ನಾಗರಿಕ ಸರಕಾರದ ವೈಖರಿಯಲ್ಲ

ನಾಗರಿಕ ಸರಕಾರದ ವೈಖರಿಯಲ್ಲ

ಕಾರ್ಯಾಂಗಕ್ಕೆ ನ್ಯಾಯಾಂಗದಂತೆ ವರ್ತಿಸುವ ಅಧಿಕಾರ ಭಾರತದಲ್ಲಿ ಎಂದಿಗೂ ಇಲ್ಲ. ತಪ್ಪಿತಸ್ಥರು, ಗಲಭೆಗೆ ಕಾರಣರಾದವರು ಎಂಬ ಆರೋಪಕ್ಕೆ ಸಿಲುಕಿದವರನ್ನು ಶಿಕ್ಷಿಸಲು, ಅವರ ಮನೆಗಳನ್ನು ಬುಲ್ಡೋಜರ್ ಗಳಿಂದ ಧ್ವಂಸಗೊಳಿಸಲು ಆಡಳಿತಶಾಹಿ ದಬ್ಬಾಳಿಕೆಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಚಾಟಿ ಬೀಸಿರುವುದು ಸ್ವಾಗತಾರ್ಹ. ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಅಸ್ಸಾಂ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ನಿರ್ದಿಷ್ಟ ಸಮುದಾಯದ ಮನೆಗಳನ್ನೇ ಆಯ್ದು ಧ್ವಂಸಗೊಳಿಸುವ ಕ್ರಮ ಕಾನೂನುಬಾಹಿರ ಎಂಬುದನ್ನು ಸುಪ್ರೀಂ ನ್ಯಾಯಪೀಠ ಹಿಂದೆ ಕೂಡ ತಿಳಿಹೇಳಿತ್ತು. ಈಗ ಇಂಥ ಕಾನೂನು ಬಾಹಿರ ಕಾರ್ಯಾಚರಣೆಯಿಂದ ಸಂತ್ರಸ್ತರಾದವರಿಗೆ ತಲಾ ೧೦ ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿರುವುದು ಆಡಳಿತ ವರ್ಗದವರಿಂದ ಮತ್ತೊಮ್ಮೆ ಇಂಥ ಪ್ರಮಾದ ಪುನರಾವರ್ತನೆಗೊಳ್ಳದಿರಲು ನೀಡಿದ ‘ನ್ಯಾಯಚಿಕಿತ್ಸೆ’ಯೂ ಹೌದಾಗಿದೆ.

ಇತ್ತೀಚೆಗೆ ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿದ್ದ ತೆರವು ಕಾರ್ಯಾಚರಣೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಬಿಸಿ ಮುಟ್ಟಿಸಿರುವುದು ಬುಲ್ಡೋಜರ್ ನೀತಿ ಅನುಸರಿಸುವ ರಾಜ್ಯಗಳಿಗೆ ಆತ್ಮವಿಮರ್ಶೆಗೂ ಗುರಿಮಾಡಿದಂತಾಗಿದೆ. ಯಾವುದೇ ನೋಟೀಸ್ ನೀಡದೆ ಏಕಾಏಕಿ ಕಟ್ಟಡಗಳನ್ನು ಉರುಳಿಸಲು ಯಾರಿಗೂ ಅಧಿಕಾರವಿಲ್ಲ. ಮುನಿಸಿಪಾಲಿಟಿ ಕಾನೂನುಗಳಲ್ಲಿ ಏನೇ ಅವಕಾಶವಿದ್ದರೂ, ೧೫ ದಿನ ಮುಂಚಿತವಾಗಿ ನೋಟೀಸ್ ನೀಡದೆ ಕ್ರಮ ಕೈಗೊಳ್ಳುವಂತಿಲ್ಲ. ಆದರೆ ಇಲ್ಲಿ ‘ಕಾನೂನಿಗೆ ವಿರುದ್ಧವಾಗಿ ಯಾವುದೇ ನೋಟೀಸ್ ಅಥವಾ ಸಣ್ಣ ಸೂಚನೆಯನ್ನೂ ನೀಡದೆ ಮನೆಗಳನ್ನು ತೆರವು ಮಾಡುವುದು ಸಂವಿಧಾನಬಾಹಿರ; ಎಂದು ನ್ಯಾಯಾಲಯ ಅಭಿಪ್ರಾಯ ಪಡುವ ಮೂಲಕ ಸಾಂವಿಧಾನಿಕ ಮೌಲ್ಯಗಳನ್ನುಎತ್ತಿ ಹಿಡಿದಿದೆ. 

ಇದೇ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿರುವ ಪ್ರಸಂಗ ಕಟುಕರ ಮನವನ್ನೂ ಕಲುಕುವಂಥದ್ದು. ರಾಜಸ್ಥಾನದ ಜೈಪುರದಲ್ಲಿ ಮನೆ ತೆರವು ಕಾರ್ಯಾಚರಣೆ ವೇಳೆ ಬಾಲಕಿಯೊಬ್ಬಳು ಪುಸ್ತಕಗಳ ಸಮೇತ ಹೊರಗೆ ಓಡಿ ಬರುತ್ತಿರುವ ದೃಶ್ಯಕ್ಕೆ ಆಘಾತ ವ್ಯಕ್ತಪಡಿಸಿರುವ ಕೋರ್ಟ್, ಸರಕಾರ ಆಡಳಿತ ನಡೆಸಿದ ರೀತಿ ಇದೇನಾ ಎಂದು ಪ್ರಶ್ನಿಸಿರುವುದು ಸೂಕ್ತವೇ ಆಗಿದೆ. ಸಾವಿರ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಸರಿ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವುದು ನ್ಯಾಯಶಾಸ್ತ್ರದ ಬಹುದೊಡ್ದ ಆಶಯ. ಆದರೆ, ಯಾರೋ ತಪ್ಪು ಮಾಡಿದ ಎಂದ ಮಾತ್ರಕ್ಕೆ ಆತನ ಮನೆಯ ಇತರೆ ಸದಸ್ಯರನ್ನೂ ಶಿಕ್ಷೆಗೆ ಗುರಿ ಮಾಡುವುದು ಅಮಾನವೀಯ ಕ್ರಮವೇ ಸರಿ. ಇದು ನಾಗರಿಕ ಸರಕಾರದ ಆಡಳಿತ ವೈಖರಿಯಲ್ಲ.

ಕೋಮು ಗಲಭೆಗೆ, ಸಂಘರ್ಷಕ್ಕೆ ಕಾರಣರಾಗುವ ಕಿಡಿಗೇಡಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆದರೆ, ಅಂಥ ಶಿಕ್ಷೆಗಳು ನ್ಯಾಯವ್ಯಾಪ್ತಿಯಲ್ಲಿ ಅವರನ್ನಷ್ಟೇ ಗುರಿ ಮಾಡುವಂತಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯಾಂಗವೇ ಕೋರ್ಟ್ ನಂತೆ ವರ್ತಿಸಿ, ಶಿಕ್ಷೆ ನೀಡುವ ಚಾಳಿಯನ್ನು ನಿಲ್ಲಿಸಬೇಕು. ಬುಲ್ಡೋಜರ್ ನೀತಿ ಇನ್ನಾದರೂ ಅಂತ್ಯಗೊಳ್ಳಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೩-೦೪-೨೦೨೫ 

ಚಿತ್ರ ಕೃಪೆ: ಅಂತರ್ಜಾಲ ತಾಣ