ನಾಗರ ಪಂಚಮಿ - ಪರಿಸರ ಪಂಚಮಿಯಾಗಲಿ

ನಾಗರ ಪಂಚಮಿ - ಪರಿಸರ ಪಂಚಮಿಯಾಗಲಿ

[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ ಈ ಚಿತ್ರ 'ಹಿಂದೂ' ಪತ್ರಿಕೆಯಲ್ಲಿ ಪ್ರಕಟಿತವಾದದ್ದು.]

 

   ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಹೇಳುತ್ತಿದ್ದ 'ನಾಗರಹಾವೇ, ಹಾವೊಳು ಹೂವೇ, ಬಾಗಿಲ ಬಿಲದಲಿ ನಿನ್ನಯ ಠಾವೇ, ಕೈಗಳ ಮುಗಿವೆ, ಹಾಲನ್ನೀವೆ, ಈಗಲೆ ಹೊರಗೆ ಪೋ ಪೋ ಪೋ ಪೋ' ಎಂಬ ಪದ್ಯ ಈಗಲೂ ನೆನಪಿಗೆ ಬರುತ್ತಿರುತ್ತದೆ.  ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.

     ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ.

     ನಾಗರಪಂಚಮಿಯನ್ನು ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲೂ ಭಕ್ತಿಭಾವದಿಂದ ಆಚರಿಸುತ್ತಾರಾದರೂ, ತುಳುನಾಡಿನಲ್ಲಿ 'ನಾಗ'ನಿಗೆ ವಿಶೇಷ ಮಹತ್ವ ನೀಡುತ್ತಾರೆ. ನಾಗಾರಾಧನೆಗೆ ಮಹತ್ವವಿರುವ ಅಲ್ಲಿ, 'ನಾಗಬನ'ಗಳ ಹೆಸರಿನಲ್ಲಾದರೂ ಸ್ವಲ್ಪಮಟ್ಟಿಗೆ ಹಸಿರು ಉಳಿದಿದೆ ಎನ್ನಲು ಅಡ್ಡಿಯಿಲ್ಲ. ಆದರೆ ಆ ನಾಗಬನಗಳನ್ನೂ ಕಾಂಕ್ರೀಟೀಕರಣ ಮಾಡುತ್ತಿರುವುದು ದುರ್ದೈವ.

     ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾವು ಹಾಲು ಕುಡಿಯುವುದೆಂದೇನೂ ಇಲ್ಲ. ಕುಡಿಯಲು ನೀರಿಲ್ಲದಿದ್ದರೆ, ಬಾಯಾರಿಕೆಯಾದರೆ ಕುಡಿಯುತ್ತದೆ. ಹಾಲನೆರೆಯುವ ಶೇ. 95ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು. 

     ನಗರ ಪ್ರದೇಶಗಲಲಗಲಂತೂ ಹಾವಿಗೆ ತಾವೇ ಇಲ್ಲ. ಹೊರವಲಯಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳ ವಾಸಸ್ಥಾನಗಳನ್ನು ನಾಶಪಡಿಸಿ ಅವುಗಳ ಹೆಸರಿನಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತಿರುವುದು ಎಂತಹ ವಿಪರ್ಯಾಸ!  ಉದ್ದೇಶ 'ನಾಗದೇವ'ನನ್ನು ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೆ ಆಗಿದ್ದಲ್ಲಿ ಹಬ್ಬವನ್ನು ಈ ರೀತಿ ಆಚರಿಸಬಹುದಲ್ಲವೇ?

೧. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.

೨. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.

೩. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.

೪. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.

೫. ಇಂತಹ  ಸೂಕ್ತವೆನಿಸುವ  ಇತರ ಕಾರ್ಯಗಳನ್ನು ಕೈಗೊಳ್ಳಬಹುದು.

     ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸಲಿ ಎಂಬುದು ಎಲ್ಲಾ ಪರಿಸರ ಪ್ರೇಮಿಗಳ ಪರವಾಗಿ ಈ 'ನಾಗರಾಜ'ನ ಆಶಯ!

-ಕ.ವೆಂ.ನಾಗರಾಜ್.

 

 

 

Comments

Submitted by bhalle Fri, 08/09/2013 - 23:33

<<ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ.>> ಉರಗ ಉಗ್ರವಲ್ಲೆಂದು ಉಲಿದವರಿಗೆ ಉಘೇ ಉಘೇ ...