ನಾಣ್ಯಗಳ ಎಟಿಎಂ: ಚಿಲ್ಲರೆ ಸಮಸ್ಯೆಗೆ ಉತ್ತಮ ಪರಿಹಾರ
ದೇಶದ ಕೆಲವೆಡೆ ಚಿಲ್ಲರೆ ನಾಣ್ಯಗಳನ್ನು ನೀಡುವ ಎಟಿಎಂ ಯಂತ್ರಗಳನ್ನು ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಮುಂದಾಗಿದೆ. ಮೊದಲಿಗೆ ಪ್ರಾಯೋಗಿಕವಾಗಿ ೧೨ ನಗರಗಳಲ್ಲಿ ಸ್ಥಾಪಿಸಿ, ಉತ್ತಮ ಪ್ರತಿಕ್ರಿಯೆ ಬಂದರೆ, ಇನ್ನೆಲ್ಲಾ ಕಡೆಗೆ ಅವುಗಳನ್ನು ವಿಸ್ತರಿಸಲು ನಿರ್ಧರಿಸಿದೆ. ಲಾಗಾಯ್ತಿನಿಂದಲೂ ಜನಸಾಮಾನ್ಯರು ಎದುರಿಸುತ್ತಿರುವ ಚಿಲ್ಲರೆ ಸಮಸ್ಯೆಗೆ ಇದು ಉತ್ತಮ ಪರಿಹಾರವಾಗಬಲ್ಲದು. ಇಂದು ಹೋಟೇಲ್, ದಿನಸಿ ಅಂಗಡಿ, ತರಕಾರಿ ಅಂಗಡಿ, ಬಸ್ ಗಳು, ಹಾಲಿನ ಬೂತ್ ಹೀಗೆ ಎಲ್ಲೆಡೆ ಚಿಲ್ಲರೆ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಜಗಳಗಳೂ ಆಗುತ್ತವೆ. ಜನರು ನೇರವಾಗಿ ಬ್ಯಾಂಕುಗಳಿಗೆ ಹೋಗಿ ಚಿಲ್ಲರೆ ಕೇಳಿದರೆ ಸಿಗುವುದಿಲ್ಲ. ಮೊದಲೇ ತಿಳಿಸಿಕೊಂಡು ಚಿಲ್ಲರೆ ಪಡೆಯಬೇಕು. ಅದೊಂದು ತ್ರಾಸದಾಯಕ ಪ್ರಕ್ರಿಯೆ. ಬೆಂಗಳೂರಿನ ಆರ್ ಬಿ ಐ ಕಚೇರಿಯಲ್ಲಿ ಚಿಲ್ಲರೆ ಸಿಗುತ್ತದೆ. ಆದರೆ ರಾಜ್ಯದ ಎಲ್ಲರೂ ಅಲ್ಲಿಗೆ ಹೋಗಿ ಚಿಲ್ಲರೆ ತೆಗೆದುಕೊಂಡು ಬರಲು ಸಾಧ್ಯವಿಲ್ಲ. ಹೀಗಾಗಿ ಆರ್ ಬಿ ಐ ಹಾಗೂ ಬ್ಯಾಂಕುಗಳಿಂದ ಚಿಲ್ಲರೆ ತಂದು ವ್ಯಾಪಾರಿಗಳಿಗೆ ನೀಡುವ ದೊಡ್ದ ಕಮೀಷನ್ ಏಜೆಂಟರ ಜಾಲವೇ ಇದೆ. ದೇಶದಲ್ಲಿ ಎಲ್ಲರ ಕೈಗೆ ಸುಲಭವಾಗಿ ಸಿಗಬೇಕಾದ ನಾಣ್ಯಗಳು ಇಷ್ಟು ‘ದುಬಾರಿ' ಆಗಬೇಕಾದ ಅಗತ್ಯವೇನೂ ಇರಲಿಲ್ಲ. ಆದರೂ ಸಮಸ್ಯೆಯನ್ನು ಆರ್ ಬಿ ಐ ಈವರೆಗೂ ಹಾಗೇ ಉಳಿಸಿಕೊಂಡಿತ್ತು ಎಂಬುದೇ ಅಚ್ಚರಿಯ ಸಂಗತಿ.
ಚಿಲ್ಲರೆ ನಾಣ್ಯಗಳ ಎಟಿಎಂ ನಲ್ಲಿ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿದರೆ ನಮಗೆ ಬೇಕಾದಷ್ಟು, ಬೇಕಾದ ಮುಖಬೆಲೆಯ ಚಿಲ್ಲರೆ ಸಿಗುತ್ತದೆಯಂತೆ. ಡಿಜಿಟಲ್ ಕ್ರಾಂತಿಯ ಇನ್ನೊಂದು ಲಾಭವಿದು. ಆದರೆ ಆರ್ ಬಿ ಐ ಮೊದಲಿಗೆ ಕೇವಲ ೧೨ ನಗರಗಳಲ್ಲಿ ಸ್ಥಾಪಿಸಲು ಹೊರಟಿರುವ ನಾಣ್ಯದ ಎಟಿಎಂಗಳನ್ನು ಬಹುಷಃ ದೊಡ್ಡ ನಗರಗಳಲ್ಲೇ ಸ್ಥಾಪಿಸಲಿದೆ. ಅದರಲ್ಲಿ ಒಂದೆರಡು ಸಮಸ್ಯೆಗಳಿವೆ. ದೊಡ್ದ ನಗರಗಳಲ್ಲಿ ಒಂದು -ಎರಡು ಚಿಲ್ಲರೆ ಎಟಿಎಂ ಸ್ಥಾಪಿಸಿದರೆ ಅದರ ಲಾಭ ಎಲ್ಲರಿಗೂ ಸಿಗುವುದಿಲ್ಲ. ಎರಡನೆಯದಾಗಿ, ಇಂದು ಬೆಂಗಳೂರಿನಂತಹ ನಗರಗಳಲ್ಲಿ ಯುಪಿಐ ಜನಪ್ರಿಯವಾಗಿರುವುದರಿಂದ ಚಿಲ್ಲರೆ ಸಮಸ್ಯೆ ಅಷ್ಟಾಗಿ ಕಾಣಿಸುತ್ತಿಲ್ಲ. ಯುಪಿಐ ಬಳಕೆ ಇನ್ನೂ ಜನಪ್ರಿಯವಾಗಿಲ್ಲದ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಚಿಲ್ಲರೆ ಎಟಿಎಂಗಳ ಅಗತ್ಯ ಹೆಚ್ಚಿದೆ. ಹೀಗಾಗಿ ಚಿಲ್ಲರೆ ಎಟಿಎಂಗಳ ಸ್ಥಾಪನೆಯಲ್ಲಿ ಆರ್ ಬಿ ಐ ಜನಸಾಮಾನ್ಯರಿಗೆ ಅನುಕೂಲವಾಗುವ ಕಡೆ ಹಾಗೂ ಹೆಚ್ಚು ಅಗತ್ಯವಿರುವ ಕಡೆ ಗಮನ ಹರಿಸಿದರೆ ಇದೊಂದು ಉತ್ತಮ ಸುಧಾರಣಾ ಕ್ರಮವಾಗಬಲ್ಲದು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೦-೦೨-೨೦೨೩
ಸಾಂಕೇತಿಕ ಚಿತ್ರ ಕೃಪೆ: ಅಂತರ್ಜಾಲ ತಾಣ