ನಾನು ಮತ್ತು ದುಂಬಿ

ನಾನು ಮತ್ತು ದುಂಬಿ

ಬರಹ

ಮನೆಯ ಮುಂದಿನ
ಮಣ್ಣಿನ ದಾರಿಯಲಿ ಹೆಜ್ಜೆ ಮೂಡಿಸಿ
ಮತ್ತೆ ಅದೇ ಹೆಜ್ಜೆಯನು
ಗುರುತಿಸುತ್ತ ಬಾಲ್ಯ ಕಳೆದಿದ್ದೆ

ಬಣ್ಣ ಬಣ್ಣದ ಪಾತರಗಿತ್ತಿ
ಕೈತೋಟದೊಳು ಹಾರುವಾಗ
ಕಣ್ಣು ನೆಟ್ಟು ಕುಳಿತ ನೆನಪುಗಳು
ಕೆಲವೊಮ್ಮೆ ದುಂಬಿಯ ಹಿಡಿದು
ಬಾಲಕ್ಕೆ ನೂಲು ಬಿಗಿದು ಹಾರಬಿಡುತ್ತಿದೆ

ಕಳೆದು ಹೋಗಿದೆ ಬಾಲ್ಯ
ತಿರುಗಿ ಬರುವುದಿಲ್ಲ
ಕಾಲ ಬದಲಾಗಿದೆ

ನನ್ನ ಮನೆ ಮುಂದಿರುವ
ಟಾರು ಹಾಕಿದ ರಸ್ತೆಗಳಲಿ
ಹೆಜ್ಜೆ ಗುರುತುಗಳು ಮೂಡುವುದಿಲ್ಲ
ಬಣ್ಣದ ಪಾತರಗಿತ್ತಿ ಬಾಡಿದ
ಹೂವಿನ ಮೇಲೆ ಹಾರುವುದೂ ಇಲ್ಲ

ಆದರೆ
ದುಂಬಿಯೇನೋ ಹಾರಿ ನನ್ನ ಸುತ್ತ
ತನ್ನ ಬಾಲಕ್ಕೆ ನೂಲು ಬಿಗಿದಂತೆ
ಕಟ್ಟುಪಾಡುಗಳನ್ನು ನಿನ್ನ ಕೈಗಳಿಗೆ
ಬಿಗಿದಿರುವಿಯೇನೋ ಎಂದು ಅಣಕಿಸುತ್ತಿರುತ್ತದೆ!