ನಾಗರೀಕತೆಯ ಬೆನ್ನೇರಿ ಸಂಸ್ಕೃತಿಯ ಶಿಕಾರಿ (ಭಾಗ - 2)

ನಾಗರೀಕತೆಯ ಬೆನ್ನೇರಿ ಸಂಸ್ಕೃತಿಯ ಶಿಕಾರಿ (ಭಾಗ - 2)

ರಾಮಾಯಣ ಕಥೆ ತಿಳಿಯದವರಿಲ್ಲ.‌ ರಾಮಾಯಣದಲ್ಲಿ ಕೈಕೇಯಿ ತನ್ನ‌ ಗಂಡ ದಶರಥನಲ್ಲಿ ಬಾಕಿ ಉಳಿಸಿಕೊಂಡಿದ್ದ ವರವನ್ನು ಕೇಳಿ ಕೌಸಲ್ಯೆಯ ಮಗ ಶ್ರೀರಾಮನಿಗೆ ವನವಾಸವಾದುದರ ಜೊತೆಗೆ ಪರಿಣಾಮವು ಘೋರ ರೂಪ ಪಡೆದು ಕೊನೆಗೆ ತನ್ನ ಗಂಡನನ್ನೇ ಕಳೆದುಕೊಳ್ಳುತ್ತಾಳೆ! ಕೌಸಲ್ಯೆ ಸುಮಿತ್ರೆಯರ ವೈಧವ್ಯಕ್ಕೂ‌ ತಾನು ಕಾರಣಳಾಗುತ್ತಾಳೆ! ಮಕ್ಕಳ ಪಿತೃ ವಿಯೋಗದ ದುಃಖಕ್ಕೆ ಸ್ವಯಂ ತಾನೇ ಕಾರಣಳಾಗುತ್ತಾಳೆ! ಅಯೋಧ್ಯೆಯ ಜನ ಸಾಮಾನ್ಯರ ಕೆಂಗಣ್ಣಿಗೂ ಗುರಿಯಾಗುತ್ತಾಳೆ!  ಏನನ್ನು ಆಸೆಪಟ್ಟು ವರ ಕೇಳಿದಳೋ, ಯಾವ ಸುಖಾಭಿಲಾಶೆಯಿಂದ ಕ್ರಮಿಸಿ ಮಾತು ಬೆಳೆಸಿದಳೋ, ಅದ್ಯಾವುದೂ ಕೈಗೂಡಲೇ ಇಲ್ಲ! ಬದಲಿಗೆ ದೊಡ್ಡ ದುಃಖದ ಕಡಲಿಗೆ ಎಸೆಯಲ್ಪಟ್ಟಳು! ಅರಮನೆಯು ಒಂದು ರಾತ್ರಿ ಬೆಳಗಾಗುವುದರೊಳಗೆ ಕತ್ತಲೆಯ ಕೂಪಕ್ಕೆ ನೂಂಕಲ್ಪಟ್ಟಿತ್ತು! ಇಡೀ ಅಯೋಧ್ಯೆ ಸ್ಮಶಾನ ಸದೃಶವಾಗಿತ್ತು! ದೊಡ್ಡ ಲಾಭ ಗಳಿಸುವ ದುರಾಸೆಯಿಂದ ದಿಕ್ಕೊಂದು ಬಂಗಾರದ ಮೊಟ್ಟೆಯಿಡುತ್ತಿದ್ದ ಕೋಳಿಯನ್ನೇ ಕೊಂದು ಬದುಕಿನ ದುರಂತಕ್ಕೆ ನಾಂದಿ ಹಾಡಿದ್ದು ಕೈಕೇಯಿ ಹಾಗೂ ಮಂಥರೆಯ ಸ್ವಾರ್ಥ ಲಾಲಸೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. 

ನಮ್ಮ‌ ಜೀವನದಲ್ಲಿಯೂ ನಾವು ಇಂತಹ ಸನ್ನಿವೇಶಗಳನ್ನು ದಾಟಿಯೋ ದಾಟಲಾಗದೆಯೋ ಅನುಭವಿಸಿರುತ್ತೇವೆ. ಎಷ್ಟೋ ವರ್ಷಗಳಿಂದ ಸೊಂಪಾಗಿ ಬೆಳೆದಿದ್ದ ಸ್ನೇಹ, ಸಂಬಂಧ ಯಾವುದೋ ಅಸೆಗೆ ಹಾತೊರೆದು ನುಚ್ಚು ನೂರಾಗಿ ಹೋದ ನಿದರ್ಶನಗಳು ನನ್ನ ನಿಮ್ಮೆಲ್ಲರ ಜೀವನದಲ್ಲಿ ನಡೆದೇ ನಡೆದಿರುತ್ತದೆ ಎಂಬುದು ನನ್ನ‌ ಭಾವನೆ. 

ನಮ್ಮ ನಡೆ - ನುಡಿ ನಮ್ಮ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ, ಸದೃಢಗೊಳಿಸುವ ನಿಟ್ಟಿನಲ್ಲಿ ಸಾಫಲ್ಯ ಕಾಣಬೇಕೇ ವಿನಃ ಸಂಬಂಧಗಳನ್ನು ಕೆಡೆದುರುಳಿಸಿ ಬಲಿತೆಗೆದುಕೊಳ್ಳುವಂತಾಗಬಾರದು! ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಲೋಚಿಸಿ ಜಾಗೃತೆಯಿಂದ ಹೆಜ್ಜೆಯಿಡುವ ಅವಶ್ಯಕತೆಯಿದೆ. ನಮ್ಮ ನುಡಿ, ನಮ್ಮ‌ ನಡೆ, ನಮ್ಮ‌ ಕೆಲಸ ಕಾರ್ಯ, ನಮ್ಮ ಹಾವಾಭಾವ ಎಲ್ಲದರ ಮೇಲೂ ಕ್ಷಣಕ್ಷಣವೂ ಹಿಡಿತವಿರಬೇಕಾಗುತ್ತದೆ. ಹೃದಯದ ಮಿಡಿತವಿರಬೇಕಾಗುತ್ತದೆ.

ಸಾಲ ಕೇಳಿ, ಸಹಾಯ ಕೇಳಿ, ಬುದ್ದಿ ಮಾತುಗಳನ್ನು ಹೇಳಿ, ಮಾತನಾಡಲೇ ಬೇಕಾದಲ್ಲಿ ಅನಗತ್ಯ ಮೌನ‌ಮಾಡಿ, ಮೌನ‌ಮಾಡಬೇಕಾದಲ್ಲಿ ಅನಗತ್ಯ ಮಾತನಾಡಿ, ಕೆಲವೊಮ್ಮೆ ಮಾತು ಕೇಳದೇ, ಬುದ್ದಿ ಮಾತು ಕೇಳದೇ, ಹೀಗೇ ಹಲವು ಬಗೆಯಿಂದ ಎಷ್ಟೋ ಸ್ನೇಹ ಸಂಬಂಧಗಳು ಮುರಿದು ಬಿದ್ದು ಮತ್ತೆ ಬೆಸೆಯದಿರುವಷ್ಟರ ಮಟ್ಟಿಗೆ ಹಳ್ಳ ಹಿಡಿದ ನಿದರ್ಶನಗಳಿವೆ. ಕೆಲವೊಮ್ಮೆ ಔದಾರ್ಯದ ಒರತೆ ಹೆಚ್ಚಾಗಿ, ಇನ್ನೂ ಕೆಲವೊಮ್ಮೆ ಔದಾರ್ಯದ ಕೊರತೆಯಿಂದಾಗಿ ಇಂತಹ ಸಂದಿಗ್ದತೆಗೆ ನೂಕಲ್ಪಟ್ಟಿರುತ್ತೇವೆ. ಇದನ್ನೆಲ್ಲಾ ಸಂಬಾಳಿಸಿಕೊಂಡು ಹೋಗುವುದಿದೆಯಲ್ಲಾ, ಅದೇ ಜೀವನದಲ್ಲಿ ನಾವು ಮಾಡಬೇಕಾದ ನಿಜವಾದ  ಯಾಗ, ನಿಜವಾದ ಯಜ್ಞ, ದೇವರ ನಿಜವಾದ ಪೂಜೆ. 

ಹೇಗೆ ಯಜ್ಞ ಅಥವಾ ಯಾಗದ ಧೀಕ್ಷೆ ಪಡೆದವ ಸಂಕಲ್ಪ ಬದ್ಧನಾಗಿ ವ್ಯವಹರಿಸುತ್ತಾನೋ ಆ ದೀಕ್ಷಾ ಬದ್ದತೆ ಪ್ರತಿಯೊಬ್ಬರಲ್ಲಿಯೂ ಇರಬೇಕಾಗುತ್ತದೆ! ಅದಿಲ್ಲವಾದಲ್ಲಿ ಕೈಕೇಯಿಯ ಪಾಡು ನಮ್ಮ ಪಾಡಾಗುತ್ತದೆ. ಇದನ್ನೆಲ್ಲಾ ತಪ್ಪಿಸುವ ನಿಟ್ಟಿನಲ್ಲಿ ನಾವು - ನೀವು ಯಾಕೆ ಯೋಚಿಸಬಾರದು? ಪ್ರಯತ್ನಿಸ ಬಾರದು? ಆ ಪ್ರಜ್ಞೆಯಿಂದ ನಾವ್ಯಾಕೆ ನಮ್ಮ‌ ಪ್ರತಿಯೊಂದು ಹೆಜ್ಜೆಯನ್ನು ಜಾಗೃತೆಯಿಂದ ಇಡಬಾರದು? ನಮ್ಮ ನಡುವೆ ಮತ್ತೊಂದು ರಾಮಾಯಣ ಮೊಳಕೆಯೊಡೆಯದಿರಲಿ, ಅಲ್ಲವೇ? ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?

- “ಮೌನಮುಖಿ” ಆತ್ರಾಡಿ ಪೃಥ್ವಿರಾಜ ಹೆಗ್ಡೆ, ಉಡುಪಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ