ನವಲೇಖನ ಕನ್ನಡ ಕತೆಗಳು

ನವಲೇಖನ ಕನ್ನಡ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಜಿ. ಸಿದ್ಧರಾಮಯ್ಯ - ಸಂಪಾದಕರು
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ವಸಂತ ಕುಂಜ, ನವದೆಹಲಿ
ಪುಸ್ತಕದ ಬೆಲೆ
ರೂ. 170/-

ಕನ್ನಡದ ಯುವ ಕತೆಗಾರರು ಬರೆದ 14 ಕತೆಗಳ ಸಂಕಲನ ಇದು. ಇಂತಹ ಸಂಕಲನಗಳು ವಿರಳವಾಗುತ್ತಿರುವ ಕಾಲದಲ್ಲಿ, ಇದನ್ನು “ನವಲೇಖನ ಮಾಲೆ"ಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದೆ.

ಕಳೆದ ಒಂದು ನೂರು ವರುಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆ ಎಂಬ ಸಾಹಿತ್ಯ ಪ್ರಕಾರ ವಿಸ್ತಾರವಾಗಿ ಬೆಳೆದಿದೆ. ಈ ಬೆಳವಣಿಗೆಗೆ ಮುಖ್ಯ ಕಾರಣ ಇಂಗ್ಲಿಷ್ ಸಾಹಿತ್ಯದ ಪ್ರಭಾವ. ಅದಕ್ಕಿಂತಲೂ ಮುಂಚೆ ಕನ್ನಡದಲ್ಲಿ ಸಣ್ಣ ಕತೆಯಂತಹ ಬರಹಗಳು ಇದ್ದವು. ಆದರೆ ಅವು ನೀತಿಬೋಧನೆಗೆ ಸೀಮಿತವಾಗಿದ್ದವು. ಕಳೆದ ಶತಮಾನದಲ್ಲಿ ನಮ್ಮ ಸಮಾಜದಲ್ಲಿ ಆಗಿರುವ ಬದಲಾವಣೆಗಳ ಪರಿಣಾಮ ಕನ್ನಡ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಆರಂಭದಲ್ಲಿ ಇಂಗ್ಲಿಷ್ ಸಣ್ಣಕತೆಗಳ ಅನುವಾದ ಹಾಗೂ ಭಾವಾನುವಾದದಿಂದ ಶುರುವಾದ ಬದಲಾವಣೆಯ ಪ್ರವಾಹ, ನಮ್ಮ ನೆಲದ ಭಾಷೆ ಹಾಗೂ ಬದುಕಿನ ಸತ್ವವನ್ನು ಹೀರಿಕೊಂಡು, ವ್ಯಾಪಕವಾಗಿ ಬೆಳೆಯಿತು.

ಈ ಸಂಕಲನದ ಸಂಪಾದಕರಾದ ಪ್ರೊ. ಎಸ್. ಜಿ. ಸಿದ್ಧರಾಮಯ್ಯನವರು ಇಲ್ಲಿನ ಕತೆಗಳ ಬರಹಗಾರರ ಬಗ್ಗೆ ಹೀಗೆ ಬರೆದಿದ್ದಾರೆ: “ಈ ಸಂಕಲನದ ಕತೆಗಾರರೆಲ್ಲ ನಲವತ್ತು ವರ್ಷದ ಒಳಗಿನ ವಯೋಮಾನದವರು. ಹೀಗಾಗಿ ಅವರಿಗೆ ಸ್ವಾತಂತ್ರ್ಯ ಚಳವಳಿಯ ಬಿಸಿಯಾಗಲಿ, ಸ್ವಾತಂತ್ರ್ಯಾ ನಂತರದ ಪ್ರಾರಂಭದ ಕಾಲಘಟ್ಟ ಎದುರಿಸಿದ ಸವಾಲು  ಸಂಕಷ್ಟಗಳ ಬಿಸುಪಾಗಲಿ ತಟ್ಟಿಲ್ಲ. ಅಲ್ಲದೆ ಕಳೆದ ಶತಮಾನದ 70 - 80ರ ದಶಕಗಳಲ್ಲಿ ಕರ್ನಾಟಕದಲ್ಲಿ ಜರಗಿದ ಹಲವು ಚಳವಳಿಗಳ ಉತ್ಕಟ ಪರಿಚಯವೂ ಇಲ್ಲ. ಇವರು ಬರೆಯುತ್ತಿರುವ ಈ ಕಾಲ ಸ್ಥಳೀಯತೆಯನ್ನು ನಾಶ ಮಾಡ ಹೊರಟಿರುವ ಜಾಗತೀಕರಣದ ದಾಳಿಯ ಕಾಲ. ಗ್ಲೋಬಲ್ ಹಳ್ಳಿಯ ಪರಿಕಲ್ಪನೆಯಲ್ಲಿ ಜಗತ್ತು ಬದಲಾಗುತ್ತಿರುವ ಕಾಲ ….

….. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಾಮಾಜಿಕ ಅಸಮಾನತೆ, ನಿರುದ್ಯೋಗ, ಕ್ಷೀಣಿಸುತ್ತಿರುವ ವ್ಯವಸಾಯ ಸಂಸ್ಕೃತಿ, ಹೀಗೆ ಹಲವು ಆತಂಕಗಳ ಒಳಸುಳಿಗೆ ಸಿಕ್ಕಿ ಯುವಜನತೆ ತಲ್ಲಣಗಳನ್ನು ಅನುಭವಿಸುತ್ತಿದೆ ….. ತಬ್ಬಲಿತನ, ದಿಕ್ಕೆಟ್ಟ ಹಪಾಹಪಿತನದಿಂದಾಗಿ ಮಕ್ಕಳಲ್ಲಿ ಹತಾಶೆ ಬೆಳೆಯುತ್ತಿದೆ. ಈ ಎಲ್ಲ ಬೆಳವಣಿಗೆಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕದಡುತ್ತಿವೆ. ನಮ್ಮ ಯುವ ಬರಹಗಾರರನ್ನು ಈ ಎಲ್ಲಾ ಪರಿಸ್ಥಿತಿಗಳು ಕಾಡದೆ ಬಿಟ್ಟಿಲ್ಲ. ಅವರ ಅನುಭಲೋಕದಲ್ಲಿ ಈ ತವಕ ತಲ್ಲಣಗಳು ಗಾಢ ಪರಿಣಾಮ ಬೀರಿವೆ. ಅವರ ಆಲೋಚನೆ ಚಿಂತನೆಗಳ ಪರಿಧಿಯನ್ನು ವಿಸ್ತರಿಸಿದಷ್ಟೇ ಪ್ರಮಾಣದಲ್ಲಿ ಅವರ ನೋವು ಬಾಳಸಂಕಟಗಳನ್ನು ದ್ವಿಗುಣಗೊಳಿಸಿದ ಸ್ಥಿತಿ ಇಂದಿನ ಪರಿಸ್ಥಿತಿಯಾಗಿದೆ. ಇಲ್ಲಿನ ಕತೆಗಳಲ್ಲಿ ಈ ಎಲ್ಲ ಬಗೆಯ ಸಂಗತಿಗಳೂ ಸೂಕ್ಷ್ಮವಾಗಿ ಸ್ಥೂಲವಾಗಿ ಬಿಂಬಿತವಾಗಿವೆ.”

“ಹಾಳು ಸುಡುಗಾಡ ಬದುಕು" ಪ್ರತಿಯೊಬ್ಬರ ಬದುಕಿನ ಅಂತಿಮ ಹಂತವಾದ ಸುಡುಗಾಡಿನಲ್ಲಿ ಶವಗಳನ್ನು ಹುಗಿಯಲು ಅಥವಾ ಸುಡಲು ವ್ಯವಸ್ಥೆ ಮಾಡಿ ಜೀವಿಸುವ ಕುಟುಂಬವೊಂದರ ಬದುಕಿನ ಅನಾವರಣ ಮಾಡುವ ಕತೆ. ಸುಡುಗಾಡು ಕಾಯುವ ಇವರ ಬಾಳು ಆಧುನಿಕತೆಯ ಹೊಡೆತದಿಂದಾಗಿ ಬದಲಾಗುವುದು ಈ ಕತೆಯ ಪ್ರಧಾನ ಅಂಶ.

"ಎರಡು ಮತ್ತು ಒಂದು” ನಗರದಲ್ಲಿ ಸಣ್ಣಪುಟ್ಟ ಉದ್ಯೋಗದಲ್ಲಿ ತೊಡಗಿದವರ ಬದುಕಿನ ಪಲ್ಲಟಗಳನ್ನೂ ಹೆಣ್ಣಿನ ದೈಹಿಕ ಹಾಗೂ ಮಾನಸಿಕ ಸ್ಥಿತಿಗಳನ್ನೂ ಚಿತ್ರಿಸುವ ಕತೆ. “ವೇಗದೊಳಗಿನ ಆವೇಗ” ತನ್ನ ನಿರೂಪಣಾ ಕ್ರಮದಿಂದ ಗಮನ ಸೆಳೆಯುವ ಕತೆ. ಬಾಲ್ಯದಿಂದಲೇ ವಾಹನದ ವೇಗ ಹೆಚ್ಚಿಸುವ ಬಗ್ಗಿ ವಿಚಿತ್ರ ಆಸಕ್ತಿ ಬೆಳೆಸಿಕೊಂಡ ಮೂರ್ತಿ ಈ ಕತೆಯ ಕೇಂದ್ರಬಿಂದು. ತೀವ್ರ ವೇಗದಲ್ಲಿ ಸಾಗುವ ವಾಹನದಂತೆ ಇದರ ಪಾತ್ರಗಳ ಬದುಕು ಮುಂದಕ್ಕೆ ಧಾವಿಸುತ್ತದೆ.

“ಕಾಮಸೂತ್ರ" ಕತೆ ಇಂದಿನ ಕಾರ್ಪೊರೇಟ್ ಜಗತ್ತಿನ ಸ್ವಾರ್ಥ, ಅಸೂಯೆ, ದ್ವೇಷ, ಸಣ್ಣತನಗಳನ್ನು ಸಮರ್ಥವಾಗಿ ಚಿತ್ರಿಸುತ್ತದೆ. ಮಹಿಳಾ ಉದ್ಯೋಗಿಯೊಬ್ಬಳು ತನ್ನ ಮೇಲಧಿಕಾರಿಯ ವಿರುದ್ಧ ಲೈಂಗಿಕ ಶೋಷಣೆಯ ದೂರು ನೀಡಿ ಆತನನ್ನು ಹಣಿಯಲು ಹೆಣೆದ ಹುನ್ನಾರದ ಕತೆ.
“ದೇವರಾಟ" ಇಂದಿನ ಹಳ್ಳಿಗಳಲ್ಲಿ ನಡೆಯುವ ಹಿರಿಯ - ಕಿರಿಯ ತಲೆಮಾರುಗಳ ಸಂಘರ್ಷದ ಕತೆ. ಶಂಕರಜ್ಜನಿಗೆ ತನ್ನ ಹೊಲವೇ ಸರ್ವಸ್ವ. ಆ ಹೊಲವನ್ನು ಮಾರಬೇಕೆಂಬುದು ಹಾದಿ ತಪ್ಪಿದ ಮಗ ಹನುಮನ ಹವಣಿಕೆ. ಆಗ, ಊರದೇವರ ಪಾತ್ರಿಯನ್ನು ಸಂಪರ್ಕಿಸಿ, ಮಗನ ಹುನ್ನಾರಕ್ಕೆ ಸಡ್ಡು ಹೊಡೆಯುವ ತಂದೆಯ ಕತೆ.

“ಬಾರ್ಬರ್ ಬಬ್ಲೂ ಮತ್ತು ಆರೆಂಜ್ ಹುಡುಗಿಯರು" ಕತೆ ನಗರ ಬದುಕಿನ ವೈರುಧ್ಯಗಳನ್ನು ಹಾಗೂ ಕಥಾನಾಯಕನ ವಿಚಿತ್ರ ಕಾಮಾಸಕ್ತಿಯನ್ನು ತೆರೆದಿಡುತ್ತದೆ. ತನ್ನ ಉದ್ದೇಶ ಸಾಧನೆಗಾಗಿ ಮನುಷ್ಯ ಹೀನಾಯದ ಆಳಕ್ಕಿಳಿಯುವುದನ್ನು ನಿರೂಪಿಸುತ್ತದೆ.

“ಗ್ರೀನ್ ಟೀ” ಕನ್ನಡಕ್ಕೆ ಹೊಸತಾದ ವಸ್ತುವೊಂದರ ಸುತ್ತ ಹೆಣೆದಿರುವ ಕತೆ. ಕ್ಲಿನಿಕಲ್ ಟ್ರಯಲ್ ಹೆಸರಿನಲ್ಲಿ ದೈತ್ಯ ಔಷಧಿ ಕಂಪೆನಿಗಳು ನಡೆಸುವ ಅನ್ಯಾಯ, ಶೋಷಣೆ, ಭ್ರಷ್ಟಾಚಾರಗಳನ್ನು ಬಿಚ್ಚಿಡುವ ಕತೆ. ಇದರ ಪಾತ್ರಗಳ ಬದುಕು ಕೂಡ ಔಷಧಿ ಕಂಪೆನಿಗಳ ಹುನ್ನಾರಗಳಂತೆ ಕಹಿ ಪರಿಣಾಮಗಳಿಗೆ ಪಕ್ಕಾಗುವ ಕತೆ.

“ಶಿಥಿಲ" - ಬಾವಿ ಮತ್ತು ಗೆದ್ದಲು ಪ್ರತಿಮೆಗಳನ್ನು ಸಮರ್ಥವಾಗಿ ದುಡಿಸಿಕೊಂಡ ಕತೆ. ಉತ್ತರಕನ್ನಡದ ಹಳ್ಳಿಯಲ್ಲಿರುವ ತಂದೆತಾಯಿ, ಅಮೆರಿಕದಲ್ಲಿರುವ ಮಗ ಮತ್ತು ಅವನ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲಿಕ್ಕಾಗಿ ಸ್ಕೈಪೆ ಬಳಸಲು ಕಲಿತು ಆಧುನಿಕತೆಗೆ ತೆರೆದುಕೊಳ್ಳುತ್ತಲೇ ಪರಂಪರೆಯ ಸುಳಿಯಲ್ಲಿ ಸುತ್ತುವ ಕತೆ.