ನಾಟಕೀಯ

ನಾಟಕೀಯ

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರೇಮಕುಮಾರ್ ಹರಿಯಬ್ಬೆ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೨೩

ಪತ್ರಕರ್ತ, ಕಥೆಗಾರ ಪ್ರೇಮಕುಮಾರ್ ಹರಿಯಬ್ಬೆ ತಾವು ಬರೆದ ಕಥೆಗಳನ್ನು ಒಟ್ಟುಗೂಡಿಸಿ ‘ನಾಟಕೀಯ' ಎಂಬ ಕಥಾ ಸಂಕಲನವನ್ನು ಹೊರತಂದಿದ್ದಾರೆ. ೯೮ ಪುಟಗಳ ಪುಟ್ಟ ಪುಸ್ತಕದ ಕಥೆಗಳ ಬಗ್ಗೆ ಕಥೆಗಾರ ಪ್ರೇಮಕುಮಾರ್ ಅವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...

“ಪ್ರಸ್ತುತ ಕರ್ನಾಟಕದ ಸಾಮಾಜಿಕ ಸಂದರ್ಭ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವು ರೂಢಿಸಿಕೊಂಡು ಬಂದ ಸೌಹಾರ್ದ ಪರಿಸರ ಕ್ರಮೇಣ ಕಣ್ಮರೆಯಾಗುತ್ತಿದೆ. ಇತಿಹಾಸವನ್ನು ವಿಕೃತಗೊಳಿಸಿ ಅಸಹನೆಯ ಬೀಜಗಳನ್ನು ಬಿತ್ತಿ ಫಸಲು ತೆಗೆಯುವ ಹುನ್ನಾರ, ಜಾತೀಯತೆ, ಭ್ರಷ್ಟಾಚಾರ ಇತ್ಯಾದಿಗಳೆಲ್ಲ ಮುನ್ನೆಲೆಗೆ ಬಂದು ನಿಂತಿವೆ. ಕನ್ನಡದ ಜನ ಎಲ್ಲರನ್ನೂ, ಎಲ್ಲವನ್ನೂ ಅನುಮಾನದಿಂದ ನೋಡುವ ಮನಸ್ಥಿತಿ ಬೆಳೆಸಿಕೊಳ್ಳುತ್ತಿದ್ದಾರೆ! ಈ ಕಾಲಘಟ್ಟದ ಸಾಹಿತ್ಯ ಮತ್ತು ಲೇಖಕರ ಬಗೆಗೆ ಓದುಗರು ಇಂತದೇ ಮನಸ್ಥಿತಿ ಬೆಳೆಸಿಕೊಂಡಿರಬಹುದೇ ಎಂಬ ಅನುಮಾನ ನನ್ನದು. ಕೆಲವು ಲೇಖಕರ ಸಾಹಿತ್ಯ ಕೃತಿಗಳನ್ನು ಗಂಭೀರವಾಗಿ ಪರಿಗಣಿಸುತ್ತ, ಇನ್ನುಳಿದ ಬಹುಪಾಲು ಲೇಖಕರನ್ನು ಮತ್ತವರ ಕೃತಿಗಳನ್ನೂ ಉಪೇಕ್ಷಿಸುವ ಪ್ರವೃತ್ತಿ ಓದುಗರಲ್ಲಿರಬಹುದೇ ಎನ್ನುವುದು ನನ್ನ ಪ್ರಶ್ನೆ. ಆದರೆ ನಮ್ಮ ಬಹುಪಾಲು ಲೇಖಕರು ಇಂಥ ಬೆಳವಣಿಗೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಸಾಹಿತ್ಯ ರಚನೆ ಮತ್ತು ಪುಸ್ತಕ ಪ್ರಕಟಣೆಯತ್ತ ಗಮನ ಹರಿಸಿದ್ದಾರೆ.

ಕಳೆದ ಒಂದೆರಡು ದಶಕಗಳ ಅವಧಿಯಲ್ಲಿ ಹೊಸ ಪೀಳಿಗೆಯ ಹತ್ತಾರು ಲೇಖಕರು ಮುನ್ನೆಲೆಗೆ ಬಂದಿದ್ದಾರೆ. ಪ್ರತಿ ವರ್ಷ ನೂರಾರು ಹೊಸ ಪುಸ್ತಕಗಳು ಪ್ರಕಟವಾಗುತ್ತಿವೆ. ಈ ಎಲ್ಲಾ ಪುಸ್ತಕಗಳನ್ನು ರಾಜ್ಯದ ಎಲ್ಲ ಭಾಗಗಳ ಆಸಕ್ತರಿಗೆ ತಲುಪಿಸುವ ಮಾರಾಟ ವ್ಯವಸ್ಥೆ ರೂಢಿಸಿಕೊಳ್ಳುವುದು ನಮಗೆ ಸಾಧ್ಯವಾಗಿಲ್ಲ. ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆಯೂ ಹೆಚ್ಚಾಗಿಲ್ಲ. ಓದುವ ಆಸಕ್ತಿ ಇರುವ ಜನಸಾಮಾನ್ಯರಿಗೆ ಕೊಳ್ಳುವ ಶಕ್ತಿ ಇಲ್ಲ. ಅವರಿಗೆ ಜೀವನ ನಿರ್ವಹಣೆಯೇ ದೊಡ್ಡ ಸಮಸ್ಯೆ. ನಿರುದ್ಯೋಗ, ಬೆಲೆ ಏರಿಕೆ ಇತ್ಯಾದಿಗಳಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಸಾಹಿತ್ಯ ಓದುವ ಪ್ರವೃತ್ತಿ ಬೆಳೆಸಿಕೊಂಡ ಮಧ್ಯಮ ವರ್ಗದವರ ಅಭಿರುಚಿಗಳು ಈಗ ಬದಲಾಗಿವೆ. ಬದಲಾದ ಆರ್ಥಿಕ, ರಾಜಕೀಯ ಪಲ್ಲಟಗಳು ಮ್ಯಾಗಜೀನ್‌ಗಳನ್ನು ಓದುವವರ ಸಂಖ್ಯೆ ಹೆಚ್ಚೇನೂ ಆಗಿಲ್ಲ. ಟೀವಿ, ಇಂಟರ್‌ನೆಟ್‌ ಮತ್ತು ಪ್ರಭುತ್ವಗಳ ನಿರಂಕುಶ ಆಡಳಿತದ ವಿರುದ್ಧ ಜಾಗೃತಿ ಮೂಡಿಸುವ ಪುಸ್ತಕಗಳು, -ಇತ್ಯಾದಿಗಳು ಬಂದ ಮೇಲೆ ಆಗಿರುವ ಬದಲಾವಣೆ ಇದು. ಪುಸ್ತಕ ಕೈಯಲ್ಲಿ ಹಿಡಿದು ಓದುವ ಶ್ರಮವಿಲ್ಲದೆ ಬೇಕಾದಾಗ ಬೇಕಾದ ಸಂಗತಿಗಳನ್ನು ತೋರು ಗ್ರಹಿಸುವ, ಮಾಹಿತಿಗಳ ಪ್ರತಿಗಳನ್ನು ಪಡೆದುಕೊಳ್ಳುವ ತಂತ್ರಜ್ಞಾನ ಈಗ ಲಭ್ಯವಿದೆ. ಇದರಿಂದಾಗಿ ಅನೇಕರಿಗೆ ಪುಸ್ತಕಗಳು ಬೇಡವಾಗಿವೆ.

ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಪ್ರತಿಭಟನೆಗಳನ್ನು ಪ್ರಭುತ್ವ ಹತ್ತಿಕ್ಕುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯತೀತತೆಗೆ ಅಪಾಯ ಬಂದೊದಗಿದೆ ಎಂಬ ಕೂಗು ಆಗಾಗ ಕೇಳಿಬರುತ್ತಿದೆ. ಇದರ ವಿರುದ್ಧ ಜನರನ್ನು ಎಚ್ಚರಿಸುವ ಪ್ರಯತ್ನಗಳು ಈ ಆಂದೋಲನದ ಸ್ವರೂಪ ಪಡೆಯಬೇಕಿತ್ತು.

ದುರದೃಷ್ಟದ ಸಂಗತಿ ಆದರೆ ಜನಾಭಿಪ್ರಾಯ ರೂಪಿಸಿಬೇಕಾದ ಮಾಧ್ಯಮಗಳು ಮತ್ತು ಸಾಹಿತಿ, ಕಲಾವಿದರು ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈ ಉಪೇಕ್ಷೆ ಭಯ ಅಥವಾ ಭಯ ಮೂಲದ ಅಸಹಾಯಕತೆ ಕಾರಣವಿರಬಹುದೇ? ಉತ್ತರಹೇಳುವುದು ಕಷ್ಟ.

ಟೀವಿ, ಇಂಟರ್‌ನೆಟ್‌ ಇತ್ಯಾದಿಗಳು ಮುನ್ನೆಲೆಗೆ ಬಂದ ಮೇಲೆ ಸಾಹಿತ್ಯ ಹಿಂದೆ ಬಿತ್ತು. ಆದರೆ ಬರೆಯುವ ಮತ್ತು ಬರೆದದ್ದನ್ನೆಲ್ಲ ಪ್ರಕಟಿಸುವ ಪ್ರಯತ್ನಗಳು ಹೆಚ್ಚುತ್ತಿವೆ. ಸೃಜನೇತರ ಸಾಹಿತ್ಯ ಕೃತಿಗಳ ಪ್ರಕಟಣೆ ಹೆಚ್ಚಾಗಿದೆ. ದೇಶದ ದೈನಂದಿನ ವಿದ್ಯಮಾನಗಳನ್ನು ಕುರಿತ ಲೇಖನಗಳು, ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣ ಬರಹ ಇತ್ಯಾದಿಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಒಟ್ಟಾರೆ ಪುಸ್ತಕ ರೂಪದ ಸಾಹಿತ್ಯದ ಗಾತ್ರ ದೊಡ್ಡದಾಗಿದೆ. ಇದೇ ಸಂದರ್ಭದಲ್ಲಿ ನನ್ನದೂ ಒಂದು ಸಣ್ಣ ಕಥೆಗಳ ಸಂಕಲನ ಪ್ರಕಟವಾಗುತ್ತಿದೆ. ಅಂಕಿತ ಪ್ರಕಾಶನ ಇದರ ಪ್ರಕಟಣೆಗೆ ಒತ್ತಾಸೆಯಾಗಿ ನಿಂತಿದೆ.

* * *
ನಾನು ಮೂಲತಃ ಪತ್ರಕರ್ತ, ಸಣ್ಣಕಥೆ ನನಗೆ ಪ್ರಿಯವಾದ ಮಾಧ್ಯಮ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸಾಮಾಜಿಕ, ರಾಜಕೀಯ ಇತ್ಯಾದಿ ದೈನಂದಿನ ಆಗುಹೋಗುಗಳನ್ನು (ಸೀಮಿತವಾಗಿ) ವರದಿ ಮಾಡಿದ ಅನುಭವ ನನ್ನದು. ವರದಿಯಾಗದ, ನನ್ನಲ್ಲೇ ಉಳಿದ ಅನೇಕ ಸಂಗತಿಗಳು ಲೇಖನಗಳಾಗಿವೆ.

ಕೆಲವನ್ನು ಕಥೆಗಳ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಸಮಕಾಲೀನ ಸಾಹಿತ್ಯ ಮತ್ತು ವರ್ತಮಾನಕ್ಕೆ ನಮ್ಮ ಜನರು ಸ್ಪಂದಿಸುತ್ತಾರೆಯೇ ಎನ್ನುವುದನ್ನು ಪರೀಕ್ಷಿಸುವ ಕುತೂಹಲ ನನಗಿದೆ. ನಿರಾಶಾದಾಯಕ ಸಂಗತಿ ಎಂದರೆ ಜನರಲ್ಲಿ ಓದುವ ಪ್ರವೃತ್ತಿ ಕ್ಷೀಣಿಸುತ್ತಿದೆ. ಸಾಹಿತ್ಯ ವಿದ್ಯಾರ್ಥಿಗಳು, ಶಿಕ್ಷಕರಲ್ಲೂ ಓದುವ ಆಸಕ್ತಿ ಕಡಿಮೆಯಾಗಿದೆ. ಅನೇಕರಿಗೆ ಸಮಕಾಲೀನ ಸಾಹಿತ್ಯ ಬೇಕಿಲ್ಲ. ಕನ್ನಡದ ಪ್ರಮುಖ ಲೇಖಕರ ಹೆಸರುಗಳು ಮತ್ತು ಕೃತಿಗಳ ಪರಿಚಯವೂ ಅವರಿಗೆ ಬೇಕಿಲ್ಲ. ಆಶ್ಚರ್ಯದ ಬೆಳವಣಿಗೆ ಎಂದರೆ ಸಿನಿಮಾಗಳ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚುತ್ತಿದೆ. ಎಲ್ಲ ವಯೋಮಾನದ ಜನರು ಸಿನಿಮಾಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಉಳಿದ ಎಲ್ಲಾ ಕಲಾ ಮಾಧ್ಯಮಗಳ ಪೈಕಿ ಸಿನಿಮಾ ಈಗ ಅತ್ಯಂತ ಪ್ರಭಾವಶಾಲಿ. ನಟ, ನಟಿಯರ ವೈಯಕ್ತಿಕ ಜೀವನದ ಮಾಹಿತಿಗಳಿಂದ ಹಿಡಿದು ಹಲವಾರು ದೇಶ, ಭಾಷೆಗಳ ಸಿನಿಮಾಗಳ ಬಗ್ಗೆ ತಿಳಿದು ಕೊಳ್ಳುವ ಆಸಕ್ತಿ ಜನರಿಗೆ ಇದೆ. ಇದು ಹೊಸ ವಿಷಯವೇನಲ್ಲ. ಆದರೆ ವರ್ತಮಾನದ ಸಾಹಿತ್ಯಕ್ಕೆ ಈ ಶಕ್ತಿ ಇಲ್ಲ.

ಬಹುತೇಕ ಕನ್ನಡ ಸುದ್ದಿ ಪತ್ರಿಕೆಗಳು ವಾರಾಂತ್ಯದ ಸಂಚಿಕೆಗಳಲ್ಲಿ ಕಥೆ, ಕವಿತೆ, ವಿಮರ್ಶೆ, ಸಾಹಿತ್ಯ ಸಂವಾದ ಇತ್ಯಾದಿಗಳ ಪ್ರಕಟಣೆ ನಿಲ್ಲಿಸಿದ ಮೇಲೆ ಓದುಗರಿಗೆ ಸಾಹಿತ್ಯ ಕೃತಿಗಳ ಪರಿಚಯ ತಪ್ಪಿಹೋಗಿದೆ. ಹೊಸ ಪುಸ್ತಕಗಳ ಬಗ್ಗೆ ಕನಿಷ್ಠ ಮಾಹಿತಿಯೂ ಸಿಗುತ್ತಿಲ್ಲ. ಎಲ್ಲ ವಯೋಮಾನದ ಜನ ಜಾಲತಾಣಗಳಲ್ಲಿ ಕಳೆದು ಹೋಗಿದ್ದಾರೆ. ಸ್ಮಾರ್ಟ್ ಫೋನ್ ಖರೀದಿಸುವ ಸಾಮರ್ಥ್ಯ ಇಲ್ಲದ ಗ್ರಾಮೀಣ ಜನರು ಇಂತಹ ಮಾಹಿತಿಗಳಿಂದಲೂ ವಂಚಿತರಾಗಿದ್ದಾರೆ. ಕೆಲ ಸಾಹಿತ್ಯ ಕೃತಿಗಳನ್ನು ಜಾಲತಾಣದಲ್ಲಿ ಓದುವ ಅವಕಾಶವಿದ್ದರೂ ಅದರ ಬಗ್ಗೆಯೂ ಒಂದು ಬಗೆಯ ಉಪೇಕ್ಷೆ ಇದೆ. ಎಲ್ಲ ವಿಷಯಗಳ ಬಗ್ಗೆ ಮಾಹಿತಿಗಳು ಈಗ ನೆಟ್‌ನಲ್ಲಿ ಸಿಗುತ್ತವೆ. ಎಲ್ಲವನ್ನೂ ನೋಡುವ, ಓದದೇ ಮೆಚ್ಚಿಕೊಳ್ಳುವ, ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವಿದೆ. ಇದರಿಂದಾಗಿ ಸಾಹಿತ್ಯ ಓದುವ ಆಸಕ್ತಿ ಕಡಿಮೆ ಆಗಿರಬಹುದೇ? ಗೊತ್ತಿಲ್ಲ.

'ನಾಟಕೀಯ' ನನ್ನ ನಾಲ್ಕನೇ ಕಥೆಗಳ ಸಂಕಲನ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬರೆದ ಹತ್ತು ಕಥೆಗಳು ಇಲ್ಲಿವೆ. ಮೂರು ಕಥೆಗಳನ್ನು ಹೊರತುಪಡಿಸಿ ಉಳಿದವೆಲ್ಲ ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿವೆ. ಕಥೆಗಳನ್ನು ಓದಿ ಮೆಚ್ಚಿಕೊಂಡ ಅನೇಕರು ಪ್ರಶಂಸೆಯ ಮಾತು ಹೇಳಿದ್ದಾರೆ. ಕೆಲವು ಅಪರಿಚಿತರೂ ಅಭಿಪ್ರಾಯ ಹೇಳಿದ್ದಾರೆ. ಈ ಕಥೆಗಳನ್ನು ಪ್ರಕಾಶ್ ಕಂಬತ್ತಳ್ಳಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಅವರದೇ ಮಾರಾಟ ವ್ಯವಸ್ಥೆಯ ಮೂಲಕ 'ನಾಟಕೀಯ' ಸಂಕಲನ ಆಸಕ್ತ ಓದುಗರ ಕೈಸೇರುತ್ತದೆ ಎನ್ನುವ ವಿಶ್ವಾಸ ನನ್ನದು.”