿಸುವ ಮಾತೆಯೇ ಸ್ಕಂದಮಾತೆ. ಸ್ಕಂದಮಾತೆಯ ಒಪ್ಪಿಗೆಯಿಲ್ಲದೆ ದಾಟಿ ಪಾರಾಗಲು, ಸಾಗಲು ಸಾಧ್ಯವಾಗದು. ಇಂದು ಪಂಚಮಿ ತಿಥಿ. ಈ ದಿನದ ಅವತಾರವಾದ ಮಾತೆ ತನ್ನ ತೊಡೆಯಲ್ಲಿ ಸ್ಕಂದನನ್ನು ಕುಳ್ಳಿರಿಸಿ, ತಾಯಿಯ ಮಮಕಾರ, ವಾತ್ಸಲ್ಯಗಳ ಪ್ರತಿರೂಪವಾಗಿ ಕಾಣಿಸುವಳು. ದೇವಿಯ ಆರಾಧನೆಯಿಂದ ಇಂದು ತಾಯಿ ಹಾಗೂ ಮಗನ ಕೃಪೆಗೆ ನಾವುಗಳು ಪಾತ್ರರಾಗಬಹುದು.

ನಾಲ್ಕು ಭುಜಗಳಿಂದ ಶೋಭಿಸುವ ತಾಯಿ, ಎರಡು ಕರಗಳಲ್ಲಿ ಕಮಲ ಪುಷ್ಪಗಳನ್ನು, ತೊಡೆಯಲ್ಲಿ ಮಗನನ್ನು, ಎಡಗೈಯಲ್ಲಿ ಅಭಯ ಮುದ್ರೆಯನ್ನುಹೊಂದಿದ್ದಾಳೆ. ಅತ್ಯಂತ ಸ್ವಚ್ಛ, ನಿರ್ಮಲ ಶ್ವೇತ ಮೈಬಣ್ಣದಿಂದ ಕಂಗೊಳಿಸುವಳು. ಕಮಲದಲ್ಲಿ ಪದ್ಮಾಸೀನಳಾಗಿ, ಪದ್ಮಾಸನಾದೇವಿ, ಅಗ್ನಿದೇವತೆ ಎಂದು ಸಹ ಕರೆಯಲ್ಪಡುತ್ತಾಳೆ.

ದೇವಿಯ ಆರಾಧನೆ ಸಕಲ ಸಂಕಷ್ಟ ನಿವಾರಣೆ, ಮೋಕ್ಷದ ಹಾದಿ, ಸುಖಶಾಂತಿ ಸಮೃದ್ಧಿ, ನೆಮ್ಮದಿ, ಮನದ ಸಾತ್ವಿಕ ಬಯಕೆಗಳ ಈಡೇರುವಿಕೆ, ಯಶಸ್ಸು, ಹೆಸರು ಸಿಗುವುದು. ಐಹಿಕ ಲಲಾಸೆಗಳನ್ನು, ಆಸೆಗಳನ್ನು, ಭೋಗದಾಸೆಗಳನ್ನು ಭಸ್ಮೀಕರಿಸಬಹುದು. ಭಕುತರ ಮನವು ವಿಶುದ್ಧ ಚಕ್ರದಲ್ಲಿ ನೆಲೆಸಿ, ಸಮಸ್ತ ಬಾಹ್ಯ ಆಡಂಬರಗಳೂ ನಾಶವಾಗಿ ಮಾನಸಿಕ ಶಾಂತಿ, ಏಕಾಗ್ರತೆ ಬಲಗೊಳ್ಳುವುದು. ಮನಸ್ಸು ಸ್ವಚ್ಛವಾಗುವುದು, ನಿರಾಳವೆನಿಸುವುದು. ಬುಧಗ್ರಹದ ಮೇಲೆ ಅಧಿಪತ್ಯ ಸಾಧಿಸಿ ಹಿಡಿತವಿರುವ ಕಾರಣ ಸಂಪತ್ತು, ಕೀರ್ತಿ, ಸಮೃದ್ಧಿ ಕರುಣಿಸುವಳು.ದೇವಿಯನ್ನು ಭಜಿಸಿ ಪೂಜಿಸಿ ಕೃತಾರ್ಥರಾಗೋಣ.

*ಯಾ ದೇವಿ ಸರ್ವಭೂತೇಷು ಮಾ ಸ್ಕಂದ ಮಾತಾ ರೂಪೇಣ ಸಂಸ್ಥಿತಾ|*

*ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ||*

ಓಂ ದೇವಿ ಸ್ಕಂದ ಮಾತಾಯ ನಮಃ

-ರತ್ನಾ ಕೆ.ಭಟ್, ತಲಂಜೇರಿ

(ಆಕರ ಗ್ರಂಥ: ಪುರಾಣ ಮಾಲಿಕಾ)

ಚಿತ್ರ ಕೃಪೆ: ಅಂತರ್ಜಾಲ ತಾಣ