ನಾಡು ಕನ್ನಡ ನುಡಿ ಕನ್ನಡ

ನಾಡು ಕನ್ನಡ ನುಡಿ ಕನ್ನಡ

ಕನ್ನಡದ ಕುಲದೇವಿ

ಕಾಪಾಡು ಬಾ ತಾಯೆ/

ಹೊನ್ನುಡಿಯು ಚೆನ್ನುಡಿಯ ಬಾಳದೀವಿಗೆಯಾಗೆ//

 

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ/

ತಾಯಿನೆಲದ ಜಯಭೇರಿ ನಾವಾದೆವೆನ್ನಿ//

 

ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ/

ಕನ್ನಡವೆಯೆನ್ನುಸಿರು ಪೆತ್ತೆನ್ನ ತಾಯಿ//

 

ನಭದೆಲ್ಲೆಡೆ ಹಾರಾಡಿದೆ ಕನ್ನಡದ ಧ್ವಜವು/

ಗಿರಿಮುಗಿಲ ಅಪ್ಪಿದೆ ಕನ್ನಡಿಗರ ಕರೆದಿದೆ/

ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಕಂಠಪಾಠ ಮಾಡಿ ಬೆಳೆದವರು ಕನ್ನಡಿಗರು.ಕನ್ನಡವೆಂದರೆ ಅದು ಕೇವಲ ಭಾಷೆ ಮಾತ್ರವಲ್ಲ.ಅದೊಂದು ಬೆಸುಗೆ,ಹೃದಯ ಹೃದಯಗಳ ಹತ್ತಿರ ತರುವ ಅಯಸ್ಕಾಂತದಂತೆ. ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಸಂವಹನ, ಒಗ್ಗೂಡಿಸುವಿಕೆ ಎಲ್ಲವೂ ಅಡಗಿದೆ. ತನ್ನ ಬದುಕಿನೊಂದಿಗೆ ಇತರರ ಬದುಕಿಗೂ ದಾರಿತೋರುವುದೆ ಔದಾರ್ಯ.

‘ಮನುಷ್ಯ ಜಾತಿ ತಾನೊಂದೆ ವಲಂ’ ಆದಿಕವಿ ಪಂಪನ ಉಕ್ತಿ. ‘ವಿಶ್ವ ಮಾನವ ತತ್ವ’ ರಾಷ್ಟ್ರಕವಿ ಕುವೆಂಪುರವರದು. ವಚನಕಾರರ ನುಡಿ ದೇಹವೇ ದೇಗುಲ, ಭಗವಂತ ಅಂತರಂಗದಲ್ಲಡಗಿದ್ದಾನೆ, ದಯೆಯೇ ಧರ್ಮದ ಮೂಲವಲ್ಲವೇ? ಸರ್ವ ಜನಾಂಗದ ಶಾಂತಿಯ ತೋಟ.ಜಾತಿ-ನೀತಿ, ಮತ-ಆಚರಣೆ ಎಲ್ಲವೂ ನಗಣ್ಯ, ಮಾನವ ಜಾತಿಯೊಂದೇ.

ಸನ್ಮಾನ್ಯ ಆಲೂರು ವೆಂಕಟರಾಯರನ್ನು ಕರ್ನಾಟಕ ಏಕೀಕರಣದ ಪಿತಾಮಹ ಹೇಳುತ್ತಾರೆ. ಮೊದಲ ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರು, ಹೋರಾಟಗಾರರು. ೧೯೫೬ ನವಂಬರ ೧ರಂದು ಕನ್ನಡ ಭಾಷೆಯನ್ನು ಮಾತನಾಡುವ ಪ್ರಾಂತ್ಯಗಳನ್ನು ಮೈಸೂರು ಸಂಸ್ಥಾನದಲ್ಲಿ ವಿಲೀನಗೊಳಿಸಲಾಯಿತು. ಇದೇ ನಾಡಹಬ್ಬ, ರಾಜ್ಯೋತ್ಸವವೆಂದು ಅನೇಕ ಚಟುವಟಿಕೆಗಳೊಂದಿಗೆ,ಸಭೆ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಅಭಿನಂದನೆಯೆಂದು ಆಚರಿಸಲ್ಪಟ್ಟಿತು. ಮುಂದೆ ೧೯೭೩ ನವಂಬರ ಒಂದರಂದು ‘ಕರ್ನಾಟಕ’ ವೆಂದು ನಾಮಕರಣವಾಯಿತು.

ನಮ್ಮ ನಾಡಿನ ಅನೇಕ ಹಿರಿಯ ಕವಿಗಳು ಇದಕ್ಕಾಗಿ ಹೋರಾಡಿದವರು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಅನಕೃ, ಡಾ ಶಿವರಾಮ ಕಾರಂತ, ಎ.ಎನ್ ಕೃಷ್ಣರಾವ್, ಬಿ.ಎಂ ಶ್ರೀಯವರು ಮುಂತಾದ ಸಾಹಿತಿಗಳ ಗಡಣವೇ ಒಟ್ಟಾಯಿತು.

ಆಡಳಿತ, ಮಾತು, ಕಾನೂನು ಎಲ್ಲದರಲ್ಲಿಯೂ ಕನ್ನಡವಿರಲೇ ಬೇಕು. ನಾಡಗೀತೆ ಅಂಗೀಕಾರವಾಯಿತು. ತಾಯಿ ಭುವನೇಶ್ವರಿ ಮಾತೆಯ ಮೆರವಣಿಗೆ. ಶಾಲಾ ಕಾಲೇಜ್ ಗಳಲ್ಲಿ, ಸರಕಾರಿ ಕಛೇರಿಗಳಲ್ಲಿ ಆಚರಿಸುವುದು. ಮಕ್ಕಳಿಗೆ ಏಕೀಕರಣದ ಹಿಂದಿನ ಶ್ರಮದ ಅರಿವನ್ನು ನೀಡುವ ಕೆಲಸವಾಗಬೇಕು. ಮಾತೃಭಾಷೆ ಪ್ರಾಥಮಿಕ ಹಂತದಲ್ಲಿ ಕಡ್ಡಾಯ. ತಾಯಿ ಮಾತಿನ ಪರಿಚಯ ಪ್ರತಿ ಮಗುವಿಗೂ ಮನದಟ್ಟು ಮಾಡಿಕೊಡಬೇಕು. ಕನ್ನಡ ನೆಲಜಲದ ರಕ್ಷಣೆಯಾಗಬೇಕು. ಅನ್ಯ ಭಾಷೆಯನ್ನು ಗೌರವಿಸೋಣ, ವ್ಯವಹಾರಕ್ಕೆ ಎಲ್ಲಾ ಭಾಷೆಯೂ ಬೇಕು. ತಾಯಿಮಾತು ಮರೆಯದಿರೋಣ. ಒಂದು ದಿನ ಮಾತ್ರ ಆಚರಣೆ ಮಾಡದೆ ನಿತ್ಯ ಜೀವನದಲ್ಲಿ ಅಳವಡಿಸಿದಾಗ ಸಾರ್ಥಕತೆ. ಉನ್ನತ ಶಿಕ್ಷಣದಲ್ಲಿಯೂ ಮಾತೃಭಾಷೆಗೆ ಸ್ಥಾನ ಕಲ್ಪಿಸಬೇಕೆಂಬ ಹೋರಾಟ ನಡೆಯುತ್ತಲೇ ಇದೆ. ಆಂಗ್ಲ ಅಥವಾ ಇನ್ನಿತರ ಭಾಷೆಗಳು ಬೇಕು. ಬೇಡವಂದಲ್ಲ. ವ್ಯವಹಾರಕ್ಕೆ ಎಲ್ಲವೂ ಬೇಕು. ಹಾಗೆಂದು ಅದಕ್ಕೆ ಜೋತು ಬೀಳುವುದು ಸರಿಯೇ? ಕಂಡು ಕೇಳಿ ನೋಡಿದ ಹಾಗೆ ಲಕ್ಷ ಲಕ್ಷ ಹಣ ಸುರಿದು ಪೂರ್ವ ಪ್ರಾಥಮಿಕದಿಂದಲೇ ತಮ್ಮ ಮಕ್ಕಳನ್ನು ಕಲಿಸುವುದು ಸಾಮಾನ್ಯವಾಗಿದೆ. ತಾಯಿ ಭಾಷೆ ಬೇಡವೇ ಬೇಡ. ಮನೆಯಲ್ಲಿ ಸಹ ಆಂಗ್ಲ ಭಾಷೆಯೇ ಆಗಬೇಕೆಂಬ ಧೋರಣೆ ಸಲ್ಲದು. ಇತರ ಭಾಷೆಗಳನ್ನು ಕಲಿಯೋಣ, ಕಲಿಸೋಣ, ಬೇಡ ಅನ್ನುವವರಾರಿಲ್ಲ, ಹಾಗೆಂದು ಮಾತೃಭಾಷೆ, ತಾಯಿ ಭಾಷೆ, ನೆಲದ ಮಾತುಗಳ ಮರೆಯುವುದು ಸಲ್ಲದು. ಕನ್ನಡ ನೆಲದಲ್ಲಿ ಕನ್ನಡಕ್ಕಾಗಿ ಹೋರಾಡುವುದೆಂದರೇನು? ಅರ್ಥವಿದೆಯೇ?ನಾಡು ನುಡಿ ನಮ್ಮ ಸಂಸ್ಕೃತಿ,ಪರಂಪರೆಯದು.

ಕನ್ನಡಕೆ ಹೋರಾಡು ಕನ್ನಡದ ಕಂದ

ಕನ್ನಡವ ಕಾಪಾಡು ನನ್ನ ಆನಂದ

ಎಂಥ ಆನಂದವಾದ, ಅಪ್ಯಾಯಮಾನವಾದ ಸಾಲುಗಳು, ಬಡಿದೆಬ್ಬಿಸುವಂತಿದೆ. ಆಡಳಿತ ಭಾಷೆ ಕನ್ನಡ ಕನ್ನಡ ನಾಡಿನಲ್ಲಿ ಇರಲೇಬೇಕು. ನಮ್ಮ ಮಣ್ಣಿನ ಸೊಗಡಿನ ಸಂರಕ್ಷಣೆ ಕನ್ನಡಿಗರಾದ ನಮ್ಮೆಲ್ಲರ ಹೊಣೆ. ಭಾಷೆ ಮೇಲೆ ಪ್ರೀತಿ, ಗೌರವ ಇದ್ದಾಗ ಎಲ್ಲವೂ ಸಾಧ್ಯ. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಚಿಕ್ಕದಿಂದಲೇ ಮಕ್ಕಳಿಗೆ ಕಲಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೂಲಸೌಕರ್ಯಗಳಿರಬೇಕು. ಹೆತ್ತವರು ಕನ್ನಡ ಶಾಲೆಯತ್ತ ಮುಖ ಮಾಡುವಂತಿರಬೇಕು. ಶಿಕ್ಷಣ ಇಲಾಖೆ ಸಹ ಈ ನಿಟ್ಟಿನಲ್ಲಿ ತುಂಬು ಸಹಕಾರ ನೀಡಬೇಕು. ಎಲ್ಲಾ ಕ್ಷೇತ್ರದಲ್ಲೂ ಕನ್ನಡಿಗರಿಗೆ ಮೊದಲ ಆದ್ಯತೆ ಘೋಷಣೆಯಾಗಬೇಕು. ಸಿರಿಗನ್ನಡದ ಕಂಪು ಶ್ರೀಗಂಧದ ಘಮಲಂತೆ ಹಬ್ಬಿ ಬೆಳೆಯಲೆಂಬ ಆಶಯ. ಕನ್ನಡದ ಉಳಿವು ಅಳಿವು ಕನ್ನಡಿಗರ ಕೈಯಲ್ಲೇ ಇದೆ. ಕನ್ನಡ ನೆಲಜಲದ ಹಿರಿಮೆ-ಗರಿಮೆಗಳನ್ನು ಎತ್ತಿ ಹಿಡಿದು, ತಾಯ ಋಣ ಕಿಂಚಿತ್ತಾದರೂ ತೀರಿಸೋಣ. ಕನ್ನಡಮ್ಮನ ಬಯಕೆಯ ಅರ್ಥವಿಸಿಕೊಳ್ಳೋಣ.

(ಸಂಗ್ರಹ :ಕರ್ನಾಟಕ ಏಕೀಕರಣ)

-ರತ್ನಾ ಕೆ.ಭಟ್,ತಲಂಜೇರಿ ಪುತ್ತೂರು

ಚಿತ್ರ ಕೃಪೆ; ಇಂಟರ್ನೆಟ್ ತಾಣ