ನಾನು ಡಚಾವು-೪
ಗ್ಯಾಸ್ ಚೇಂಬರ್ ಗಳು
ಸುಮಾರು ೫೦೦೦ ಕೈದಿಗಳಿಗೆಂದು ಪ್ರಾರಂಭಿಸಲ್ಪಟ್ಟ ಕಾನ್ಸಂಟ್ರೆಶನ್ ಶಿಬಿರ ೧೯೪೨ ರ ಸುಮಾರಿಗೆ ೨೫ ಸಾವಿರ ದಾಟಿತು.ಆದರೆ ಅದಕ್ಕಾಗಿ ಮೂಲಭೂತ ಸೌಕರ್ಯಗಳು ಏನೂ ಜಾಸ್ತಿ ಆಗಲಿಲ್ಲ.ಬದಲಿಗೆ ಯಾತನಮಯ ಶಿಕ್ಷೆಗಳು ಕಡಿಮೆಯಾದವು.
ಅವುಗಳ ಬದಲಿಗೆ ಪ್ರಾರಂಭವಾದದ್ದೇ ಗ್ಯಾಸ್ ಚೇಂಬರ್.ಈ ಗ್ಯಾಸ್ ಚೇಂಬರ್ ಗಳನ್ನು ಸುಮಾರು ವರುಷಗಳು ಮೊದಲೇ ಕಟ್ಟಿದ್ದರು ಆದರೆ ಅವುಗಳನ್ನು ಉಪಯೋಗಿಸಿರಲಿಲ್ಲ. ಗ್ಯಾಸ್ ಚೇಂಬರ್ ಇರುವ ಜಾಗಕ್ಕೆ ಕ್ರಿಮಾಟೋರಿಯಂ ಎಂದು ಹೆಸರು.
ಕೆಲಸ ಮಾಡಲು ಅಸಮರ್ಥರಾದವರನ್ನು ಬೇರೆ ಬೇರೆ ಶಿಬಿರಾರ್ಥಿಗಳನ್ನು ಗುಂಪುಗಟ್ಟಲೆ ಕರೆದು ತರುತ್ತಿದ್ದರು.ಅಲ್ಲಿ ೩ ಕೋಣೆಗಳಿದ್ದವು.ಮೊದಲ ಕೋಣೆಯು ಸುಮಾರು ಉದ್ದ ಸುಮಾರು ೨೦*೫೦ ಅಡಿಗಳಷ್ಟಿತ್ತು.ಈ ಕೋಣೆಯಲ್ಲಿ ಕೈದಿಗಳು ತಮ್ಮ ಬಟ್ಟೆಗಳನ್ನು ತೆಗೆದು ಸಂಪೂರ್ಣ ನಗ್ನರಾಗಬೇಕು.ಈ ಬಟ್ಟೆಗಳನ್ನು ನಂತರ ಬರಾಕ್ ನ ಕೈದಿಗಳಿಗೆ ಹಂಚುತ್ತಿದ್ದರು.ನಡುವಿನ ಕೋಣೆಯೇ ಗ್ಯಾಸ್ ಚೇಂಬರ್.ಈ ಕೋಣೆಗೆ ಹೋಗಲು ಕೈದಿಗಳು ನಿರಾಕರಿಸಬಹುದೆಂದು ಇವುಗಳು ರೋಗ ನಿರೋಧಕ 'ಶವರ್' ಗಳೆಂದು ಹೆಸರಿಸಿ ಜನರನ್ನು ಮರಳು ಮಾಡುತ್ತಿದ್ದರು.ನಡುವಿನ ಕೋಣೆಯಲ್ಲಿ ಶವರ್ ಗಳ ಹಾಗೆ ಕಾಣುವ ಕೆಲವೊಂದು ಸಾಧನಗಳನ್ನೂ ಆಳವಡಿಸಿದ್ದರು.ಕೋಣೆಯನ್ನು ಹೊರಗಿನ ಗಾಳಿ,ಬೆಳಕು ಬಾರದಂತೆ ಸಂಪೂರ್ಣ ವಾಗಿ ಸೀಲ್ ಮಾಡಿರುತ್ತಿದ್ದರು. ಈ ಕೋಣೆಯಲ್ಲಿ ಸಮಾರು ೧೫೦ ಕೈದಿಗಳನ್ನು ಏಕಕಾಲದಲ್ಲಿ ಕೂಡಿಸಿಟ್ಟು ಪ್ರುಸ್ಸಿಕ್ ಆಸಿಡ್(Prussik acid -zyklon B ) ಎಂಬ ವಿಶಾನೀಲವನ್ನು ಬಿಡುತ್ತಿದ್ದರು.ಈ ಅವಧಿ ಅತ್ಯಂತ ಯಾತನಾ ಮಯವಾಗಿರುತ್ತಿತ್ತು.ಉಸಿರಾಡಲೂ ಆಗದೇ ಅತ್ತಿಂದಿತ್ತ ಅಡ್ಯಾದಲೂ ಆಗದೇ ಚೀರುತ್ತಿದ್ದರು,ಒಬ್ಬರಿಗೆ ಒಬ್ಬರು ಹಾಯುತ್ತಿದ್ದರು.ಗೋಡೆಗಳಿಗೆ ಡಿಕ್ಕಿ ಹೊಡೆಯುತ್ತಿದ್ದರು.ಎಷ್ಟೋ ಜನರು ವಿಷನೀಲ ಬರುತ್ತಿದ್ದ ನಳಿಕೆ ಯನ್ನು ಕೈ ಇಂದ ಮುಚ್ಚಲೂ ಪ್ರಯತ್ನಿಸುತ್ತಿದ್ದರು.ಆದರೆ ಅವರ ದೇಹ ದಲ್ಲಿ ಶಕ್ತಿ ಇಲ್ಲದೇ ಬಿಟ್ಟು ಬಿಡುತ್ತಿದ್ದರು. ಬದುಕಲು ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದರು.೧೫-೨೦ ನಿಮಿಷಗಳ ಅವಧಿಯಲ್ಲಿ ೧೫೦ ಜನರೂ ಇಹಲೋಕದ ಯಾತ್ರೆಯನ್ನು ಮುಗಿಸಿರುತ್ತಿದ್ದರು.ಅವರ ಆಕ್ರಂದನ ಈಗಲೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿರುತ್ತದೆ.ನಾನು ಆ ಸಮಯದಲ್ಲಿ ಮೂಕ ಪ್ರೇಕ್ಷಕಿಯ ಹೊರತು ಬೇರೇನೂ ಮಾಡಲು ಆಗುತ್ತಿರಲಿಲ್ಲ.ಆದರೆ ಕೆಲವೊಮ್ಮೆ ಈ ಗ್ಯಾಸ್ ಚೆಂಬರುಗಳು ಕೈದಿಗಳಿಗೆ ದಚಾವುನಿಂದ ಮುಕ್ತಿ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದೆ.
ನಂತರ ವಿಷಾನೀಲ ಹೊರಗಡೆ ಹೋಗಲು ಕೆಲವೊಂದು ಮುಚ್ಚಳಿಕೆ ಗಳನ್ನು ತೆಗೆಯುತ್ತಿದ್ದರು.ಹಾಗೂ ಸ್ವಲ್ಪ ಹೊತ್ತಿನ ನಂತರ ಎಲ್ಲಾ ಹೆಣಗಳನ್ನು ಒಂದು ಕಡೆ ಒಗೆಯುತ್ತಿದ್ದರು.ಅವುಗಳನ್ನು ಸುಡಲು ೩ ನೆಯ ಕೋಣೆಯಲ್ಲಿ ೬ ಫರ್ನೇಸ್ ಗಳನ್ನು ಕಟ್ಟಿದ್ದರು.ಅವುಗಳಲ್ಲಿ ೨-೩ ಹೆಣಗಳನ್ನು ಒಟ್ಟಿಗೆ ಹಾಕಿ ಕಲ್ಲಿದ್ದಲಿನಿಂದ ಸುಡುತ್ತಿದ್ದರು.ಇದೊಂದು ಕರಾಳ ಅಧ್ಯಾಯ.ನನ್ನ ಅಂದಾಜಿನ ಪ್ರಕಾರ ೧೯೪೨ ರಿಂದ ೧೯೪೫ ರವರೆಗೆ ಸುಮಾರು ೧೧೦೦೦ ಜನರ ಮಾರಣ ಹೋಮ ನಡೆದಿದೆ.೧೯೪೫ ರಿಂದ ಕಲ್ಲಿದ್ದಲಿನ ಅಭಾವದ ಕಾರಣ ಹೆಣದ ರಾಶಿಯನ್ನೇ ಅಗ್ನಿದಹನ ಮಾಡತೊಡಗಿದರು.
ಪ್ರಯೋಗಗಳು
ಏನೇನು ಅಮಾನವೀಯತೆ ಗಳು ಇವೆಯೋ ಅವೆಲ್ಲ ವನ್ನು ನಾನು ಕಂಡಿರುವೆ,ಅವೆಲ್ಲವೂ ಮರಿಯಲಾಗದೆ ಕಣ್ಣ ಮುಂದೆ ಹಾದು ಹೋಗುತ್ತಾ ಇರುತ್ತವೆ.ವೈದ್ಯ ವಿಜ್ನ್ಯಾನಿಗಳು ಸೈನಿಕರಿಗೆ ತಯಾರು ಮಾಡಿದ ಔಷಧಿಗಳ ಪ್ರಯೋಗಗಳನ್ನು ದಚಾವುವಿನ ಕೈದಿಗಳ ಮೇಲೆ ಮಾಡುತ್ತಿದ್ದರು.ಈ ಎಲ್ಲಾ ಪ್ರಯೋಗಗಳು ಗಟ್ಟಿ ಮುಟ್ಟಾದ ಯುವಕರ ಮೇಲೆ ಆಗುತ್ತಿದ್ದವು.ಯುಧ್ಧದಲ್ಲಿ ವಿಮಾನಗಳು ಧ್ವಂಸವಾದಾಗ ಪೈಲಟ್ ಗಳು ಮಂಜು ಗಟ್ಟಿದ ನೀರಿನಲ್ಲಿ ಬಿದ್ದು ಸಾಯತೊಡಗಿದರು.ಅದಕ್ಕಾಗಿ ದಚಾವುವಿನ ಕೈದಿಗಳಿಗೆ ಮಾಪಕಗಳನ್ನು ಕಟ್ಟಿ ಮಂಜುಗಡ್ಡೆ ತುಂಬಿದ ಟ್ಯಾಂಕಿನಲ್ಲಿ ದಿನಗಟ್ಟಲೆ ಬಿಡುತ್ತಿದ್ದರು.ಅವರ ಯಾವ ದೇಹದ ಭಾಗಗಳು ಮೊದಲು ನಿಷ್ಕ್ರಿಯ ವಾಗುತ್ತವೆ,ಯಾವ ಹಂತದಲ್ಲಿ ಸಾವು ಬರುತ್ತದೆ,ಹಾಗೂ ಅವುಗಳ ಜೊತೆಗೆ ಇಂಥ ಸಮಯದಲ್ಲಿ ಯಾವ ಸುರಕ್ಷತಾ ಕ್ರಮಗಳನ್ನು ಜರುಗಿಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಅಧ್ಯಯನ ಮಾಡುತ್ತಿದ್ದರು.ಇಂತಹ ಬೇರೆ ಬೇರೆ ಅಧ್ಯಯನದಲ್ಲಿ ಸುಮಾರು ೫೦೦ಕ್ಕೂ ಹೆಚ್ಚಿನ ಕೈದಿಗಳು ಸಾವನ್ನಪ್ಪಿದ್ದಾರೆ.
ಮುಕ್ತಿ
ಈ ಎಲ್ಲಾ ಚಟುವಟಿಕೆಗಳು ದಿನಂಪ್ರತಿಯಾಗಿ ೧೨ ವರ್ಷಗಳವರೆಗೆ ನಡೆದವು.ಇದಕ್ಕೆ ಕೊನೆ ಆಗುವುದೆಂದು ನನಗೆ ಎಂದೂ ಅನಿಸಲೇ ಇಲ್ಲ.ಆದರೆ ೧೯೪೫ ರಲ್ಲಿ ಜರ್ಮನಿ ಯುಧ್ಧದಲ್ಲಿ ಸೋಲತೊಡಗಿತು.ಆಗ ನನ್ನಲ್ಲಿ ಆಶಾ ಕಿರಣ ವೊಂದು ಉದಯಿಸಲಾರಂಭಿಸಿತು.ಈ ಹಿಂಸೆಗಳೆಲ್ಲ ಕೊನೆಗೊಳ್ಳುವ ಕಾಲ ಬರುತ್ತಾ ಇದೆ ಎಂದು ಸಂತಸ ಪಡಲಾರಂಭಿಸಿದೆ.ಅಮೇರಿಕಾ ದೇಶದ ಸೈನ್ಯಗಳು ಶಿಬಿರದ ದೂರಕ್ಕೆಲ್ಲ ಬಿದ್ದಿದ್ದ ಶವಗಳ ಜಾಡು ಹಿಡಿದು ಬಂದರು.ಶರಣಾಗತರಾಗದ SS ಆಫೀಸರ್ ಗಳನ್ನೂ ಕೊಂದರು. ಇಲ್ಲಿ ಸಾವಿರಗಟ್ಟಲೆ ಬಿದ್ದಿದ್ದ ಶವಗಳನ್ನು ಕಂಡು ಅವಾಕ್ ಆದರು.ಹಾಗೂ ಎಲ್ಲಾ ಕೈದಿಗಳನ್ನು ಮುಕ್ತಗೊಳಿಸಿದರು.ಅಂದು ೨೯ ಏಪ್ರಿಲ್ ೧೯೪೫.ನನ್ನ ಜೀವನದ ಅತ್ಯಂತ ಸಂಭ್ರಮದ ಘಳಿಗೆ.ಅಮೇರಿಕ ಪಡೆಗಳು ಉಳಿದ ಕೈದಿಗಳ ಆರೋಗ್ಯ ದ ಸಂಪೂರ್ಣ ಆರೈಕೆ ಮಾಡಿದರು.ಅವರನ್ನೆಲ್ಲ ಅವರವರ ದೇಶದ ಗುಂಪಿನೊಡನೆ ಸೇರಿಸಿ.ಅವರವರ ದೇಶಕ್ಕೆ ಕಳುಹಿಸಿದರು.
ನಾನು ದಚಾವು, ಇತಿಹಾಸದಲ್ಲಿ ಒಂದು ದಾರುಣ ಅಧ್ಯಾಯವಾಗಿಯೇ ಉಲ್ಲೇಖಿಸಲ್ಪಡುತ್ತೇನೆ.ಇದಕ್ಕೆ ಮುಕ್ತಿಯೇ ಇಲ್ಲ.ಇಂತಹ ಇತಿಹಾಸ ಮತ್ತೆಂದೂ ಮರುಕಳಿಸದಿರಲಿ.
NEVER AGAIN