ನವರಾತ್ರಿ, ದಸರಾ ಮತ್ತು ವಿಜಯ ದಶಮಿ

ನವರಾತ್ರಿ, ದಸರಾ ಮತ್ತು ವಿಜಯ ದಶಮಿ

ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೆ/

ಶರಣ್ಯೆತ್ರ್ಯಂಬಕೇ ದೇವೀ/

ನಾರಾಯಣೀ ನಮೋಸ್ತುತೇ//

ಸನಕಾದಿ ಯೋಗಿಗಳಿಂದ ಸ್ತುತ್ಯವಾದ ಶ್ಲೋಕವಿದು.

ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ/

ನಮಸ್ತೇ ಜಗದ್ವಂದ್ಯ ಪಾದಾರವಿಂದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ//

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅದರದೇ ಆದ ವಿಶೇಷತೆಗಳಿವೆ. ಕರುನಾಡ ದಸರಾ ಎಂಬ ಪದವೇ ರೋಮಾಂಚನ. ಕರ್ನಾಟಕದ ಮೈಸೂರ ದಸರಾ ಜಗದ್ವಿಖ್ಯಾತ. ನಾಡಹಬ್ಬವೆಂದೂ ಕರೆಯಲ್ಪಡುತ್ತದೆ. ಮೈಸೂರಿನ ರಾಜ ಒಡೆಯರ್ ಅವರಿಂದ ಆರಂಭಿಸಲ್ಪಟ್ಟ ದಸರಾ ಮುಂದೆ ಮೈಸೂರಿನಲ್ಲಿ ಚಾಮುಂಡೇಶ್ವರಿ ಮಾತೆಯ ಮೆರವಣಿಗೆ, ಜಂಬೂಸವಾರಿ ವೈಭವಗಳೊಂದಿಗೆ ನಡೆಯುತ್ತದೆ. ಬನ್ನೀ ಮಂಟಪಕ್ಕೆ ಗಜಪಡೆಗಳೊಂದಿಗೆ ಮೆರವಣಿಗೆ ಹೋಗಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬರುವ ಸಂಪ್ರದಾಯವಿದೆ. ಯದು ವಂಶಸ್ಥರಿಂದ ಮುಂದುವರಿದ ಈ ಸಂಪ್ರದಾಯ ಇಂದಿಗೂ ಒಂಬತ್ತು ದಿನಗಳ ಕಾಲ ಆಚರಣೆ ಮಹಾನವಮಿ, ಹತ್ತರಂದು ವಿಜಯದಶಮಿ, ಆಯುಧಪೂಜೆ ಎಲ್ಲವನ್ನೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಶೃಂಗೇರಿಯಲ್ಲಿ ಶರನ್ನವರಾತ್ರಿ ಶಾರದೋತ್ಸವ ಎಂದು ಆಚರಿಸುವರು. ಮೈಸೂರು ಅರಸರ ದರ್ಬಾರಿನಂತೆ, ಶ್ರೀಗಳವರ ದರ್ಬಾರ್ ನಡೆಯುತ್ತದೆ. ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸುವರು. ಶರದೃತುವಿನ ಶುಕ್ಲಪಕ್ಷದಿಂದ ಆರಂಭದಿಂದ ಪ್ರಾರಂಭಿಸಿ ನವಮಿವರೆಗೆ ಆಚರಿಸುವ ಈ ಹಬ್ಬ ಶರನ್ನವರಾತ್ರಿ. ದುರ್ಗೆಯ ನಾನಾರೂಪಗಳಾದ ಮಹಾಲಕ್ಷ್ಮೀ, ಮಹಾ ಸರಸ್ವತೀ, ಮಹಾದುರ್ಗಾ ಎಂಬೀ ಹೆಸರುಗಳಿಂದ ಕರೆಯಲ್ಪಡುವ ಮಾತೆ ನವರೂಪವನ್ನು ಧರಿಸಿ ದುಷ್ಟತನವನ್ನು ಕಳೆಯುತ್ತಾಳೆ ಎಂಬ ನಂಬಿಕೆ. ನಾನಾರೂಪಗಳಲ್ಲಿ ಪೂಜೆ, ಆರಾಧನೆ.

ಅಧರ್ಮ, ಅನೀತಿ ತಲೆಯೆತ್ತಿದಾಗ, ಮಹಾದುರ್ಗೆ ಶಕ್ತಿದೇವತೆ ಪ್ರತ್ಯಕ್ಷವಾಗಿ, ಅಧರ್ಮವನ್ನು ತುಳಿದು ಇಲ್ಲವಾಗಿಸಿದ ಸಮಯವಿದು. ಬಲ, ವಿದ್ಯೆ, ಐಶ್ವರ್ಯಕ್ಕಾಗಿ, ಅರಿಷಡ್ವರ್ಗಗಳ ನಿರ್ನಾಮಕ್ಕಾಗಿ,ಕೆಟ್ಟದನ್ನು ಜಯಿ‌ಸಿದ ಪ್ರತೀಕವಾಗಿ ನಡೆಯುವ ಭಗವತಿಯ ಆರಾಧನೆಯಿದು. ಎಲ್ಲಾ ದುರ್ಗಗಳನ್ನೂ ಅಂದರೆ ಸಂಕಷ್ಟಗಳನ್ನೂ ದಾಟಿಸುವವಳು.

ಕರ್ನಾಟಕದ ಬೆಳಗಾವಿಯಲ್ಲಿ ದಸರಾ ಎಂದರೆ ದುರ್ಗೆಯ ಆರಾಧನೆ. ದಾಂಡಿಯಾ ನೃತ್ಯ ಪ್ರಸಿದ್ಧ. ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ ಎಂದು ದಸರಾವನ್ನು ವಿಶೇಷವಾಗಿ ಆಚರಿಸುವರು. ಉ.ಕರ್ನಾಟಕ, ಮಧ್ಯಕರ್ನಾಟಕ ಇಲ್ಲಿ ಧಾರ್ಮಿಕ ಮತ್ತು ವೈಚಾರಿಕ ಚಿಂತನೆಗಳೊಂದಿಗೆ ದಸರಾವನ್ನು ಆಚರಿಸುವರು. ದಕ್ಷಿಣ ಕನ್ನಡ ದಲ್ಲಿ ಶಾರದೋತ್ಸವ ಎಂದು ಆಚರಿಸುವರು. ಸಭೆ,ಮೆರವಣಿಗೆ, ಅಕ್ಷರಾಭ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮವಿರುವುದು. ಶ್ರೀ ದುರ್ಗೆ ದುಷ್ಟರ ನಾಶಕ್ಕಾಗಿ  ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾದೇವಿ, ಕೂಷ್ಮಾಂಡಾ ಮಹಾಕಾಳಿ ಮುಂತಾದ ಒಂಬತ್ತು ರೂಪಗಳನ್ನು ತಾಳಿ, ಮನುಜನಲ್ಲಿರುವ ದುಷ್ಟತನಗಳನ್ನು ದೂರಮಾಡಿ ಹರಸುತ್ತಾಳೆಂಬ ನಂಬಿಕೆ. ಖೂಳಖಳ ಮಹಿಷಾಸುರನ ವಧೆಗಾಗಿ ಒಂಬತ್ತು ದಿನ ಹೋರಾಡಿದ ದೇವಿಯ ಈ ಆಚರಣೆಯೇ ನವರಾತ್ರಿ. ದೇವೀ ತತ್ವದ ಆಚರಣೆ. ತಮೋಗುಣಗಳ ನಾಶ. ಲಂಕಾಧೀಶ್ವರ ರಾವಣನ ದುಷ್ಕೃತ್ಯಗಳ ಸಹಿಸದೆ, ಲೋಕಮಾತೆ ಸೀತೆಯ ಅಪಹರಣವೇ ಕಾರಣವಾಗಿ ಪ್ರಭು ಶ್ರೀರಾಮಚಂದ್ರ ಕೊಂದ ದಿನವೇ ವಿಜಯದ ದಿನ ವಿಜಯದಶಮಿ ಎಂಬ ಪುರಾಣ ಪ್ರತೀತಿ ಇದೆ. ಪಾಂಡವರು ದುರುಳರಾದ ಕೌರವರನ್ನು ಹನನವಾಗಿಸಿ ವಿಜಯಸಾಧಿಸಿ, ಆಯುಧಗಳನ್ನು ಇಟ್ಟ ಶಮೀ ವೃಕ್ಷಕ್ಕೆ ಪೂಜೆ ಮಾಡಿ ಸಂಭ್ರಮಿಸಿದ ದಿನ ವಿಜಯದಶಮಿ.

ಹಾಗೆಯೇ ಆಯುಧಪೂಜೆ ಸಹ.ಧಾರ್ಮಿಕ ವಿಧಿ ವಿಧಾನಗಳನ್ನು ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ರತ್ನ ಖಚಿತ ಸಿಂಹಾಸನವನ್ನು ದರ್ಶನಕ್ಕೆ ಇಡುತ್ತಾರೆ. ದೀಪಾಲಂಕಾರ ಅರಮನೆ ಝಗಮಗಿಸುತ್ತದೆ. ಗಜಪಡೆಯ ರಾಜಗಾಂಭೀರ್ಯವನ್ನು, ಗ್ರಾಮೀಣ ಕ್ರೀಡೆಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಾರೆ. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಅಲಂಕಾರ ಮಾಡುತ್ತಾರೆ. ಪಟ್ಟದ ಆನೆ, ಹಸುಗಳಿಗೆ, ಅಶ್ವಗಳಿಗೆ, ಅರಮನೆಯ ಕೆಲವು ನಿರ್ದಿಷ್ಟ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಸರಕಾರದ ಇಲಾಖಾ ಪ್ರತಿನಿಧಿಗಳೂ ಭಾಗವಹಿಸುವರು.

ಒಟ್ಟಿನಲ್ಲಿ ದುಷ್ಟರ ನಾಶ ಶಿಷ್ಟರ ಪಾಲನೆ ದಸರಾ ಹಬ್ಬದ ಕೊಂಡಿ.ಸಂಪ್ರದಾಯಗಳ ಹೂರಣ ಎನ್ನಬಹುದು.  ಈ ಶರತ್ಕಾಲದ ಸಮಯವು ದೇವಿಯರ ಪೂಜೆ, ಆರಾಧನೆಗೆ ಪ್ರಶಸ್ತ ಕಾಲವಿದು. ಸತ್ತ್ವ, ರಜಸ್, ತಮೋಗುಣಗಳಿಂದ ಆವೃತವಾದ ದೇವಿಯರನ್ನು ಭಕ್ತಿಪೂರ್ವಕವಾಗಿ ಪ್ರಾರ್ಥಿಸೋಣ. ಮನೆಯ, ಮನದ ತಮ ಕಳೆಯಮ್ಮ ಎನ್ನೋಣ. ಮನುಜ-ಮನುಜರ ನಡುವಿನ ದ್ವೇಷ, ಅಸೂಯೆ ನಿರ್ಮೂಲನವಾಗಿ, ಶಾಂತಿ-ಪ್ರೀತಿ, ಮಮಕಾರ, ನಂಬಿಕೆ ತುಂಬಲಿ. ಜ್ಞಾನದ ಜ್ಯೋತಿ ಬೆಳಗಲಿ. ನಕಾರಾತ್ಮಕ ಚಿಂತನೆ, ಆಲೋಚನೆ ದೂರವಾಗಲಿ. ಕ್ಷಮೆ, ದಯೆ, ಉದಾರತೆ, ಉತ್ಸಾಹ ಮೂಡಲಿ. ಕೋಪ ಮತ್ತು ಕರುಣೆಯ ಸಂಕೇತವಾದ ದುರ್ಗೆ ಎಲ್ಲರನ್ನು ಹರಸಲಿ.

ಜಯಜಯ ಮಹಾದೇವಿ, ಸರ್ವೇಶ್ವರೀ, ಸರ್ವಲೋಕಶರಣ್ಯೆ, ಶಕ್ತಿ ದೇವತೆ ಶ್ರೀ ಮಹಾದುರ್ಗೇ, ದೇವಮುನಿಸಂಪೂಜಿತೇ, ದುಷ್ಟದೈತ್ಯ ನಾಶಿನಿ, ಮಹಾಶಕ್ತಿ ಸ್ವರೂಪಿಣಿ, ವಾರಾಹೀ, ವಿದ್ಯಾಧಿದೇವತೆ ಶಾರದೆ, ಸರಸ್ವತಿ ಮಾತೆ, ಕಾತ್ಯಯನೀ ದೇವಿ ಎಂಬುದಾಗಿ ಹಾಡಿ ಭಜಿಸುವರು. ನಾವೆಲ್ಲರೂ ಶ್ರೀ ದುರ್ಗೆಯನ್ನು ಆರಾಧಿಸಿ ಪುನೀತರಾಗೋಣ. 

-ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು

 ಚಿತ್ರ ಕೃಪೆ: ಇಂಟರ್ನೆಟ್ ತಾಣ