ನಾಗರ ಪಂಚಮಿ ಹಬ್ಬ ನಾಡಿಗೆ ದೊಡ್ದದು !

ನಾಗರ ಪಂಚಮಿ ಹಬ್ಬ ನಾಡಿಗೆ ದೊಡ್ದದು !

ಆಷಾಢ ಮಾಸ ಕಳೆದು ಬರುವ ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬವೇ ನಾಗರ ಪಂಚಮಿ. ಒಂದು ರೀತಿಯಲ್ಲಿ ನೋಡಿದರೆ ಹಬ್ಬಹರಿದಿನಗಳ ಪ್ರಾರಂಭ ನಾಗರ ಪಂಚಮಿ ಹಬ್ಬಗದಿಂದಲೇ ಶುರುವಾಗುತ್ತದೆ. ನಂತರ ವರಮಹಾಲಕ್ಷ್ಮಿ ಹಬ್ಬ, ಶ್ರೀಕೃಷ್ಣ ಜನ್ಮಾಷ್ಟಮಿ, ಗೌರಿ ಗಣೇಶ ಹಬ್ಬ, ನವರಾತ್ರಿ, ವಿಜಯದಶಮಿ, ದೀಪಾವಳಿ, ಷಷ್ಟಿ ಮಹೋತ್ಸವ, ಮಕರ ಸಂಕ್ರಾಂತಿ ಹೀಗೆ ಹಬ್ಬಗಳ ಸಾಲು ಮುಂದುವರೆಯುತ್ತವೆ.

ನಂಬಿಕೆ ಎಂಬ ಬೇರುಗಳಲ್ಲಿ ಅಡಗಿದೆ ಎಲ್ಲಾ ಹಬ್ಬಗಳ ಮೂಲಸ್ವರೂಪ. ಶ್ರಾವಣ ಮಾಸದ ಆಗಮನದೊಂದಿಗೆ ಸಾಲು ಸಾಲು ಹಬ್ಬಗಳ ಭರಾಟೆ. ಎಷ್ಟೇ ಕಷ್ಟವಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ವೈಶಿಷ್ಠ್ಯತೆಯೇ ವಿಭಿನ್ನ. ಭಾರತೀಯರ ರಕ್ತದಲ್ಲಿ ಅದು ಹಾಸುಹೊಕ್ಕಾಗಿದೆ. ಈ ಹಬ್ಬಗಳ ಆಚರಣೆ ಪೀಳಿಗೆಯಿಂದ ಪೀಳಿಗೆಗೆ ಸಾಗಿಸುವ ಉದ್ದೇಶವೂ ಆಚರಣೆಯ ಹಿಂದೆ ಇರಬಹುದು. ಸತ್ಯ ಮತ್ತು ಸತ್ವ ಎರಡೂ ಅಡಗಿದೆ ಹಬ್ಬದೊಳಗಡೆ. ಅಲ್ಲಿ ನಂಬಿಕೆ, ವಿಶ್ವಾಸ, ಬಾಂಧವ್ಯ, ಬೆಸುಗೆಯ ಬೇರುಗಳಿವೆ. ಬೇರುಗಳಿಗೆ ಪೆಟ್ಟಾಗದಂತೆ, ಗಾಯಗಳಾಗದಂತೆ ನಮ್ಮ ಆಚರಣೆಗಳಿರಬೇಕು.

ಈಗ ಹೇಳಹೊರಟಿರುವುದು ನಾಗರಪಂಚಮಿ ಹಬ್ಬದ ಬಗ್ಗೆ. ಪ್ರಸಕ್ತ ಕೋವಿಡ್ ಸನ್ನಿವೇಶದಲ್ಲಿ ಹೊರ ಹೋಗಲಾಗದಿದ್ದರೂ ಅವರವರ ಮನೆಯಲ್ಲೇ ಚ್ಯುತಿ ಬಾರದಂತೆ ಆಚರಿಸೋಣ. ಶ್ರಾವಣ ಮಾಸ ಶುಕ್ಲಪಕ್ಷ ಪಂಚಮಿಯ ದಿನ ನಾಗದೇವತೆ ಅಥವಾ ನಾಗರಾಜನ ಪೂಜೆ. ನಾಗನ ಹುತ್ತಕ್ಕೆ ಹಾಲು ಎರೆಯುವುದು, ಬೆಳ್ಳಿಯ ಆಭರಣಗಳನ್ನು ನಾಗದೇವರಿಗೆ ಅರ್ಪಿಸುವುದು ಇದೆಲ್ಲ ಭಕ್ತರ ನಂಬಿಕೆಗೆ ಬಿಟ್ಟ ವಿಷಯ. ಈ ಹಬ್ಬದ ಆಚರಣೆಯ ಹಿಂದಿನ ಪುರಾಣ ವಿಷಯಗಳನ್ನು ನಾನಾ ರೀತಿಯಲ್ಲಿ ನಾವು ಓದಬಹುದು.

ಯಮುನಾ ತೀರದಲ್ಲಿ ಕೃಷ್ಣ ಚೆಂಡಿನಾಟವನ್ನು ತನ್ನ ಗೆಳೆಯರನ್ನೆಲ್ಲ ಸೇರಿಸಿಕೊಂಡು ಆಡುವ ಸಮಯದಲ್ಲಿ ಚೆಂಡು ನದಿಗೆ ಬಿತ್ತು. ಚೆಂಡಿಗಾಗಿ ನೀರಿಗಿಳಿದ ಕೃಷ್ಣ ಯಮುನೆಯಲ್ಲಿ ಮುಳುಗಿದ. ಕಾಳಿಂಗ ಸರ್ಪದ ಜೊತೆ ಕಾಳಗವಾಡಿ ಬಾಲಕ ಕೃಷ್ಣ ಇದೇ ದಿನದಂದು ಮಣಿಸಿದ್ದಾದರಿಂದ ಈ ದಿನವನ್ನು ನಾಗರಪಂಚಮಿ ಎಂದು ಆಚರಿಸಲಾಗುತ್ತದೆ ಎಂದು ತಿಳಿದು ಬರುತ್ತದೆ.

ಇನ್ನೊಂದೆಡೆ ಸ್ಕಂದಪುರಾಣದಲ್ಲಿ ಕಂಡಂತೆ ದೇವಶರ್ಮನೆಂಬವನಿಗೆ ೮ ಮಂದಿ ಗಂಡು ಮಕ್ಕಳು, ಓರ್ವಳೇ ಹೆಣ್ಣು ಮಗಳು. ಗರುಡನಿಂದ ಪೆಟ್ಟು ತಿಂದ ನಾಗರಹಾವೊಂದು ಇದೇ ಹೆಣ್ಣು ಮಗಳ ಉಪಚಾರದಿಂದ ಚೇತರಿ‌ಸಿಕೊಳ್ಳುತ್ತದೆ. ಉಪಕಾರ ಸ್ಮರಣೆಗಾಗಿ ದಿನಾ ಒಂದು ತೊಲೆ ಬಂಗಾರ ನೀಡುತ್ತದೆ. ಇದನ್ನು ಕಂಡ ಸಹೋದರನೊಬ್ಬ ಆ ಸರ್ಪವನ್ನು ಕೊಲ್ಲಲು ಪ್ರಯತ್ನಿಸಿದಾಗ ಆ ಹಾವು ಎಲ್ಲಾ ಗಂಡು ಮಕ್ಕಳನ್ನು ಕೊಲ್ಲುತ್ತದೆ. ನಿತ್ಯವೂ ಹಾಲು ನೀಡುತ್ತಿದ್ದ ಆ ಕುವರಿ ದುಃಖಿಸಿ, ಅಣ್ಣಂದಿರನ್ನು ಮರಳಿಕೊಡು, ಇಲ್ಲದಿದ್ದರೆ ನನ್ನ ಶಿರವನ್ನೇ ತುಂಡರಿಸುವೆ ಎಂದು ಹೇಳುವಳು. ಆಗ ಶ್ರೀಮನ್ನಾರಾಯಣನು ವಾಸುಕಿಗೆ ಹೇಳಿ ಎಲ್ಲಾ ಸಹೋದರರನ್ನು ಬದುಕಿಸುತ್ತಾನೆ. ಸಂತೋಷಗೊಂಡ ಕನ್ನಿಕೆ ಕುಣಿದಾಡುತ್ತಾಳೆ. ಈ ಅಣ್ಣ-ತಂಗಿ ಪ್ರೀತಿ, ಅಣ್ಣಂದಿರು ಮರಳಿ ಬಂದ ದಿನವೇ ನಾಗರಪಂಚಮಿ ಆಚರಣೆಯಾಯಿತಂತೆ.

ಜನಮೇಜಯ ಅರಸ ತನ್ನ ತಂದೆ ಪರೀಕ್ಷಿತನ ಸಾವಿಗೆ ಕಾರಣವಾದ ಸರ್ಪಗಳ ಸಂತತಿಯ ಸರ್ವನಾಶಕ್ಕಾಗಿ ಸರ್ಪಯಜ್ಞ ಮಾಡಿದನಂತೆ. ಸರ್ಪಗಳ ಬಂಧುವಾದ ಆಸ್ತಿಕ ಋಷಿಯು ರಾಜನಲ್ಲಿಗೆ ಬಂದು ಬಹು ವಿಧವಾಗಿ ಯಜ್ಞ ನಿಲ್ಲಿಸೆಂದು ಕೇಳಿಕೊಂಡನಂತೆ. ಪ್ರಾಣಿ ಹಿಂಸೆ ಮಹಾಪಾಪ ಮಾಡದಿರು, ಇದರಿಂದ ಲೋಕಕ್ಷೇಮ ಖಂಡಿತಾ ಇಲ್ಲ ಎಂದು ಹೇಳಿದಾಗ ನಿಲ್ಲಿಸಿ ಹಾವುಗಳನ್ನು ರಕ್ಷಿಸಿದ ದಿನವೇ ನಾಗರ ಪಂಚಮಿಯ ದಿನವಂತೆ.

ವೈಜ್ಞಾನಿಕವಾಗಿ ನಾವು ನೋಡಿದರೆ ಈ ಶ್ರಾವಣ ಮಾಸದಲ್ಲಿ ತುಂಬಾ ಮಳೆ. ಈ ಮಳೆಯ ನೀರು ಎಲ್ಲಾ ಕಡೆ ಆವರಿಸಿ ಬಿಲದೊಳಗಿನ ಹಾವುಗಳು ಹೊರಬಂದು ಮನುಷ್ಯರಿಗೆ ಭಯದ ವಾತಾವರಣವನ್ನು ಸೃಷ್ಟಿ ಮಾಡುತ್ತವೆ. ರೈತಾಪಿ ಜನರಿಗೆ, ಕೃಷಿಕರಿಗೆ ತುಂಬಾ ತೊಂದರೆಯಾಗುತ್ತದೆ. ಈ ಅಪಾಯವನ್ನು ದೂರಮಾಡಲು ಈ ನಾಗರಪಂಚಮಿಯನ್ನು ಆಚರಿಸುವುದು ರೂಢಿಗೆ ಬಂತು‌.

ಸಿಂಧೂ ಸಂಸ್ಕೃತಿಯ ಉತ್ಕನನ ಸಮಯದಲ್ಲಿ ಹಲವಾರು ನಾಗಚಿತ್ರಗಳು, ನಾಗಕಲ್ಲುಗಳ ಪುರಾವೆಗಳು ಸಿಕ್ಕಿದೆಯಂತೆ. ಪುರಾತನ ಸಂಸ್ಕೃತಿಯಲ್ಲಿ ಸಹ ನಾಗಾರಾಧನೆಯನ್ನು ನಾವು ಕಾಣಬಹುದು. ಶಿಲಾಯುಗದ ಕಾಲದಿಂದಲೂ ಈ ಹಬ್ಬದ ಬಗ್ಗೆ ಕುರುಹುಗಳಿವೆಯಂತೆ. ನಾಗರ ಹಾವಿನ ಕಚ್ಚುವಿಕೆಯಿಂದ ಸಂಭವಿಸುವ ಸಾವಿನ ಭಯವೇ ಅದನ್ನು ಪೂಜಾರ್ಹ ಮಾಡಿರಬಹುದು ಎಂದೂ ಹಲವರ ಅಭಿಪ್ರಾಯ. ಪುರಾಣಗಳ ಕಥೆ ಏನೇ ಇದ್ದರೂ, ಹಳೆಯ ಶಿಲಾಯುಗದಂತಹ ಸಮಯದಲ್ಲಿ ಹಾವುಗಳ ಸಂಖ್ಯೆ ಬಹಳ ಜಾಸ್ತಿ ಇದ್ದಿರಬಹುದು. ಆ ಸಮಯದಲ್ಲಿ ಭಯ ಭಕ್ತಿಯಿಂದ ಆದರ ಪೂಜೆ ಮಾಡಿದರೆ ಅದು ನಮಗೆ ಕಚ್ಚದೇ ಇರಬಹುದು ಎಂಬ ನಂಬಿಕೆಯಿಂದಲೂ ನಾಗನಿಗೆ ಪೂಜೆ ಮಾಡುವುದು ಜಾರಿಗೆ ಬಂದಿರಬಹುದು.

ಇದನ್ನು ಕೆಲವೆಡೆ ನಾಗ ಪಂಚಮಿಯನ್ನು ‘ಅಣ್ಣ ತಂಗಿ’ ಹಬ್ಬವೆಂದೇ ಕರೆಯುತ್ತಾರೆ. ಹೆಚ್ಚಿನ ಎಲ್ಲಾ ದೇವಾಲಯಗಳಲ್ಲಿ ನಾಗನಕಲ್ಲುಗಳಿವೆ. ಕೆಲವು ಕಡೆ ನಾಗನ ಕಟ್ಟೆಗಳಿವೆ. ಎಲ್ಲಾ ಕಡೆ ಹಾಲೆರೆಯುವ ಸಂಪ್ರದಾಯವಿದೆ. ವಿಶೇಷ ಪೂಜೆ ನಡೆಯುತ್ತದೆ‌. ಹಲವೆಡೆ ಹೆಣ್ಣು ಮಗಳು ತವರುಮನೆಗೆ ಬಂದು ಹಬ್ಬದ ಸಂಭ್ರಮವನ್ನು ಸಹೋದರರ ಜೊತೆ ಆಚರಿಸುವಳು. ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿ ಸಂತಸ ಪಡುವರು. ಸಿಹಿ ಖಾದ್ಯಗಳನ್ನು ಮಾಡುವರು. ಹಬ್ಬಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಸಂಸ್ಕೃತಿಯ ಪ್ರತೀಕಗಳಾಗಿವೆ.

ಜೀವಜಗತ್ತು ಎಂದಮೇಲೆ ಎಲ್ಲವೂ ಒಂದಕ್ಕೊಂದು ಪೂರಕವಾಗಿರಬೇಕು. ಜಗದ ನಿಯಮವದು. ಜೀವ ಸರಪಳಿಯು ಜಗತ್ತಿನ ಉಳಿಯುವಿಕೆಗೆ ಅತ್ಯಂತ ಅಗತ್ಯ. ಇಲಿಗಳನ್ನು ಹಾವು ತಿನ್ನುವುದು, ಹಾವನ್ನು ನವಿಲು, ಮುಂಗುಸಿ, ಗರುಡ ಅಥವಾ ಹದ್ದುಗಳು ತಿನ್ನುವುದು ಇವು ಆಹಾರ ಸರಪಳಿಯ ಸಹಜ ಭಾಗ. ನಾವು ಹಾವುಗಳನ್ನು ನಾಶ ಮಾಡುತ್ತಾ ಹೋದಂತೆ ಕ್ರಮೇಣ ಇಲಿಗಳ ಸಂತತಿ ಅಧಿಕವಾಗಿ ನಮ್ಮ ಆಹಾರವೇ ನಾಶವಾಗುತ್ತದೆ. ಹಾವುಗಳು ಹರಿದಾಡುತ್ತಿದ್ದ ಜಾಗದೆಲ್ಲೆಡೆ ನಾವು ಮನೆ, ಕಟ್ಟಡಗಳನ್ನು ಕಟ್ಟಿದ್ದೇವೆ. ಹಾವಿಗೆ ನೆಲೆಯೇ ಇಲ್ಲವಾಗಿದೆ. ಅದಕ್ಕೇ ಅವುಗಳು ಈಗೀಗ ಮನೆಯ ಅಂಗಳದಲ್ಲೇ ಕಾಣಿಸ ತೊಡಗಿವೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನಲ್ಲಿ ಹಾವುಗಳು ಹೆಚ್ಚು ಪೂಜಾರ್ಹ. ಪ್ರತಿಯೊಂದು ದೇವಸ್ಥಾನದಲ್ಲಿ ನಾಗ ಬನ ಇದ್ದೇ ಇರುತ್ತದೆ. ಆ ಬನದಲ್ಲಿ ಹಲವಾರು ನಾಗನ ಶಿಲ್ಪವಿರುವ ಕಲ್ಲು ಇರುತ್ತದೆ. 

ಈ ನಾಗ ಪಂಚಮಿಯ ದಿನ ಭೂಮಿಯನ್ನು ಅಗತೆ(ಅಗೆಯ) ಮಾಡಬಾರದು ಎಂಬ  ಪ್ರತೀತಿ ಇದೆ. ಏಕೆಂದರೆ ಹಾವಿನ ಮೊಟ್ಟೆಗಳು ನೆಲದ ಅಡಿಯ ಬಿಲಗಳಲ್ಲಿ ಇರುವ ಸಾಧ್ಯತೆ ಇರುತ್ತದೆ. ಯಾವುದೇ ಜಾತಿಯ ಹಾವುಗಳನ್ನು ನಾವು ಕೊಲ್ಲಬಾರದು. ಹಾವನ್ನು ನೋಡುವಾಗ ಹೆದರಿಕೆಯಾಗುವುದು ಸಹಜ. ಬಹಳಷ್ಟು ಹಾವುಗಳು ನಿರುಪದ್ರವಿಗಳು ಮತ್ತು ವಿಷ ರಹಿತವಾಗಿರುತ್ತವೆ. ಆದರೆ ಹಾವು ಎಂಬ ಜೀವಿಯೇ ನಿಗೂಢ. ಹಾವುಗಳನ್ನು ನಾವು ಯಾವತ್ತೂ ಸಾಯಿಸಬಾರದು. ಪರಿಸರ ರಕ್ಷಣೆಯಲ್ಲಿ ಹಾವುಗಳ ಪಾತ್ರವೂ ಅಧಿಕವಾಗಿದೆ. 

ಈಗ ನಾಗ ಬನಗಳು ಕಾಂಕ್ರೀಟ್ ಕಾಡುಗಳಾಗಿವೆ. ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವುಗಳು ವಾಸಿಸುತ್ತವೆ. ಆದರೆ ನಾವು ನಾಗಬನಗಳನ್ನು ಹೊಸದಾಗಿ ರಚನೆ ಮಾಡುವಾಗ ಹುತ್ತವನ್ನೇ ನಾಶ ಮಾಡಿಬಿಟ್ಟಿದ್ದೇವೆ. ಇದರಿಂದಾಗಿ ಹಾವುಗಳಿಗೆ ವಾಸಿಸಲು ಹುತ್ತಗಳೇ ಇಲ್ಲ. ನಮಗೆ ಹಾವುಗಳ ನೆನಪಾಗುವುದು ನಾಗರ ಪಂಚಮಿಯ ದಿನದಂದೇ. ಉಳಿದ ದಿನಗಳಲ್ಲಿ ಅವುಗಳನ್ನು ವಿಚಾರಿಸುವವರೇ ಇಲ್ಲ. ನಾಗಬನಗಳಲ್ಲಿರುವ ಹುತ್ತಗಳನ್ನು ಹಾಗೇ ಬಿಟ್ಟು ಬಿಡಿ. ಹಾವುಗಳಿಗೆ ವಾಸಿಸಲು ಅದೊಂದು ನೆಲೆಯಾಗಲಿದೆ. ಅದಕ್ಕೆ ತೊಂದರೆ ಕೊಡದೇ ಹೋದರೆ ಅದು ನಮ್ಮನ್ನು ಖಂಡಿತವಾಗಿಯೂ ಕಚ್ಚುವುದಿಲ್ಲ. 

ಹಾವಿನ ಬಗ್ಗೆ ಹಲವಾರು ಮಿಥ್ಯಗಳಿವೆ. ಹಾವು ಖಂಡಿತಕ್ಕೂ ದ್ವೇಷ ಸಾಧಿಸುವುದಿಲ್ಲ. ಅದರ ಮೆದುಳು ಕಳೆದು ಹೋದ ಘಟನೆಗಳನ್ನು ನೆನಪಿಡುವಷ್ಟು ಬಲಿತಿಲ್ಲ. ಹಾವಿಗೆ ಕಿವಿ ಇಲ್ಲ. ಆದರೆ ನಾವು ನಡೆದಾಡುವುದರಿಂದ ಆಗುವ ನೆಲದ ಕಂಪನಗಳನ್ನು ಆಧರಿಸಿ ಅವುಗಳು ತಮ್ಮ ಚಲನೆಯನ್ನು ನಿರ್ಧರಿಸುತ್ತವೆ. ಹಾವುಗಳು ಹಾಲು ಕುಡಿಯುವುದಿಲ್ಲ. ಹಾಲು ಹಾವಿನ ಆಹಾರವೂ ಅಲ್ಲ. ಆದುದರಿಂದ ಸಂಪ್ರದಾಯದ ನೆಪದಲ್ಲಿ ಹಾವಿಗೆ ಬಲವಂತವಾಗಿ ಹಾಲನ್ನು ಕುಡಿಸಬೇಡಿರಿ. ಅದು ಅಸ್ವಸ್ಥವಾಗುತ್ತದೆ ಅಥವಾ ಸತ್ತೇ ಹೋಗುವ ಸಾಧ್ಯತೆ ಇದೆ.   

ವೈಜ್ಞಾನಿಕ ಕಾರಣಗಳು ಏನೇ ಇರಲಿ, ಶೃದ್ಧಾ ಸಂಪ್ರದಾಯದ ನಾಗರ ಪಂಚಮಿಯ ಆಚರಣೆ ಮಾಡೋಣ. ಹಾವುಗಳನ್ನು ಅದರ ಪಾಲಿಗೇ ಬಿಟ್ಟು ಬಿಡೋಣ. ನೈಸರ್ಗಿಕ ಆಹಾರ ಸರಪಣಿಯನ್ನು ಕಡಿಯದಿರೋಣ. ಈ ಭೂಮಿಯಲ್ಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಮಹತ್ವವಿದೆ. ಪೂಜೆ, ಪುನಸ್ಕಾರಗಳ ಸಡಗರದಲ್ಲಿ ಮೈಮರೆಯದಿರಿ. ಕೊರೋನಾ ಇನ್ನೂ ನಮ್ಮ ನಡುವೆಯೇ ಇದೆ. 

ಬನ್ನಿ ಬಂಧುಗಳೇ, ಮನೆ ಮಂದಿಯೆಲ್ಲಾ ಒಟ್ಟಾಗಿ ಮನೆಯಲ್ಲೇ ಸೇರೋಣ, ಹಬ್ಬದ ಸಂಭ್ರಮವನ್ನು ಮನೆಯೊಳಗಿದ್ದೇ ಇದ್ದುದರಲ್ಲಿಯೇ ಆಚರಿಸೋಣ. ಕವಿದ ಕಾರ್ಮೋಡ ದೂರವಾಗಲೆಂದು ಹಾರೈಸೋಣ. ಎಲ್ಲರಿಗೂ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು.

ಸಹಕಾರ:ರತ್ನಾ ಕೆ ಭಟ್,ತಲಂಜೇರಿ

ಪುರಾಣ ಆಕರ:ಮಹಾಭಾರತ ಪುರಾಣ ಕಥೆಗಳು

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು