ನಾನಲ್ಲ...ಅವಳು

ನಾನಲ್ಲ...ಅವಳು

ಬರಹ

ಅಂದು ಅವಳ ಕಂಡಾಗ
ಮುಂಗುರುಳ ಸರಿಸಿ
ಕದ್ದು ಮುಚ್ಚಿ ಕಣ್ಣು,
ಕೆನ್ನೆಗೆ ಮುತ್ತಿಟ್ಟು, ನೀನೆ
ನನ್ನವಳು ಎಂದು ಮುದ್ದಾಡಿದ್ದ

ಅವಳ ನಗುವನು
ಕಾವ್ಯದಲಿ ವರ್ಣಿಸಿದ,
ಅವಳ ಉಬ್ಬು ತಗ್ಗುಗಳನು
ಕಾಗದದಲಿ ಗೀಚುತ್ತಾ
ಕನಸುಗಳ ಹೆಣೆದಿದ್ದ

ಸೂರ್ಯ ಮೂಡಲು ಇವನಿಗೆ
ಅವಳು ಮುಂದಿರಬೇಕು
ಕತ್ತಲಾದರೆ ಚಿಂತೆ...
ದಿನಾ ಹುಣ್ಣಿಮೆ ಯಾಕಿರಬಾರದು?
ಎಂದು ಕೇಳಿದ್ದ ಮುಖ ದಪ್ಪ ಮಾಡಿ

ಕಾಲಚಕ್ರವು ಸರಿಯುತಲಿ
ಪ್ರಾಯ ಮೀರಿತ್ತು
ಅವನು ಕೆಮ್ಮುತ್ತಾ ಕುಳಿತಿದ್ದ
ಅವಳು
ಸೊಂಟ ನೋವೆಂದು

ಈಗ ಅವಳು ಬಂದರೆ ಸಾಕು
ಅವನಿಗದು ಕಡುಗತ್ತಲೆ
ಒಮ್ಮೊಮ್ಮೆ
ಅನ್ನದಲ್ಲಿ ಬೆಳ್ಳಿ ಕೂದಲು ಸಿಕ್ತು
ಎಂದು ರಂಪ ಮಾಡುತ್ತಾನೆ.

ಮುಸ್ಸಂಜೆ ಕಡಲ ತೀರದಲ್ಲಿ
ಜೊತೆಯಾಗಿ ತೆರೆಯೆಣಿಸಿದವನು
ಈಗ ಕಡುಗತ್ತಲೆಯಲ್ಲೂ
ಅವಳ ಮುಖದ ಗೆರೆಯೆಣಿಸಿ
ತಾನಿನ್ನೂ ಯುವಕನೆಂದು ಬೀಗುತ್ತಿದ್ದ.