ನವಿಲು ಮತ್ತು ರಾಜಕುಮಾರ

ನವಿಲು ಮತ್ತು ರಾಜಕುಮಾರ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನ ಉದ್ಯಾನದಲ್ಲೊಂದು ಚಿನ್ನದ ಸೇಬಿನ ಮರವಿತ್ತು. ಪ್ರತಿದಿನ ರಾತ್ರಿ ಅದು ಹೂಬಿಡುತ್ತಿತ್ತು ಮತ್ತು ಚಿನ್ನದ ಸೇಬಿನ ಹಣ್ಣುಗಳನ್ನೂ ಕೊಡುತ್ತಿತ್ತು. ಆದರೆ ಬೆಳಗ್ಗೆ ಅದರಲ್ಲಿ ಹಣ್ಣುಗಳು ಇರುತ್ತಿರಲಿಲ್ಲ!

ರಾಜನಿಗೆ ಇದರಿಂದಾಗಿ ಬಹಳ ಅಸಮಾಧಾನವಾಯಿತು. ಅವನು ತನ್ನ ಕಿರಿಯ ಮಗನನ್ನು ಕರೆದು, ಸೇಬಿನ ಮರಕ್ಕೆ ರಾತ್ರಿ ಕಾವಲು ಕಾಯಲು ಹೇಳಿದ. ಆ ದಿನ ರಾತ್ರಿ ಸೇಬಿನ ಮರದ ಬುಡದಲ್ಲಿ ರಾಜಕುಮಾರ ಕಾದು ಕುಳಿತ. ನಡುರಾತ್ರಿಯಲ್ಲಿ ಸೇಬಿನ ಮರದಲ್ಲಿ ಸೇಬಿನ ಹಣ್ಣುಗಳು ಚಂದ್ರನ ಬೆಳದಿಂಗಳಿನಲ್ಲಿ ಫಳಫಳನೆ ಹೊಳೆಯುವುದನ್ನು ಆತ ಕಂಡ.

ಸ್ವಲ್ಪ ಹೊತ್ತಿನಲ್ಲೇ ಒಂಭತ್ತು ನವಿಲುಗಳು ಹಾರಿ ಬಂದು ಸೇಬಿನ ಮರದ ಕೊಂಬೆಗಳಲ್ಲಿ ಕೂರುವುದನ್ನು ಆತ ನೋಡಿದ. ಒಂಭತ್ತನೆಯ ನವಿಲು ರೂಪವತಿ ಯುವತಿಯಾಗಿ ಬದಲಾಗುವುದನ್ನೂ ಗಮನಿಸಿದ. ಅವಳನ್ನು ಕಂಡೊಡನೆ ಮೋಹಿತನಾದ ರಾಜಕುಮಾರ, ಅವಳು ಯಾರು ಮತ್ತು ಎಲ್ಲಿಂದ ಬರುತ್ತಿದ್ದಾಳೆಂದು ಕೇಳಿದ. ಆ ಯುವತಿ ತಾನು ದೂರದ ದೇಶದಿಂದ ಬರುತ್ತಿದ್ದೇನೆ ಎಂದಷ್ಟೇ ಉತ್ತರಿಸಿದಳು.

ಅದಾಗಿ ಒಂದು ತಾಸಿನಲ್ಲಿ ನವಿಲುಗಳು ಎಲ್ಲ ಚಿನ್ನದ ಸೇಬುಗಳನ್ನು ಕಿತ್ತಿರುವ ಕಾರಣ ತಾನು ಹೊರಡಬೇಕೆಂದು ಯುವತಿ ತಿಳಿಸಿದಳು. "ನನ್ನ ತಂದೆಗೆ ಕೊಡಲಿಕ್ಕಾಗಿ ಒಂದು ಚಿನ್ನದ ಸೇಬು ಕೊಡು” ಎಂದು ರಾಜಕುಮಾರ ಕೇಳಿದಾಗ ಅವಳು ಕೊಟ್ಟಳು. ಮರುದಿನ ರಾತ್ರಿ ರಾಜಕುಮಾರ ಪುನಃ ಸೇಬಿನ ಮರದ ಬುಡದಲ್ಲಿ ಕಾವಲು ಕುಳಿತ. ಆದರೆ ನವಿಲುಗಳೂ ಸುಂದರಿ ಯುವತಿಯೂ ಬರಲೇ ಇಲ್ಲ. ಅದರ ಮರುದಿನವೂ ಹಾಗೇ ಆಯಿತು.

ಕೊನೆಗೆ ರಾಜಕುಮಾರ ರಾಜನ ಬಳಿಗೆ ಹೋಗಿ ಎಲ್ಲ ಸಂಗತಿ ತಿಳಿಸಿದ. ಚಂದದ ಯುವತಿಯಾಗಿ ಬದಲಾದ ಹೆಣ್ಣು ನವಿಲನ್ನು ಹುಡುಕಲು ತಾನು ಪ್ರಯಾಣ ಹೊರಡುತ್ತೇನೆಂದು ತಿಳಿಸಿದ. ಹಲವಾರು ದಿನ ಪ್ರಯಾಣಿಸಿ ಅನೇಕರನ್ನು ವಿಚಾರಿಸಿದರೂ ಅವನಿಗೆ ಆಕೆಯ ಸುಳಿವು ಸಿಗಲಿಲ್ಲ.

ಅದೊಂದು ದಿನ ಆತ ರಸ್ತೆಯ ಬದಿಯಲ್ಲಿದ್ದ ತಪಸ್ವಿಯೊಬ್ಬನನ್ನು ಭೇಟಿಯಾದ. ಆತನ ಬಳಿ ರಾಜಕುಮಾರ ಕೇಳಿದ, "ನಮ್ಮ ರಾಜ್ಯಕ್ಕೆ ಹಾರಿ ಬರುತ್ತಿದ್ದ ಒಂಭತ್ತು ನವಿಲುಗಳ ಬಗ್ಗೆ ನಿಮಗೆ ಗೊತ್ತೇ?” ತಪಸ್ವಿ ಉತ್ತರಿಸಿದ, “ಇದೇ ರಸ್ತೆಯಲ್ಲಿ ಒಂದು ತಾಸು ನಡೆದರೆ ಬಲಬದಿಯಲ್ಲಿ ನಿನಗೆ ನವಿಲುಗಳ ನಗರದ ದ್ವಾರ ಕಾಣಿಸುತ್ತದೆ.”

ಅದಾಗಿ ಒಂದು ತಾಸಿನಲ್ಲಿ ರಾಜಕುಮಾರ ಅಲ್ಲಿಗೆ ತಲಪಿದ. ಕಾವಲುಗಾರನಿಗೆ ಪರಿಚಯ ತಿಳಿಸಿದಾಗ, ರಾಜಕುಮಾರನನ್ನು ರಾಣಿಯ ಮಹಲಿಗೆ ಕರೆದೊಯ್ದ. ರಾಜಕುಮಾರನನ್ನು ಕಂಡು ರಾಣಿಗೆ ಮಹದಾನಂದವಾಯಿತು. ಕೆಲವೇ ದಿನಗಳಲ್ಲಿ ಅವರು ಮದುವೆಯಾದರು. ಸಂತೋಷ, ಉಲ್ಲಾಸದಲ್ಲಿ ಅವರ ದಿನಗಳು ಸಾಗುತ್ತಿದ್ದವು.

ಹೀಗಿರುವಾಗ, ರಾಣಿ ಕೆಲವು ದಿನ ಪರವೂರಿಗೆ ಹೋಗಬೇಕಾಯಿತು. ಆಕೆ ರಾಮಕುಮಾರನಿಗೆ ಬಂಗಲೆಯ ಎಲ್ಲ ಕೋಣೆಗಳ ಬೀಗದ ಕೈಗಳನ್ನು ಕೊಟ್ಟಳು. “ಎಲ್ಲ ಬೀಗದಕೈಗಳು ಇಲ್ಲಿವೆ. ನೆಲದಡಿಯ ಹನ್ನೆರಡು ಕೋಣೆಗಳ ಬೀಗದಕೈಗಳೂ ಇಲ್ಲಿವೆ. ಎಲ್ಲಿಗೆ ಬೇಕಾದರೂ ಹೋಗು; ಆದರೆ ನೆಲದಡಿಯ ಹನ್ನೆರಡನೆಯ ಕೋಣೆಯ ಬಾಗಿಲು ತೆರೆಯಬೇಡ” ಎಂದಳು.

ರಾಣಿ ಹೋದ ನಂತರ ರಾಜಕುಮಾರನಿಗೆ ಒಂಟಿತನ ಕಾಡತೊಡಗಿತು. ಅವನು ಒಂದೊಂದೇ ಕೋಣೆಯ ಬಾಗಿಲು ತೆರೆದು ಸುತ್ತಾಡಿದ. ಕೊನೆಗೆ ನೆಲದಡಿಯ ಅಂತಸ್ತಿಗೆ ಹೋದ. ಅಲ್ಲಿಯ ಹನ್ನೊಂದು ಕೋಣೆಗಳನ್ನು ನೋಡಿದ ನಂತರ ಕುತೂಹಲ ತಡೆಯಲಾಗದೆ ಹನ್ನೆರಡನೆಯ ಕೋಣೆಯ ಬಾಗಿಲನ್ನೂ ತೆರೆದ. ಅಲ್ಲಿ ಮರದ ಪಟ್ಟಿಗಳನ್ನು ಕಬ್ಬಿಣದ ಪಟ್ಟಿಗಳಿಂದ ಬಿಗಿದು ತಯಾರಿಸಿದ ಒಂದು ಬ್ಯಾರೆಲ್ ಇತ್ತು. ರಾಜಕುಮಾರ ಅದರ ಹತ್ತಿರ ಹೋದಾಗ, "ನಾನು ಬಾಯಾರಿಕೆಯಿಂದ ಸಾಯುತ್ತಿದ್ದೇನೆ. ಒಂದು ಲೋಟ ನೀರು ತಂದು ಕೊಡು” ಎಂಬ ಧ್ವನಿ ಕೇಳಿಸಿತು.
ನೀರು ಕೊಟ್ಟರೆ ಏನೂ ತೊಂದರೆಯಿಲ್ಲ ಎಂದು ಭಾವಿಸಿದ ರಾಜಕುಮಾರ ಬ್ಯಾರೆಲಿನ ಒಳಗೆ ಒಂದು ಲೋಟ ನೀರು ಹಾಕಿದ. ಮತ್ತೆರಡು ಲೋಟ ನೀರು ಕೇಳಿದಾಗ ಪುನಃ ನೀರು ಹಾಕಿದ. ಅಷ್ಟರಲ್ಲಿ ದೊಡ್ಡ ಶಬ್ದದೊಂದಿಗೆ ಆ ಬ್ಯಾರೆಲ್ ಒಡೆಯಿತು. ಅದರಿಂದ ಒಂದು ಭಯಂಕರ ಡ್ರ್ಯಾಗನ್ ಹೊರಬಂದು, ಕೋಣೆಯ ಬಾಗಿಲಿನ ಮೂಲಕ ಕಣ್ಮರೆಯಾಯಿತು.

ಅದಾಗಿ ಸ್ವಲ್ಪ ಹೊತ್ತಿನಲ್ಲಿ ರಾಣಿಯ ಸೇವಕಿ ಬಂದು, ರಾಜಕುಮಾರನಿಗೆ ಹೇಳಿದಳು, "ರಾಣಿ ಹಿಂತಿರುಗಿ ಬರುತ್ತಿರುವಾಗ, ಒಂದು ಭಯಂಕರ ಡ್ರ್ಯಾಗನ್ ಬಂದು ರಾಣಿಯನ್ನು ಎತ್ತಿಕೊಂಡು ಹೋಯಿತು.” ತನ್ನ ತಪ್ಪಿನಿಂದಾಗಿ ಹೀಗಾಯಿತಲ್ಲಾ ಎಂದು ರಾಜಕುಮಾರನಿಗೆ ಪಶ್ಚಾತ್ತಾಪವಾಯಿತು. ಅವನು ರಾಣಿಯನ್ನು ರಕ್ಷಿಸಿ ಕರೆತರಲಿಕ್ಕಾಗಿ ಹೊರಟ.

ಹಾದಿಯಲ್ಲಿ ಒಂದು ದೊಡ್ಡ ಸರೋವರ ಕಾಣಿಸಿತು. ಸರೋವರದ ದಡದಲ್ಲಿ ಅವನು ನಡೆಯುತ್ತಿದ್ದಾಗ ಪುಟ್ಟ ಮೀನೊಂದು ಉಸಿರಾಡಲಾಗದೆ ಮಣ್ಣಿನಲ್ಲಿ ಒದ್ದಾಡುತ್ತಿತ್ತು. “ನನ್ನನ್ನು ನೀರಿಗೆ ಹಾಕು" ಎಂದು ಬೇಡಿಕೊಂಡಿತು. ರಾಜಕುಮಾರ ಅದನ್ನು ಸರೋವರದ ನೀರಿಗೆ ಹಾಕಿದಾಗ, ಅದು ಈಜಾಡುತ್ತಾ ಹೇಳಿತು, “ನನ್ನ ಬೆನ್ನಿನಿಂದ ಒಂದು ಪೊರೆ ತೆಗೆದುಕೋ. ಯಾವತ್ತಾದರೂ ನಿನಗೆ ನನ್ನಿಂದ ಸಹಾಯ ಬೇಕಾದರೆ ಆ ಪೊರೆಯನ್ನು ಉಜ್ಜು.”

ರಾಜಕುಮಾರ ಅಲ್ಲಿಂದ ಮುಂದಕ್ಕೆ ನಡೆದು ಹೋಗುತ್ತಿದ್ದಾಗ, ಹಾದಿಯ ಬದಿಯಲ್ಲಿ ಕಬ್ಬಿಣದ ಬಲೆಗೆ ಒಂದು ನರಿಯ ಕಾಲು ಸಿಕ್ಕಿಕೊಂಡದ್ದನ್ನು ನೋಡಿದ. “ನನ್ನನ್ನು ಬಲೆಯಿಂದ ಬಿಡಿಸು” ಎಂದು ಬೇಡಿಕೊಂಡಿತು. ರಾಜಕುಮಾರ ಅದನ್ನು ಬಲೆಯಿಂದ ಬಿಡಿಸಿದಾಗ, ಅದು ಹೇಳಿತು, "ನನ್ನ ಬೆನ್ನಿನಿಂದ ಒಂದು ರೋಮ ತೆಗೆದುಕೋ. ಯಾವತ್ತಾದರೂ ನಿನಗೆ ನನ್ನಿಂದ ಸಹಾಯ ಬೇಕಾದರೆ ಆ ರೋಮವನ್ನು ಉಜ್ಜು.”

ರಾಜಕುಮಾರ ಮುನ್ನಡೆದಾಗ ಅವನಿಗೆ ಮುಂಚೆ ಒಮ್ಮೆ ಕಾಣಸಿಕ್ಕಿದ್ದ ತಪಸ್ವಿಯೇ ಎದುರಾದ. “ಭಯಂಕರ ಡ್ರ್ಯಾಗನಿನ ಕೋಟೆ ಎಲ್ಲಿದೆಯೆಂದು ನನಗೆ ಹೇಳುವಿರಾ?" ಎಂದು ಕೇಳಿದ ರಾಜಕುಮಾರ. “ನೀನು ಸುಲಭವಾಗಿ ರಾಣಿಯನ್ನು ರಕ್ಷಣೆ ಮಾಡಬಹುದೆಂದು ಭಾವಿಸಬೇಡ. ಯಾಕೆಂದರೆ ಆ ಡ್ರ್ಯಾಗನಿನ ಬಳಿ ಬಹಳ ವೇಗವಾಗಿ ಓಡುವ ಒಂದು ಕುದುರೆಯಿದೆ. ನೀನು ರಾಣಿಯನ್ನು ರಕ್ಷಿಸಬೇಕಾದರೆ, ಅದಕ್ಕಿಂತಲೂ ವೇಗವಾಗಿ ಓಡುವ ಕುದುರೆಯನ್ನು ಪಡೆಯಬೇಕು. ಅದು ದೂರದ ಪರ್ವತದಲ್ಲಿ ವಾಸ ಮಾಡುವ ಮುದುಕಿಯ ಬಳಿ ಇದೆ. ಡ್ರ್ಯಾಗನಿನ ಕುದುರೆಯ ತಂಗಿಯಾದ ಇದು ಅದಕ್ಕಿಂತ ಬಲಶಾಲಿಯಾದ ಮತ್ತು ವೇಗವಾಗಿ ಓಡುವ ಕುದುರೆ. ಅದನ್ನು ಮುದುಕಿಯಿಂದ ಪಡೆದರೆ ಮಾತ್ರ ರಾಣಿಯನ್ನು ಉಳಿಸಲು ಸಾಧ್ಯ.”

ಮುಂದಕ್ಕೆ ಸಾಗಿದ ರಾಜಕುಮಾರ ಮರುದಿನ ಸಂಜೆ ಪರ್ವತದಲ್ಲಿದ್ದ ಮುದುಕಿಯ ಮನೆ ತಲಪಿ, ಆಕೆಯ ಬಳಿಯಿದ್ದ ಕುದುರೆಯನ್ನು ಖರೀದಿಸುತ್ತೇನೆಂದ. "ನಾನು ಅದನ್ನು ಮಾರುವುದಿಲ್ಲ. ಆದರೆ, ಎರಡು ರಾತ್ರಿ ನೀನು ಅದನ್ನು ರಕ್ಷಿಸಿದರೆ ಅದನ್ನು ನಿನಗೆ ಕೊಡುತ್ತೇನೆ. ಒಂದು ವೇಳೆ ನೀನು ಕುದುರೆಯನ್ನು ಕಳೆದುಕೊಂಡರೆ ನಿನ್ನ ಜೀವ ತೆಗೆಯುತ್ತೇನೆ” ಎಂದಳು.

ರಾಜಕುಮಾರ ಆ ಕುದುರೆಯನ್ನು ಹುಲ್ಲುಗಾವಲಿಗೆ ಕರೆದೊಯ್ದ. ಅದು ತಪ್ಪಿಸಿಕೊಂಡು ಹೋಗಬಾರದೆಂದು, ಅದರ ಮೇಲೆ ಕುಳಿತು ಅದರ ಜೀನನ್ನು ಗಟ್ಟಿಯಾಗಿ ಹಿಡಿದುಕೊಂಡ. ಮಧ್ಯರಾತ್ರಿಯಲ್ಲಿ ರಾಜಕುಮಾರನಿಗೆ ನಿದ್ದೆ ಬಂತು. ಆತನಿಗೆ ಎಚ್ಚರವಾದಾಗ ಆತನ ಕೈಯಲ್ಲಿ ಕುದುರೆಯ ಜೀನು ಮಾತ್ರ ಇತ್ತು; ಕುದುರೆ ಕಾಣೆಯಾಗಿತ್ತು!

ಸುತ್ತಮುತ್ತಲೆಲ್ಲ ಹುಡುಕಾಡಿದರೂ ರಾಜಕುಮಾರನಿಗೆ ಕುದುರೆ ಕಾಣಿಸಲಿಲ್ಲ. ಆಗ ಅವನು ಮೀನಿನ ಪೊರೆಯನ್ನು ಹೊರ ತೆಗೆದು ಉಜ್ಜಿದ. ತಕ್ಷಣವೇ ಆ ಮೀನು ಅವನೆದುರು ಕಾಣಿಸಿಕೊಂಡಿತು. ರಾಜಕುಮಾರ ಕುದುರೆ ಕಾಣೆಯಾದ ಸಂಗತಿ ತಿಳಿಸಿದಾಗ, ಮೀನು ಹೇಳಿತು, "ಆ ಕುದುರೆ ಮೀನಾಗಿ ಬದಲಾಗಿ, ನಮ್ಮೊಂದಿಗಿದೆ. ನೀನು ಸರೋವರದ ನೀರಿನಲ್ಲಿ ಅದರ ಜೀನನ್ನು ಮುಳುಗಿಸಿ, ಅದನ್ನು ಕರೆದರೆ ಅದು ಕುದುರೆಯಾಗಿ ಎದ್ದು ಬರುತ್ತದೆ.”

ಅದೇ ರೀತಿಯಲ್ಲಿ ಕುದುರೆಯನ್ನು ಮರಳಿ ಪಡೆದ ರಾಜಕುಮಾರ. ಎರಡನೆಯ ರಾತ್ರಿಯೂ ಕುದುರೆ ಹಾಗೆಯೇ ಕಾಣೆಯಾಯಿತು. ಈಗ ರಾಜಕುಮಾರ ನರಿಯ ಕೂದಲನ್ನು ಹೊರ ತೆಗೆದು ಉಜ್ಜಿದ. ಆಗ ಪ್ರತ್ಯಕ್ಷವಾದ ನರಿ, ಆ ಕುದುರೆ ಒಂದು ನರಿಯಾಗಿ ಬದಲಾಗಿದೆಯೆಂದು ತಿಳಿಸಿತು. ತನ್ನೊಂದಿಗೆ ಕಾಡಿಗೆ ಬಂದು ಕರೆದರೆ, ಅದು ಓಡಿ ಬರುತ್ತದೆಂದು ನರಿ ಹೇಳಿತು. ರಾಜಕುಮಾರ ಹಾಗೆಯೇ ಕುದುರೆಯನ್ನು ಮರಳಿ ಪಡೆದು ಮುದುಕಿಯ ಬಳಿಗೆ ಹೋದ. ಆಕೆ ರಾಜಕುಮಾರನಿಗೆ ಆ ಕುದುರೆಯನ್ನು ಉಡುಗೊರೆಯಾಗಿ ಕೊಟ್ಟಳು.

ಅಲ್ಲಿಂದ ಹೊರಟ ರಾಜಕುಮಾರ ಕುದುರೆಯೇರಿ ಬಿರುಗಾಳಿಯ ವೇಗದಲ್ಲಿ ಡ್ರ್ಯಾಗನಿನ ಕೋಟೆ ತಲಪಿದ. ಅಲ್ಲಿದ್ದಳು ರಾಣಿ. “ನೀನು ಬಂದೇ ಬರುತ್ತಿ ಎಂದು ನನಗೆ ಗೊತ್ತಿತ್ತು” ಎಂದಳು. ಅವಳನ್ನು ಕುದುರೆಯ ಮೇಲೆ ತನ್ನೆದುರು ಕೂರಿಸಿಕೊಂಡು ರಾಜಕುಮಾರ ಅಲ್ಲಿಂದ ದೌಡಾಯಿಸಿದ.

ಅಷ್ಟರಲ್ಲಿ ಕೋಟೆಗೆ ಮರಳಿದ ಡ್ರ್ಯಾಗನ್ ಅಲ್ಲಿ ರಾಣಿ ಇಲ್ಲದಿದ್ದುದನ್ನು ಕಂಡು ಕೋಪದಿಂದ ಕುದಿಯಿತು. ತಕ್ಷಣವೇ ತನ್ನ ಕುದುರೆಯನ್ನೇರಿ, ರಾಜಕುಮಾರನ ಕುದುರೆಯನ್ನು ಬೆನ್ನಟ್ಟಲು ಆದೇಶಿಸಿತು.

ರಾಜಕುಮಾರನ ಕುದುರೆಯನ್ನು ಬೆನ್ನಟ್ಟಿದ ಆ ಕುದುರೆ, ಏದುಸಿರು ಬಿಡುತ್ತಾ ತನ್ನ ತಂಗಿ-ಕುದುರೆಗೆ ಕೂಗಿ ಹೇಳಿತು, “ಓ ತಂಗಿ, ನಿಲ್ಲು. ನಿನ್ನ ಬೆನ್ನು ಹಿಡಿಯದಿದ್ದರೆ ಈ ಡ್ರ್ಯಾಗನ್ ನನ್ನನ್ನು ಕೊಂದೇ ಬಿಡುತ್ತದೆ.” ಆಗ ತಂಗಿ-ಕುದುರೆ ಉತ್ತರಿಸಿತು, "ನಿನಗೆ ಬುದ್ಧಿಯಿದೆಯಾ? ಆ ಡ್ರ್ಯಾಗನನ್ನು ನಿನ್ನ ಬೆನ್ನಿನಿಂದ ಕೊಡವಿ ಬಿಡು.” ತಕ್ಷಣವೇ ಡ್ರ್ಯಾಗನಿನ ಕುದುರೆ ಮೇಲಕ್ಕೆ ನೆಗೆದು ಮೈ ಕೊಡವಿತು. ಡ್ರ್ಯಾಗನ್ ಪಕ್ಕದ ಕಲ್ಲಿನ ಮೇಲೆ ಅಪ್ಪಳಿಸಿ ಚೂರುಚೂರಾಯಿತು.

ಈಗ ರಾಣಿ ಡ್ರ್ಯಾಗನಿನ ಕುದುರೆಯೇರಿದಳು. ರಾಣಿಯೂ ರಾಜಕುಮಾರನೂ ತಮ್ಮ ಅರಮನೆಗೆ ಹಿಂತಿರುಗಿ, ಬಹುಕಾಲ ಸುಖಶಾಂತಿಯಿಂದ ಬಾಳಿದರು.