ನಾಗ-ರಕ್ಷಣೆ !

ಸುಮಾರು ವರ್ಷಗಳ ಹಿಂದೆ ಕಲ್ಲಡ್ಕ ಸಮೀಪದಲ್ಲಿರುವ ಸ್ನೇಹಿತರ ಮನೆಗೆ ಹೋಗಿದ್ದೆ. ಅವರ ಮನೆಯ ದಾರಿಯಲ್ಲೊಂದು ದೊಡ್ಡ ಹಲಸಿನ ಮರವಿತ್ತು. ಅದರ ತುಂಬ ಹಲಸಿನ ಹಣ್ಣುಗಳಿದ್ದವು. ಅವು ಹಣ್ಣಾಗಿ ಒಡೆದು ಹೋಗಿ, ಹಲಸಿನ ತೊಳೆಗಳೆಲ್ಲ ಜೋತಾಡುತ್ತಿದ್ದವು. ಆ ಹಣ್ಣುಗಳನ್ನು ಹಕ್ಕಿಗಳು, ಅಳಿಲು, ಕೋತಿಗಳು ಯಾರ ಭಯವೂ ಇಲ್ಲದೇ ತಿನ್ನುತ್ತಾ ಇದ್ದವು. ಆ ಹಣ್ಣಿನ ಪರಿಮಳ ಇಡೀ ಪ್ರದೇಶಕ್ಕೆ ಹಬ್ಬಿತ್ತಾದ್ದರಿಂದ, ಆ ದಾರಿಯಲ್ಲಿ ಹೋಗುವವರ ಕಣ್ಣು ಸಹಜವಾಗಿಯೇ ಅದರತ್ತ ಬೀಳುತ್ತಿತ್ತು. ನಾನು ಆ ಪರಿಮಳಕ್ಕೆ ಮರುಳಾಗಿ, ಆ ಮರದ ಹಣ್ಣುಗಳನ್ನು ಕಿತ್ತುಕೊಡುವಂತೆ, ಗೆಳೆಯನಿಗೆ ಹೇಳಿದೆ. ಆತ ಅದು ಸಾಧ್ಯವೇ ಇಲ್ಲವೆಂದೂ, ಈ ಊರಲ್ಲಿ ಯಾರೂ ಆ ಮರದ ಹತ್ತಿರ ಸುಳಿಯುವುದಿಲ್ಲವೆಂದೂ, ಆ ಮರವಿರುವ ಪ್ರದೇಶದಲ್ಲಿರುವ ಮಾವಿನ ಮರ, ಗೇರುಹಣ್ಣಿನ ಮರಗಳನ್ನು ಸಹಾ ಯಾರೂ ಮುಟ್ಟುವುದಿಲ್ಲವೆಂದೂ ಹೇಳಿದ. ಆ ಜಾಗವನ್ನು ಒಂದು ಸರ್ಪ ಕಾವಲು ಕಾಯುತ್ತಿದೆಯೆಂದೂ, ಅಲ್ಲಿಗೆ ಹೋದವರನ್ನು ಅದು ಅಟ್ಟಿಸಿಕೊಂಡು ಬರುತ್ತದೆಯಂತಲೂ, ಇದು ಗೊತ್ತಿಲ್ಲದೇ ಆ ಮರದ ಹತ್ತಿರ ಹೋದವರು ಹಾವಿಗೆ ಹೆದರಿ ಪ್ರಾಣಭಯದಿಂದ ಓಡಿ ಬಂದು ತಿಂಗಳಾನುಗಟ್ಟಲೆ ಜ್ವರದಲ್ಲಿ ಮಲಗಿದ್ದಾರೆಂದೂ ವಿವರಿಸಿದ. ಮನುಷ್ಯನಿಗೆ ಮಾತ್ರ ಆ ಸರ್ಪ ತೊಂದರೆ ಕೊಡುತ್ತದೆಯಾ ಹಾಗಿದ್ದರೆ? ಕೋತಿ, ಹಕ್ಕಿ, ಅಳಿಲುಗಳೆಲ್ಲ ಯಾವ ಭಯವೂ ಇಲ್ಲದೇ ಹಣ್ಣು ತಿನ್ನುತ್ತಿವೆಯಲ್ಲ ಎಂದು ಕೇಳಿದ್ದಕ್ಕೆ, ಅದೇನೋ ಗೊತ್ತಿಲ್ಲ, ಈ ಊರಲ್ಲಿ ಯಾರೂ ಆ ಮರದ ತಂಟೆಗೆ ಹೋಗುವುದಿಲ್ಲ ಎಂದ.
ಆನಂತರ, ಆ ಊರಿನ ಹಿರಿಯರೊಬ್ಬರು ಆ ಮರದ ಐತಿಹ್ಯ ವಿವರಿಸಿದರು. ಬೆಟ್ಟದ ಕಿಬ್ಬಿಯಲ್ಲಿರುವ ಆ ಪ್ರದೇಶದಲ್ಲಿ ನೀರಿನ ಒರತೆ ತುಂಬಾ ಚೆನ್ನಾಗಿದೆ. ಹೀಗಾಗಿ ಅಲ್ಲಿ ಮರಗಳು ಸೊಂಪಾಗಿ ಬೆಳೆದಿವೆ. ಅಲ್ಲೊಂದು ಪುಟ್ಟ ಕಾಡೇ ನಿರ್ಮಾಣವಾಗಿದೆ. ಅದರ ಮಧ್ಯೆ ಒಂದು ಪುಟ್ಟ ಕೊಳವೂ ಇದೆ. ಅದರಲ್ಲಿ ಎಂಥಾ ಬೇಸಗೆಯಲ್ಲೂ ನೀರಿರುತ್ತದೆ. ಅದು ಪಾಂಡವರು ವನವಾಸ ಕಾಲದಲ್ಲಿ ಸ್ವಲ್ಪ ಕಾಲ ತಂಗಿದಂಥ ಜಾಗ. ಭೀಮ ಆ ಮರದ ಹಲಸಿನ ಹಣ್ಣುಗಳನ್ನು ಕಿತ್ತು ಪಾಂಡವರ ಹಸಿವು ತೀರಿಸುತ್ತಿದ್ದ. ರಾತ್ರಿ ಅವರೆಲ್ಲ ಮಲಗಿದಾಗ ಅವರನ್ನು ನಾಗಶೇಷ ಕಾವಲು ಕಾಯುತ್ತಿದ್ದನಂತೆ. ಅವರು ಅಲ್ಲಿಂದ ಹೊರಟು ಹೋಗುವಾಗ, ನಾವು ಮತ್ತೆ ಬರುತ್ತೇವೆ. ನೀನಿಲ್ಲೇ ಇರು ಎಂದು ನಾಗಶೇಷನಿಗೆ ಹೇಳಿ ಹೋದರಂತೆ. ಅದರಂತೆಯೇ ಆ ನಾಗಶೇಷ ಅಲ್ಲೇ ಕಾವಲು ಕಾಯುತ್ತಿದ್ದಾನಂತೆ ಎಂದು ಪುರಾಣವೊಂದನ್ನು ಆ ಕತೆಗೆ ಬೆಸೆದರು. ನಾವು ಆ ಕತೆ ಕೇಳಿ ನಕ್ಕೆವು. ನಾವು ತಮಾಷೆ ಮಾಡುತ್ತಿದ್ದೇವೆ ಅನ್ನುವುದು ಅವರಿಗೆ ಗೊತ್ತಾಯಿತು. ಸಿಟ್ಟೂ ಬಂದಂತಿತ್ತು. ಸಣ್ಣಗೆ ಮುನಿಸಿಕೊಂಡು ಅವರು ಮಾತು ಮುಂದುವರಿಸಿದರು.
’ಅಲ್ರಯ್ಯ, ಈ ಕತೇನ ನೀವು ನಂಬ್ತೀರೋ ಬಿಡ್ತೀರೋ ನಂಗೊತ್ತಿಲ್ಲ. ಆದ್ರೆ ಆ ಬನದಲ್ಲಿ ಎಷ್ಟೊಂದು ಹಕ್ಕಿಗಳಿವೆ ನೋಡಿದ್ದೀರಾ? ಅವುಗಳಿಗೆ ಅಲ್ಲಿರುವ ಮರದ ಹಣ್ಣೇ ಆಹಾರ. ಬೇಸಗೆಯಲ್ಲಿ ಅಲ್ಲಿ ಬಿಡುವ ಹಲಸಿನ ಹಣ್ಣು, ಮಾವಿನ ಹಣ್ಣು ತಿಂದು ಅವು ಬದುಕುತ್ತವೆ. ಆ ಮರಾನ ಕಾಯೋದಕ್ಕೆ ಆ ಸರ್ಪ ಇರ್ಲಿಲ್ಲ ಅಂತಿಟ್ಕೊಳ್ಳಿ. ಆಗ ಆ ಮರದ ಹಣ್ಣುಗಳನ್ನೆಲ್ಲ ನಾವೇ ಕಿತ್ಕೊಂಡು ತಿಂದು ಬಿಡ್ತಿದ್ವಿ. ಅಲ್ಲಿರುವ ಮರ ಕಡಿದು, ಗದ್ದೆ ಮಾಡ್ತಿದ್ವಿ. ಆ ಹಕ್ಕಿಗಳಿಗೆಲ್ಲ ತಿನ್ನೋದಕ್ಕೇನೂ ಸಿಗದ ಹಾಗೆ ಮಾಡ್ತಿದ್ವಿ. ಆ ಹಕ್ಕಿಗಳಿರೋದರಿಂದ ಪಕ್ಕದಲ್ಲಿರೋ ನನ್ನ ಗದ್ದೆ ಸುರಕ್ಷಿತವಾಗಿದೆ. ಬೇಸಗೆಯಲ್ಲಿ ಹಕ್ಕಿಗಳು ಆ ಹಣ್ಣು ತಿಂದ್ಕೊಂಡು ಬದುಕ್ತವೆ. ಕುಡಿಯೋದಕ್ಕೂ ಅಲ್ಲೇ ನೀರಿದೆ. ಮಳೆಗಾಲದಲ್ಲಿ ನೀರಿಗೆ ಕೊರತೆಯಿಲ್ಲ. ಸುಗ್ಗಿ ಬರ್ತಿದ್ದ ಹಾಗೆ, ನನ್ನ ಗದ್ದೇಲಿ ಪೈರು ಬರ್ತದೆ. ಅದನ್ನು ತಿನ್ನೋಕೆ ಬರೋ ಕೀಟಗಳನ್ನೆಲ್ಲ ಆ ಹಕ್ಕಿಗಳು ತಿಂದುಬಿಡ್ತವೆ. ಆ ಬನ ಇರೋದರಿಂದ ನಾನು ಬದ್ಕಿದ್ದೀನಿ. ಆ ಸರ್ಪ ಇರೋದರಿಂದ ಆ ಬನ ಉಳಕೊಂಡಿದೆ. ಆ ಬನ ಇರೋದರಿಂದ ಆ ಸರ್ಪ, ಹಕ್ಕಿಗಳು ಉಳ್ಕೊಂಡಿವೆ. ಇದೆಲ್ಲ ನಿಮಗೆ ಅರ್ಥ ಆಗಲ್ಲ’ ಎಂದು ಕೊಂಚ ಎತ್ತರದ ದನಿಯಲ್ಲೇ ಬೈದಂತೆ ಬೈದರು.
ದಕ್ಷಿಣ ಕನ್ನಡದ ನಾಗಬನಗಳ ಮಹತ್ವದ ಬಗ್ಗೆ ಅದಾಗಿ ಎಷ್ಟೋ ವರ್ಷಗಳ ನಂತರ ಅನಂತಮೂರ್ತಿಯವರು ಮಾತಾಡಿದ್ದರು. ಹೇಗೆ ನಾಗಬನಗಳು ಕಾಡನ್ನು ರಕ್ಷಿಸುತ್ತವೆ. ಒಂದೊಂದು ಮನೆಗೂ ಒಂದೊಂದು ನಾಗಬನ ಇರುವುದು ಯಾಕೆ? ಆ ಪ್ರದೇಶ ಯಾವತ್ತೂ ತಂಪಾಗಿಯೂ ಹಸಿರಾಗಿಯೂ ಇರುವುದಕ್ಕೇನು ಕಾರಣ? ಅಲ್ಲಿ ನೀರಸೆಲೆ ಯಾಕೆ ಚೆನ್ನಾಗಿರುತ್ತದೆ ಅನ್ನುವುದನ್ನು ಗಮನಿಸಿದರೆ, ಈ ದೈವಸ್ಥಾನಗಳು, ನಾಗಬನಗಳು, ಚೌಡಿಬನಗಳೆಲ್ಲ ನಮ್ಮನ್ನು ಕಾಯುವ ತಾಣಗಳೆಂದು ಜನ ಯಾಕೆ ಭಾವಿಸಿದ್ದಾರೆಂಬುದು ಗೊತ್ತಾಗುತ್ತದೆ. ಉಪ್ಪಿನಂಗಡಿಯ ಬೇಯಿಸುವ ಸೆಕೆಯಿಂದ ತಪ್ಪಿಸಿಕೊಂಡು, ಪರೀಕ್ಷೆಗೆ ಓದುವುದಕ್ಕೆ ನಾವು ನಾಗಬನಗಳಿಗೆ ಹೋಗುತ್ತಿದ್ದೆವು. ಅಲ್ಲಿ ಏಕಾಂತ, ಮೌನ ಮತ್ತು ತಂಪು ಸದಾ ನೆಲೆಸಿರುತ್ತಿತ್ತು.
ಹಾಗೆ ನೋಡಿದರೆ ಇಂಥ ಬನಗಳು ಎಲ್ಲಾ ಜನಪದದಲ್ಲೂ ಇವೆ. ಅವುಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಜನಸಂಖ್ಯೆ ನೂರುಪಟ್ಟಾಗುತ್ತದೆ. ಅವರು ಎಲ್ಲವನ್ನೂ ಕಡಿದು ನಾಶ ಮಾಡುತ್ತಾರೆ. ಒಬ್ಬೊಬ್ಬ ಶ್ರೀಮಂತ ಕೂಡ ಕಾಡಿನ ಶತ್ರು ಎಂಬುದನ್ನು ಬಲ್ಲವರಂತೆ ಆ ಕಾಲದ ಮಂದಿ, ಮುಂದಾಲೋಚನೆಯಿಂದ ಕಾಡುಗಳನ್ನು ರಕ್ಷಿಸುವುದಕ್ಕೆ ಏನೇನೋ ಉಪಾಯ ಕಂಡುಹಿಡಿಯುತ್ತಿದ್ದರು. ದೇವರಕಾಡುಗಳ ಕಲ್ಪನೆ ಬಂದಿದ್ದೇ ಹಾಗೆ. ರಕ್ಷಿತಾರಣ್ಯ ಅಂತ ಅರಣ್ಯ ಇಲಾಖೆ ಘೋಷಿಸುವುದಕ್ಕೆ ಎಷ್ಟೋ ಮುಂಚೆ, ಇಂಥ ದೇವರಕಾಡುಗಳು ಸಾಕಷ್ಟಿದ್ದವು. ಅವುಗಳ ಒಳಗೆ ಮಂದಿ ಕಾಲು ಕೂಡ ಹಾಕುತ್ತಿರಲಿಲ್ಲ. ಅವುಗಳಿಗೆ ಯಾವತ್ತೂ ಬೆಂಕಿ ಬೀಳುತ್ತಿರಲಿಲ್ಲ.
ಆ ಕಾಲದ ಜೋಯಿಸರು ಕೂಡ ಕಾಡು ಉಳಿಸುವುದನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದರು. ಮನೆಯಲ್ಲಿ ಕಷ್ಟನಷ್ಟಗಳಾಗುತ್ತಿವೆ ಎಂದು ಮನೆಯಾತ ಭವಿಷ್ಯ ಕೇಳಲು ಹೋದರೆ, ಹೆಚ್ಚಿನವರು, ನಿಮ್ಮ ಮನೆಯ ಹಿಂದೊಂದು ನಾಗಬನ ಇರಬೇಕಲ್ಲ. ಅಲ್ಲಿನ ಮರ ಕಡಿದಿದ್ದೀರಿ ಎಂದು ಕಾಣುತ್ತದೆ. ಅಲ್ಲೊಂದು ಗಿಡ ನೆಡಿ, ಒಳ್ಳೆಯದಾಗುತ್ತದೆ ಅನ್ನುತ್ತಿದ್ದರು. ಆ ಮರಗಳನ್ನು ಯಾವತ್ತೂ ಮುಟ್ಟದಂತೆ ಇಡೀ ಸಮುದಾಯವೇ ಕಣ್ಗಾವಲು ಕಾಯುತ್ತಿತ್ತು.
ಬಿಳಿಗಿರಿ ರಂಗ, ಮಲೆ ಮಹದೇಶ್ವರ , ಮಹಿಮೆ ರಂಗಸ್ವಾಮಿ , ಚಾಮುಂಡಿ, ಗೋಪಾಲಸ್ವಾಮಿ- ಇವೆರೆಲ್ಲರೂ ಆಯಾ ಕಾಡುಗಳನ್ನು ಕಾಯುವವರೇ ಆಗಿದ್ದರು. ಅವರ ಹೆಸರಲ್ಲಿ ಗುಡಿ ಬಂದು, ಆ ಕಾಡಿಗೆ ಅವೇ ರಕ್ಷಣೆಯಾಗಿ, ಆ ಕಾಡುಗಳು ಅವರಿಂದ ಉಳಿದದ್ದು ಇವತ್ತು ಹಳೆಯ ಕತೆಯಂತೆ ಕಾಣಬಹುದು. ಕ್ರಮೇಣ, ಭಕ್ತಿ ಮರೆಯಾಗಿ, ಆಯಾ ದೇವರ ಕಾಡುಗಳನ್ನೇ ಕಾಡುಗಳ್ಳರು ಕಡಿದು, ಅದರಿಂದ ಬಂದ ದುಡ್ಡಲ್ಲೇ ಆಯಾ ದೇವರಿಗೆ ದೊಡ್ಡ ಗುಡಿಯನ್ನೋ ದೇವಸ್ಥಾನವನ್ನೋ ನಿರ್ಮಿಸಿ ಪಾಪ ಪರಿಹಾರ ಮಾಡಿಕೊಂಡದ್ದು ಮತ್ತೊಂದು ಕತೆ. ಜುಮಾದಿ, ಪಂಜುರ್ಲಿ, ರಕ್ತೇಶ್ವರಿ, ಚೌಡಿ ಮುಂತಾದ ದೈವಗಳೂ ನಾಗಾದಿದೇವತೆಗಳೂ ಕಾಯುತ್ತಿದ್ದಾಗ ಭಕ್ತಿ ಮತ್ತು ಭಯ ಒಟ್ಟಾಗಿತ್ತು. ನೇತ್ರಾವತಿ ಹೊಳೆಗೆ ಹೋದವರು ಅಲ್ಲಿಂದ ಕಲ್ಲು ಒಯ್ಯಬಾರದು. ಹಾಗೇನಾದ್ರೂ ಕಲ್ಲು ತೆಗೆದುಕೊಂಡು ಹೋದರೆ ಹುಚ್ಚು ಹಿಡಿಯುತ್ತದೆ ಅಂತ ನಾವು ಚಿಕ್ಕವರಿದ್ದಾಗ ಹೇಳುತ್ತಿದ್ದರು. ಈಗ ನೇತ್ರಾವತಿಯ ಒಡಲು ಬಗೆದು ಬರೀ ಕಲ್ಲಲ್ಲ, ಮರಳನ್ನೇ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ. ಅವರಿಗೆ ದುಡ್ಡಿನ ಹುಚ್ಚು ಹಿಡಿದಿದೆ.
ರಾತ್ರಿ ಕಾಡಿಗೆ ಕಾಲಿಡದಂತೆ ಕಾಯುತ್ತಿದ್ದ ಕಾಡು ಪ್ರಾಣಿಗಳ ಭಯವಿಲ್ಲ. ದೆವ್ವಗಳೂ ಅಸುನೀಗಿವೆ. ದೈವದ ಭಯವಿಲ್ಲ, ಅರಸರ ಅಂಕೆಯೂ ಇಲ್ಲ. ರೈತ ಮನೆ ಕಟ್ಟಲು ಒಂದು ಮರ ಕಡಿದರೆ, ಅವನ ಮೇಲೆ ಕೇಸು ಹಾಕುತ್ತಿದ್ದವರೇ, ಮನೆಗೆ ವುಡನ್ ಫ್ಲೋರಿಂಗ್ ಮಾಡಿಸಿಕೊಂಡು, ಬ್ಯಾಡ್ಮಿಂಟನ್ ಆಡುವುದಕ್ಕೂ ಮರದ ಹಲಗೆಯ ಕೋರ್ಟು ಮಾಡಿಸಿಕೊಂಡು ಮೆರೆದಾಡಿದರು. ಹಾಗೆ ನೋಡಿದರೆ ಕಾಡುಗಳ್ಳರು ಟಿಂಬರ್ ವ್ಯಾಪಾರಿಗಳೂ, ಕಾಡುಗಳನ್ನು ಗುತ್ತಿಗೆ ಕೊಡುವವರೂ, ಮರಗಳಿಂದಲೇ ಮನೆ ಕಟ್ಟಿಸಿಕೊಳ್ಳುವವರೂ ಆಗಿದ್ದರೆ ಹೊರತು, ರೈತರಲ್ಲ. ರೈತರು ಕಾಡಿನ ಮಧ್ಯೆ ಒಂದೋ ಎರಡೋ ಎಕರೆ ಜಮೀನು ಹುಡುಕಿಕೊಂಡು ಅದನ್ನು ಉತ್ತು, ಬತ್ತವನ್ನೋ ತರಕಾರಿಯನ್ನೋ ಬೆಳೆಯುತ್ತಿದ್ದರು. ಅಲ್ಲೊಂದು ಮನೆ ಕಟ್ಟಿಕೊಳ್ಳಲಿಕ್ಕೆ ಒಂದೆರಡು ಮರ ಕಡಿಯುತ್ತಿದ್ದರು. ಆದರೆ ಮರವನ್ನು ಮಾರಿಕೊಳ್ಳಬಹುದು ಅನ್ನುವುದು ಅವರಿಗಿನ್ನೂ ಆ ಕಾಲಕ್ಕೆ ಹೊಳೆದಿರಲಿಲ್ಲ. ಈಗಂತೂ ಮರ ನೋಡಿದ ತಕ್ಷಣ, ಒಳ್ಳೇ ಮರ, ಆರಾಮಾಗಿ ಐವತ್ತು ಬಾಗಿಲು, ಕಿಟಕಿ ಮಾಡಿಸಬಹುದು ಅಂದುಬಿಡುತ್ತಾರೆ. ಮರವೆಂಬುದು ದುಡ್ಡಿನ ಮರದಂತೆ ಕಾಣತೊಡಗಿದೆ. ಅವನ್ನು ರಕ್ಷಿಸಲಿಕ್ಕೆ ಮತ್ತೆ ದೈವರುಗಳೂ ನಾಗರುಗಳೂ ಚೌಡೇಶ್ವರಿ ಚಾಮುಂಡಿಯರೂ ಬರಬೇಕಾಗಿದೆ.
ವರುಷಗಳ ಹಿಂದೆ ನರಿಕೊಂಬು ಗ್ರಾಮದಲ್ಲಿ ಮರ ಕಡಿಯಲು ಹೊರಟವನನ್ನು ಮೈಮೇಲೆ ಬಂದ ದೈವ ಓಡಿಸಿತು ಅನ್ನುವುದನ್ನು ಓದಿದಾಗ, ಇದೆಲ್ಲ ನೆನಪಾಯಿತು.
-ಜೋಗಿ
(ಸಂಗ್ರಹ : ರಾಜೇಶ್ ಐತಾಳ್, ಸುರತ್ಕಲ್)
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ