ನಾನು ಜವಾಬ್ದಾರ - ನೀವೂ ಜವಾಬ್ದಾರರು....

ನಾನು ಜವಾಬ್ದಾರ - ನೀವೂ ಜವಾಬ್ದಾರರು....

ವಿಶ್ವ ಗುರು ಕನಸು ಕಾಣುವ ಮುನ್ನ ಒಮ್ಮೆ ಇಲ್ಲಿ ನೋಡಿ… ಈ ಕಲುಷಿತ ನೀರು ಕುಡಿದು ಸಾವು ಸಂಭವಿಸುತ್ತಿರುವ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಇದು ಗಂಭೀರ ಸಮಸ್ಯೆ ಸೃಷ್ಟಿಸಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯ ನೀರು ಅಥವಾ ಅಂತರ್ಜಲದ ನೀರು ಕುಡಿಯಲು ಅತ್ಯಂತ ಶುದ್ದವಾಗಿರುತ್ತದೆ. ಆದರೆ ಅದನ್ನು ಸಂಗ್ರಹಿಸುವ ಮತ್ತು ಮರು ಬಳಕೆ ಮಾಡುವ ವ್ಯವಸ್ಥೆ ಮಾತ್ರ ತೀರಾ ಹದಗೆಟ್ಟಿದೆ.

ನಗರ ಮತ್ತು ಪಟ್ಟಣ ಪ್ರದೇಶಗಳ ಮಧ್ಯಮ ಮತ್ತು ಶ್ರೀಮಂತರ ಮನೆಗಳಲ್ಲಿ ವಾಟರ್ ಫಿಲ್ಟರ್ ಗಳನ್ನು ಉಪಯೋಗಿಸುವುದರಿಂದ ಕಲುಷಿತ ನೀರು ಸಹ ಸ್ವಲ್ಪ ಮಟ್ಟಿಗೆ ಕುಡಿಯಲು ಯೋಗ್ಯವಾಗಿದೆ. ಆದರೂ ನೀರಿನಿಂದಲೇ ಈಗಲೂ ಬಹುತೇಕ ರೋಗಗಳು ಬಹುಬೇಗ ಹರಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಫ್ಲೋರೈಡ್ ಮಿಶ್ರಿತ ನೀರು, ಕೆಲವು ಭಾಗಗಳಲ್ಲಿ ಇತರ ಹಾನಿಕಾರಕ ನೀರಿನ ಪರಿಣಾಮ ಅತಿಹೆಚ್ಚು ಕಿಡ್ನಿ ಸ್ಟೋನ್, ಅತಿಸಾರ  ಪ್ರಕರಣಗಳು ವರದಿಯಾಗುತ್ತಿದೆ.

ವಿಜ್ಞಾನ ಬಹಳಷ್ಟು ಮುಂದುವರಿಯುತ್ತಿದೆ, ಸಾರಿಗೆ ಸಂಪರ್ಕ ಅತಿ ವೇಗ ಪಡೆಯುತ್ತಿದೆ, ರಾಜ್ಯದ ಬಜೆಟ್ 3 ಲಕ್ಷ ಕೋಟಿಗೂ ಹೆಚ್ಚು ದಾಟಿ ಮುನ್ನಡೆಯುತ್ತಿದೆ, ರಾಜ್ಯದ ಸಣ್ಣ ಗ್ರಾಮಗಳಲ್ಲಿ ಸಹ ಇಂಟರ್ನೆಟ್ ಸೌಲಭ್ಯ ದೊರೆಯುತ್ತಿದೆ, ಎಲ್ಲರಿಗೂ ಬ್ಯಾಂಕ್ ಖಾತೆಗಳಿವೆ. ಆದರೆ ಕುಡಿಯಲು ಶುದ್ದ ನೀರಿಗಾಗಿ ಪರದಾಡುವಂತಾಗಿರುವುದು ಮಾತ್ರ ವಿಷಾದನೀಯ.

ಫ್ಲೈ ಓವರ್ ನಿರ್ಮಿಸಲು, ವಿಮಾನ ನಿಲ್ದಾಣ ನಿರ್ಮಿಸಲು, ಮೆಟ್ರೋ ನಿರ್ಮಿಸಲು, ದಶಪಥ ರಸ್ತೆ ನಿರ್ಮಿಸಲು ಕೋಟಿ ಕೋಟಿ ಹಣ ಖರ್ಚು ಮಾಡುವ‌ ಸರ್ಕಾರಗಳು, ಟೆಂಪಲ್ ರನ್ ಮಾಡಲು ಖಾಸಗಿ ವಿಮಾನಗಳನ್ನೇ ಬಾಡಿಗೆ ಪಡೆಯುವ ಮಂತ್ರಿಗಳು ಕನಿಷ್ಠ ಶುದ್ದ ಕುಡಿಯುವ ನೀರಿಗಾಗಿ ಸರ್ಕಾರದ ಬೊಕ್ಕಸದಿಂದಲೇ ಒಂದು ಆರೋಗ್ಯಕರವಾದ ವ್ಯವಸ್ಥೆ ಮಾಡಲು ವಿಫಲವಾಗಿದೆ ಎಂಬುದು ನಾಚಿಕೆಗೇಡಿನ ವಿಷಯ. ಹೋಗಲಿ‌ ಅಧಿಕಾರಿ ವರ್ಗದವರಾದರು ಮುನ್ನೆಚ್ಚರಿಕೆ ವಹಿಸಬೇಕಲ್ಲವೇ?

ನಮ್ಮ ಅರಿವಿನ ಅಂಚಿನಲ್ಲಿಯೇ ಮಕ್ಕಳು ಕಲುಷಿತ ನೀರು ಕುಡಿದು ಸಾಯುತ್ತಿದ್ದಾರೆ ಎಂದರೆ ಯಾವ ಮಂತ್ರಿ, ಯಾವ ನ್ಯಾಯಾಧೀಶ, ಯಾವ ಜಿಲ್ಲಾಧಿಕಾರಿ, ಯಾವ ಪತ್ರಕರ್ತ, ಯಾವ ಸ್ವಾಮೀಜಿ, ಯಾವ ಹೋರಾಟಗಾರ, ಯಾವ ಬರಹಗಾರ ಎಷ್ಟೇ ಪ್ರಖ್ಯಾತನಾದರು, ಸಾಧಕನಾದರು ಪ್ರಯೋಜನವೇನು? ಅತ್ಯಂತ ಸಣ್ಣ ಗ್ರಾಮಗಳಲ್ಲಿ ಸಹ ಇಂದು ಕಡಿಮೆ ಬೆಲೆಗೆ ಮಿನರಲ್ ವಾಟರ್ ಸಿಗುತ್ತದೆ ಅಥವಾ ಯಾರ ಮನೆಯಲ್ಲಾದರೂ ಮಡಿಕೆಗಳಲ್ಲಿ ಮತ್ತು ಪಾತ್ರೆಗಳಲ್ಲಿ ಸಂಗ್ರಹಿಸಿದ ಸ್ವಲ್ಪ ಮಟ್ಟಿಗೆ ಉತ್ತಮ ನೀರು ಸಿಗುತ್ತದೆ ಅಥವಾ ಸ್ಥಳೀಯರಿಗೆ ಅಥವಾ ಗ್ರಾಮ ಪಂಚಾಯತಿ ಸದಸ್ಯರಿಗೆ ಕುಡಿಯಲು ಯೋಗ್ಯವಾದ ನೀರು ಯಾವುದು ಅಥವಾ ಕಲ್ಮಶ ನೀರು ಯಾವುದು ಎಂದು ತಿಳಿದಿರುತ್ತದೆ. ಅವರು ಯಾರೂ‌ ಈ ಅಸಹಾಯಕ - ಅಮಾಯಕ ಬಡ ಮಕ್ಕಳು ಕಲುಷಿತ ನೀರು ಕುಡಿಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದರೆ ನಮ್ಮ ಸಮಾಜದ ಒಟ್ಟು ಕಾರ್ಯ ನಿರ್ವಹಣಾ ವ್ಯವಸ್ಥೆಯ ಬಗ್ಗೆಯೇ ಅನುಮಾನ ಮೂಡುತ್ತದೆ.

ಶುದ್ದ ನೀರು ಯಾವುದು, ಅದು ಎಲ್ಲಿ ಸಿಗುತ್ತದೆ, ಇತರೆ ಕೆಲಸಗಳಿಗೆ ಉಪಯೋಗಿಸುವ ನೀರು ಯಾವುದು, ವಿಷಯುಕ್ತ ಕೆಟ್ಟ ನೀರು ಯಾವುದು ಎಂಬ ಸಾಮಾನ್ಯ ತಿಳಿವಳಿಕೆಯೇ ಇನ್ನೂ ಬಹುತೇಕ ಗ್ರಾಮಗಳಲ್ಲಿ ಇಲ್ಲ ಎನ್ನುವುದಾದರೆ ಸರ್ಕಾರಗಳ ನಿರ್ವಹಣೆಗಾಗಿ ಸಾರ್ವಜನಿಕ ಖಜಾನೆಯಿಂದ ಖರ್ಚು ಮಾಡುತ್ತಿರುವ ಹಣ ವ್ಯರ್ಥವಾಗುತ್ತಿದೆ ಎಂದೇ ಪರಿಗಣಿಸಬೇಕು.

ಇದು ತುಂಬಾ ಚಿಕ್ಕ ವಿಷಯ ಎನಿಸಬಹುದು. ಆದರೆ ವಿಶ್ವದ ಇತರೆ ಮುಂದುವರೆದ ನಾಗರಿಕ ಸಮಾಜದ ದೇಶದವರು ಭಾರತದ ಕರ್ನಾಟಕದಲ್ಲಿ ಕಲುಷಿತ ನೀರು ಕುಡಿದು ಮಕ್ಕಳು ಸತ್ತಿದ್ದಾರೆ ಎಂಬ ವಿಷಯ ತಿಳಿದರೆ ಖಂಡಿತ ಅವರಿಗೆ ನಮ್ಮ ಬಗ್ಗೆ ಅಸಹ್ಯ ಭಾವನೆ ಬರಬಹುದು. ಯಥೇಚ್ಛ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಒಂದು ರಾಜ್ಯ ಕನಿಷ್ಠ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗಿಲ್ಲ ಮತ್ತು ಮಕ್ಕಳಿಗೆ ಶುದ್ದ ಅಥವಾ ಅಶುದ್ದ ನೀರು ಯಾವುದು ಎಂಬ ತಿಳಿವಳಿಕೆಯೇ ನೀಡಿಲ್ಲ ಎಂದು ಕೋಪ ಬರಬಹುದು.

ಇದಕ್ಕೆ ಕೇವಲ ಸರ್ಕಾರ, ರಾಜಕೀಯ, ಅಧಿಕಾರಿಗಳು ಮಾತ್ರವಲ್ಲ. ಸ್ಥಳೀಯ ಜನರು ಸಹ ಜವಾಬ್ದಾರರು. ಅದರಲ್ಲೂ ಹಳ್ಳಿಗಳಲ್ಲಿ ‌ಬಹುತೇಕ ಎಲ್ಲಾ ಜನರ ಮತ್ತು ವಾತಾವರಣದ ಪರಿಚಯ ಎಲ್ಲರಿಗೂ ಇರುತ್ತದೆ. ಆ ಹಳ್ಳಿಗೆ ಶುದ್ದ ಕುಡಿಯುವ ನೀರಿನ ಮೂಲಗಳನ್ನು ಒದಗಿಸಿಕೊಳ್ಳುವ ಪ್ರಜ್ಞೆ ಜನರಿಗೂ ಇರಬೇಕು. ಸ್ಥಳೀಯ ಪ್ರತಿನಿಧಿಗಳನ್ನು ಒತ್ತಾಯ ಮಾಡಿ ಅತ್ಯಂತ ಪ್ರಮುಖ ಶುದ್ದ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು.

ಹೌದು ಈಗಾಗಲೇ ಅನೇಕ ಊರುಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಇವೆ. ಆದರೆ ಅದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಕೆಲವು ಕೆಟ್ಟು ಹೋಗಿದೆ. ಸರ್ಕಾರಿ ಯೋಜನೆಗಳ ದುರಂತವೇ ಇದು. ಅದಕ್ಕೆ ನೇರ ಜವಾಬ್ದಾರಿ ಇರುವುದಿಲ್ಲ. ಸ್ಥಳೀಯ ಆಡಳಿತವನ್ನು ಇದಕ್ಕೆ ಹೊಣೆ ಮಾಡಿ ದಂಡ ವಿಧಿಸಬೇಕು. ಶುದ್ದ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು. ಅದನ್ನು ನೀಡುವುದು ಸರ್ಕಾರದ ಕರ್ತವ್ಯ. ಅದಕ್ಕಾಗಿ ಒತ್ತಾಯ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇದು ಅತ್ಯಂತ ಸರಳ ಮತ್ತು ಸುಲಭ. ಆದರೆ ಇಚ್ಚಾ ಶಕ್ತಿ ಇಲ್ಲದ ಸ್ವಾರ್ಥ ಜನರ ನಡುವೆ ನಿರ್ಲಕ್ಷ್ಯದ ಸಾವುಗಳು ವ್ಯವಸ್ಥೆಯ ಬಹಿರಂಗ ಕೊಲೆಗಳೇ ಆಗಿವೆ. ನಾವು ನೀವು ಮೂಕ ಪ್ರೇಕ್ಷಕರು.....

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ