ನಾತಲೀಲೆ - ಒಂದಷ್ಟು ಕಥೆಗಳು

ನಾತಲೀಲೆ - ಒಂದಷ್ಟು ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಸುರೇಂದ್ರನಾಥ್
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೭೫.೦೦, ಮುದ್ರಣ: ಆಗಸ್ಟ್, ೨೦೦೫

ನಾತಲೀಲೆ ಇದು ಕಥೆಗಾರ ಎಸ್.ಸುರೇಂದ್ರನಾಥ್ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿ ಎಂಟು ಕಥೆಗಳಿವೆ. ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗೂ ಕಥೆಗಾರ ವಿವೇಕ್ ಶಾನಭಾಗ ಇವರ ಮಾತುಗಳು ಬೆನ್ನುಡಿಯಲ್ಲಿ ಅಚ್ಚಾಗಿವೆ. ‘ನಮ್ಮ ಬದುಕಿನ ಬೆಳಕಿನ ಭಾಗಗಳಲ್ಲಿ ನಮ್ಮನ್ನು ವಿಚಿತ್ರ ರೀತಿಯಲ್ಲಿ ಬೆರಗುಗೊಳಿಸುವ ಮಾರ್ಕ್ವೈಜ್ ಮತ್ತು ನಮ್ಮ ಎದೆಯ ಕತ್ತಲ ಭಾಗಗಳನ್ನು ಪೋಲೀಸ್ ನಂತೆ ತಟ್ಟುವ ಕಾಫ್ಕಾ ನನ್ನ ಇಷ್ಟದ ಕಥೆಗಾರರು. ಅವರಿಬ್ಬರೂ ಒಟ್ಟಿಗೆ ಸೇರುವುದು ಕಷ್ಟ. ಅವರಿಬ್ಬರೂ ಒಂದೇ ಪಾತಳಿಯಲ್ಲಿ ಮಾತನಾಡುತ್ತಿರುವಂತೆ ಕತೆ ಬರೆಯಬಲ್ಲ ಶಕ್ತಿ ಸುರೇಂದ್ರನಾಥ್ ಗಿದೆ ‘ ಎನ್ನುತ್ತಾರೆ ಟಿ.ಎನ್.ಸೀತಾರಾಮ್.

ವಿವೇಕ ಶಾನಭಾಗ ಇವರು ಹೇಳುತ್ತಾರೆ “ ಸಾಮಾನ್ಯ ಜೀವನದ ಒಳಗೇ ಇರುವ ಅತಿರೇಕದ ಸಾಧ್ಯತೆಗಳ ಸುತ್ತ ಇಲ್ಲಿಯ ಕಥನಗಳು ಬೆಳೆಯುತ್ತವೆ. ಐಹಿಕ ಕೇಂದ್ರಿತ ಗ್ರಹಣ ಕ್ರಮವನ್ನು ಪ್ರಶ್ನಿಸುವುದು ಮತ್ತು ದೈಹಿಕ ವ್ಯಾಪಾರಗಳ ಸುತ್ತ ಸುತ್ತಿಕೊಂಡ ಲೋಕವೊಂದನ್ನು ಅದೇ ಪರಿಕರಗಳ ಅತಿಯ ಮೂಲಕ ಪರೀಕ್ಷಿಸುವುದನ್ನು ಈ ಕಥೆಗಳಲ್ಲಿ ಮತ್ತೆ ಮತ್ತೆ ಕಾಣಬಹುದು. ಪ್ರಪಂಚದ ಗ್ರಹಿಕೆಯು ಇಂದ್ರಿಯಗಳ ಮೂಲಕವೇ ಅನ್ನುವುದಾದರೆ, ಅದು ವಿಪರೀತಗಳನ್ನು ಕೂಡ ಒಳಗೊಂಡ ಚಿತ್ರವಾಗಬೇಕು ಎಂದು ಇವರ ಕಥೆಗಳು ಹೇಳುವಂತಿವೆ. ಇಂಥ ತುದಿಯಿಂದ ನೋಡಿದಾಗ ಸಭ್ಯ ಅಭಿವ್ಯಕ್ತಿಗಳಲ್ಲಿ ಕಟ್ಟಿಕೊಂಡ ಸಂಬಂಧಗಳಿಗೆ ಹೊಸ ಅರ್ಥಗಳು ಹೊಳೆಯುತ್ತವೆ. ಇಂಥ ಲೋಕದೃಷ್ಟಿಯು ಕನ್ನಡಕ್ಕೆ ಹೊಸದು. ಈ ಹೊಸತನವು ಇಲ್ಲಿಯ ರೂಪಕಗಳಿಗೆ ವಿಚಿತ್ರ ಪ್ರಭೆಯನ್ನು ಕೊಟ್ಟಿದೆ.” 

ನಾತಲೀಲೆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕಥೆಗಾರ ಎಸ್.ದಿವಾಕರ್ ಇವರು. ಇವರು ತಮ್ಮ ಮುನ್ನುಡಿಯಲ್ಲಿ ಲೇಖಕರ ಪ್ರತಿಯೊಂದು ಕಥೆಯನ್ನು ಸೊಗಸಾಗಿ ಪರಿಚಯಿಸಿದ್ದಾರೆ. ಇದರಿಂದಾಗಿ ನಮಗೆ ಪುಸ್ತಕ ಓದುವ ತುಡಿತ ಇನ್ನಷ್ಟು ಹೆಚ್ಚಾಗುತ್ತದೆ. ಮುನ್ನುಡಿಯ ಕೊನೆಯಲ್ಲಿ ಅವರು ಬರೆಯುತ್ತಾರೆ “ಈ ಕತೆಗಾರರು ತಮ್ಮ ಈ ಮೊದಲ ಸಂಕಲನದಲ್ಲೇ ಪರಿಣತಿಯನ್ನು ತೋರಿಸಿರುವುದನ್ನು ಪ್ರಶಂಸಿಸುತ್ತಾ ನನಗೆ ವಿಚಿತ್ರವಾಗಿ ಕಂಡ ಎರಡೇ ಎರಡು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ. ನಾತಲೀಲೆ, ಕುರುವಿನ ಗುಲಾಮ, ಗಿರಿಜಾ ಕಲ್ಯಾಣ ಈ ಮೂರು ಕಥೆಗಳ ನಾಯಕರು ಯಾಕೆ ಶಾಲೆ ಕಾಲೇಜುಗಳ ಅಧ್ಯಾಪಕರೇ ಆಗಿದ್ದಾರೆ? ಅವರು ಬೇರೆ ಕಾಯಕದಲ್ಲಿದ್ದಿದ್ದರೆ ಕತೆಗಳ ಆಶಯ ಬೇರೆಯಾಗುತ್ತಿತ್ತೇ? ಇನ್ನು ಒಂದಲ್ಲ ಎರಡಲ್ಲ, ಮೂರು ಕತೆಗಳ ನಾಯಕ - ನಾಯಕಿಯರು ಅಂತ್ಯದಲ್ಲಿ ಸಾಯಬೇಕೇಕೆ?  ಇಷ್ಟು ಪರಿಪೂರ್ಣವಾದ ಕತೆಗಳನ್ನು ಒಟ್ಟಿಗೇ ಓದಿದಾಗ ನನಗೇಕೆ ಇವು ಎದ್ದು ಕಂಡುವೋ ಗೊತ್ತಿಲ್ಲ. ಈ ಸಂಕಲನದ ಮಾಂತ್ರಿಕ ಕತೆಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಸ್ವಾಗತಾರ್ಹವಾಗಿವೆ.”

ಈ ಪುಸ್ತಕದಲ್ಲಿ ಮಾವಿನ ಮರದ ಸಂತೆ, ಕುರುವಿನ ಗುಲಾಮ, ನಾತಲೀಲೆ, ಗಿರಿಜಾ ಕಲ್ಯಾಣ, ಮಾತು ಮಾತಿಂದೆ ಅವನ ಕೊಂದಿಹರು, ಗುಪ್ತ ಸಮಾಲೋಚನೆ, ತಗೀ ಮತ್ತು ಅಂತರಂಗದ ಏಳೆಂಟು ಕತೆಗಳು ಎಂಬ ಎಂಟು ಕತೆಗಳಿವೆ. ಸುಮಾರು ನೂರು ಪುಟಗಳ ಸಣ್ಣ ಪುಸ್ತಕವಾದುದರಿಂದ ಒಮ್ಮೆಗೇ ಓದಿ ಮುಗಿಸ ಬಹುದು. ಲೇಖಕರು ಪುಸ್ತಕವನ್ನು ‘ಅಕ್ಷರಗಳ ಹುಚ್ಚು ಹತ್ತಿಸಿದ ಅಣ್ಣನಿಗೆ' ಅರ್ಪಿಸಿದ್ದಾರೆ.