ನಾತಿಚರಾಮಿ

ನಾತಿಚರಾಮಿ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್ ಸಂಧ್ಯಾರಾಣಿ
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ನಾತಿಚರಾಮಿ’ ಕೃತಿಯು ಎನ್. ಸಂಧ್ಯಾರಾಣಿ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ಮದುವೆಯ ಪ್ರಮಾಣದಲ್ಲಿ ‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ. ಈ ಪ್ರಮಾಣವು ಗೌರಿಯ ಪಾಲಿಗೆ ನಂಬಿಕೆ, ಭರವಸೆ ಆಗಬೇಕಿತ್ತು, ಆದರೆ ಅದು ಒಂದು ಅಗೋಚರ ಬಂಧನವೂ ಆಗಿರುತ್ತದೆ. ಆ ಬಂಧನ ಕೇವಲ ಮಾಡಿದ ಆ ಪ್ರಮಾಣದ್ದಲ್ಲ, ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳದ್ದು, ನಂಬಿಕೆಗಳದ್ದು, ನಿರೀಕ್ಷೆಗಳದ್ದು. ಗಂಡ ಬಿಟ್ಟು ಹೋದಮೇಲೆ ಸಹ ದಾಂಪತ್ಯದ ಈ ಪ್ರಮಾಣವನ್ನು ಕಳಚಿಕೊಳ್ಳುವುದು ಗೌರಿಗೆ ಸಲೀಸಲ್ಲ. ಇದು, ಗೌರಿ ಅವುಗಳನ್ನು ದಾಟುವ ಕಥೆ, ಆ ಮೂಲಕ ಬದುಕಿನ ಸಮೀಕರಣದಲ್ಲಿ ತನ್ನನ್ನು ತಾನು ಪಡೆದುಕೊಳ್ಳುವ ಕಥೆ ಇದಾಗಿದೆ.

ಕಾದಂಬರಿಕಾರ್ತಿಯಾಗಿರುವ ಸಂಧ್ಯಾರಾಣಿಯವರು ತಮ್ಮ ಕೃತಿಗೆ ಬರೆದ ಮೊದಲ ಮಾತು ಹೀಗಿದೆ “ ಬೇರೆ ಊರುಗಳ ವಿಷಯ ಗೊತ್ತಿಲ್ಲವಾದರೂ, ಕನ್ನಡ, ತೆಲುಗು, ತಮಿಳು-ಮೂರೂ ಭಾಷೆಗಳ, ಮೂರೂ ಭಾಷೆಯ ಸಿನಿಮಾಗಳ ಪ್ರಭಾವ ಇರುವ ಕೋಲಾರ ಜಿಲ್ಲೆಯವರಿಗೆ ಸಿನಿಮಾ ಎಂದರೆ ಅದು ಬದುಕಿನ ಅವಿಭಾಜ್ಯ ಅಂಗ! ಖುಷಿಗೆ, ನೋವಿಗೆ, ಸಂಭ್ರಮಕ್ಕೆ, ನಿರಾಸೆಗೆ, ಶಿವರಾತ್ರಿ ಜಾಗರಣೆಗೆ, ಹೊಸವರ್ಷದ ಮೊದಲ ದಿನಕ್ಕೆ, ಪರೀಕ್ಷೆ ಮುಗಿದ ನಿರಾಳಕ್ಕೆ, ರಿಸಲ್ಟ್ ಬಂದ ಖುಷಿಗೆ, ರಿಸಲ್ಟ್ ತಂದ ಅವಮಾನಕ್ಕೆ.. ಎಲ್ಲದಕ್ಕೂ ಸಿನಿಮಾ ಇರಲೇಬೇಕು. ಅಲ್ಲೇ ಹುಟ್ಟಿ ಬೆಳೆದ ನಾನು ಅದೇ ಸಂಪ್ರದಾಯವನ್ನು ಕೈಲಾದಮಟ್ಟಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೆನಾದರೂ ಸಿನಿಮಾಗೆ ಬರೆಯುತ್ತೇನೆ ಎಂದು ಯಾವತ್ತಿಗೂ ಅಂದುಕೊಂಡಿರಲಿಲ್ಲ. ಮಂಸೋರೆ ಅವರು ಇಲ್ಲದಿದ್ದರೆ ಆ ಧೈರ್ಯವನ್ನು ಸಹ ಮಾಡುತ್ತಿರಲಿಲ್ಲ. ಅಂದಹಾಗೆ ಅವರೂ ಕೋಲಾರ ಜಿಲ್ಲೆಯವರೇ! ಮಂಸೋರೆ ಸಿನಿಮಾದ ವಸ್ತುವನ್ನು ಹೇಳಿ, ಇದರ ಬಗ್ಗೆ ಸಿನಿಮಾ ಕಥೆ, ಸಂಭಾಷಣೆ ಬರೆಯಿರಿ ಎಂದಾಗ ಹೆದರಿಕೆ ಆಗಿದ್ದಂತೂ ಹೌದು. ಮೊದಲನೆಯದು ಹೊಸಕೆಲಸ ಎನ್ನುವ ಕಾರಣಕ್ಕೆ, ಎರಡನೆಯದಾಗಿ ವಸ್ತುವಿನ ಕಾರಣಕ್ಕೆ. ಆದರೆ ಅವರು ನನ್ನ ಮೇಲೆ ಇಟ್ಟ ಭರವಸೆಯಿಂದ ನಾನು ಬರೆದೆ. ಅದನ್ನು ಅಷ್ಟೇ ಸೂಕ್ಷ್ಮತೆಯಿಂದ ಮಂಸೋರೆ ಚಿತ್ರವಾಗಿಸಿದರು. ಅದಕ್ಕಾಗಿ ನಾನು ಅವರಿಗೆ ಸದಾ ಋಣಿ.

ಹಾಗೆ ಚಿತ್ರದ್ದೇ ಕಾದಂಬರಿ ರೂಪವಾಗಿದ್ದರೆ, ಚಿತ್ರ ನೋಡಿದವರು ಇದನ್ನು ಏಕೆ ಓದಬೇಕು ಎನ್ನುವ ಪ್ರಶ್ನೆ ಏಳಬಹುದು. ಮೊದಲನೆಯದಾಗಿ ಚಿತ್ರದಲ್ಲಿ ಏನು ಹೇಳುತ್ತೇವೆ, ಎಷ್ಟು ಹೇಳುತ್ತೇವೆ, ಎನ್ನುವುದಕ್ಕೆ ಮಿತಿ ಇರುತ್ತದೆ. ಆದರೆ ಕಾದಂಬರಿ ಹಾಗಲ್ಲ, ಇಲ್ಲಿ ಸಾವಧಾನವಾಗಿ ಕಥೆ ಹೇಳಬಹುದು. ಚಿತ್ರದಲ್ಲಿ ಹೇಳದ ಹಲವು ವಿಷಯಗಳನ್ನು ಇಲ್ಲಿ ಹೇಳಲಾಗಿದೆ. ಕೆಲವು ಹೊಸ ಪಾತ್ರಗಳು, ಘಟನೆಗಳು ಇವೆ. ಕಾದಂಬರಿ ಓದಿ, ಚಿತ್ರ ನೋಡಬಹುದಾದರೆ. ಚಿತ್ರ ನೋಡಿ ಕಾದಂಬರಿ ಏಕೆ ಓದಬಾರದು? ಕಾದಂಬರಿಯಾಗಿ ಓದುವುದರ ಮತ್ತೊಂದು ಅನುಕೂಲ ಎಂದರೆ ಇಲ್ಲಿ ಪಾತ್ರಗಳು, ಸನ್ನಿವೇಶಗಳು, ಸಂಭಾಷಣೆ ನನ್ನವು, ಆದರೆ ಅದು ದೃಶ್ಯವಾಗುವುದು ನಿಮ್ಮನಿಮ್ಮ ಮನೋಭೂಮಿಕೆಯಲ್ಲಿ, ಹಾಗಾಗಿ ಆ ಚಿತ್ರದ ನಿರ್ದೇಶನ ಸಂಪೂರ್ಣವಾಗಿ ನಿಮ್ಮದು!

'ನಾತಿಚರಾಮಿ'ಯನ್ನು ಕಾದಂಬರಿಯನ್ನಾಗಿಸಿ ಎಂದು ಹೇಳಿ, ಅದಕ್ಕಾಗಿ ಹುರಿದುಂಬಿಸಿದವರು ಇಷ್ಟದ ಕಥೆಗಾರ ಅಬ್ದುಲ್ ರಶೀದ್ ಅವರು. ಅವರಿಗೆ ನನ್ನ ವಂದನೆಗಳು. ಇನ್ನೇನು ಬರೆಯಲಿ? ಸಿನಿಮಾಗಿಂತ ಹೇಗೆ ಮತ್ತು ಎಲ್ಲಿ ಭಿನ್ನವಾಗಿದೆ. ಯಾವುದು ಕಾದಂಬರಿಯಾಗಿ ಇಷ್ಟವಾಯಿತು. ಯಾವುದು ದೃಶ್ಯವಾಗಿ ಮನಸ್ಸನ್ನು ತಟ್ಟಿತು ಎಂದು ದಯಮಾಡಿ ಬರೆದು ತಿಳಿಸಿ. 'ನಾತಿಚರಾಮಿ' ಈಗ ನಿಮ್ಮ ಕೈಗಳಲ್ಲಿ..."

ಈಗಾಗಲೇ ಚಲನಚಿತ್ರವಾಗಿರುವ ಈ ಕಾದಂಬರಿಯನ್ನು ಓದಿ ನೋಡುವ ಹೊಸ ಅನುಭವ ನಿಮ್ಮದಾಗಬೇಕಾದಲ್ಲಿ ೧೨೪ ಪುಟಗಳ ಈ ಕೃತಿಯನ್ನು ಸಿನೆಮಾ ನೋಡುವುದಕ್ಕಿಂತಲೂ ವೇಗವಾಗಿ ಓದಿ ಬಿಡಬಹುದು.