ನಾಟ್ಯಮಯೂರಿ

ನಾಟ್ಯಮಯೂರಿ

ಕವನ

ಮೇದಿನಿ ಹಸಿರಲಿ ಮಿಂಚುವ ಮಾಟಕೆ

ರಾಧೆಯ ನೃತ್ಯವ ನೋಡಿ

ಮೇದುರ ಲಲನೆಯ ಮನಸಿನ ಭಾವಕೆ

ಕೇದಿಗೆ ಘಮವದು ಕಾಡಿ..

 

ಕಂಗಳ ನೋಟದ ಬಾಣಕೆ ಸೋತಿದೆ

ಅಂಗಳದಲ್ಲಿನ ಹಸಿರು

ಸಂಗಮಗೊಂಡಿಹ ನೀರಲಿ ಬೆರೆತಿದೆ

ಅಂಗದ ಝಳಪಿನ ಉಸಿರು...

 

ರಂಭೆಯ ನೃತ್ಯವು ಕಣ್ಣಿಗೆ ಕಂಪನು

ಜಂಭದಿ ತಂದಿದೆ ಭಾರಿ

ನಂಬಿದ ಜನರನು ಕುಣಿಸುತ ತಂಪನು

ಕುಂಭದ ಜಲದಲಿ ತೋರಿ...

 

ಶ್ವೇತದ ವಸ್ರ್ತದಿ ಮಿಂಚುತ ನಾರಿಯು

ಭಾತಿಯಗೊಂಡಳು ತಥ್ಯ

ನಾಥನ ನೆನೆಯುತ ಕಣ್ಮನ ಸೂರೆಯು

ಗೀತೆಗೆ ನಟಿಸುತ ನಿತ್ಯ...

 

ಸಿಂಧೂರ ಹಣೆಯಲಿ ಮಿಂಚುವ ಚಂದ್ರನು

ನಂದನ ವನದಲಿ ತುಂಬ

ಮಂದಾರ ಪುಷ್ಪದಿ ಮಿರುಗುವ ಲಾಂದ್ರವು

ಚಂದದ ಚೆಲುವಿನ ಬಿಂಬ...

 

ತಾನನ ನುಡಿಸುತ ವೀಣೆಯ ನಾದದಿ

ಬಾನಿನ ತಾರೆಯ ಚಿಗುರು

ಕಾನನ ವೃಕ್ಷವು ಹಸಿರಿನ ಗಾನದಿ

ಮಾನಿನಿ ವದನದ ನವಿರು..

 

ಕೇಶದ ತುರುಬಲಿ ಮಲ್ಲಿಗೆ ದಿಂಡದು

ಮಾಸದೆ ಘಮಘಮ ಗಂಧ

ಲಾಸಕಿ ಬಳೆಗಳ ಫಳಫಳ ಸದ್ದದು

ಸಾಸಿರಗದಿರನೆ ಚಂದ..

 

ನವಿರಿನ ಪಾದಕೆ ಲೇಪನ ಬಣ್ಣವು

ನವತನ ತುಂಬಿದೆ ಮನದಿ

ಭವದಲಿ ಮಗ್ನತೆ ಮೂಡುವ ಕಣ್ಣವು

ತವಕದಿ ಗೇಯತೆ ಭರದಿ...

 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್