ನಾಗಜ್ಜಿಯ ಬಿಡಾರ ಪ್ರಕರಣ (ಭಾಗ ೨)

ನಾಗಜ್ಜಿಯ ಬಿಡಾರ ಪ್ರಕರಣ (ಭಾಗ ೨)

ಮರುದಿನ ಬೆಳಗಾಗುವುದೇ ತಡ. ನಾನಂದುಕೊಂಡಂತೇ ಆಯ್ತು. ಬಿಡಾರದ ಮೂಲ ನಿವಾಸಿಗಳಾದ ಕೆಲಸದವರ ಸವಾರಿ ಆಗಲೇ ಬಂದು ಕುಳಿತಿತ್ತು. "ಆ ಹರಕು ಬಾಯಿಯ ಮುದುಕಿಯನ್ನು ಯಾಕೆ ನಮ್ಮ ಬಿಡಾರದ ಒಳಗೆ ಸೇರಿಸಿದ್ರಿ ಮಾರಾಯ್ರೆ. ಅಲ್ಲಿ ಅವಳಿರಬೇಕು, ಇಲ್ಲಾ ನಾವಿರಬೇಕು. ಇಬ್ರೂ ಇರಲಿಕ್ಕೆ ಅಸಾಧ್ಯ" ಕೆಲಸದವರು ಕೂಗಿದರು.
 
“ನಾನೇನೂ ತಂದು ಹಾಕಿದ್ದಲ್ಲ. ಅವಳಾಗೇ ಬಂದ್ಲು. ನಾನೇನೂ ಒಪ್ಗೆ ಕೊಟ್ಟಿಲ್ಲ. ಮಳೆ ಬರೋವಾಗ ಗೋಳೋ ಅಂತ ಅತ್ಲು. ಪಾಪ ಅಂತ ನಾನು ಉಳಿಸ್ಕೊಳ್ಳೋದಿದ್ರೆ ನಂದೇನೂ ಅಭ್ಯಂತರ ಇಲ್ಲ ಅಂತ ಹೇಳಿದ್ದೇನೆ ಅಷ್ಟೆ. ನಿಮಗೆ ಆಗಲ್ಲಾಂದ್ರೆ ಇವತ್ತೇ ಮುದಿಕಿಯನ್ನು ಹೊರಗೆ ಕಳಿಸಿಬಿಡಿ" ನಾನು ಉತ್ತರಿಸಿದೆ .
 
“ಮುದುಕಿ ಪಾಪ, ಇರ್ಲಿ ಅನ್ಬೌದು. ಆದ್ರೆ ಅವಳ ಬಾಯಿ ಮಹಾ ಹೊಲಸು. ಒಂದಿನಾ ಇದ್ರೆ ಸಾಕು, ನಮ್ಮ ನಮ್ಮೊಳಗೇ ಜಗಳಾ ತಂದು ಹಾಕ್ತಾಳೆ. ಅವಳು ಬಾಯಿ ಮುಚ್ಚಿ ಕೊಂಡಿದ್ರೆ ತುತ್ತು ಅನ್ನ ಹಾಕೋದೇನೂ ಕಷ್ಟವಾಗಿರಲಿಲ್ಲ” ಅವರಲ್ಲಿ ಒಬ್ಬನ ಅಂಬೋಣ.
 
“ಅದಲ್ಲಾ ನಂಗೇನು ಗೊತ್ತಪ್ಪಾ? ನೋಡಿ, ಈ ಮಳೆಗಾಲ ಏನಾದ್ರೂ ಅಡ್ಜೆಸ್ಟ್‌ ಮಾಡ್ಕೋಳ್ಳೋಕೆ ಆದ್ರೆ ನೋಡಿ. ಆಗದಿದ್ರೆ ಇವತ್ತೇ ಕಳಿಸಿಬಿಡಿ” ನಾನೆಂದೆ. ಕೆಲಸದವರು 'ಹೂಂ ಅಂದದ್ದ ನನ್ನ ಮೇಲಿನ ವಿಶ್ವಾಸದಿಂದಲೇ ಹೊರತು ಅವಳ ಮೇಲಿನ ಕನಿಕರಕ್ಕಾಗಿ ಅಲ್ಲ ಎಂದು ಗೊತ್ತಾಯ್ತು. 'ಇದ್ಯಾವ ಸೀಮೆಯ ಮುದುಕಿ!' ಎಂದುಕೊಂಡೆ.
 
ಅಂತೂ ನಾಗಜ್ಜಿ ಬಂದಿಳಿದು ಎರಡುದಿನ ಕಳೆದಿದೆ , ಮುಂದಿನ ದಿನಗಳನ್ನು ಸೂಚಿಸುವ ಹಾಗೆ ಕೆಲ ಘಟನೆಗಳು ಈ ಎರಡು ದಿನದಲ್ಲೇ ನಡೆದವು. ಅದಕ್ಕೆಲ್ಲಾ ಸಾಕ್ಷಿಯಾಗುವ ಬದಲು ದೂರ ಓಡಿಬಿಡುವ ಎಂದು ನನಗಾಗಲೇ ಅನ್ನಿಸತೊಡಗಿತು.
 
ಘಟನೆ ಒಂದು: ನನ್ನ ಬಳಿ ಹೇಳಿದ್ದು ಬಿಡಾರದಲ್ಲಿ ಉಳಿಯಲು ಜಾಗ ಕೊಟ್ಟೆರೆ ಸಾಕು. ಗಂಜಿಯನ್ನು ತಾನೇ ಬೇಯಿಸಿಕೊಳ್ಳುತ್ತೇನೆ ಎಂಬುದಾಗಿ. ಆದರೆ ಬಿಡಾರದಲ್ಲಿ ಗಂಜಿಗೆ ಅಕ್ಕಿ ಇಲ್ಲವೆಂದು ಆಕೆ ಅಳತೊಡಗಿದ್ದರಿಂದ ತಾವೇ ಬೇಯಿಸಿ ಹಾಕಬೇಕಾಯಿತೆಂದು ಕೆಲಸದವರು ಗೊಣಗಿಕೊಂಡರು. 'ನಾವೇ ಕೂಲಿ ಮಾಡಿ ಬದುಕೋರು. ಇವತ್ತೇನೋ ಪರವಾಯಿಲ್ಲ. ದಿನಾ ಹೀಗೇ ಆದರೆ ಏನು ಕತೆ?' ಎಂಬುದು ಅವರ ಭಯ.
 
ಘಟನೆ ಎರಡು: 'ಅಮ್ಮಾ ಚಾ ಕೊಡಿ ...ಅಡಿಕೆ ಕೊಡಿ' ಎಂದು ಆಕೆ ನಮ್ಮನೆಗೇ ಬರತೊಡಗಿದಳು. ಒಂದು ಚಹಾ ಕೊಟ್ಟರೆ ಮನೆಯೇನೂ ಮುಳುಗಿ ಹೋಗುವುದಿಲ್ಲ ಎಂಬುದು ಸತ್ಯವಾದರೂ, ಚಹಾಕೊಟ್ಟು ಅವಳ ಅಂತ್ಯವಿಲ್ಲದ ಕೊರತವನ್ನು ಕೇಳುವುದು ತನಗಾಗದೆಂದು ಮನೆಯಲ್ಲಿ ಆಯಿಯ ದೂರು.
 
ಘಟನೆ ಮೂರು: ಸಮ್ಮನೇ ಕುಳಿತಿರಲಾರದ ಅಜ್ಜಿ ತಾನು 'ಕಬ್ಬು ಸುತ್ತುತ್ತೇನೆ' ಎಂದಳು. ನಮ್ಮ ಗದ್ದೆಯಲ್ಲಿ ಕಬ್ಬು ಸುತ್ತುವುದು ತಡವಾಗಿ ಕಬ್ಬಿನ ಬೆಳವಣಿಗೆಯೇ ಕುಂಠಿತಗೊಳ್ಳತೊಡಗಿತ್ತು. ಹೀಗಾಗಿ ಅಜ್ಜಿಯಾದರೂ ಕಬ್ಬು ಸುತ್ತಿದರೆ ಒಳ್ಳೆಯದೇ ಆಯ್ತು ಎಂದುಕೊಂಡೆವು. ಆದರೆ ನಾಗಜ್ಜಿ ನಾಲ್ಕಾರು ಕಬ್ಬನ್ನು ಸುತ್ತಿದವಳೇ ಪಗಾರ ಎಷ್ಟು ಕೊಡುವಿರೆಂದು ಅಪ್ಪನನ್ನು ಪೀಡಿಸತೊಡಗಿದಳು. “ನೀನು ಕಬ್ಬು ಸುತ್ತುವ ಚೆಂದ ನೋಡಿ ಪಗಾರ ನಿಗದಿ ಮಾಡುತ್ತೇನೆ" ಎಂದು ಹೇಳಿ, ನೋಡಲು ಹೋದ ಅಪ್ಪಯ್ಯ ಆಕೆ ಕಬ್ಬು ಸುತ್ತಿದ ರೀತಿ ಕಂಡ ಕಂಗಾಲಾಗಿ ಬಂದರು! ನಾಗಜ್ಜಿ ಕಬ್ಬು ಸುತ್ತಿದ ಹಾಗೆ' ಎಂಬ ಹೊಸ ಗಾದೆಯೊಂದು 'ಬೇಕಾಬಿಟ್ಟಿ ಕೆಲಸಕ್ಕೆ' ಪರ್ಯಾಯವಾಗಿ ಅಂದಿನಿಂದಲೇ ನಮ್ಮಲ್ಲಿ ಚಲಾವಣಿಗೆ ಬಂತು!!
 
ಅಷ್ಟರಲ್ಲಿ ರಜೆ ಮುಗಿದಿದ್ದರಿಂದ ನಾನು ಊರು ಬಿಟ್ಟೆ. ಮತ್ತೊಮ್ಮೆ ಮನೆಗೆ ಬರುವಷ್ಟರಲ್ಲಿ ನಾಗಜ್ಜಿ ನನಗೆ ಸಾಕಷ್ಟು ಹೆಸರು ತರಲಿಕ್ಕೆ ಸಾಕು ಎಂದುಕೊಂಡೇ ಊರಿಂದ ಹೊರಟೆ. ಮತ್ತೆ ನಾಲ್ಕು ತಿಂಗಳು ನಾಗಜ್ಜಿಯ ವಿಷಯ ಮರೆತೇ ಹೋಗಿತ್ತು. ಅವಳ ನೆನಪಾದದ್ದು ಇನ್ನೊಮ್ಮೆ ಊರಿಗೆ ಹೊರಟಾಗಲೇ, ಇವಳಿಂದಾಗಿ ನನಗೆ ಏನೇನು ಕಾದಿದೆಯೋ ಎಂದು ಅಂದುಕೊಳ್ಳುತ್ತಲೇ ಮನೆ ಪ್ರವೇಶಿಸಿದವನು, ಆಯಿಯ ಬಳಿ ಮೊದಲು ಕೇಳಿದ ಪ್ರಶ್ನೆ "ನಾಗಜ್ಜಿ ಇನ್ನೂ ಇದ್ದಾಳಾ?
 
ಆಗ ಆಯಿ ಹೇಳಿದ ಕತೆಯನ್ನು ಇನ್ನೂ ಮರೆಯಲಾಗುತ್ತಿಲ್ಲ. ಮಳೆಗಾಲ ಮುಗಿದ ಮೇಲೆ ನಾಗಜ್ಜಿ ಕೊಟ್ಟ ಮಾತಿನಂತೇ ನಮ್ಮ ಬಿಡಾರ ಬಿಟ್ಟು ಹೊರಟಳು. ಆದರೆ ಬಹುಶಃ ಎಲ್ಲಿಗೆ ಹೋಗುವುದೋ ಆಕೆಗೆ ಗೊತ್ತಿರಲಿಲ್ಲ. ತನ್ನ ಸಣ್ಣ ಚೀಲ ಹೊತ್ತು ಹೊರಟವಳು ಆ ರಾತ್ರಿ ವಾನಳ್ಳಿಯ ಬಸ್‌ಸ್ಟ್ಯಾಂಡಿಗೆ ಬಂದು ಮಲಗಿದಳು. ಬದುಕು ಎಷ್ಟು ವಿಚಿತ್ರ ನೋಡಿ! ಮರುದಿನ ಜನ ಬಸ್‌ಸ್ಟ್ಯಂಡಿಗೆ ಬರುವಾಗ ನಾಗಜ್ಜಿಯಿರಲಿಲ್ಲ !! ಅವಳ ಹೆಣ ಮಾತ್ರ ಬಿದ್ದಕೊಂಡಿತ್ತು. ಅವಳವರು ಯಾರೂ ಇರದಿದ್ದರಿಂದ ಮಂಡಲ ಪಂಚಾಯ್ತಿಯವರೇ ಹೆಣಕ್ಕೆ ಸಂಸ್ಕಾರ ಮಾಡಿ ಮುಗಿಸಿದರು.
 
'ಪಾಪ! ಕಷ್ಟದಿಂದ ಮುಕ್ತಿ ಪಡೆದಳು' ಎಂಬುದು ಆಯಿಯ ಪ್ರತಿಕ್ರಿಯೆ. ಒಂದು ದಿನ ಮೊದಲೇ ಸತ್ತಿದ್ರೆ ಹೆಣವನ್ನು ನಾವು ತೆಗೀಬೇಕಾಗಿತ್ತಲ್ಲ....? ಎಂದು ಕೆಲಸದವರು ದಿಗಿಲುಪಟ್ಟರು. ನನಗೆ ಮಾತ್ರ ಆ ಮಳೆಗಾಲದ ದಿನ ಕಾಲಿಗೆ ಬಿದ್ದು ಬಿಡಾರ ಸೇರಿಕೊಂಡ ಮುದುಕಿ, ಮತ್ತೆ ಅನಾಥೆಯಂತೆ ಗುಡಿಸಲುಬಿಟ್ಟು ಹೊರಟಾಗ ಅವಳ ಮನಸ್ಸಿನಲ್ಲಿ ಯಾವ ಭಾವನೆಗಳು ಇದ್ದಿರಬಹುದು....? ಎಂದು ನೆನದಷ್ಟೂ ಮುದುಕಿ ಕಾಡತೊಡಗಿದಳು!