ನಾನಿ ನೀನ
ನಾನಿ ಎಂದಾಗ ಇದೇನಪ್ಪಾ ಎಂಬ ಪ್ರಶ್ನೆ ಏಳುವುದೇ? ನಾನು ಮತ್ತು ನೀನು ಎಂಬುದರ ಸಂಕ್ಷಿಪ್ತ ರೂಪವೇ ನಾನಿ. ಯಾವುದೇ ವಿಚಾರಗಳನ್ನು ನಾವು ಇತರರ ಮೇಲೆ ಹೇರುತ್ತೇವೆ. ಅದರೆ ಆ ವಿಚಾರಗಳಿಗೆ ನಾವು ನಮ್ಮನ್ನು ಒಳಗೊಳಿಸುವ ಅಥವಾ ಒಡ್ಡುವ ಮನಸ್ಸು ಮಾಡುವುದಿಲ್ಲ. ನಾವು ಇತರರಿಗೆ ಕೊಡುವ ಎಲ್ಲ ಸಂದೇಶಗಳಿಗೂ ನಾವು ಬದ್ಧತೆಯನ್ನು ಹೊಂದಿರಬೇಕು. ಅನ್ಯರಿಗೆ ನೀಡುವ ಸಂದೇಶಗಳು ನಮ್ಮೊಳಗೂ ಅಳವಡಿಕೆಯಾದರೆ ನಮ್ಮ ಕೆಲಸ ಅರ್ಥವತ್ತಾಗುತ್ತದೆ. ಹೇಳುವುದೊಂದು ಮಾಡುವುದೊಂದು ಎಂದಾದರೆ ಗೊಂದಲ ಸಹಜ.
ಕೇವಲ ಸಂದೇಶಗಳು ಮಾತ್ರವಲ್ಲ. ಎಲ್ಲ ಸಂದರ್ಭಗಳಲ್ಲಿಯೂ ಕೊಡುವ ಕೊಳ್ಳುವ ಸಹಕಾರಗಳಿರಬೇಕು. ನೀನನಗಿದ್ದರೆ ನಾನಿನಗೆ ಎಂಬ ಮಾತಿದೆಯಲ್ಲವೇ? ಈ ಮಾತನ್ನು ನಾ ನಿನಗಿದ್ದರೆ ನೀ ನನಗೆ ಎಂದೂ ಹೇಳ ಬಹುದಲ್ಲವೇ...?
ಕವಿ ಕಯ್ಯಾರರು ಬರೆದ ಕವನವೊಂದನ್ನು ಸಣ್ಣ ತರಗತಿಯಲ್ಲಿ ಓದಿದ ನೆನಪು.
ಸಂತೆಗೆ ಹೋದನು ಭೀಮಣ್ಣ
ಹಿಂಡಿಯ ಕೊಂಡನು ಹತ್ತು ಮಣ;
ಕತ್ತೆಯ ಬೆನ್ನಿಗೆ ಹೇರಿಸಿದ
ಕುದುರೆಯ ಜೊತೆಯಲಿ ಸಾಗಿಸಿದ.
ಕತ್ತೆಯು ಅರಚಿತು ‘ಓ ಗೆಳೆಯಾ,
ಅರ್ಧವ ನೀ ಹೊರು, ದಮ್ಮಯ್ಯ’
ಕುದುರೆಗೆ ಕೂಗದು ಕೇಳಿಸಿತು,
ಕತ್ತೆಯ ಕಿರುಚನು ಚಾಳಿಸಿತು.
ನಿನ್ನಯ ಬೆನ್ನಿಗೆ ಹಾಕಿದನು,
ಅದಕೇ ನಿನ್ನನು ಸಾಕಿದನು,
ನೀನೇ ಹೊತ್ತುಕೊ ಬೇಗ ನಡಿ,
ದಣಿಯದೊ ಬರುವನು ಹಾದಿಹಿಡಿ
ನಡುಗಿತು ಕತ್ತೆಯ ಕೈಕಾಲು!
ಬಿದ್ದಿತು ಭೂಮಿಗೆ ಕಂಗಾಲು!
ಬಂದನು ಆಗಲೆ ಭೀಮಣ್ಣ,
ಕುದುರೆಗೆ ಹೊರಿಸಿದ ಹತ್ತು ಮಣ.
ಹೊತ್ತಿತು ಕುದುರೆಯು ಹೊರೆಯನ್ನ,
ಅತ್ತಿತು ಬಗ್ಗಿಸಿತದು ಬೆನ್ನ,
ಕುದುರೆಯು ಬೇಡಿತು ಕತ್ತೆಯನು,
ಮರೆಯೆನು ನಿನ್ನುಪಕಾರವನು.
ಒಂದಿಷ್ಟಾದರೂ ಹೊತ್ತುಬಿಡು.
ನನ್ನಯ ಪ್ರಾಣವ ಉಳಿಸಿಕೊಡು’
ಕತ್ತೆಯು ಹೇಳಿತು ಹಿಗ್ಗಿನಲಿ
ಆಗೇನಂದಿಯ ಸೊಕ್ಕಿನಲಿ?
ನನ್ನಯ ಕಷ್ಟದಿ ಹಿಗ್ಗಿದ್ದಿ
ಬಂತೇ ಈಗಾದರೂ ಬುದ್ಧಿ?
ನೀ ನನಗಿದ್ದರೆ ನಾ ನಿನಗೆ
ನೆನಪಿರಲೀ ನುಡಿ ನಮ್ಮೊಳಗೆ.
ಕತ್ತೆಯ ಕಷ್ಟಕಾಲದಲ್ಲಿ ಕುದುರೆ ಹಿಗ್ಗಿತು. ಕಷ್ಟ ಸುಖಗಳು ಪ್ರತಿಯೊಂದು ಜೀವಿಗೂ ಬಂದೇ ಬರುತ್ತದೆ ಎಂಬ ಶಾಶ್ವತ ಸತ್ಯವನ್ನು ಕುದುರೆ ಮರೆತಿತ್ತು. ಕತ್ತೆಯ ಕಷ್ಟದಲ್ಲಿ ನೆರವಿಗೆ ಬಾರದೆ ಕುದುರೆಯು ತಪ್ಪೆಸಗಿತು. ತಾನು ಮಾಡಿದ ತಪ್ಪಿನ ಶಿಕ್ಷೆಯನ್ನು ಕುದುರೆ ಅಲ್ಪ ಸಮಯದಲ್ಲೇ ಅನುಭವಿಸಬೇಕಾಗಿ ಬಂದುದು ವಿಚಿತ್ರವಾದರೂ ಅದು ಸಹಜ. ಭೀಮಣ್ಣ ಕತ್ತೆಯ ಕಷ್ಟಕ್ಕೆ ಮರುಗಿ ಅದರ ಬೆನ್ನ ಹೊರೆಯನ್ನು ಕುದುರೆಯ ಬೆನ್ನಿಗೇರಿಸಿದ. ಎಲ್ಲ ಸಂದರ್ಭಗಳಲ್ಲೂ ನಾವು ಪರಸ್ಪರ ಸಹಕರಿಸುತ್ತಾ ಬಾಳುವಂತಾದರೆ ಕಷ್ಟ ಸುಖಗಳಲ್ಲಿ ಸಮ ಪಾಲು ಪಡೆಯುವಂತಾದರೆ ಈ ಜಗತ್ತೂ ಸ್ವರ್ಗವಾಗದೇ?
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ