ನವಿಲೆಸರ
“ಯಾವುದೇ ಗಿಮಿಕ್ ಇಲ್ಲದೆ, ಗದ್ದಲವಿಲ್ಲದೆ, ಆಟಾಟೋಪವಿಲ್ಲದೆ, ಅಡಕೆ ತೋಟಗಳ ತಗ್ಗುಗಳಲ್ಲಿ ಸಣ್ಣ ಸಪ್ಪಳ ಮಾಡುತ್ತಾ ಹರಿಯುವ ಚಿಲುಮೆ ನೀನಿನ ಹಾಗೆ ಕತೆಗಳಿವೆ. ಓದಿ ಮುಗಿಸಿದಾಗ ಒಂದು ಧನ್ಯತೆ, ಒಂದು ಹೂನಗೆ; ಒಂದು ಭಾವ ಸ್ಪಂದನ...ಕತೆ ನೆನಪಾಗಿ ಉಳಿಯುತ್ತದೆ" ಎಂದು ‘ನವಿಲೆಸರ’ ಪುಸ್ತಕದ ಬೆನ್ನುಡಿಯಲ್ಲಿ ಅಭಿಪ್ರಾಯ ಪಡುತ್ತಾರೆ ಖ್ಯಾತ ಕಥೆಗಾರ ನಾ. ಡಿಸೋಜ ಇವರು. ಈ ಮಾತುಗಳು ಇವರದ್ದು ಮಾತ್ರವಲ್ಲ, ಪುಸ್ತಕ ಓದಿದ ಬಳಿಕ ನಮ್ಮೆಲ್ಲರದ್ದು ಎಂದು ದನಿಗೂಡಿಸಿದ್ದಾರೆ ಸಾಹಿತಿಗಳಾದ ಗಿರಡ್ಡಿ ಗೋವಿಂದರಾಜು, ಕೇಶವ ಮಳಗಿ ಹಾಗೂ ನಾ. ಮೊಗಸಾಲೆ ಇವರುಗಳು. ನೀವು ಓದಿದ ಬಳಿಕ ನಿಮ್ಮ ಅಭಿಪ್ರಾಯವೂ ಇದಕ್ಕಿಂತ ಭಿನ್ನವಾಗಿಯೇನೂ ಇರಲಿಕ್ಕಿಲ್ಲ ಎನ್ನುವುದು ನನ್ನ ಅಭಿಪ್ರಾಯ.
ಅಲಕ ತೀರ್ಥಹಳ್ಳಿ ಎಂಬ ಹೆಸರಿನಿಂದ ಕಥೆಗಳನ್ನು ಬರೆಯುವ ಎಚ್. ವಿ.ಲಕ್ಷ್ಮೀನಾರಾಯಣ ಇವರ ‘ನವಿಲೆಸರ' ಪುಸ್ತಕ ಹಿಂದೊಮ್ಮೆ (೨೦೧೩) ಪ್ರಕಟವಾಗಿತ್ತು. ಈಗ ನಮ್ಮ ಕೈಯಲ್ಲಿರುವುದು ಹೊಸದಾದ ದ್ವಿತೀಯ ಮುದ್ರಣ. ಸಾಹಿತಿ ಅಮರೇಶ ನುಗಡೋಣಿಯವರು ಬಹಳ ಸೊಗಸಾಗಿ ನೇರ, ದಿಟ್ಟ ಮುನ್ನುಡಿಯನ್ನು ಬರೆದಿದ್ದಾರೆ. ಇವರ ಮುನ್ನುಡಿಯು ಒಂದು ರೀತಿಯಲ್ಲಿ ಪುಟ್ಟ ಮಕ್ಕಳಿಗೆ ಸಣ್ಣ ತುಂಡು ಚಾಕಲೇಟು ಕೊಟ್ಟ ಹಾಗೆ. ಏಕೆಂದರೆ ಮುನ್ನುಡಿ ಓದಿದ ಬಳಿಕ ನಿಮ್ಮಲ್ಲಿ ಈ ಪುಸ್ತಕದಲ್ಲಿರುವ ಕಥೆಗಳನ್ನು ಓದಬೇಕೆಂಬ ತುಡಿತ ಜ್ವರದಂತೆ ಏರತೊಡಗುತ್ತದೆ. ಬಳಿಕ ಅದು ಇಳಿಯುವುದು ಕೊನೆಯ ಕಥೆಯನ್ನು ನೀವು ಓದಿ ಪುಸ್ತಕ ಕೆಳಗಿಟ್ಟ ಮೇಲೆಯೇ.
ಅಮರೇಶರ ಮುನ್ನುಡಿಯನ್ನು ಗಮನಿಸಿದರೆ ಅವರು ಬರೆಯುತ್ತಾರೆ “ನವಿಲೆಸರ' ಎಂಬುದು ಒಂದು ಊರು. ಸುಮಧುರ ಹೆಸರುಳ್ಳ ಕಾಡು, ಬೆಟ್ಟ, ನದಿ, ಪಶು, ಪಕ್ಷಿ, ಪ್ರಾಣಿ, ಹೂ ಬಳ್ಳಿಗಳಿಂದ ಕೂಡಿದ ಮಲೆನಾಡ ಮಡಿಲಲ್ಲಿರುವ ಆಕರ್ಷಕ ಊರು. ಈ ಊರು ಅಲಕ ತೀರ್ಥಹಳ್ಳಿ ಬರೆದ ಅನೇಕ ಕತೆಗಳ ಕೇಂದ್ರ. ನವಿಲೆಸರ ಜತೆಗೆ ಶಿವಳ್ಳಿ, ಶಿರವಂತೆ, ಸಂಪಗಾರು, ಹಿಂಗಾರ ಕೊಡಿಗೆ, ಹೂವಿನಕೊಪ್ಪಲು, ತಾಳಗುಪ್ಪ ಊರುಗಳು ಕತೆಗಳಲ್ಲಿ ಕಾಣಿಸುತ್ತವೆ.
ನವಿಲೆಸರ ಮತ್ತಿತರ ಇದೇ ಬಗೆಯ ಪರಿಸರದ ಕತೆಗಳನ್ನು ಕಟ್ಟುವಾಗ ಕತೆಗಾರರ ಸೃಜನಶೀಲತೆ ಎದ್ದು ಕಾಣುತ್ತದೆ. ಇದೇ ಕತೆಗಾರರು ನಗರಕೇಂದ್ರಿತ ಪರಿಸರ, ವ್ಯಕ್ತಿಗಳು, ಸಮಸ್ಯೆಗಳನ್ನು ಚಿತ್ರಿಸುವಾಗ ತನ್ಮಯತೆ ಕಾಣುವುದಿಲ್ಲ. ‘ಗೋಗ್ರಹಣ' ಕತೆಯನ್ನು ಬರೆದಂತೆ, ‘ಜೋಡಿ ಹೆಂಡಿರಂಜಿ ಓಡಿ ಹೋಗುವಾಗ', ಪಾಪದ ಪರಿಜನರು, ಮಾಯಾ ಮೃಗದ ಬೆನ್ನಿಳಿದು, ಮುಂತಾದ ಕತೆಗಳನ್ನು ಬರೆಯಲು ಸಾಧ್ಯವಾಗಿಲ್ಲ. ಈ ಕತೆಗಳನ್ನು ಬಡಕಲಾಗಿಸಿದ್ದಾರೆ. ದಟ್ಟವಾದ ವಿವರಗಳೂ ಇಲ್ಲ.
ಅಲಕ ತೀರ್ಥಹಳ್ಳಿಯವರ ಕತೆಗಳಲ್ಲಿ ಕುತೂಹಲ ಹುಟ್ಟಿಸುವ ಕೆಲವು ಸಂಗತಿಗಳಿವೆ. ಅವುಗಳಲ್ಲಿ ಒಂದು ದತ್ತಮೂರ್ತಿ ಎಂಬ ಹುಡುಗನನ್ನು ಕುರಿತು ನಾಲ್ಕು ಕತೆಗಳನ್ನು ಬರೆದಿರುವುದು. ಅಕ್ಷರ ಕಲಿಯುವ ಹಂತದ ಅಡ್ಡಿ ಆತಂಕಗಳಿಂದ ಹಿಡಿದು, ಶಾಲೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಮನೆಯಲ್ಲಿ ತಾಯಿಗೆ ಹೊಂದಿಕೊಂಡು ಕೊನೆಗೆ ಸಾಫ್ಟ್ವೇರ್ ಇಂಜಿನಿಯರ್ ಆಗುವ ಹಂತದವರೆಗಿನ ಬದುಕನ್ನು ಕತೆಯಲ್ಲಿ ನಿರೂಪಿಸಿದ್ದಾರೆ. ಬಹುಷಃ ಯಾವ ಕತೆಗಾರರೂ ಈ ಪ್ರಯೋಗ ಮಾಡಿಲ್ಲವೇನೋ ! ಒಂದು ಪುಟ್ಟ ಊರನ್ನು, ಅಲ್ಲಿನ ಬೆರಳೆಣಿಕೆಯ ಜನರನ್ನು ಅವರ ನಡುವಿನ ನಂಟಿನ ಸಂಬಂಧಗಳನ್ನು ಕೇಂದ್ರೀಕರಿಸಿ ಬರೆಯುವಾಗ ಒಂದು ಕತೆಯಲ್ಲಿ ಬರುವ ಪಾತ್ರಗಳು, ಇನ್ನೊಂದು ಕತೆಯಲ್ಲಿ ಬರುವುದು ಸಹಜ. ದತ್ತನನ್ನು ಕುರಿತ ಕತೆಯಲ್ಲಿ ದತ್ತು, ಅವನ ತಾಯಿ ಪಾರೋತಿ, ದನಕಾಯುವ ಪಿಠಾರಿ, ಅವನ ತಂದೆ ತಿಮ್ಮನಾಯ್ಕ, ಊರಿನ ಹಿರಿಯ ಮಾಬಲಯ್ಯ ಮತ್ತು ಮಾಸ್ಟರ್ ಮಾಧವ ಬಾಪಟ, ನಾಯಿ ಟೀಪೂ, ಹಸುಗಳು (ಅವುಗಳಿಗೂ ಹೆಸರಿವೆ), ಹನುಮ - ಇವರೆಲ್ಲ ಇರುತ್ತಾರೆ. ದತ್ತ ಮೂರ್ತಿ ಕೇಂದ್ರಿತ ಕತೆಗಳನ್ನು ತಮ್ಮ ಪ್ರೌಢಶಾಲಾ ತರಗತಿಗಳ ಕನ್ನಡ ಪಠ್ಯಗಳಲ್ಲಿ ಸೇರಿಸುವಷ್ಟು ಚೆನ್ನಾಗಿವೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಪುಸ್ತಕದಲ್ಲಿ ‘ಪದ ಕುಸಿಯೆ ನೆಲವಿದು, ಅಮ್ಮಾ, ಇನ್ನೆಲ್ಲೂ ಬಾಂಬು ಬೇಡಮ್ಮಾ, ರಾಮನ ಬಂಟ, ಹರ ಕೊಲ್ಲಲ್ ಪರ ಕಾಯ್ವನೆ?, ಗೋಗ್ರಹಣ, ಹಸುಗಳ ಹಾಡು, ಮಾಯಾಮೃಗದ ಬೆನ್ನಿಳಿದು..., ಭುಜಂಗ, ಪಾಪದ ಪರಿಜನರು, ಜೋಡು ಹೆಂಡಿರೆಂಜಿ ಓಡಿ ಹೋಗುವಾಗ, ನಿನ್ನೆ ನಿನ್ನೆಗೆ..., ಸ್ವರ್ಗಾದಪಿ ಗರೀಯಸೀ!, ಅಯ್ಯೋ! ನನ್ನ ನವಿಲೆಸರವೆ!, ಶಾಮರಾಯರ ಸಂದೇಶ’ ಮುಂತಾದ ಹದಿನೈದು ಕತೆಗಳಿವೆ.
ಕಥೆಗಾರ ಅಲಕ ತೀರ್ಥಹಳ್ಳಿಯವರು ತಮ್ಮ ಮಾತಿನಲ್ಲಿ ತಮ್ಮಲ್ಲಿ ಕತೆ ಹುಟ್ಟಿದ ಬಗ್ಗೆ ವಿವರಣೆ ನೀಡಿದ್ದಾರೆ. “ಆವರೆಗೆ ಎಂದೂ ಕಾಡದ ಬಾಲ್ಯವು ಈಗ ನನ್ನನ್ನು ಕಾಡತೊಡಗಿತು. ಏನೇನೂ ವಿಶೇಷವಾಗಿರದ, ಆದರೆ ಹಳೆಯ ದಿನಗಳನ್ನೆಲ್ಲ ನೆನಪಿಸುವ ಸಾಮಾನ್ಯ ವಸ್ತುಗಳೂ ಕಣ್ಣನ್ನು ಅರಳಿಸತೊಡಗಿದವು. ಮರುಕ್ಷಣವೇ ಕರುಳನ್ನು ಗಲಗಲ ಅಲುಗಿಸಿ ಸಂಕಟವನ್ನುಂಟುಮಾಡತೊಡಗಿದವು. ಹೀಗೆ ನಮ್ಮ ನೋವನ್ನು ಕಂಡವರೊಡನೆ ಹೇಳಿಕೊಂಡು ಹಗುರಾಗುವುದು ಸಾಮಾನ್ಯವಲ್ಲವೇ? ನಾನು ಬರೆಯತೊಡಗಿದೆ. ಆದರೆ ನಾನು ಬರೆದದ್ದು ಕರುಳು ಜಿನುಗಿಸಿದ ಸಂಕಟವನ್ನು ಅಲ್ಲ-ಅದರಲ್ಲಿ ನಾನು ಕಂಡ ಸಂಭ್ರಮವನ್ನು ಕೂಡ!” ಎಂದೆಲ್ಲಾ ಬರೆದಿದ್ದಾರೆ.
‘ಅಪಾರ' ಇವರ ಸೊಗಸಾದ ಮುಖಪುಟದ ಈ ಪುಸ್ತಕದ ತುಂಬೆಲ್ಲಾ ಬಿ.ಸಿ.ರಮೇಶ್ ಅವರ ರೇಖಾ ಚಿತ್ರಗಳಿವೆ. ೧೫೬ ಪುಟಗಳ ಈ ಪುಸ್ತಕವನ್ನು ಓದುತ್ತಾ ಓದುತ್ತಾ ‘ನವಿಲೆಸರ' ಊರಿನ, ಕಾಡಿನ, ಬೆಟ್ಟಗುಡ್ಡಗಳ ಗುಂಗಿನಲ್ಲಿ ಕಳೆದುಹೋಗಬಹುದು. ಸೊಗಸಾದ ಓದಿಗೆ ಉತ್ತಮ ಹೊತ್ತಗೆ.