ನಾನೆಂಬ ಭಾರತೀಯ
ಕೆ.ಕೆ.ಮಹಮ್ಮದ್ ಭಾರತದ ಒಬ್ಬ ಹೆಸರಾಂತ ಪ್ರಾಕ್ತನ ಶಾಸ್ತ್ರಜ್ಞ. ಇವರು ಮಲಯಾಳಂ ಭಾಷೆಯಲ್ಲಿ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ನರಸಿಂಗ ರಾವ್ ಇವರು. ಇದು ಕೆ.ಕೆ.ಮಹಮ್ಮದ್ ಅವರ ಆತ್ಮಕಥೆ. ಇವರು ತಮ್ಮ ಆರ್ಕಿಯಾಲಜಿ ಬಗೆಗಿನ ಕೆಲಸದ ಬಗ್ಗೆ ತುಂಬಾ ವಿಷಯಗಳನ್ನು ಬರೆದಿದ್ದಾರೆ. ಪುಸ್ತಕಕ್ಕೆ ಹೆಸರಾಂತ ಲೇಖಕ ರೋಹಿತ್ ಚಕ್ರತೀರ್ಥ ಇವರು ಬೆನ್ನುಡಿ ಬರೆದಿದ್ದಾರೆ. ಇವರು ಬರೆದಂತೆ “ಕೆ.ಕೆ.ಮಹಮ್ಮದ್ ಅವರ ಜೀವನ ಚರಿತ್ರೆಯನ್ನು ಓದುವಾಗ ರೋಮಾಂಚನವಾಗುವ ಜೊತೆ ಜೊತೆಗೇ ಖೇದವೂ ಆಗುತ್ತದೆ. ಬಹುಷಃ ಅವರು ಅಮೇರಿಕಾದಲ್ಲೋ, ಇಂಗ್ಲೆಂಡಿನಲ್ಲೋ ಹುಟ್ಟಿ ಆ ದೇಶಗಳ ಆರ್ಕಿಯಾಲಜಿ ವಿಭಾಗಗಳಲ್ಲಿ ದುಡಿದಿದ್ದರೆ ಜಗದ್ವಿಖ್ಯಾತಿ ಸಂಪಾದಿಸುವಷ್ಟು ಮೇಲೇರಬಹುದಿತ್ತು. ಆದರೆ ನಮ್ಮಲ್ಲಿ? ಸೆಕ್ಯುಲರ್ ವಾದಿ ಸರಕಾರಗಳು ಇದ್ದಷ್ಟು ದಿನ ಅವರಿಗೆ ಒಂದು ಪದ್ಮ ಪ್ರಶಸ್ತಿಯೂ ಬರಲಿಲ್ಲ ಎಂಬುದೇ ಎಲ್ಲವನ್ನೂ ಹೇಳುತ್ತದೆ.
ಭಾರತದ ಬುದ್ಧಿಜೀವಿಗಳು ದಾಖಲೆಗಳಿಲ್ಲದೆ ಮಾತಾಡುವವರು ಅಥವಾ ತಮ್ಮ ಮಾತಿಗೆ ತಾವೇ ದಾಖಲೆ ಸೃಷ್ಟಿಸಿಕೊಳ್ಳುವವರು. ಹಾಗಾಗಿ ಇತಿಹಾಸಗರ್ಭದಲ್ಲಿ ಹೂತ ಸತ್ಯಗಳನ್ನು ಹೊರಗೆಳೆದು ಮುಖಕ್ಕೆ ಹಿಡಿವ ಆರ್ಕಿಯಾಲಜಿಸ್ಟ್ ಗಳೆಂದರೆ ಅವರಿಗೆ ಆಗಿಬರದ್ದು ಅಚ್ಚರಿ ತರುವ ಸಂಗತಿಯೇನಲ್ಲ. ಮಹಮ್ಮದ್, ತಮ್ಮ ವೃತ್ತಿ ಜೀವನದಲ್ಲಿ ಎದುರಿಸಬೇಕಾಗಿ ಬಂದ ಅಂಥ ನಿರ್ಲಜ್ಜ ಎಮಿನೆಂಟ್ ಹಿಸ್ಟೋರಿಯನ್ ಗಳ ಮುಖವಾಡಗಳನ್ನು ಪುಟ ಪುಟಗಳಲ್ಲಿ ಬಯಲು ಮಾಡಿದ್ದಾರೆ ‘ನಾನೆಂಬ ಭಾರತೀಯ' ಕೃತಿಯಲ್ಲಿ.”
ಡಾ.ಎಂ. ಜಿ.ಎಸ್.ನಾರಾಯಣನ್ ಇವರು ಮುನ್ನುಡಿ ಬರೆದಿದ್ದಾರೆ. ಅವರು ಮುನ್ನುಡಿಯಲ್ಲಿ ಒಂದೆಡೆ ಬರೆಯುತ್ತಾರೆ “ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ತಾಜಮಹಲ್ ನ್ನು ಸಂದರ್ಶಿಸುವಾಗ ಏನೆಲ್ಲ ನಡೆಯಿತೆಂದು ಮಹಮ್ಮದ್ ಉದಾಹರಣೆ ಸಹಿತ ಉಲ್ಲೇಖಿಸಿದ್ದಾರೆ. ಅವರ ಚಾರಿತ್ರಿಕ ಅರಿವು, ಅದನ್ನು ಅತಿಥಿಗಳಿಗೆ ಯಥೋಚಿತವೂ, ಸಾಂಗವೂ ಆಗಿ ವಿವರಿಸುವ ಸೌಮ್ಯತೆ ಮಹಮ್ಮದ್ ಅವರಿಗೆ ರಕ್ತಗತವಾಗಿತ್ತು. ಅದೇ ರೀತಿ ಸಪತ್ನೀಕರಾಗಿ ಬಂದ ಅಮೇರಿಕಾದ ಅಧ್ಯಕ್ಷ, ಚೀನಾದ ಪ್ರಧಾನಿ, ಜರ್ಮನ್ ಅಧ್ಯಕ್ಷರನ್ನು ಬರಮಾಡಿ ಅವರಿಗೆ ತೃಪ್ತಿಕರವಾದ ಮಾಹಿತಿ ನೀಡುವಲ್ಲಿ ಪಟ್ಟ ಶ್ರಮ ಮಹಮ್ಮದ್ ಅವರನ್ನು ಭಾರತದ ಅತಿ ಶ್ರೇಷ್ಟ ಸಾಂಸ್ಕೃತಿಕ ರಾಯಭಾರಿಯಾಗಿ ರೂಪುಗೊಳ್ಳುವಂತೆ ಮಾಡಿತು.”
ಲೇಖಕರಾದ ಕೆ.ಕೆ.ಮಹಮ್ಮದ್ ಅವರು ತಮ್ಮ ನನ್ನುಡಿ-ನಲ್ನುಡಿಯಲ್ಲಿ ಪುಸ್ತಕ ಬರೆದ ಬಗ್ಗೆ , ಅವರು ಭೇಟಿಯಾದ ಜನರು, ಮಾಡಿ ಮುಗಿಸಿದ ಕೆಲಸಗಳು ಇವುಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಒಂದೆಡೆ ಅವರು ಬರೆಯುತ್ತಾರೆ “ಅಲೀಘಡದಿಂದ ಪ್ರಾರಂಭಿಸಿದ ಈ ಪಯಣದಲ್ಲಿ ಕೆಲವೊಂದು ‘ಮಾನವ ದೇವರು'ಗಳೊಂದಿಗೆ ಸೆಣಸಾಟ ಅನಿವಾರ್ಯವಾಗಿತ್ತು. ಇದನ್ನು ಇನ್ನಿತರ ಕ್ರಾಂತಿಕಾರಿ ಸಾಮಾಜಿಕ ಪರಿವರ್ತನೆಯ ಚಳುವಳಿಯೊಂದಿಗೆ ಬೆಸೆಯುವಂತಿಲ್ಲ. ಕ್ರಾಂತಿಕಾರಿ ಹೆಜ್ಜೆ ಇಡುವುದರಲ್ಲಿ ನಾನೇನೂ ಹಿಂಜರಿದದ್ದಿಲ್ಲ. ನನ್ನ ಕಾರ್ಯಕ್ರಮಗಳೆಲ್ಲವನ್ನೂ ವಿಶ್ಲೇಷಿದರೆ ಅದಕ್ಕೆಲ್ಲ ಉತ್ತರ ದೊರಕಬಹುದು. ಪ್ರಾಕ್ತನ ಶಾಸ್ತ್ರ ನಿರೀಕ್ಷಣಾಲಯದಲ್ಲಿ ಕಾರ್ಯನಿರತನಾಗಿದ್ದಾಗ ಹತ್ತು ಹಲವಾರು ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರನ್ನು ಎದುರಿಸಬೇಕಾದ ಅನಿವಾರ್ಯತೆಯೂ ಇತ್ತು. ಹಿಂದೂ-ಮುಸ್ಲಿಂ ಜಾತೀಯವಾದಿಗಳ ಅಭಿಪ್ರಾಯಕ್ಕೆ ತಲೆಬಾಗದೆ, ಅನೇಕ ಕಹಿಯಾದ ಸತ್ಯಗಳನ್ನು ಬಯಲು ಮಾಡಿದ್ದೆ. ಇದು ಇತ್ತಂಡಕ್ಕೂ ರುಚಿಸದ ಸತ್ಯ, ಮಾತ್ರವಲ್ಲ ಅಲ್ಪಸಂಖ್ಯಾತರ ಕೋಮುವಾದಕ್ಕೆ ಪ್ರತ್ಯಕ್ಷವಾಗಿ. ಪರೋಕ್ಷವಾಗಿ ಸೊಪ್ಪು ಹಾಕುತ್ತಿದ್ದ ಕಮ್ಯೂನಿಷ್ಟ್ ಇತಿಹಾಸಜ್ಞರನ್ನೂ ಎದುರುಹಾಕಿಕೊಳ್ಳಬೇಕಾಯಿತು. ಸತ್ಯವನ್ನು ಒಪ್ಪಲು ತಯಾರಿಲ್ಲದವರಿಗೆ ಅದೆಲ್ಲ ಬಿಸಿ ತುಪ್ಪವಾಗಿ ಪರಿಣಮಿಸಿತು.”
ಕೆ.ಕೆ,ಮಹಮ್ಮದ್ ಇವರು ಅಯೋಧ್ಯೆಯ ವಿವಾದಿತ ಜಾಗದಲ್ಲಿ ನಡೆದ ಉತ್ಖನದಲ್ಲೂ ಪಾಲ್ಗೊಂಡಿದ್ದರು. ಸತ್ಯ ಹೇಳಲು ಹೆದರಿಕೆ ಯಾಕೆ? ಎಂಬುವುದೇ ಇವರ ಮೂಲ ಮಂತ್ರವಾಗಿತ್ತು. ಬಂದ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿದರು. ಪುಸ್ತಕದ ಕೊನೆಯಲ್ಲಿ ಮಹಮ್ಮದ್ ಅವರು ಕೆಲಸ ಮಾಡಿದ ಕೆಲವೊಂದು ಸ್ಥಳಗಳ ಬಗ್ಗೆ ವರ್ಣಮಯ ಚಿತ್ರಗಳನ್ನು ನೀಡಿದ್ದಾರೆ. ಇವರಿಗೆ ಸಿಕ್ಕಿದ ಪುರಸ್ಕಾರ, ಪ್ರಶಸ್ತಿಗಳ ಬಗ್ಗೆಯೂ ಚಿತ್ರಗಳಿವೆ. ಮಹಮ್ಮದ್ ಅವರ ಮಲಯಾಳಂ ಭಾಷೆಯ ಪುಸ್ತಕದ ನಿರೂಪಣೆಯನ್ನು ಮಾಡಿದವರು ಪತ್ರಕರ್ತ ಅನೀಶ್ ಕುಟ್ಟನ್ ಇವರು.
ಕನ್ನಡಕ್ಕೆ ಅನುವಾದ ಮಾಡಿದವರು ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ.ನರಸಿಂಗ ರಾವ್ ಇವರು. ಕೆ.ಕೆ.ಮಹಮ್ಮದ್ ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಮುಖಪುಟ ಹೊಂದಿರುವ ಈ ಪುಸ್ತಕವು ೧೩೦ ಪುಟಗಳನ್ನು ಹೊಂದಿದೆ.