ನಾಯಿಮರಿ.. ನಾಯಿಮರಿ..ತಿಂಡಿ ಬೇಕೇ?

ನಾಯಿಮರಿ.. ನಾಯಿಮರಿ..ತಿಂಡಿ ಬೇಕೇ?

ಬರಹ

(ಇ-ಲೋಕ-64)(3/3/2008)  

ಮಕ್ಕಳು ಇಲ್ಲದೆಯೋ,ದೂರದೂರಲ್ಲಿ ವಾಸವಾಗಿರುವ ಕಾರಣಕ್ಕೆ ಒಬ್ಬಂಟಿಯಾಗಿರ ಬೇಕಾದ ಹಿರಿಯ ನಾಗರಿಕರಿಗೆ ಒಬ್ಬಂಟಿತನ ಕಾಡುವುದು ಸಹಜ.ಇದರಿಂದ ಹೊರಬರಲು ಅವರು ಸಾಕುಪ್ರಾಣಿಗಳ ಮೊರೆ ಹೋಗುತ್ತಾರೆ.ಆದರೆ ಈ ಹಿರಿಯರು ದೈಹಿಕವಾಗಿ ದುರ್ಬಲರಾಗಿದ್ದು,ಸಾಕು ಪ್ರಾಣಿಗಳನ್ನು ಸಾಕುವ ಚೈತನ್ಯ ಹೊಂದದೆ ಇರದಿರಬಹುದು.ಅದಕ್ಕಾಗಿ ಕೆಲವು ಕಂಪೆನಿಗಳು ರೊಬೋಟ್ ಸಾಕು ನಾಯಿಯನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಿದೆ.
 ಆದರೆ ಈ ರೊಬೋಮರಿಗಳು ನೈಜ ಪ್ರಾಣಿಗಳಿಗೆ ಸರಿಸಾಟಿಯಾದವೇ ಎಂಬ ಪ್ರಶ್ನೆ ಹಲವರಲ್ಲಿತ್ತು.ಇತ್ತೀಚೆಗೆ ಈ ಬಗ್ಗೆ ಸಂಶೋಧನೆ ನಡೆಯಿತು.ಹಿರಿಯ ನಾಗರಿಕರನ್ನು ಆಯ್ದು ಮೂರು ಗುಂಪುಗಳಾಗಿ ವಿಭಾಗಿಸಲಾಯಿತು.ಮೊದಲ ಗುಂಪಿಗೆ ನೈಜ ಪ್ರಾಣಿಗಳನ್ನು ಒದಗಿಸಲಾಯಿತು.ಎರಡನೆ ಗುಂಪಿಗೆ ಐಬೋ ಎನ್ನುವ ಸೋನಿ ಕಂಪೆನಿಯ ರೊಬೋನಾಯಿ ನೀಡಲಾಯಿತು.ಮೂರನೇ ಗುಂಪಿಗೆ ಸಾಕು ಪ್ರಾಣಿಯನ್ನೇ ನೀಡಿರಲಿಲ್ಲ.ಏಳುವಾರಗಳ ನಂತರ ಪರಿಶೀಲಿಸಿದಾಗ ರೊಬೋನಾಯಿ ಸಹವಾಸ ಪಡೆದ ಹಿರಿಯ ನಾಗರಿಕರು ಮತ್ತು ನೈಜ ನಾಯಿಮರಿಯ ಜತೆ ಬೆರೆಯಲು ಅವಕಾಶ ಪಡೆದ ಹಿರಿಯ ನಾಗರಿಕರಷ್ಟೇ ಚೇತೋಹಾರಿ ಅನುಭವ ಪಡೆದದ್ದು ಕಂಡು ಬಂತು.ರೊಬೋನಾಯಿಯನ್ನು ಅಜ್ಜ-ಅಜ್ಜಿಯರ ಬಗ್ಗೆ ಅಗತ್ಯ ಮಾಹಿತಿ ಪಡೆಯಲೂ ಬಳಸುವ ಅವಕಾಶವಿರುವುದರಿಂದ,ಅವರಿಗೆ ಅಗತ್ಯವಿದ್ದಾಗ ತುರ್ತು ವೈದ್ಯಕೀಯ ಸಹಾಯ ದೊರಕಿಸಲು ಅವಕಾಶವಿದೆ.ಆದರೆ ಐಬೋ ನಾಯಿಮರಿಯ ತಯಾರಿಕೆಯನ್ನು ಇದೀಗ ಸೋನಿ ಕಂಪೆನಿ ಕೈಬಿಟ್ಟಿರುವುದು ವಿಪರ್ಯಾಸ.
ನೆರೆಮನೆಯ ಮರ:ವಿದ್ಯುತ್‍ಗೆ ಬರ!
 ಎಲ್ಲರೂ ತಮ್ಮ ಮನೆಯ ಹಿತ್ತಿಲಲ್ಲಿ ಮರಗಿಡಗಳನ್ನು ನೆಟ್ಟು ಹಸಿರಾಗಿಸುವುದು ಸಹಜ.ಶುದ್ಧ ಗಾಳಿ ಕೊಡುವ ಮರಗಳು,ಫಲ ಪುಷ್ಪದ ಬೋನಸ್ ಬೇರೆ ಕೊಟ್ಟರೆ ಯಾರಿಗೆ ಬೇಡ?ಆದರೆ ಮರದ ಗೆಲ್ಲುಗಳು ಪಕ್ಕದ ಮನೆಯವರ ಕಂಪೌಂಡಿಗೆ ಹೋದರೆ ಆಕ್ಷೇಪ ಬರುವುದಿದೆ.ಹಾಗೆ ಗಾಳಿ-ಮಳೆಗೆ ಮರದ ಗೆಲ್ಲುಗಳು ಪಕ್ಕದವರ ಮನೆ ಮೇಲೆ ಬಿದ್ದು ಅನಾಹುತ ಸಂಭವಿಸುವುದೂ ಇದೆ.ಕ್ಯಾಲಿಫೊರ್ನಿಯಾದಲ್ಲಿ ನಡೆದದ್ದೇ ಬೇರೆ.ಅಲ್ಲಿ ಒಂದು ಮನೆಯ ಮರಗಳು ಬೆಳೆದು,ನೆರೆಮನೆಯವರ ಸೌರವಿದ್ಯುತ್ ಘಟಕಕ್ಕೆ ನೆರಳು ಬಿದ್ದು,ಅದು ವಿದ್ಯುತ್ ಉತ್ಪಾದನೆ ಸಾಧ್ಯವಾಗದಂತಾಯಿತು.ನೆರೆಮನೆಯಾತ ಮರ ಕಡಿಸಿ ಎಂದು ವಿನಂತಿಸಿದರೂ ಮರದ ಮಾಲೀಕರು ಜಗ್ಗಲಿಲ್ಲ.ಮರ ತಾವು ಮೊದಲು ನೆಟ್ಟಿದ್ದೆವು,ವಿದ್ಯುತ್ ಘಟಕವನ್ನು ನೆರೆಮನೆಯಾತ ಸ್ಥಾಪಿಸಿದ್ದು ನಂತರ ಎಂದವರ ವಾದ.ಮಾತ್ರವಲ್ಲ ಮರಗಳು ಪರಿಸರಸ್ನೇಹಿ.ಅದನ್ನು ಕಡಿಯಬೇಕೆಂದರೆ ಹೇಗೆ ಎಂಬ ವಾದ ಮುಂದೊಡ್ಡಿದರು.ನ್ಯಾಯಾಯಲಯದ ಮೆಟ್ಟಲೇರಿದ ಪ್ರಕರಣ ಕೊನೆಗೂ ಬಗೆಹರಿಯಿತು.ಮರ ಬೆಳೆಸಿದವರು,ನೆರೆಮನೆಯ ಸೌರವಿದ್ಯುತ್ ಘಟಕಕ್ಕೆ ದಿನದ ಐದು ಘಂಟೆ ನೆರಳು ಒಡ್ಡಿದರೆ,ಅದನ್ನು ಕಡಿಸಿ,ವಿದ್ಯುತ್ ಘಟಕಕ್ಕೆ ಅನುಕೂಲ ಕಲ್ಪಿಸಬೇಕು ಎಂಬುದು ನ್ಯಾಯಾಧೀಶರ ನ್ಯಾಯ ಬಂತು.
 ಅಂದ ಹಾಗೆ ಕ್ಯಾಲಿಫೋರ್ನಿಯಾದಲ್ಲಿ ಸುಮಾರು ಮೂವತ್ತು ಸಾವಿರ ಮನೆಗಳಲ್ಲಿ ಸೌರವಿದ್ಯುತ್ ಘಟಕಗಳಿವೆ.ಅವುಗಳ ಒಟ್ಟು ಉತ್ಪಾದನೆ ನಾಲ್ಕುನೂರು ಮೆಗಾವ್ಯಾಟ್‍ಗಳು.ಕ್ಯಾಲಿಫೊರ್ನಿಯಾದಲ್ಲಿ ಪರಿಸರಸ್ನೇಹಿ ಯೋಜನೆಗಳಿಗೆ ಬಹಳಷ್ಟು ಪ್ರೋತ್ಸಾಹ ಇದೆ.
ಅಂತರ್ಜಾಲದಲ್ಲಿ ಐದು ಜಿಬಿ ಅವಕಾಶ ಫ್ರೀ
 ನೀವು ಯಾವೂರಿಗೆ ಹೋದರೂ ಅಂತರ್ಜಾಲ ಸಂಪರ್ಕ ಪಡೆಯಬಹುದು.ಹಾಗಾಗಿ ಅಂತರ್ಜಾಲದಲ್ಲಿ ನಿಮ್ಮ ಕಡತಗಳನ್ನು ಉಳಿಸಿಕೊಂಡರೆ,ಎಲ್ಲೇ ಹೋದರೂ ಅವನ್ನು ಬಳಸಿಕೊಳ್ಳಲು ಸಾಧ್ಯ.ಆದರೆ ಇಂತಹ ಸ್ಥಳಾವಕಾಶ ಪಡೆಯಲು ಹಣ ತೆರಬೇಕಾಗುತ್ತದೋ ಎಂದು ಭಾವಿಸಬೇಡಿ.ಈ ವರೆಗೆ ಅಂತರ್ಜಾಲದಲ್ಲಿ ಸ್ಥಳಾವಕಾಶ ನೀಡುವ ಹಲವು ತಾಣಗಳಿದ್ದರೂ,ಮೈಕ್ರೋಸಾಫ್ಟ್ ಅಂತಹ ಪ್ರಸಿದ್ಧ ಕಂಪೆನಿಯು ಅಂತಹ ಸೌಲಭ್ಯ ನೀಡುತ್ತಿರಲಿಲ್ಲ. ಈಗ http://skydrive.live.com/ ತಾಣದ ಮೂಲಕ ಮೈಕ್ರೊಸಾಫ್ಟ್ ಐದು ಜಿಬಿ ಸ್ಥಳಾವಕಾಶವನ್ನು ನೀಡುತ್ತಿದೆ. ನಿಮಗೆ ಹಾಟ್‍ಮೇಲ್ ವಿಳಾಸವಿದ್ದರೆ,ಅದನ್ನೇ ಬಳಸಿ ಹೊಸ ಸೇವೆಗೆ ಪ್ರವೇಶ ಪಡೆಯಬಹುದು.ಇ-ಮೇಲ್ ಖಾತೆ ಇಲ್ಲದವರೂ ಹೊಸದಾಗಿ ನೋಂದಾಯಿಸಿ ಕೊಂಡರೆ ಸೇವೆ ಲಭ್ಯವಾಗುತ್ತದೆ.ಐವತ್ತು ಮೆಗಾಬೈಟು ಕಡತಗಳ ಮಿತಿಯೊಂದಿಗೆ ಕಡತಗಳನ್ನು ಈ ಸ್ಥಳಾವಕಾಶದಲ್ಲಿ ಅಪ್ಲೋಡ್ ಮಾಡಿಡಬಹುದು.
 ಇಲ್ಲಿಟ್ಟ ಕಡತಗಳನ್ನು ನಿಮ್ಮ ವೈಯುಕ್ತಿಕ ಕಡತಗಳು,ಗೆಳೆಯರ ಜತೆ ಹಂಚಿಕೊಳ್ಳಲಿಚ್ಛಿಸುವ ಕಡತಗಳು ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುವ ಸಾರ್ವತ್ರಿಕ ಕಡತಗಳು ಎಂದು ಮೂರು ವಿಭಾಗಗಳಲ್ಲಿ ಇಡುವ ವ್ಯವಸ್ಥೆಯಿದೆ.ವೈಯುಕ್ತಿಕ ಕಡತಗಳನ್ನು ಇತರರು ನೋಡಲಾರರು.ಇಲ್ಲಿ ಲಭ್ಯವಿರುವ ಭದ್ರತೆ ಬ್ಯಾಂಕ್‍ನೊಂದಿಗಿನ ಆನ್‍ಲೈನ್ ವ್ಯವಹಾರದಲ್ಲಿ ಲಭ್ಯವಿರುವ ಭದ್ರತೆಯಷ್ಟೇ ಇದೆಯೆಂದು ಕಂಪೆನಿಯು ಹೇಳಿದೆ.
ನೆಟ್‍ಸ್ಕೇಪ್ ಇನ್ನಿಲ್ಲ!
 ತೊಂಭತ್ತರ ದಶಕದಲ್ಲಿ ಅಂತರ್ಜಾಲ ಜಾಲಾಟಕ್ಕೆ ಬಳಕೆಯಾಗುತ್ತಿದ್ದ ಬ್ರೌಸರ್ ತಂತ್ರಾಂಶಗಳ ಪೈಕಿ ನೆಟ್‍ಸ್ಕೇಪ್ ನೇವಿಗೇಟರ್ ಬಹುಜನಪ್ರಿಯ.ಶೇಕಡಾ ತೊಂಭತ್ತರಷ್ಟು ಜನ ಅಂತರ್ಜಾಲಿಗರು ಅದನ್ನೇ ನೆಚ್ಚಿಕೊಂಡು ಅಂತರ್ಜಾಲ ಜಾಲಾಟ ನಡೆಸುತ್ತಿದ್ದರು.ನಂತರದ ದಿನಗಳಲ್ಲಿ ಇಂಟರ್ನೆಟ್ ಎಕ್ಸ್‍ಪ್ಲೋರರ್ ನೆಟ್‍ಸ್ಕೇಪನ್ನು ಹಿನ್ನೆಲೆಗೆ ಸರಿಸಿತು.ಮೈಕ್ರೋಸಾಫ್ಟ್ ತನ್ನ ಕಂಪ್ಯೂಟರ್ ಕಾರ್ಯನಿರ್ವಹಣ ತಂತ್ರಾಶದ ಜತೆ ಇಂಟರ್ನೆಟ್ ಎಕ್ಸ್‍ಪ್ಲೋರರನ್ನು ಉಚಿತವಾಗಿ ನೀಡಿ ಜನರ ಮೊದಲ ಆಯ್ಕೆಯಾಯಿತು.ಈಗಿನ ದಿನಗಳಲ್ಲಿ ಮೊಜಿಲಾ,ಫೈರ್‌ಫೋಕ್ಸ್,ಒಪೆರಾ ಮತ್ತು ಫ್ಲಾಕ್ ಮುಂತಾದ ಹಲವಾರು ಬ್ರೌಸರ್ ತಂತ್ರಾಂಶಗಳು ಲಭ್ಯವಿವೆ.ಆದರೂ ಹಳೆಯ ತಲೆಮಾರಿನವರ ಹೃದಯ ಭಾರವಾಗಿದೆ.ನೆಟ್‍ಸ್ಕೇಪ್ ನೇವಿಗೇಟರ್ ಬ್ರೌಸರ್ ಇನ್ನಿಲ್ಲ ಎಂಬ ಅಧಿಕೃತ ಘೋಷಣೆಯಾಗಿದೆ.

ashokworld

udayavani
*ಅಶೋಕ್‍ಕುಮಾರ್ ಎ