ನವೆಂಬರ್ 14...
ಈ ಕ್ಷಣದಲ್ಲಿ ನಿಮಗೆ ಭಾರತದ ಬಗೆಗೆ ಯಾವ ಅಭಿಪ್ರಾಯ - ದೃಷ್ಟಿಕೋನ - ನಿಲುವು ಇದೆಯೋ ಅದಕ್ಕೆ ಮೂಲ ಕಾರಣ ಜವಹರಲಾಲ್ ನೆಹರು. ಒಂದು ವೇಳೆ ನಿಮ್ಮ ಅಭಿಪ್ರಾಯ, ಈ 75 ವರ್ಷಗಳಲ್ಲಿ ಭಾರತ ಅತ್ಯಂತ ಭ್ರಷ್ಟವಾಗಿ, ವ್ಯವಸ್ಥೆ ಅಧೋಗತಿಗೆ ಇಳಿದಿದೆ, ವಿಶ್ವದ ಇತರೆ ಅಭಿವೃದ್ಧಿ ದೇಶಗಳನ್ನು ನೋಡಿದಾಗ ನಾವು ತಲೆ ತಗ್ಗಿಸಬೇಕಾಗಿದೆ. ಜನರ ಜೀವನಮಟ್ಟ ಕುಸಿದಿದೆ, ಅರಾಜಕತೆ ಎಲ್ಲೆಲ್ಲೂ ತಾಂಡವವಾಡುತ್ತಿದೆ ಎನಿಸಿದರೆ ಅದಕ್ಕೆ ನೆಹರು ಅವರನ್ನೇ ಹೆಚ್ಚಾಗಿ ಹೊಣೆ ಮಾಡಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಅಭಿಪ್ರಾಯ, ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಇಂದು ತಲೆ ಎತ್ತಿ ನಿಂತಿದೆ, ಬಲಿಷ್ಠ ಸೈನಿಕ ಮತ್ತು ಆರ್ಥಿಕ ಶಕ್ತಿಯಾಗಿದೆ, ಅತ್ಯುತ್ತಮ ಪ್ರಜಾಪ್ರಭುತ್ವ ಮತ್ತು ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿದೆ, ನಾವೆಲ್ಲರೂ ಇರುವುದರಲ್ಲಿ ಬಹುತೇಕ ಉತ್ತಮ ಜೀವನ ನಡೆಸುತ್ತಿದ್ದೇವೆ. ಹಲವಾರು ಕೊರತೆಗಳ ನಡುವೆಯೂ ನಮ್ಮ ತಂದೆ ತಾಯಿಗಳ ಕಾಲಕ್ಕಿಂತ ಈಗ ನಮ್ಮ ಬದುಕು ಸಮಾಧಾನಕರವಾಗಿದೆ ಎಂದು ಅನಿಸುವುದಾದರೆ ಅದಕ್ಕೂ ಪಂಡಿತ್ ನೆಹರು ಅವರೇ ಕಾರಣ.
ಬೃಹತ್ ವಿಸ್ತೀರ್ಣದ ವೈವಿಧ್ಯಮಯ ನೆಲ ಭಾರತ ಎಂಬ ಹೆಸರಿನಲ್ಲಿ ಅನೇಕ ಪ್ರಾಂತ್ಯಗಳ ಒಕ್ಕೂಟವಾಗಿ, ಪ್ರಜಾಸತ್ತಾತ್ಮಕ ಸಂವಿಧಾನಾತ್ಮಕ ಸ್ವಾತಂತ್ರ್ಯ ಗಣರಾಜ್ಯವಾಗಿ ಅಸ್ತಿತ್ವಕ್ಕೆ ಬಂದಾಗ ಅದರ ನಾಯಕತ್ವ ವಹಿಸಿದ್ದು ನೆಹರು. ಸುಮಾರು 14 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದರು. ಇತಿಹಾಸವನ್ನು ಅಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ನಾವು ಪರಿಗಣಿಸಿದರೆ ಅದು ಹೆಚ್ಚು ವಾಸ್ತವಿಕವಾಗಿ ನಮಗೆ ಪರಿಚಯವಾಗುತ್ತದೆ. ಇಲ್ಲದಿದ್ದರೆ ಇಂದಿನ ದಿನಗಳಲ್ಲಿ ಪರಿಣಾಮ ಫಲಿತಾಂಶ ಆಧರಿಸಿ ಅಂದಿನ ಇತಿಹಾಸ ವಿಮರ್ಶಿಸಿದರೆ ಆಗ ಬೇರೆಯದೇ ಅರ್ಥ ದೊರೆಯುತ್ತದೆ.
ಕೆಲವು ಅಪವಾದಗಳ ನಡುವೆಯೂ ನೆಹರು ಪ್ರಜ್ಞಾವಂತ, ಬುದ್ದಿವಂತ ಮತ್ತು ದೂರದೃಷ್ಟಿಯ ನಾಯಕರಾಗಿದ್ದರು. ಹೆಚ್ಚಿನ ಓದು, ಪ್ರವಾಸ ಮತ್ತು ಗಾಂಧಿಯವರ ಪ್ರಭಾವದಿಂದಾಗಿ ಭಾರತದ ಸಂಸ್ಕೃತಿಯನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದರು. ಭಿನ್ನತೆಯಲ್ಲೂ ಐಕ್ಯತೆಯ ಮಹತ್ವ ಮತ್ತು ಸರ್ವ ಧರ್ಮಗಳ ಸಮನ್ವಯದ ಪ್ರಾಮುಖ್ಯತೆಯನ್ನು ಬಲ್ಲವರಾಗಿದ್ದರು. ಆ ಕಾರಣದಿಂದಲೇ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸದೆ ವಿವೇಚನೆಯಿಂದ ಕಾರ್ಯನಿರ್ವಹಿಸಿದರು.
ಆಗಿನ್ನೂ ಕೃಷಿ ಪ್ರಧಾನವಾದ, ಗುಡಿ ಕೈಗಾರಿಕೆಗಳ, ಅನಕ್ಷರಸ್ಥ, ಗಾಡ ನಂಬಿಕೆಗಳ, ಬಡತನವೇ ಪ್ರಧಾನವಾಗಿದ್ದ ಸಮಾಜವನ್ನು ಆರ್ಥಿಕವಾಗಿ ಮುನ್ನಡೆಸಲು ಸಾರ್ವಜನಿಕ ಸಹಭಾಗಿತ್ವದ ಅನೇಕ ಉದ್ದಿಮೆಗಳನ್ನು ಸ್ಥಾಪಿಸಿದರು. ಆ ಉದ್ದಿಮೆಗಳ ಉದ್ಯೋಗಿಗಳ ಮೊಮ್ಮಕ್ಕಳೇ ಇಂದಿನ ಆಧುನಿಕ ಭಾರತೀಯ ಸಮಾಜದ ಕೃಷಿ ಹೊರತುಪಡಿಸಿ ಇತರ ಎಲ್ಲಾ ಕ್ಷೇತ್ರಗಳನ್ನು ಮುನ್ನಡೆಸುತ್ತಿರುವ ಯುವ ಜನಾಂಗ.
ಅದೇ ಮೊಮ್ಮಕ್ಕಳೇ ಇಂದು ಚಾಚಾ ನೆಹರು ಅವರನ್ನು ಬೇರೆ ಬೇರೆ ಕಾರಣಕ್ಕಾಗಿ ತೀವ್ರವಾಗಿ ಟೀಕಿಸುತ್ತಿರುವವರು ಎಂಬುದು ವಿಪರ್ಯಾಸ. ಕೃಷಿ ಮತ್ತು ಸಮಗ್ರ ಅಭಿವೃದ್ಧಿಗಾಗಿ, ಬಡತನ ನಿರ್ಮೂಲನೆಗಾಗಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದರು. ಅದು ಈ ವ್ಯವಸ್ಥೆಯಲ್ಲಿ ಸಾಧಾರಣ ಯಶಸ್ಸು ಗಳಿಸಲು ಮಾತ್ರ ಸಾಧ್ಯವಾಯಿತು.
ಆಗಿನ ರಕ್ಷಣಾ ದೃಷ್ಟಿಯಿಂದ ಸೈನಿಕವಾಗಿ ಅಷ್ಟೇನು ಪ್ರಬಲವಾಗಿಲ್ಲದ ಮತ್ತು ಇಡೀ ವಿಶ್ವವನ್ನೇ ಕಾಡಿದ ಎರಡು ಮಹಾಯುದ್ಧಗಳ ಭಯದಿಂದ ನೆಹರು ಅವರು ಭಾರತದ ಸುಭದ್ರತೆಗಾಗಿ ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿದರು. ಈಗ ಅದು ಟೀಕೆಗೆ ಒಳಗಾದರು ಆಗ ಅದು ಭಾರತದ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಒಳ್ಳೆಯ ಮತ್ತು ಪರಿಣಾಮಕಾರಿ ನೀತಿಯಾಗಿತ್ತು.
ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ಇಂದು ಬಲಿಷ್ಠ ಮರವಾಗಿ ಬೆಳೆಯಲು ನೆಹರು ಅವರ ಪ್ರಾಮಾಣಿಕತೆ ಕಾರಣವಾಯಿತು ಎಂಬುದನ್ನು ಮರೆಯಬಾರದು. ಅದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದ ಪಾಕಿಸ್ತಾನ ಮತ್ತು ಆಫ್ರಿಕಾದ ಕೆಲವು ದೇಶಗಳ ಇಂದಿನ ಅರಾಜಕತೆಯನ್ನು ಗಮನಿಸಿದಾಗ ನಮಗೆ ಇದರ ಮಹತ್ವ ಅರಿವಾಗುತ್ತದೆ.
ಆ, ಒಂದಷ್ಟು ಭ್ರಷ್ಟಾಚಾರ, ಅನುವಂಶಿಕ ಆಡಳಿತಕ್ಕೆ ದಾರಿ ಮಾಡಿಕೊಟ್ಟಿದ್ದು, ಸಮಾಜವಾದಿ ವಿಚಾರಧಾರೆಯನ್ನು ಹೇರಿದ್ದು, ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿರುವುದು, ಚೀನಾದ ಆಕ್ರಮಣ ತಡೆಯಲು ವಿಫಲವಾಗಿದ್ದು ಮುಂತಾದ ಟೀಕೆಗಳು ಅವರ ಮೇಲಿದೆ. ಆಗಿನ್ನೂ ರಾಜಪ್ರಭುತ್ವದಿಂದ, ಬ್ರಿಟಿಷರ ಗುಲಾಮಿತನದ ಪ್ರಭಾವದಿಂದಾಗಿ ಹೊರಬರುತ್ತಿದ್ದ ಸಂದರ್ಭದಲ್ಲಿ, ಆಧುನಿಕ ಸಂಪರ್ಕ ಸಾಧನಗಳು ಮಾಧ್ಯಮಗಳು ಹೆಚ್ಚಿನ ಪ್ರಭಾವ ಇಲ್ಲದೇ ಇದ್ದ ಸಮಯದಲ್ಲಿ ಸಹಜವಾಗಿ ಒಂದಷ್ಟು ದೌರ್ಜನ್ಯಗಳು, ಪಕ್ಷಪಾತಗಳು, ಅನ್ಯಾಯಗಳು ಆಗಿರುವುದು ನಿಜ.
ಈಗಿನ ಕಾಲದಲ್ಲೇ ಅಪ್ಪ ಮಕ್ಕಳು ಮೊಮ್ಮಕ್ಕಳ ರಾಜಕೀಯ, ಜಾತೀಯತೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತುಂಬಿ ತುಳುಕುತ್ತಿರುವಾಗ ಆಗ ಇದು ಇದ್ದದ್ದು ಆಶ್ಚರ್ಯವೇನು ಇಲ್ಲ. ಒಟ್ಟಿನಲ್ಲಿ ಸ್ವಾತಂತ್ರ್ಯ ನಂತರದ ಭಾರತದ ಒಟ್ಟು ಆಡಳಿತಾತ್ಮಕ ಅಭಿವೃದ್ಧಿ ಗಮನಿಸಿದಾಗ ಜವಹರಲಾಲ್ ನೆಹರು ಅವರನ್ನು ಆಧುನಿಕ ಭಾರತದ ಅಡಿಪಾಯ ಹಾಕಿದ ಶಿಲ್ಪಿ ಎಂದು ಕರೆಯಲು ಅರ್ಹ ವ್ಯಕ್ತಿ ಎಂದು ಪರಿಗಣಿಸಬಹುದು. ಉಳಿದದ್ದು ಭಾರತದ ಇತಿಹಾಸವನ್ನು ನೀವು ಗ್ರಹಿಸುವ ದೃಷ್ಟಿಕೋನವನ್ನು ಅವಲಂಬಿಸಿದೆ. ಜವಹರಲಾಲ್ ನೆಹರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುನ್ನು ಹೇಳುತ್ತಾ, ನಿಮ್ಮ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಗೌರವಿಸುತ್ತಾ..
- 379 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಿಂದ ಸುಮಾರು 34 ಕಿಲೋಮೀಟರ್ ದೂರದ ರಾಮನಗರ ಪಟ್ಟಣ ತಲುಪಿತು. ಇಂದು 15/11/2021 ಸೋಮವಾರ 380 ನೆಯ ದಿನ ನಮ್ಮ ಕಾಲ್ನಡಿಗೆ ರಾಮನಗರ ಜಿಲ್ಲೆಯ ರಾಮನಗರ ಪಟ್ಟಣದಿಂದ ಸುಮಾರು 12 ಕಿಲೋಮೀಟರ್ ದೂರದ ಚನ್ನಪಟ್ಟಣ ತಾಲ್ಲೂಕು ತಲುಪಲಿದೆ. ನಾಳೆ 16/11/2021 ಮಂಗಳವಾರ 381 ನೆಯ ದಿನ ಕನಕಪುರ ತಾಲ್ಲೂಕು ತಲುಪುವ ಯೋಜನೆ ಇದೆ. ನಂತರ 29 ನೆಯ ಜಿಲ್ಲೆಯಾಗಿ ಮಳವಳ್ಳಿ ತಾಲ್ಲೂಕಿನ ಮೂಲಕ ಮಂಡ್ಯ ಜಿಲ್ಲೆಯ ಪ್ರವೇಶ.
ಮಂಡ್ಯ ಜಿಲ್ಲೆಯ ಮಾರ್ಗಸೂಚಿ: ಮಳವಳ್ಳಿ, ಮದ್ದೂರು, ಮಂಡ್ಯ ನಗರ, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಮಕ್ಕಳ ದಿನದ ಶುಭ ಕೋರುತ್ತಿರುವ ಕುಂಪಲ ಪರಿಸರದ ಪುಟಾಣಿಗಳು ಚಿತ್ರ: ಶಾಲಿನಿ ಗಣೇಶ್