'ನಾಡಿಗೆ ನಮಸ್ಕಾರ' ಸರಣಿಯಲ್ಲಿ ಅಡ್ಡೂರು ಕೃಷ್ಣರಾಯರ ಕುರಿತು ಪುಸ್ತಕ
ಒಮ್ಮೆ ಮಂಗಳೂರಿನಲ್ಲೊಂದು ಕಾರ್ಯಕ್ರಮ ಆಯೋಜಿಸಬೇಕಾಗಿ ಬಂದಾಗ ಅಡ್ಡೂರು ಕೃಷ್ಣರಾಯರ ಪರಿಚಯವಾಯಿತು. ಜನಪ್ರಿಯ ಲೇಖಕರಾದ ಶ್ರೀಪಡ್ರೆಯವರು ನನಗೆ ಇವರ ಪರಿಚಯ ಮಾಡಿಕೊಟ್ಟಿದ್ದರು. ಸದಾ ಸರಳ ಉಡುಗೆಯಲ್ಲಿರುತ್ತಿದ್ದರು. ಹೆಗಲಿಗೆ ಬಟ್ಟೆಯ ಬ್ಯಾಗೊಂದನ್ನು ತಗಲು ಹಾಕಿಕೊಂಡು ಬರುತ್ತಿದ್ದರು. ತಂತ್ರಜ್ಞಾನದ ಹೊಸತುಗಳು ಅವರಿಗೆ ಸುಲಭವಾಗಿ ಒಗ್ಗಿಕೊಳ್ಳುತ್ತಿರಲಿಲ್ಲ. ಪೆನ್ನು ಹಿಡಿದು ಚಿತ್ತಿಲ್ಲದೆಯೇ ಬರೆಯುವ ಶಿಸ್ತಿನ ಬರಹಗಾರರಾದ ಅವರಿಗೆ ತಂತ್ರಜ್ಞಾನ ಬಳಕೆ ಸಹಜವಾದ ಕಸಿವಿಸಿ ತರುತ್ತಿತ್ತು - ಆದರೂ ಕಲಿಯಲು ಅವರು ತುಂಬ ಆಸಕ್ತಿ ತೋರಿಸುತ್ತಿದ್ದರು. ಅವರ ಮನೆಗೆ ಭೇಟಿ ಕೊಟ್ಟಾಗ ನೀರಿನ ಬಳಕೆ, ಕೃಷಿ ಮುಂತಾದವುಗಳ ಬಗ್ಗೆ ಅವರೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದೆ. ಪುಸ್ತಕಗಳನ್ನೋದುವ ಹವ್ಯಾಸದಿಂದಾಗಿ ಸಾಕಷ್ಟು ವಿಷಯಗಳನ್ನು ಓದಿ ತಿಳಿದಿರುವ ಅವರೊಂದಿಗೆ ಮಾತನಾಡಿದಾಗ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದಿತ್ತು. ಅವರ ಮನೆಗೆ ಬರುವ ಮ್ಯಾಗಝೀನುಗಳ ಪಟ್ಟಿಯೇ ಸಂಗ್ರಹಯೋಗ್ಯ. ಅವರ ಪುಸ್ತಕಗಳ ಜ್ಞಾನ ಅಪಾರವಾದದ್ದು. ಅವರ ಪರಿಚಯವಾದ ಕೆಲವು ಸಮಯದ ತರುವಾಯ ನನಗೆ ಅವರ ಮಗಳ ಪರಿಚಯವಾಯಿತು. ಜೀವನದಲ್ಲಿ ಸರಳತೆ, ಮನಸ್ಸಿನಲ್ಲಿ ಪ್ರಭುದ್ಧತೆ ಇದ್ದ ಅವಳೊಡನೆ ನನ್ನ ಮಾತುಕತೆ ಹೆಚ್ಚಿತು. ಇಬ್ಬರೂ ಪರಸ್ಪರ ಬಾಳಿಗೆ ಜೊತೆಯಾಗಬೇಕೆಂದು ಇಷ್ಟಪಟ್ಟೆವು. ನನಗೆ ಈಗಲೂ ನೆನಪಿದೆ - ಕೃಷ್ಣರಾಯರ ಜೊತೆ ಸಂಜೆ ತಿಂಡಿ ತಿಂದು ಮಾತನಾಡುತ್ತಿದ್ದ ಸಮಯ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೆ. ಅದು ಅವರಿಗೆ ಅನಿರೀಕ್ಷಿತವಾದರೂ ತಾಳ್ಮೆಯಿಂದ ನಡೆದುಕೊಂಡಿದ್ದರು.
ಈಗಲೂ ಕೃಷ್ಣರಾಯರು ನನ್ನ ಬಾಳಸಂಗಾತಿಯ ತಂದೆ ಎಂಬುವುದಕ್ಕಿಂತ ಹೆಚ್ಚಾಗಿ ಗೆಳೆಯರಂತೆ. ಸಾಕಷ್ಟು ವಿಚಾರಗಳ ಕುರಿತು ಅವರೊಂದಿಗೆ ಮಾತನಾಡುತ್ತಲೇ ಇರುತ್ತೇನೆ ಹಾಗೂ ಸಲಹೆ ಕೇಳುತ್ತಿರುತ್ತೇನೆ. ಅವರು ತಮ್ಮ ಜೀವನದಲ್ಲಿ ಮಾಡಿರುವ ಸಾಧನೆಗಳು ಹಲವು. ಅವರ ಕುರಿತು ಒಂದು ಪುಸ್ತಕ ಈಗ ಹೊರಬಂದಿದೆ. ಇಂಥದ್ದೊಂದು ಪುಸ್ತಕದ ಮೂಲವಸ್ತುವಾಗಲು ಇವರು ಅರ್ಹರು. ಸಾಧ್ಯವಾದಾಗ ಓದಿ.