ನಾನೇಕೆ ದಡ್ಡ?

"Practice makes man perfect" ಎನ್ನುವ ನುಡಿಮುತ್ತನ್ನು ಮಕ್ಕಳೆದುರು ಬಳಸದ ಶಿಕ್ಷಕರಿಲ್ಲ. ಹೀಗೆ ತರಗತಿಯಲ್ಲಿ ಈ ಮಾತನ್ನು ಪುಟ್ಟ ಮಕ್ಕಳಿಗೆ ಅವರದೇ ರೀತಿಯಲ್ಲಿ ಹೇಳುವ ಅಭ್ಯಾಸ ನನ್ನದು. "ಮಾತಾಜಿ ನನಗೆ, ಕಥೆ ಹೇಳಲು ಬರುವುದಿಲ್ಲ, ಪದ್ಯಗಳು ಹೇಳಲು ಬರುವುದಿಲ್ಲ, ಎಂದೆಲ್ಲ ದಿನವಿಡೀ ಹೇಳುವ ಮಕ್ಕಳಿಗೆ, ನಾನು ಮೇಲಿನ ನುಡಿಮುತ್ತನ್ನೇ ಹೇಳಿ, ಪ್ರೆರೇಪಿಸುವ ಪ್ರಯತ್ನ ಮಾಡುತ್ತಿದ್ದೆ. ಅದರಲ್ಲಿ ಕೆಲವು ಫಲಿಸುತ್ತಿತ್ತು, ಕೆಲವು ಇಲ್ಲ..
ಒಮ್ಮೆ ಹೀಗೆ ಒಂದು ಮಗುವನ್ನು ಕರೆದು, ಬಾಯಿಪಾಠ ಮಾಡಿದ ಆಂಗ್ಲ ಕಥೆಗಳನ್ನು ಹೇಳುವಂತೆ, ಹೇಳಿದಾಗ, ಮುದ್ದಾದ ತೊದಲು ನುಡಿಯಲ್ಲಿ, ಏನೇನೋ ಗೊಣಗಿ, ಕೊನೆಯಲ್ಲಿ "ಮಾತಾಜಿ ನನಗೆ ಇಷ್ಟೇ ನೆನಪಿರೋದು" ಎಂಬ ನಿಸ್ಸoಕೋಚದ ನೇರ ಉತ್ತರ ಕೊಟ್ಟು, ಒಮ್ಮೆ ನನ್ನನ್ನೇ ದಿಟ್ಟಿಸಿ ನೋಡಿತು ಮಗು.. ನಂತರ ಒಂದು ಪ್ರಶ್ನೆ ಕೇಳಿತು.. "ಮಾತಾಜಿ ನೀವು ನನಗೆ ಮಾತ್ರ ಸುಳ್ಳು ಹೇಳೋದು ಯಾಕೆ?" ಎಂದು ಕೇಳಿತು. ನಾನೆಲ್ಲಿ ಸುಳ್ಳು ಹೇಳಿದೆ? ಯಾವ ವಿಚಾರ? ಎಂದೆಲ್ಲ ಕೇಳಿದಾಗ. ಮಗು ಹೇಳಿತು. "ದಿನವೂ ಶಾಲೆಯಲ್ಲಿ ಹೇಳಿಕೊಟ್ಟ ಪಾಠವನ್ನೇ ಮನೆಯಲ್ಲೂ ಪದೇ ಪದೇ ಅಭ್ಯಾಸ ಮಾಡಿದರೆ ಬೇಗ ಕಲಿಯಬಹುದು ಎಂದು ನೀವು ಹೇಳುವಿರಿ.. ಆದರೆ ಒಂದೇ ಪಾಠವನ್ನೇ ದಿನಕ್ಕೆ 10 ಬಾರಿ ಹೇಳಿದರೂ, ಮರುದಿನ ನನಗೆ ಅದರ ನೆನಪೇ ಇರುವುದಿಲ್ಲ ಏಕೆ? ಹಾಗಾದರೆ ನಾನು ದಡ್ಡನಾ ಮಾತಾಜಿ?" ಎಂದು ಕೇಳುವಾಗ ಏನು ಹೇಳಬೇಕೆಂದು ತಿಳಿಯದೆ, ಸುಮ್ಮನೆ ಮಗುವಿನ ಮುಖ ನೋಡಿ ನಕ್ಕು ಹೇಳಿದೆ. "ಇಲ್ಲ ಪುಟ್ಟ ನೀನೇನು ದಡ್ಡ ಅಲ್ಲ.. ಆದರೆ ನಿನಗೆ ಅಭ್ಯಾಸ ಸ್ವಲ್ಪ ಜಾಸ್ತಿ ಬೇಕು ಅಷ್ಟೇ... ಅದು ನಿನಗೆ ನೆನಪು ಉಳಿಯಬೇಕೆಂದರೆ ಹಾಗೆ ನೀನು ನೆನಪಿನ ಶಕ್ತಿ ಹೆಚ್ಚಿಕೊಳ್ಳಬೇಕು, ಅದಕ್ಕೆ ಹೆಚ್ಚಿನ ತರಕಾರಿ, ಹಣ್ಣು ಎಲ್ಲ ತಿನ್ನಬೇಕು" ಎಂದು ನಾ ಹೇಳಿದ ಮಾತನ್ನು ಕೇಳಿದ ಮಗು. ಮಾರನೇ ದಿನ ತನ್ನ ತಿಂಡಿಯ ಡಬ್ಬಿ ತುಂಬಾ ತರಕಾರಿಯ ಸಂತೆಯನ್ನೇ ತುಂಬಿಕೊಂಡು ಬಂದಿತ್ತು..
ಅಂದು ಸಂಜೆ ಪೋಷಕರ ಕರೆ, "ಮಾತಾಜಿ ತರಕಾರಿ ಎಂದರೆ ಮೈಲು ದೂರ ಓಡುತ್ತಿದ್ದ ನನ್ನ ಮಗು ಇವತ್ತು ಡಬ್ಬಿ ತುಂಬಾ ತರಕಾರಿ ತುಂಬಿಕೊಂಡು ಬಂದಿದೆ. ಇದೇನು ಜಾದು?" ಎಂದು ಕೇಳಿದಾಗ ನನ್ನೊಳಗೆ ನಾನು ನಕ್ಕು ಕಥೆ ಹೇಳಿ ಮಾತು ಮುಗಿಸಿದೆ. ಪೋಷಕರ ಖುಷಿಗೆ ಪಾರವೇ ಇರಲಿಲ್ಲ. ನಮ್ಮ ಸುತ್ತಲೂ ನಮ್ಮನ್ನು ಪ್ರೀತಿಸುವಂತೆ ನಟಿಸಿ, ವಿಶ್ವಾಸಘಾತ ಮಾಡುವ ಜನರ ನಡುವೆ, ನಮ್ಮ ಮಾತೇ ವೇದವಾಕ್ಯ ಎಂಬಂತೆ ಅದನ್ನು ಅನುಸರಿಸುವ ಮುಗ್ಧ ಮನಸ್ಸುಗಳ ನಡುವಿನ ಒಡನಾಟವೇ ಒಂದು ದೊಡ್ಡ ವರದಾನ... ಅಲ್ಲವೇ?
-ರಮ್ಯಾ ಆರ್ ಭಟ್, ಕುಂದಾಪುರ.
ಚಿತ್ರ ಕೃಪೆ: ಇಂಟರ್ನೆಟ್ ತಾಣ