ನವರಾತ್ರಿ ಒಂಬತ್ತನೇ ದಿನದ ಆರಾಧನೆ - ಸಿದ್ಧಿದಾತ್ರೀ ದೇವಿ

ನವರಾತ್ರಿ ಒಂಬತ್ತನೇ ದಿನದ ಆರಾಧನೆ - ಸಿದ್ಧಿದಾತ್ರೀ ದೇವಿ

*ಸಿದ್ಧ ಗಂಧರ್ವ ಯಕ್ಷಾದೈರರಸುರೈರಮರೈರಪಿ|*

*ಸೇ ವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||*

ಜಗನ್ಮಾತೆಯ ಒಂಬತ್ತನೇ ರೂಪವೇ ಸಿದ್ಧಿದಾತ್ರೀ. ಸಿದ್ಧಿ ಎಂದರೆ ವಿಶೇಷವಾದ ಶಕ್ತಿಗಳನ್ನು, ಸಿದ್ಧಿಯನ್ನು ಸಾಧಕರಿಗೆ ದಯಪಾಲಿಸುವವಳು. ಅಷ್ಟಸಿದ್ಧಿಗಳ ಬಗ್ಗೆ ನಾವು ಕೇಳಿದ್ದೇವೆ. ಸಾಧಕರಿಗೆ, ಭಕ್ತರಿಗೆ ಬೇಕಾದ್ದನ್ನು ನೀಡುವ ಮಹಾಮಹಿಮಳು ಮಾತೆ. ದೇವಿಪುರಾಣದ ಪ್ರಕಾರ ಪರಶಿವನಿಗೆ ಎಂಟು ಸಿದ್ಧಿಗಳೊಂದಿಗೆ ವಿಶೇಷವಾದ ಶಕ್ತಿಯನ್ನು ಕರುಣಿಸಿ, ಈಶನ ಎಡಭಾಗದಲ್ಲಿ ನೆಲೆಸಿ ಅಂದಿನಿಂದ ‘ಅರ್ಧನಾರೀಶ್ವರ’ ನಾದನಂತೆ. ಈಕೆ ಸಿಂಹವಾಹಿನಿಯಾಗಿ ಕೆಂಪು ಕಮಲಪುಷ್ಪದ ಮೇಲೆ ಪವಡಿಸಿದ್ದಾಳೆ. ಗದೆ, ಶಂಖ, ಕಮಲಗಳನ್ನು ಕರದಲ್ಲಿ ಧರಿಸಿದವಳು. ಸರಳ ಸಜ್ಜನಿಕೆಗೆ ಹೆಸರಾದವಳು. ದುಷ್ಷಶಕ್ತಿಗಳ ನಾಶಮಾಡುವವಳು. ಸಜ್ಜನರನ್ನು ಸದಾ ಪೊರೆಯುವವಳು. ಈ ದಿನ ತಾಯಿ ಜಗನ್ಮಾತೆಯ ಸ್ತುತಿ ವಿಶೇಷ. ಹೃದಯದಾಳದಲ್ಲಿ ಮಡುಗಟ್ಟಿದ ವೇದನೆಯನ್ನು ಹೊರಹಾಕಲು ಮಾತೆಯ ಸ್ತುತಿ ಮಾಡಿದರೆ ಸಿದ್ಧಿಯಿದೆ, ಈಡೇರಿಸ್ತಾಳೆ.

ಅರಿಷಡ್ವರ್ಗಗಳ ನಾಶ. ತ್ರಿಮೂರ್ತಿಗಳು ಸಹ ದೇವಿಯ ಆರಾಧನೆ ಮಾಡಿ ಸಿದ್ಧಿಸಿಕೊಂಡವರಂತೆ. ಕೆಲವೆಡೆ ಆಯುಧಪೂಜೆಯನ್ನು ಮಾಡುವ ಪದ್ಧತಿಯಿದೆ. ಸಿದ್ಧಿದಾತ್ರೀ ದೇವಿಯ ಅರ್ಚನೆ, ಪೂಜೆ, ಆರಾಧನೆಯಿಂದ ಮಾನಸಿಕ ನೆಮ್ಮದಿ, ಇಷ್ಟಾರ್ಥಗಳ ಈಡೇರಿಕೆ, ಸಂಸಾರ ಸಾಗರದಲ್ಲಿ ಕಷ್ಟಗಳಿಗೆ ಪರಿಹಾರ, ಭಗವತಿಯ ಪರಮ ಸಾನಿಧ್ಯ ಲಭಿಸುತ್ತದೆ ಎಂಬ ನಂಬಿಕೆ. ವಿಶೇಷವಾಗಿ ಇಂದಿನ ದುರ್ಗೆಯ ರೂಪವನ್ನು ಆರಾಧಿಸಿ ಸಂಸಾರ ಜಂಜಾಟದಿಂದ ಮುಕ್ತನಾಗಬಹುದು, ಜನ್ಮ ಪಾವನಗೊಳಿಸಬಹುದೆಂಬ ನಂಬಿಕೆ. ಅಹಂಕಾರ ಅಜ್ಞಾನಗಳ ನಿವಾರಣೆ. ಈ ನಿವಾರಣೆಗೆ ಬೇಕಾದ ಶಕ್ತಿಯನ್ನು ನೀಡೆಂದು ಪ್ರಾರ್ಥಿಸೋಣ.

ಮಹಾಭಾರತದಲ್ಲಿ ದುಷ್ಕೃತ್ಯಗಳನ್ನೇ ಎಸಗುತ್ತಾ ಬಂದ ಕೌರವನ ಅವಸಾನದ ದಿನ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಬನ್ನೀ ಮರದಲ್ಲಿ ತಮ್ಮ ಆಯುಧಗಳನ್ನು ರಕ್ಷಣೆಗಾಗಿ ಇಟ್ಟಿದ್ದರಂತೆ. ಆ ಆಯುಧಗಳಿಗೆ ಪೂಜೆ ಸಲ್ಲಿಸಿದರಂತೆ. ಮುಖ್ಯವಾಗಿ ದುಷ್ಟಶಕ್ತಿಗಳ ನಾಶ, ಸಜ್ಜನರನ್ನು ಪೊರೆಯುವುದು. ನಮ್ಮಲ್ಲಿರುವ ಅಹಂನ್ನು ತ್ಯಜಿಸಬೇಕು. ಯಾವಾಗಲೂ ಸತ್ಯಕ್ಕೇ ಜಯ ಎಂಬ ಅರಿವಿರಬೇಕು. ತೋರಿಕೆಯ ಆಡಂಬರದ ಪೂಜೆ ಬೇಡ. ಶ್ರದ್ಧಾಭಕ್ತಿಗಳ ಅರ್ಚನೆಯಿರಲಿ, ಮಾತೆಯನ್ನು ಪೂಜಿಸಿ, ನಮ್ಮನ್ನು ಕಾಡುತ್ತಿರುವ ಈ ಸಂಕಷ್ಟ ದಿಂದ ಪಾರುಮಾಡೆಂದು ಬೇಡಿಕೊಳ್ಳೋಣ, ತಾಯಿಯ ಪಾದಕಮಲಗಳಿಗೆ ಶಿರಬಾಗೋಣ.

*ಓಂ ಸಿದ್ಧಿದಾತ್ರ್ಯೈನಮಃ*

ಯಾದೇವಿ ಸರ್ವಭೂತೇಷು ಸಿದ್ಧಿದಾತ್ರಿ ರೂಪನೇ ಸಂಹಿತಾ|

ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ||

-ರತ್ನಾ ಕೆ.ಭಟ್ ತಲಂಜೇರಿ

(ಆಕರ ಗ್ರಂಥ: ಪುರಾಣ ಮಾಲಿಕಾ)

ಚಿತ್ರ ಕೃಪೆ: ಇಂಟರ್ನೆಟ್ ತಾಣ