ನಾಡಿಗೆ ಮಾದರಿ ಈ ಕಾಡಿನ ಕತೆ
ಕಾಸರಗೋಡು ಜಿಲ್ಲೆ (ಕೇರಳ) ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಾಗಿಕೊಂಡ ಜಾಗದಲ್ಲಿ ಹಸಿರು ವನವೊಂದು ಮೇಲೇಳುತ್ತಿದೆ! ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ. ದೇವಳದ ಸನಿಹವಿದ್ದ ಒಂದು ನೇರಳೆ ಹಣ್ಣಿನ ಮರವನ್ನು ಅನಿವಾರ್ಯವಾಗಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕಡಿಯಬೇಕಾಯಿತು. ಇದಕ್ಕೆ ಬದಲಾಗಿ ವನವನ್ನು ರೂಪಿಸಲು ಹಸಿರು ಮನಸ್ಸುಗಳ ಸಂಕಲ್ಪ. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ಅಧ್ಯಾಪಕ ಉಮೇಶ ಪೆರ್ಲರ ಸಾರಥ್ಯ.
2015 ಜುಲಾಯಿ ತಿಂಗಳಲ್ಲಿ ಹಸಿರು ವನಕ್ಕೆ ಶ್ರೀಕಾರ. ಸುತ್ತಲೂ ಜೀವಂತ ಬೇಲಿ. ಪ್ರತಿ ಗಿಡಗಳ ಪಕ್ಕ ಚಿಕ್ಕ ಇಂಗುಗುಂಡಿ. ಗಿಡ ನೆಡುವ, ಗೊಬ್ಬರ ಹಾಕುವ ಚಿಕ್ಕಪುಟ್ಟ ಕೆಲಸಗಳಿಗೆ ವಿದ್ಯಾರ್ಥಿಗಳ ಹೆಗಲೆಣೆ. ಜತೆಗೆ ಉದ್ಯೋಗ ಖಾತರಿ ಯೋಜನೆಯ ಸದಸ್ಯರ ಶ್ರಮ. ಊರವರ ಸಹಕಾರ. ಒಂದೂವರೆ ಎಕ್ರೆ ಪ್ರದೇಶದಲ್ಲಿ ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಡಲಾಗಿದೆ. ಕದಂಬ, ನೇರಳೆ, ಶ್ರೀಗಂಧ, ಅಶ್ವತ್ಥ, ಬಿಲ್ವ... ಹೀಗೆ. ಗಿಡದಿಂದ ಗಿಡಕ್ಕೆ ಇಪ್ಪತ್ತು ಅಡಿಗಳ ಅಂತರ. ಯಾವ್ಯಾವ ಸಾಲಿನಲ್ಲಿ ಯಾವ ಜಾತಿಯ ಮರ ಇರಬೇಕೆಂದು ಮೊದಲೇ ಗೊತ್ತು ಮಾಡಿದ್ದಾರೆ. ಇದರ ಲಿಖಿತ ದಾಖಲಾತಿಯೂ ಇದೆ. ಗಿಡಗಳ ಪರಿಚಯಕ್ಕಾಗಿ ಲೇಬಲ್ ಅಂಟಿಸಿದ್ದಾರೆ.
ಒಂದು ಗಿಡ ನೆಡಬೇಕೆಂದು ಸಂಕಲ್ಪಿಸಿದವರು ಐನೂರು ರೂಪಾಯಿ ನಿರ್ವಹಣೆ ಶುಲ್ಕ ನೀಡಿದರೆ ಆಯಿತು, ಅಂತಹವರ ಹೆಸರಿನಲ್ಲಿ ಗಿಡವನ್ನು ನೆಟ್ಟು ಆರೈಕೆ ಮಾಡಲಾಗುತ್ತದೆ. ಮಕ್ಕಳ ಹುಟ್ಟುಹಬ್ಬ, ಹಿರಿಯರ ನೆನಪು, ಶುಭಸಮಾರಂಭಗಳ ದಿವಸಗಳಂದು ಗಿಡಗಳನ್ನು ನೆಡುವ ಆಶಯವನ್ನು ಹಲವರು ಅನುಷ್ಠಾನ ಮಾಡುತ್ತಿದ್ದಾರೆ. “ಈಗಾಗಲೇ ನೂರಕ್ಕೂ ಮಿಕ್ಕಿ ಮಂದಿ ಸ್ಪಂದಿಸಿದ್ದಾರೆ. ಇನ್ನಷ್ಟು ಮಂದಿ ಉತ್ಸುಕತೆ ತೋರಿದ್ದಾರೆ. ಈ ಕುರಿತು ಪ್ರತ್ಯೇಕ ಸಮಿತಿ ರೂಪೀಕರಿಸಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಯೋಚನೆಯಿದೆ,” ಎನ್ನುತ್ತಾರೆ ಉಮೇಶ್. ದೇವಳದ ಮೊಕ್ತೇಸರರಾದ ಕೃಷ್ಣ ಶ್ಯಾನುಭಾಗ್ ಹೆಗಲೆಣೆ.
ವನವನ್ನು ಪುನಃ ಒಂದೆಕ್ರೆ ವಿಸ್ತಾರಗೊಳಿಸುವ ಮಾನಸ ನೀಲನಕ್ಷೆ ಸಿದ್ಧವಾಗಿದೆ. ಹಸಿರಿನ ಮಧ್ಯೆ ಗಾಢ ಹಸಿರನ್ನು ಎಬ್ಬಿಸುವ ದೇವಳದ ಕೈಂಕರ್ಯ ನಿಜಕ್ಕೂ ಮಾದರಿ. ಅಳಿವಿನಂಚಿಗೆ ಜಾರುತ್ತಿರುವ ತಳಿಗಳನ್ನು ನೆಟ್ಟು ಉಳಿಸಲು ಇಂತಹ ಆಂದೋಳನಗಳಿಂದ ಸಾಧ್ಯ. ಒಂದು ನೇರಳೆ ಮರ ಕಟ್ಟಿಕೊಟ್ಟ ಹಸಿರಿನ ಜ್ಞಾನವು ಬಜಕೂಡ್ಲನ್ನು ಆವರಿಸಿದೆ ಎಂದಾದರೆ ಉಳಿದೆಡೆ ಯಾಕೆ ಸಾಧ್ಯವಿಲ್ಲ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ತನ್ನ ಸೀಮೆಯಲ್ಲೂ ಹಸಿರೆಬ್ಬಿಸುವ ಕೆಲಸ ಮಾಡಿದೆ.
ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯು ಪೆರ್ಲ ಪೇಟೆಯಲ್ಲಿದೆ. ಶಾಲೆಗೆ ಸುಮಾರು ಹನ್ನೆರಡೆಕ್ರೆ ಸ್ವಂತ ಭೂಮಿ. ಪೂರ್ತಿ ಮುರಕಲ್ಲಿನ (ಲ್ಯಾಟರೈಟ್) ಹಾಸು. ಒಂದೂವರೆ ದಶಕದ ಹಿಂದಿನ ಆ ದಿನವನ್ನು ಉಮೇಶ್ ಜ್ಞಾಪಿಸಿಕೊಂಡರು. “ಮನೆಯಿಂದ ಮಧ್ಯಾಹ್ನ ಶಾಲೆಗೆ ಬರುತ್ತಿದ್ದೆ. ವಿದ್ಯಾರ್ಥಿಗಳು ಡಾನ್ಸ್ ಪ್ರಾಕ್ಟಿಸ್ ಮಾಡುತ್ತಿದ್ದರು. ಪಾದೆಯೂ (ಮುರಕ್ಕಲ್ಲು) ಬಿಸಿ, ಸೂರ್ಯನ ಬಿಸಿ. ಮಕ್ಕಳು ಬೆವರು ಸುರಿಸುತ್ತಾ ಕಷ್ಟ ಪಡುವುದನ್ನು ನೋಡಿ ಸಂಕಟ ಪಟ್ಟೆ. ಹಸಿರೆಬ್ಬಿಸುವ ಸಂಕಲ್ಪದ ಬೀಜ ಅಂದು ಬಿತ್ತಲ್ಪಟ್ಟಿತು.”
1998. ಶಾಲೆಯಲ್ಲಿ ‘ನೇಚರ್ ಕ್ಲಬ್’ ಉದ್ಘಾಟನೆ. ಪರಿಸರವಾದಿ ದಿ.ಶಂಪಾ ದೈತೋಟರಿಂದ ಶುಭ ಚಾಲನೆ. ಅಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಹಸಿರೆಬ್ಬಿಸುವ ಸತ್ಸಂಕಲ್ಪ. ಕಾರ್ಯಕ್ರಮ ಮುಗಿಯುವಾಗ ಎಲ್ಲರ ಮನದಲ್ಲೂ ಹಸಿರೆದ್ದಿತ್ತು. ಶಂಪಾರ ಪರಿಸರದ ಪಾಠವು ಮಕ್ಕಳ ಮತಿಗೆ ನಿಲುಕಿತ್ತು, ಸಿಲುಕಿತ್ತು. ಹದಿನೇಳು ವರುಷವಾಯಿತು. ಈಗ ನೋಡಿ, ಬೋಳು ಮುರಕಲ್ಲಿನ ಮೇಲೆ ಎದ್ದ ಹಸಿರು ಸಂಪತ್ತು.
ಆಗ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ನೋಡಿದರೆ ನಂಬಲಾಗದಷ್ಟು ಪರಿವರ್ತನೆ. ಗಿಡ, ಪೊದೆ, ಮರಗಳ ರಾಶಿ. ಎರಡು ಕಡೆ ಸುಮಾರು ನಾಲ್ಕೆಕರೆಯಲ್ಲಿ ಗಾಢ ಕಾಡು ಬೆಳೆದಿದೆ. ಹಲಸು, ಹೆಬ್ಬಲಸು, ಚಂದಳಿಕೆ, ಅಶ್ವತ್ಥ, ನೇರಳೆ, ಮಂದಾರ, ಗೋಳಿ, ಮಹಾಗನಿ, ಮರುವ.. ಮೊದಲಾದ ಮರಗಳಿವೆ. ಅರಣ್ಯ ಇಲಾಖೆಯ ಹಸಿರು ಪ್ರೀತಿಯ ಅಧಿಕಾರಿಗಳನ್ನೂ ಕಾಡು ಸೆಳೆದಿದೆ. ಏನಿಲ್ಲವೆಂದರೂ ಇನ್ನೂರೈವತ್ತಕ್ಕೂ ಮಿಕ್ಕಿ ವಿವಿಧ ಜಾತಿಯ ಮರ, ಗಿಡಗಳಿವೆ. ಕಲ್ಲಿನ ಮಧ್ಯೆ ಅಲ್ಲಿಲ್ಲಿ ಇದ್ದ ಮಣ್ಣಿನಲ್ಲಿ ಮರಗಳು ಬೇರಿಳಿಸಿಕೊಂಡಿವೆ.
“ಈಗ ನೋಡಿ ಮಕ್ಕಳಿಗೆ ಪ್ರಕೃತಿಯ ಮಧ್ಯೆಯೇ ಪಾಠ, ಆಟ. ಸಹಜ ನೆರಳು, ಗಾಳಿ. ಮಕ್ಕಳು ಖುಷ್. ಇಷ್ಟೇ ಅಲ್ಲ. ಮರದ ನೆರಳಿನಲ್ಲಿ ಸಣ್ಣ ಕಾರ್ಯಕ್ರಮ ಮಾಡಬಹುದಾದ ವೇದಿಕೆ ನಿರ್ಮಿಸಬೇಕೆಂದಿದೆ,” ಎಂದರು ಉಮೇಶ್. ಇವರು ನೇಚರ್ ಕ್ಲಬ್ಬಿಗೆ ದೊಡ್ಡ ಹೆಗಲನ್ನು ನೀಡಿದ್ದರು. ಈಗ ಆ ಜವಾಬ್ದಾರಿಯನ್ನು ಅಧ್ಯಾಪಕ ಪ್ರವೀಣ್ ನಿಭಾಯಿಸುತ್ತಾರೆ. ರಕ್ಷಣೆ ಮತ್ತು ಆರೈಕೆಯ ಫಲವಾಗಿ ರೂಪುಗೊಂಡ ಪೆರ್ಲ ಶಾಲೆಯ ಕಾಡಿನ ಕತೆ ನಾಡಿಗೆ ಮಾದರಿ. ಈಗಿನ ಮುಖ್ಯಗುರು ಸುಬ್ರಹ್ಮಣ್ಯ ಶಾಸ್ತ್ರಿ, ಅಧ್ಯಾಪಕ ವೇಣುಗೋಪಾಲ, ಅಧ್ಯಾಪಕರ ವೃಂದ, ಪಾಲಕರು.. ಹೀಗೆ ಹಲವರ ಶ್ರಮವು ಕಾಡಿಗೆ ರಕ್ಷೆ.
ಇಂತಹ ಹಸಿರು ಸೇವೆಗೆ ಸಾರ್ವಜನಿಕರ ಸಹಕಾರ ಬೇಕು. ಕೇವಲ ಅಧ್ಯಾಪಕರು, ವಿದ್ಯಾರ್ಥಿಗಳು ಆರ್ಥಿಕ ಭಾರವನ್ನು ಹೊರುವುದು ತ್ರಾಸ. ಬೆಳೆದ ಕಾಡಿನ ರಕ್ಷಣೆಯಾಗಬೇಕು. ಭದ್ರವಾದ ಆರ್ಥಿಕ ಅಡಿಗಟ್ಟು ಬೇಕು. ಹಸಿರು ಪ್ರೀತಿಯ ಸನ್ಮನಸ್ಸಿನವರತ್ತ ಕಾಡು ಕಾದು ನೋಡುತ್ತಿದೆ.
ಅಧ್ಯಾಪಕ ಉಮೇಶ್ ಪೆರ್ಲರ ಹಸಿರು ಕಾಯಕಕ್ಕೆ ಕೇರಳ ಸರಕಾರವು ಈಚೆಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.