ನವ್ಯದಲಿ ಮಿಂಚಿದ ಯುಗದ ಕವಿ - ಮೊಗೇರಿ ಗೋಪಾಲಕೃಷ್ಣ ಅಡಿಗರು

ನವ್ಯದಲಿ ಮಿಂಚಿದ ಯುಗದ ಕವಿ - ಮೊಗೇರಿ ಗೋಪಾಲಕೃಷ್ಣ ಅಡಿಗರು

ಆವ ವಿಧದಲಿ ಕನ್ನಡದ ಮಾತೆ ನಿನ್ನಡಿಯ

ಸೇವೆ ಗೆನ್ನೀ ತನುವ ಮುಡಿಪಾಗಿ ಕೊಡಲಿ

 

ಕಟ್ಟುವೆವು ನಾವು ಹೊಸ ನಾಡೊಂದನು

ರಸದ ಬೀಡೊಂದನು

 

ಜಾತಿಮತದ ಗುಹೆಗಳಿಂದ ಹೊರಬನ್ನಿರಿ ಬಯಲಿಗೆ

ಅಲ್ಲೊಂದು ಇಲ್ಲೊಂದು ಬರೆದು ಚೆಲ್ಲಿದ ಚೂರು

ಕಾಗದಗಳೋ ಎನಲು ಆಗಸದಲ್ಲಿ

ಈ ಮೇಲಿನ ಸಾಲುಗಳನ್ನು ಬರೆದವರು ನವ್ಯದ ನೇತಾರ, ನವ್ಯ ಸಾಲುಗಳಲ್ಲಿ ಮಿಂಚಿದ ಹಿರಿಯ ಕವಿ ಸಾಹಿತಿ ಎಂ ಗೋಪಾಲಕೃಷ್ಣ ಅಡಿಗರು. ಸ್ವತ:ವಿದ್ವಾಂಸರು, ಸಾತ್ವಿಕರು, ಪಂಚಾಂಗದ ಕಾಯಕ ಮಾಡುತ್ತಿದ್ದ ರಾಮಪ್ಪ ಅಡಿಗ, ಗೌರಮ್ಮ ದಂಪತಿಗಳ ಪುತ್ರ ರತ್ನವೇ ಮೊಗೇರಿ ಕುಟುಂಬದಲ್ಲಿ ಫೆಬ್ರವರಿ ೧೮, ೧೯೧೮ ರಂದು ಜನಿಸಿದ ಎಂ.ಗೋಪಾಲಕೃಷ್ಣ ಅಡಿಗರು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಕುಟುಂಬ ಪೌರೋಹಿತ್ಯ ವೃತ್ತಿಯಲ್ಲಿ ತೃಪ್ತಿ ಕಂಡವರು. ದ.ಕನ್ನಡವೆಂದರೆ ಯಕ್ಷಗಾನದ ತವರೂರು. ಅಡಿಗರಿಗೆ ಮನೆಯಲ್ಲಿ ಕಾವ್ಯದ, ಕವಿತೆಯ, ಯಕ್ಷಗಾನದ, ದೇಶಭಕ್ತಿಗೀತೆಗಳ ಗಾಯನ ಎಲ್ಲದರ ಹಿನ್ನೆಲೆಯಿತ್ತು. ಹಾಡು, ತಾಳ, ಮಟ್ಟು, ಭಂಗಿ ಎಲ್ಲವನ್ನು ಖುದ್ದಾಗಿ ನೋಡುವ ಅಭ್ಯಾಸವಿದ್ದ ಕಾರಣ, ಅದರಿಂದಲೇ ಪ್ರೇರೇಪಿತರಾಗಿ ಬರೆಯಲು ಆರಂಭಿಸಿದರು. ಕೇವಲ ೧೩ನೇ ವಯಸ್ಸಿನಲ್ಲಿ ಮೊದಲ ಕವನ ಬರೆದವರು ಮೊಗೇರಿ ಗೋಪಾಲಕೃಷ್ಣ ಅಡಿಗರು.

ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಕಾಲವದು. ತಾವು ಸಹ ಹೋರಾಟದಲ್ಲಿ ಭಾಗಿಯಾದರಂತೆ.ಈ ದೇಶಭಕ್ತಿಯ ಕಿಚ್ಚು, ಉತ್ಸಾಹ ಅಡಿಗರ ಕವನದ ಸಾಲುಗಳಲ್ಲಿ ವ್ಯಕ್ತವಾಗುತ್ತಿತ್ತಂತೆ. ಮುಂದೆ ಇಂಟರ್ ಮೀಡಿಯೆಟ್ ವಿದ್ಯಾಭ್ಯಾಸದ ಸಮಯದಲ್ಲಿ ಅಡಿಗರಿಗೆ ವೈ ಶಾರದಾಪ್ರಸಾದ್, ಬಿ.ಹೆಚ್. ಶ್ರೀಧರ್, ಚದುರಂಗ ಮುಂತಾದ ಸಾಹಿತಿಗಳ ಒಡನಾಟವಾಯಿತು. ಬಿ.ಎ (ಆನರ್ಸ್), ಎಂ.ಎ ಆಂಗ್ಲಭಾಷೆಯಲ್ಲಿ ಪದವಿ ಪೂರೈಸಿ, ಗುಮಾಸ್ತರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕರ್ತವ್ಯನಿರ್ವಹಿಸಿದರು. ನ್ಯಾಷನಲ್ ಬುಕ್ ಟ್ರಷ್ಟಿನ ನಿರ್ದೇಶಕರಾಗಿ, ಸಿಮ್ಲಾದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಸ್ಟಡೀಸ್ ನ ರಿಸರ್ಚ್ ಫೆಲೋ ಆಗಿ ಸಹ ಕೆಲಸ ಮಾಡಿದರು.

ಕಾರ್ಮಿಕರ, ರೈತರ ಪರವಾಗಿ ಸದಾ ಚಿಂತಿಸಿ, ಕೆಲಸಮಾಡುತ್ತಿದ್ದರಂತೆ. ಸಾಮರಸ್ಯ, ಸಮಾನತೆಗೆ ಸದಾ ಬೆಂಬಲಕೊಡುತ್ತಿದ್ದರು .ಲೋಕಸಭಾ ಚುನಾವಣೆಗೂ ನಿಂತು ಸ್ಪರ್ಧಿಸಿದ್ದರು. ವಿದ್ಯಾರ್ಥಿಗಳೊಂದಿಗೆ ಬೆರೆಯುವುದೆಂದರೆ ಅಡಿಗರಿಗೆ ತುಂಬಾ ಇಷ್ಷವಂತೆ.

ಶ್ರೀಯುತರ ಮೊದಲ ಕವನ ಸಂಕಲನ 'ಭಾವತರಂಗ'. ನವೋದಯದ ನವ್ಯ ಸಾಹಿತ್ಯದ ಅತ್ಯದ್ಭುತ ಕೊಡುಗೆ ಈ ಸಂಕಲನ. ಮುಂದೆಕಟ್ಟುವೆವು ನಾವು, ಚೆಂಡೆಮದ್ದಳೆ, ಭೂಮಿಗೀತ, ವರ್ಧಮಾನ ಮುಂತಾದ ಕವನ ಸಂಕಲನಗಳನ್ನು, ಅನಾಥೆ, ಆಕಾಶದೀಪ ಕಾದಂಬರಿಗಳನ್ನು, ಅನುವಾದಿತ ಕೃತಿಗಳನ್ನು, ಲೇಖನಗಳನ್ನು ಬರೆದವರು. ಸಣ್ಣಕಥೆಗಳನ್ನು ಸಹ ಬರೆದವರು. ಅಡಿಗರು ಚಿಕಿತ್ಸಕ ಮನೋಭಾವದವರು. ಭಾವತೀವ್ರತೆ, ನೋವು ನಲಿವುಗಳ ಸ್ಪಂದನ, ಪ್ರೀತಿ, ಪ್ರೇಮದ ಗೆಲುವು, ವಾಸ್ತವತೆಯ ಬಿಂಬ, ಸಂಘರ್ಷ ಎಲ್ಲದರ ಮಿಶ್ರಣವನ್ನು ಬರಹದಲ್ಲಿ ಕಾಣಬಹುದು. ಇವರ ಶ್ರೀಮತಿ ಲಲಿತಾ.

ಸಂದ ಪ್ರಶಸ್ತಿಗಳು - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 'ವರ್ಧಮಾನ'ಕವನ ಸಂಕಲನಕ್ಕೆ, ಕೇರಳದ 'ಕುಮಾರ್ ಸಮ್ಮಾನ್' ಪ್ರಶಸ್ತಿ, 'ಕಬೀರ್ ಸಮ್ಮಾನ್' ಪ್ರಶಸ್ತಿ, 'ಡಾಕ್ಟರ್ ಆಫ್ ಲಿಟರೇಚರ್'' ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗೆ ಭಾಜನರಾದರು.

'ಸಾಹಿತಿಯಾದವನು ಮಹಾತ್ಯಾಗಿಯೋ, ಸಂತನೋ, ಸಾಧುವೋ, ಮಹಾಪುರುಷನಾಗಬೇಕೆಂದು ಬಯಸಬಾರದು. ಸಮರ್ಪಕವಾಗಿ ವಾಸ್ತವತೆಯನ್ನು, ಕಾಲ್ಪನಿಕದೊಂದಿಗೆ ಮೇಳೈಸಿ ಬರೆಯಲು ಕಲಿಯಬೇಕು. ಸಾಹಿತಿಗೆ ಬರಯುವುದಷ್ಟೇ ಕೆಲಸ, ಅದು ಅವನ/ಳ ಹಕ್ಕು. ಅದನ್ನು ಟೀಕಿಸುವುದು, ಹೊಗಳುವುದು, ವಿಮರ್ಶಿಸುವುದು ಓದುಗರ ಭಾವನೆಗೆ ಬಿಟ್ಟ ವಿಚಾರ. ‘ಹಾಗೆಂದು ಟೀಕೆ, ವಿಮರ್ಶೆ, ಹೊಗಳುವಿಕೆಯಲಿ ಸಾಹಿತಿಯ ವೈಯಕ್ತಿಕ ಜೀವನದ ವಿಷಯ ಬರಬಾರದು. ನಮ್ಮ ದೇಶದಲ್ಲಿ ವಾದವಿವಾದಗಳು ತರ್ಕಗಳು, ಅಳು ನಗು ಕೇಕೆಗಳು, ಸ್ವಪ್ರದರ್ಶನ, ಸ್ವಪ್ರತಿಷ್ಠೆ ಕೀವು ತುಂಬಿ ಹರಿಯುತ್ತಿದೆ,ಸಿಡಿಯುತ್ತಿದೆ. ಆಗ ಬೇಕಾದ ಬದಲಾವಣೆಯತ್ತ ಬರವಣಿಗೆಯವರು ಗಮನಹರಿಸಿ ಎಂದರು. ಕಾರಣವ ತಿಳಿದು ಮದ್ದು ಅರೆಯಬೇಕೆಂದರು. ಇಷ್ಟೊಂದು ಕೆಲಸ ಮಾಡಿದರೂ ಪದ್ಮಶ್ರೀಯಾಗಲಿ, ಡಾಕ್ಟರೇಟಾಗಲಿ, ಇನ್ನಾವುದೇ ಅತ್ಯುನ್ನತ ಪ್ರಶಸ್ತಿಗಳು ಶ್ರೀಯುತ ಅಡಿಗರಿಗೆ ಸಿಗದಿರವುದು ಆಶ್ಚರ್ಯವೇ ಸರಿ. ಮಹಾನ್ ಚೇತನ ಎಂ ಗೋಪಾಲಕೃಷ್ಣ ಅಡಿಗರು ನವಂಬರ ೧೧, ೧೯೯೨ರಲ್ಲಿ ‌ಸಾಹಿತ್ಯದ ಕೆಲಸಗಳಿಗೆ ವಿರಾಮನೀಡಿ ನಮ್ಮನಗಲಿದರು. ಶ್ರೀಯುತರ ಜನುಮದಿನವಾದ ಫೆಬ್ರವರಿ ೧೮ರಂದು ಅವರ ಬಗ್ಗೆ ಒಂದೆರಡು ನುಡಿಗಳಿಂದ ನೆನಪಿಸಿಕೊಳ್ಳುತ್ತಿರುವೆ.

(ಆಕರ: ಹಿರಿಯ ಸಾಹಿತಿಗಳ ವ್ಯಕ್ತಿ ಪರಿಚಯ ಪುಸ್ತಕ)

- ರತ್ನಾ ಕೆ ಭಟ್, ತಲಂಜೇರಿ ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ