ನಾನು ಆ ಹುಡುಗಿಗೆ ಕೈಕೊಟ್ಟಿದ್ದು ತಪ್ಪಲ್ಲ ಬಿಡಿ...............

ನಾನು ಆ ಹುಡುಗಿಗೆ ಕೈಕೊಟ್ಟಿದ್ದು ತಪ್ಪಲ್ಲ ಬಿಡಿ...............

ನನಗೆ ಮುಂಚೆಯಿಂದಾನೂ ರಕ್ತ ಕೊಡೋದು ಅಂದರೆ ಚೂರು ಭಯ. ಅದರಿಂದ ಯಾವುದೇ ಹಾನಿಯಲ್ಲ, ಅಲ್ಲದೇ ರಕ್ತ ನೀಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಕೇಳಿದ್ದರೂ ಸಹಿತ ರಕ್ತ ಕೊಡಬೇಕು ಅಂತಾ ಬಂದಾಗ ಹೆದರುತ್ತಿದ್ದೆ. ಆದರೆ ಇತ್ತೀಚೆಗೆ ಅಣ್ಣನೊಬ್ಬನಿಗೆ ಹುಷಾರಿಲ್ಲದ ಹಾಗಾಗಿ ಆಸ್ಪತ್ರೆಗೆ ಸೇರಿಕೊಂಡ. ಆಗ ನಾನು ಕೊಡಬೇಕಾದ ಪ್ರಸಂಗವೊಂದು ಒದಗಿ ಬಂದಿತು.
        ಮೊದಲೇ ಹೆದರಿದ್ದ ನಾನು ಹಾಸ್ಪಿಟಲ್ ಒಳಗೆ ಹೆದರಿಕೊಂಡೆ ಹೆಜ್ಜೆ ಹಾಕಿದೆ. ಅಲ್ಲಿಗೆ ಹೋಗುತ್ತಲೇ ನನ್ನನ್ನು ಜೊತೆಗಿದ್ದ ಗೆಳೆಯ, ಅಲ್ಲಿದ್ದ ಫಾರ್ಮ್ ಒಂದನ್ನು ತೆಗೆದು ನನಗೆ ತುಂಬಲು ನೀಡಿದ. ನಾನು ಅದನ್ನು ತೆಗೆದುಕೊಂಡು ಓದ ತೊಡಗಿದೆ. ಅದರಲ್ಲಿ ಹಲವಾರು ಪ್ರಶ್ನೆಗಲ ದೊಡ್ಡ ಪಟ್ಟಿಯೇ ಇತ್ತು. ನಾನು ಒಂದೊಂದಕ್ಕೆ ಉತ್ತರಿಸತೊಡಗಿದೆ.
        ಆಗ ಪಕ್ಕದಲ್ಲಿ ಬಂದು ನಿಂತುಕೊಂಡ ನರ್ಸ್ ಒಬ್ಬಾಕೆ “ಸರ್ ತುಂಬೋಕೆ ಗೊತ್ತಾಗುತ್ತಲ್ಲ?” ಎಂದು ಕೇಳಿದಳು. ನಾನು ಮೊದಲೇ ಗಲಿಬಿಯ ಜೊತೆಗೆ ಹದರಿಕೆಯಿಂದ ತುಂಬುತ್ತಿದ್ದ ಆ ಫಾರ್ಮ್ ನಿಂದ ನನ್ನ ದೃಷ್ಟಿಯನ್ನು ಅವಳೆಡೆಗೆ ಹಾಯಿಸಿದೆ.
        ಬಿಗಿಯಾಗಿ ಬಾಚಿದ ಆ ಕೂದಲು, ಒಂದು ಸ್ವಲ್ಪ ದೊಡ್ಡದಾಗಿಯೇ ಕಾಣುವ ಅವಳ ಕಣ್ಣಡಕ. ಆ ಹಣೆಗೊಂದು ಬಿಂದಿ. ದುಂಡಾದ ಮುಖ. ಅಷ್ಟು ಬಿಗಿಯಾಗಿ ಕೂದಲನ್ನಾ ಎಳೆದು ಕಟ್ಟಿದ್ದರೂ ಕೂಡ ಅದೇಲ್ಲಿಂದಲೋ ಒಂದಷ್ಟು ಗುಂಪಿನ ಮುಂಗುರುಳ ಅವಳ ಕೆನ್ನೆಯ ಮೇಲೆ ಬಂದು ಕುಳಿತುಕೊಂಡಿತ್ತು. ಆ ಮುಖ ಯಾವಾಗಲೂ ನಗುತ್ತಲೇ ಇತ್ತು. ತೀರ ಕಪ್ಪು ಅಲ್ಲದ ತೀರ ಬೆಳ್ಳಗೆಯೂ ಇರದ ಬಣ್ಣ ಅವಳದು. ಎಲ್ಲರೂ ನನ್ನನ್ನು “ನೀನು ತುಂಬಾ ಎತ್ತರ ಇದಿಯಾ ಕಣೊ” ಎಂದರೆ. ಅವಳು ನನ್ನ ಬುಜಕ್ಕೆ ಸಮನಾದ ಎತ್ತರವಾಗಿತ್ತು.
        ನಾನು “ಹಾ ಪ್ಲೀಸ್ ತಗೊಳಿ” ಎಂದು ಅವಳ ಕೈಗೆ ಫಾರ್ಮ್ ನೀಡಿದೆ.
        ಅದನ್ನು ಎತ್ತಿಕೊಂಡು ಆಕೆ ಒಂದೊಂದಾಗಿ ಪ್ರಶ್ನೆಗಳನ್ನು ಕೇಳ ತೊಡಗಿದಳು. ನಾನು ವಿನಯ ವಿದ್ಯಾರ್ಥಿಯಂತೆ ಅವಳ ಎಲ್ಲ ಪ್ರಶ್ನೆಗಳಿಗೂ ಉತ್ತರಿಸತೊಡಗಿದೆ. ನಂತರ “ಸರ್ ಇದು ಫಸ್ಟ್ ಟೈಂ ಹಾ?” ಎಂದಳು.
        ನಾನು “ಹೌದು ಮೇಡಂ” ಎಂದೆ.
        ಆಕೆ ನಗುತ್ತ “ಓಕೆ ಭಯ ಪಡಬೇಡಿ. ಏನೂ ಆಗಲ್ಲಾ. ಊಟ ಮಾಡಿದಿರಾ?” ಎಂದಳು.
        “ಹಾ ಮೇಡಂ ಆಗಿದೆ” ಎಂದೆ
        ಮುಂದುರೆವರೆದು “ಸಿಗರೇಟ್ ಏನಾದರೂ ಸೇದಿದಿರಾ?” ಎಂದಳು.
        ನಾನು “ಏನೂ ಸಿಗರೇಟ್ ಹಾ?. ಅಂದರೆ ಈ ಬೆಳ್ಳಗಿರುತ್ತೇ. ಅದಕ್ಕೆ ಕಡ್ಡಿ ಅಂಟಿಸಿ ಬಾಯಿಗೆ ಇಟ್ಕೊಂಡು ಹೊಗೆ ಬಿಡ್ತಾರಲ್ಲಾ ಅದಾ?..........ಅಂತದ್ದೇನು ಇಲ್ಲ ಬಿಡಿ ಮೇಡಂ” ಎಂದೆ.
        ಅದನ್ನು ಕೇಳಿ ನನ್ನ ಪಕ್ಕದಲ್ಲಿ ನಿಂತಿದ್ದ ಗೆಳೆಯ ಒಮ್ಮೆ ಕೆಮ್ಮಿದ.
ನಂತರ ಫಾರ್ಮ್ ತುಂಬಿದ ಆಕೆ, ಪಕ್ಕದ ಒಂದು ಟೇಬಲ್ ಹತ್ತೀರ ಕರೆದುಕೊಂಡು ಹೋಗಿ “ನಿಮ್ಮ ಕೈ ಕೊಡಿ” ಎಂದಳು.
        ನಾನು “ಹಾಂ?” ಎಂದೆ.
        “ಬ್ಲಡ್ ಟೆಸ್ಟ್ ಮಾಡ್ಬೇಕು ನಿಮ್ಮ ಕೈ ಕೊಡಿ ಸರ್” ಎಂದಳು.
        ನಾನು ನಗುತ್ತ ಕೈ ಕೊಟ್ಟೆ (ಮೊದಲ ಬಾರಿ ಒಂದು ಹುಡುಗಿಗೆ ನಾ ಕೈಕೊಟ್ಟಿದ್ದು...........) ನಂತರ ಆಕೆ ನನ್ನನ್ನಲ್ಲಿಯೇ ಕೂರಲು ಹೇಳಿದಳು. ನಾನು ಮತ್ತು ಗೆಳೆಯ ಅಲ್ಲಿಯೇ ಕುಳಿತು ಕಾಯತೊಡಗಿದೆವು.
        ಅವಳು ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆಗೆ ಓಡಾಡುವುದನ್ನು ನೋಡುವುದೆ ನನಗೆ ಖುಷಿ. ಕಾರಣ ಅವಳ ಅಂದವಲ್ಲ ಬದಲಾಗಿ ಅವಳಲ್ಲಿರುವ  ಲವಲವಿಕೆಯ ಗುಣ. ಹೌದು......ಅಲ್ಲಿ ಬರುವ ಪ್ರತಿಯೊಬ್ಬರನ್ನು ತನ್ನ ಸ್ವಂತವರೆನೋ ಎಂಬಂತೆ ಅವಳು ನಡೆಸಿಕೊಳುತ್ತಿದ್ದ ರೀತಿ ನನಗೆ ನಿಜಕ್ಕೂ ಮೆಚ್ಚುಗೆಯಾಯಿತು. ಅವಳು ಬಂದವರೊಂದಿಗೆ ಮಾತನಾಡುತ್ತಿದ್ದ ಶೈಲಿಗೆ, ಪ್ರತಿ ಮಾತಿಗೂ ಅವಳ ಮುಖ ಮೇಲಿರುತ್ತಿದ್ದ ನಗುವಿಗೆ ನಾನು ರಕ್ತ ಕೊಡುವ ಭಯವನ್ನೇ ಕಳೆದುಕೊಂಡು ಬಿಟ್ಟೆ.
        ಸ್ವಲ್ಪ ಹೊತ್ತಿನ ನಂತರ ಬಂದ ಆಕೆ “ಸರ್ ಬನ್ನಿ” ಎಂದು ಕರೆದುಕೊಂಡು ಹೋದಳು. ಒಳಗೆ ಹೋಗುತ್ತಲೇ ಅದ್ಯಾದೋ ಒಬ್ಬ ಡಾಕ್ಟರ್ ಬಂದು, ನನ್ನ ಕೈಗೆ ಒಂದು ಸೂಜಿ ಸಿಕ್ಕಿದ. ಆದರೆ ಸ್ವಲ್ಪ ಹೊತ್ತಿನ ನಂತರ ನನ್ನ ಕೈಗೆ ಚುಚ್ಚಿದ ಸೂಜಿಯಿಂದ ಅದ್ಯಾವುದೋ ಮಶಿನ್ ಗೆ ಕನೆಕ್ಷನ್ ಇದ್ದದ್ದು ಶಬ್ದ ಮಾಡಲು ಶುರುವಾಯಿತು.
        ಆಗ ಕೂಡಲೇ ಬಂದ ಆಕೆ, ಮಶಿನ್ ಅಲ್ಲಿ ಏನೇನೋ ಮಾಡಿದಳು. ಬೆಡ್ ಮೇಲೆ ಮಲಗಿಕೊಂಡಿದ್ದ ನನಗೆ ಅದ್ಯಾವುದೂ ಕಾಣಲಿಲ್ಲ. ನಂತರ ನನ್ನ ಕೈಗೆ ಚುಚ್ಚಿದ ಸೂಜಿಯ ನಳಿಕೆಯನ್ನು ಕೊಂಚ ಹಿಂದಕ್ಕೆ ಮುಂದಕ್ಕೆ ಮಾಡಿದಳು. ನಂತರ ಇನ್ನೊಂದು ಕೈಗೆ ಸೂಜಿ, ತಾನೇ ಚುಚ್ಚಿದಳು. ಸ್ವಲ್ಪ ಹೊತ್ತಿನ ನಂತರ ರಕ್ತ ಕೊಡುವುದು ಮುಗಿದಿದೆ ಎಂದು ಬಂದವಳೇ ನನ್ನ ಕೈಗೆ ಬ್ಯಾಂಡೆಜ್ ಹಾಕಿದಳು. ಆಮೇಲೆ ಪಕ್ಕದ ರೂಮಿಗೆ ಕರೆದುಕೊಂಡು ಹೋದಳು.
        “ಸರ್ ತಲೆ ಸುತ್ತು ಏನಾದ್ರೂ ಆಗ್ತಾ ಇದೆಯಾ?” ಎಂದಳು.
        ನಾನು “ಇಲ್ಲ ಮೇಡಂ” ಎಂದೆ.
        ಆಗ ಆಕೆ ಬಿಸ್ಕಟ್, ಜ್ಯೂಸ್ ಕೊಟ್ಟು ನಗುತ್ತಲೇ “ತಿಂದು ಸ್ವಲ್ಪ ಕುಳಿತುಕೊಂಡು ಹೋಗಿ” ಎಂದು ಅಲ್ಲಿಂದ ನಡೆದಳು.
        ನಾನು ಅವೆರಡನ್ನು ಮುಗಿಸಿ ತಿರುಗಿ ಅವಳಿಗೆ ಹೋಗಿ ಒಂದು “ಥ್ಯಾಂಕ್ಸ್” ಹೇಳೋಣ ಎಂದು ಹೊರಟೆ. ಆದರೆ ಆಕೆ ಅವರ ಗೆಳತಿಯರ ಗುಂಪಿನಲ್ಲಿ ಕುಳಿತುಕೊಂಡಿದ್ದರಿಂದ ನಾನು ಸುಮ್ಮನೇ ವಾಪಾಸಾದೆ.
        ಹಾಗೇ ಬರುತ್ತ ದಾರಿಯಲ್ಲಿ, ನಾನು ಗೆಳೆಯನಿಗೆ ಆ ಹುಡುಗಿಯ ಬಗ್ಗೆ ಹೇಳತೊಡಗಿದೆ.
        ಆಗ ಆತ ನಗಲು ಶುರು ಮಾಡಿದ. “ಯಾಕೊ?” ಎಂದು ಕೇಳಿದೆ.
        ಆತ “ಲೋ.........ನಾನು ನರ್ಸಿಂಗ್ ಮಾಡಿದಿನಿ ಕಣೊ. ಹಾಸ್ಪಿಟಲ್ ಗೆ ಬರುವ ಪ್ರತಿಯೊಬ್ಬರನ್ನು ನಗುತ್ತಲೇ ಮಾತನಾಡಿಸಬೇಕು. ಅವರನ್ನು ಪ್ರೀತಿ, ಗೌರವ, ಆತ್ಮೀಯತೆಯಿಂದ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಕಣೊ. ಪಾಪ ಆ ಹುಡುಗಿ ತನ್ನ ಕರ್ತವ್ಯ ಏನಿದೆಯೋ ಅದನ್ನಾ ಮಾಡಿದಾಳೆ ಅಷ್ಟೇ ಕಣೊ. ನೀನೇನು, ನಿನ್ನನ್ನಷ್ಟೇ ಸ್ಪೇಷಲ್ಲಾಗಿ ಟ್ರಿಟ್ ಮಾಡಿರೋವ್ರ ಹಾಗೇ ಮಾತಾಡ್ತಿದಿಯಲ್ಲಾ. ಅವರಿಗೆ ಎಲ್ಲರೂ ಅಷ್ಟೇ, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸೋದು ಅವರ ವೃತ್ತಿ ಧರ್ಮ” ಎಂದ.
        ನನಗೂ ಅದು ನಿಜ ಎನ್ನಿಸಿತು. ಯಾಕೆಂದರೆ ಅವರವರ ಕೆಲಸ ಏನು ಅವರವರು ಅದನ್ನು ಸಂಪೂರ್ಣವಾಗಿ ಮಾಡಿಯೇ ಮಾಡುತ್ತಾರೆ. ಅದರಲ್ಲಿ ಎರಡನೇಯ ಮಾತಿಲ್ಲ, ಆದರೆ ನಮ್ಮ ನಮ್ಮವರೆ ನಮ್ಮನ್ನು ಸರಿಯಾಗಿ ನೋಡಿಕೊಳ್ಳಲು ಹಿಂದು ಮುಂದು ನೋಡುವ  ಕಾಲದಲ್ಲಿ, ಯಾರೋ ಗೊತ್ತಿಲ್ಲದವರನ್ನು ತಮ್ಮವರಂತೆ ನೋಡಿಕೊಳ್ಳುವ, ಆ ಹುಡುಗಿಯ ನಡವಳಿಕೆ ಅವಳು ಬೇರೊಬ್ಬರಿಗೆ ತೋರಿಸುತ್ತಿದ್ದ ಅವಳ ಸ್ವಭಾವ ಅಥವಾ ವೃತ್ತಿ ಧರ್ಮವಿದೆಯಲ್ಲಾ ಅದಕ್ಕೆ ನನ್ನದೊಂದು ಸಲಾಂ..............
        ಆದರೂ ನಾನು ಆ ಹುಡುಗಿಗೆ ಕೈಕೊಟ್ಟಿದ್ದು ತಪ್ಪಲ್ಲ ಬಿಡಿ...............