ನವರಾತ್ರಿ ವೈಭವ

ನವರಾತ್ರಿ ವೈಭವ

ಕವನ

ನವರಾತ್ರಿ ಹಬ್ಬದ ವೈಭವ ಮೆರೆದಿದೆ

ಎಲ್ಲರ ಸೆಳೆದಿದೆ ಈ ನಗರಿ

ಜನರನು ಪೊರೆಯಲು ಚಾಮುಂಡೇಶ್ವರಿ

ಕುಳಿತಳು ಬೆಟ್ಟವ ತಾ ನೇರಿ

 

ಜನರಲಿ ಸಂಭ್ರಮ ಸಡಗರ ತುಂಬಿದೆ

ಅರಸರ ಪುತ್ತಳಿ ಇರಿಸಿಹರು

ಎಲ್ಲೆಡೆ ತೋರಣ ಸ್ವಾಗತ ಕೋರಿದೆ

ನವವಧುವಂತಿದೆ ಮೈಸೂರು

 

ಮೊದಲೇ ಸುಂದರಿ ತರುಣಿಯ ಕೂರಿಸಿ

ಮಾಡಿದ ಹಾಗಿದೆ ಶೃಂಗಾರ

ನಾಡಿನ ಹೆಮ್ಮೆಯ ದ್ಯೋತಕ ಅರಮನೆ

ವಿದ್ಯುತ್ ದೀಪಗಳಲಂಕಾರ

 

ಮೈಸೂರರಸರು ದರ್ಬಾರ್ ನಡೆಸಿದ

ಅರಮನೆ ಉಳಿಸಿದೆ ಸೌಂದರ್ಯ

ವಿಶ್ವವ ತನ್ನೆಡೆ ಸೆಳೆಯುವ ಚೆಲುವಿಕೆ

ಕುಸುರಿಯ ಕಲೆಗಳ ಚಿತ್ತಾರ

 

ದೇಶವಿದೇಶದ ಮಂದಿಗೆ ವಿಸ್ಮಯ

ನಡೆಯುವ ಜಂಬೂ ಸವಾರಿ

ಮಾತೆಯ ಮೂರ್ತಿಯ ಕೂರಿಸಿ ನಡೆವುದು

ಆನೆಯ ಬೆನ್ನಲಿ ಅಂಬಾರಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್