ನಾಮಫಲಕ ; ನಿಲುವು ದಿಟ್ಟವಾಗಿರಲಿ
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪೆನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಶೇ, ೬೦ರಷ್ಟು ಕನ್ನಡ ಭಾಷೆ ಕಡ್ಡಾಯ ಮಾಡಲಾಗಿದ್ದು, ಇದನ್ನು ಅಳವಡಿಸಲು ಫೆ.೨೮ ಕೊನೆಯ ದಿನವಾಗಿದೆ. ಆದರೆ ರಾಜ್ಯ ಸರಕಾರದ ಈ ನಡೆಯನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡಲು ಮಹಾರಾಷ್ಟ್ರ ಸರಕಾರ ಮುಂದಾಗಿದೆ. ಕರ್ನಾಟಕ-ಮಹಾರಾಷ್ಟ್ರ ಅಂತಾರಾಜ್ಯ ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿ ಇನ್ನೂ ಬಾಕಿ ಇರುವ ಹಿನ್ನಲೆಯಲ್ಲಿ ವಿವಾದಿತ ಪ್ರದೇಶಗಳಲ್ಲಿ ಮುಖ್ಯವಾಗಿ ಕರ್ನಾಟಕದ ನಾಲ್ಕು ಗಡಿ ಜಿಲ್ಲೆಗಳಲ್ಲಿ ಈ ಕಾಯಿದೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂಬುದು ಮಹಾರಾಷ್ಟ್ರ ಸರಕಾರದ ವಾದ. ಯಾವುದೇ ರಾಜ್ಯಗಳ ಗಡಿಭಾಗಗಳಲ್ಲಿ ಎರಡೂ ಭಾಷಿಕರಿರುವುದು ಸಾಮಾನ್ಯ. ಬೆಳಗಾವಿ ಯಾರಿಗೆ ಸೇರಬೇಕು ಎಂಬುದು ೧೯೫೭ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಆದಾಗಲೇ ತೀರ್ಮಾನವಾಗಿದೆ. ಅಲ್ಲಿಂದೀಚೆಗೆ ಬೆಳಗಾವಿಯಲ್ಲಿ ಕನ್ನಡವನ್ನು ಕುಂದಿಸಲು, ಮರಾಠಿಯನ್ನು ಬೆಳೆಸಲು ಮರಾಠ ರಾಜಕಾರಣಿಗಳು ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಯಶಸ್ವಿಯಾಗಿಲ್ಲ. ಆಗುವುದೂ ಇಲ್ಲ. ನಮ್ಮ ರಾಜ್ಯದಲ್ಲಿ ಬೋರ್ಡ್ ಹಾಕುವುದಕ್ಕೆ ಅವರ ಅಪ್ಪಣೆ ಬೇಕಿಲ್ಲ. ನಾವು ಬೋರ್ಡ್ ಅಳವಡಿಕೆಯಲ್ಲಿ ಕನ್ನಡ ಕಡ್ದಾಯ ಮಾಡಿರುವುದು ಕರ್ನಾಟಕದಲ್ಲಿ ಮಾತ್ರ. ಇದಕ್ಕೂ ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧ ಇಲ್ಲ. ಈ ನಿಟ್ಟಿನಲ್ಲಿ ನಾವು ದಿಟ್ಟವಾಗಿ ನಮ್ಮ ನಿಲುವನ್ನು ಪ್ರದರ್ಶಿಸಬೇಕಾದ ಅಗತ್ಯ ಇದೆ. ಮಹಾರಾಷ್ಟ್ರ ಹೇಳುತ್ತಿರುವ ನಾಲ್ಕು ಗಡಿ ಜಿಲ್ಲೆಗಳು ವಿವಾದಿತ ಅನಿಸಿರುವುದು ಮಹಾರಾಷ್ಟ್ರದ ಮೊಂಡು ಹಠದಿಂದಾಗಿಯೇ ಹೊರತು, ಇವು ಕರ್ನಾಟಕಕ್ಕೆ ಸೇರಿದವು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.ಮಹಾರಾಷ್ಟ್ರ ಸರಕಾರ ಬೇಕಿದ್ದರೆ ತಮ್ಮಲ್ಲೂ ೬೦ : ೪೦ ಅನುಪಾತದಲ್ಲಿ ಮರಾಠಿ ಹಾಗೂ ಇಂಗ್ಲಿಷ್ ನಾಮಫಲಕ ಅಳವಡಿಸುವ ವಿಚಾರ ಚರ್ಚಿಸಲಿ. ತಮ್ಮ ರಾಜ್ಯದಲ್ಲಿ ಅವರು ಮರಾಠಿ ಭಾಷೆ ಮಾತನಾಡಲಿ. ಕರ್ನಾಟಕದಲ್ಲಿ ಕನ್ನಡವೇ ಸರ್ವಭೌಮ. ಇಲ್ಲಿ ಕನ್ನಡ ಭಾಷೆ ಬಳಕೆಯ ಬಗ್ಗೆ ಇತರರು ಆಕ್ಷೇಪಿಸುವ ಅವಶ್ಯಕತೆ ಇಲ್ಲ.
-ವಿಶ್ವವಾಣಿ, ಸಂಪಾದಕೀಯ, ೨೪-೦೨-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ