ನಾಡು ಒಡೆಯುವ ಮಾತಿಗೆ ಬೇಕಿದೆ ಕಡಿವಾಣ
ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಆಹಾರ, ನಾಗರಿಕ ಪೂರೈಕೆ ಮತ್ತು ಅರಣ್ಯ ಸಚಿವರಾಗಿರುವ ಉಮೇಶ್ ಕತ್ತಿ ಅವರು ಪದೇ ಪದೇ ಕನ್ನಡ ನಾಡು ವಿಭಜನೆಯ ಮಾತುಗಳನ್ನಾಡುತ್ತಿದ್ದಾರೆ. ಕಳೆದ ಹದಿನೈದು ದಿನದಲ್ಲಿ ಎರಡು ಬಾರಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ ಎಂದು ಸೊಲ್ಲೆತ್ತಿದ್ದಾರೆ. ಸೋಮವಾರ ಕಲಬುರಗಿಯಲ್ಲಿ ಸುದ್ಧಿಗಾರರ ಜತೆ ಮಾತನಾಡುತ್ತಾ, "ದೇಶದಲ್ಲಿ ಈಗಿರುವ ೨೮ ರಾಜ್ಯಗಳು ಮುಂದಿನ ದಿನಗಳಲ್ಲಿ ೫೦ ರಾಜ್ಯಗಳಾಗುತ್ತವೆ. ಹೀಗಾಗಿ ಇಂದಲ್ಲ, ನಾಳೆ ಉತ್ತರ ಕರ್ನಾಟಕ ಜನಸಂಖ್ಯೆ ಆಧಾರಿತವಾಗಿ ಪ್ರತ್ಯೇಕ ರಾಜ್ಯ ಆಗಲಿದೆ. " ಎಂದು ಪ್ರತಿಪಾದಿಸಿದ್ದಾರೆ. ಇದು ಅವರ ಎಂದಿನ ರಾಜ್ಯ ಒಡೆಯುವ ಮಾತಿನ ವರಸೆ. ಮತ್ತೊಂದೆಡೆ, ಸಚಿವರನ್ನು ಭೇಟಿಯಾದ ಕೆಲವರು ಮೈಸೂರು ಪೇಟ ತೊಡಿಸಲು ಹೋದಾಗ ನಿರಾಕರಿಸಿದ್ದಾರೆ. ಆ ಮೂಲಕ ಉತ್ತರ ಕರ್ನಾಟಕದ ಜನರ ವಿರುದ್ಧ ದಕ್ಷಿಣ ಕರ್ನಾಟಕದ ಜನರನ್ನು ಎತ್ತಿಕಟ್ಟುವ ಪ್ರಯತ್ನವನ್ನು ಮಾಡುತ್ತಿರುವುದು ಸ್ಪಷ್ಟ. ಕತ್ತಿ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಲಘುವಾಗಿ, ಉಡಾಫೆಯಾಗಿ ಮಾತನಾಡುವುದು ಹೊಸದೇನಲ್ಲ.
ಈ ಹಿಂದೆಯೇ ಅನೇಕ ಬಾರಿ ಅಖಂಡ ರಾಜ್ಯವನ್ನು ಒಡೆಯುವ ಅಬದ್ಧ ಮಾತುಗಳನ್ನಾಡಿದ್ದಾರೆ ಮತ್ತು ಅವರ ಧೋರಣೆಯನ್ನು ಏಕಧ್ವನಿಯಲ್ಲಿ ಇಡೀ ನಾಡು ಖಂಡಿಸಿದೆ. ಈಗಲೂ ಖಂಡಿಸಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತಿನಲ್ಲಿ ಅಷ್ಟೊಂದು ಆಸಕ್ತಿ ತೋರಿಸುವ ಕತ್ತಿ ಅವರಿಗೆ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಿರುವ ಸಣ್ಣ ಪ್ರಯತ್ನ ಕೃತಿಯಲ್ಲಿ ಕಾಣುವುದಿಲ್ಲ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಕೇವಲ ರಾಜಕೀಯ ಹಿತಾಸಕ್ತಿಗಾಗಿ ಪ್ರತ್ಯೇಕತೆಯ ದನಿ ಎತ್ತಿದ್ದಾರೆ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು, ಕನ್ನಡಿಗರನ್ನು ಸ್ವಾತಂತ್ರ್ಯದ ಬಳಿಕ ಭಾಷಾವಾರು ಪ್ರಾಂತ್ಯವಾಗಿ ಒಗ್ಗೂಡಿಸಲು ನಮ್ಮ ಹಿರಿಯರು ಮಾಡಿರುವ ತ್ಯಾಗದ ಅರಿವು ಒಂಚೂರಾದರೂ ಇರಬೇಕಿತ್ತು. ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಹಿಂದುಳಿದಿದ್ದು, ಪ್ರತ್ಯೇಕ ರಾಜ್ಯ ಅಗತ್ಯ ಎನ್ನುವುದಾದರೆ, ಅದಕ್ಕೆ ಕಾರಣ ಯಾರು? ಉತ್ತರ ಕರ್ನಾಟಕವನ್ನು ಪ್ರತಿನಿಧಿಸುತ್ತಾ ಬಂದಿರುವ ಉಮೇಶ್ ಕತ್ತಿಯವರಂಥ ರಾಜಕಾರಣಿಗಳೂ ಕಾರಣ. ಮೇಲಾಗಿ, ಈಗ ಅದೇ ಭಾಗದ ಮುಖ್ಯಮಂತ್ರಿಗಳಿದ್ದಾರೆ. ಅವರಿಂದಲೇ ಏನೇನು ಅಭಿವೃದ್ಧಿಯಾಗಬೇಕೋ ಅದನ್ನು ಆಸ್ಥೆಯಿಂದ ಮಾಡಿಸಿಕೊಳ್ಳಲಿ. ಯಾರ ವಿರೋಧವಿದೆ? ಹಾಗೊಂದು ವೇಳೆ, ಉ.ಕ. ಅಭಿವೃದ್ಧಿಯ ನಿಜವಾದ ಕಳಕಳಿ, ಪ್ರಾಮಾಣಿಕತೆ ಇದ್ದರೆ ಕತ್ತಿ ಅವರು ತಮ್ಮ ಸಚಿವಗಿರಿಯನ್ನು ಉಳಿಸಿಕೊಂಡು ಕೆಲಸ ಮಾಡಲಿ, ಇಲ್ಲದಿದ್ದರೆ ಸಚಿವ ಪದವಿಯಿಂದ ಹೊರಗುಳಿದು, 'ರಾಜಕೀಯೇತರ ಹೋರಾಟ'ವನ್ನು ಸಂಘಟಿಸಲಿ. ಆಗ, ಜನರೇ ಅವರಿಗೆ ಬೆಂಬಲ ನೀಡುತ್ತಾರೆ. ಇಲ್ಲದಿದ್ದರೆ ಕತ್ತಿ ಅವರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ, ಮತ್ತೆ ಅಧಿಕಾರ ಪಡೆಯುವುದಕ್ಕಾಗಿ ರಾಜ್ಯವನ್ನು ಒಡೆಯುವ ಭಾವನಾತ್ಮಕ ಮಾತುಗಳನ್ನಾಡುತ್ತಿದ್ದಾರೆಂದೇ ಜನ ಭಾವಿಸುತ್ತಾರೆ. ಅದೇ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಯಿ, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿದಂತೆ ಎಲ್ಲರೂ ಕತ್ತಿ ಅವರ ಮಾತನ್ನು ಖಂಡಿಸಿದ್ದಾರೆ. ಆದರೂ ಅವರು ಪ್ರಲಾಪ ನಿಲ್ಲಿಸಿಲ್ಲ. ಅವರ ಬಾಯಿ ಮುಚ್ಚಿಸುವ ಕೆಲಸವನ್ನು ಬಿಜೆಪಿ ಅಗತ್ಯವಾಗಿ ಮಾಡಬೇಕು.
ಅಭಿವೃದ್ಧಿ ಕುರಿತು ಆಧುನಿಕ ಜಗತ್ತಿನ ತಿಳುವಳಿಕೆ ಆಡಳಿತ ವಿಕೇಂದ್ರಿಕರಣವನ್ನು ಮಾನ್ಯ ಮಾಡಿದೆ. ಅದು ಅಭಿವೃದ್ಧಿಯ ಹೊಸ ನೀತಿ ಎಂದು ಪರಿಭಾವಿಸಲಾಗುತ್ತದೆ. ಆಡಳಿತವನ್ನು ಸರಾಗವಾಗಿ ನಡೆಸಲು, ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ವಿಕೇಂದ್ರಿಕರಣವನ್ನು ಒಪ್ಪಬಹುದು. ಆದರೆ, ವಿಕೇಂದ್ರಿಕರಣವೇ ಬೇರೆ, ಪ್ರತ್ಯೇಕತೆಯೇ ಬೇರೆ. ವಿಕೇಂದ್ರಿಕರಣದ ಹೆಸರಿನಲ್ಲಿ ರಾಜಕೀಯ ಕಾರಣಕ್ಕಾಗಿ ನಾಡನ್ನು ಪ್ರತ್ಯೇಕಿಸುವ ಮಾತುಗಳನ್ನು ಎಂದಿಗೂ ಬೆಂಬಲಿಸಬಾರದು. ಇಂದು ಉತ್ತರ ಕರ್ನಾಟಕ, ನಾಳೆ ಕರಾವಳಿ ಕರ್ನಾಟಕ ಎಂದು ವಿಭಜನೆಯಾದರೆ ಗತಿ ಏನು? ಇದಕ್ಕೆಲ್ಲ ಕನ್ನಡಿಗರು ಯಾವುದೇ ಕಾರಣಕ್ಕೂ ಅವಕಾಶವನ್ನು ನೀಡಬಾರದು. ಪ್ರತ್ಯೇಕತೆಯ ನೀತಿಯನ್ನು, ಕೃತ್ಯಗಳನ್ನು ಈಗಿನಿಂದಲೇ ನಿಯಂತ್ರಿಸುವ ಕೆಲಸ ಮಾಡಬೇಕು. ಸರಕಾರ ಕೂಡ ಉತ್ತರ ಕರ್ನಾಟಕ ಸೇರಿದಂತೆ ಎಲ್ಲೆಲ್ಲಿ ಅಭಿವೃದ್ಧಿಯ ಕೊರತೆ ಇದೆಯೊ ಅತ್ತ ಹೆಚ್ಚಿನ ಗಮನ ಹರಿಸಬೇಕು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೮-೦೬-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ