ನಾಯಿಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯ
ಇದೇ ದಿನಾಂಕ ಐದರಂದು ಮಂಗಳವಾರ ಅಶೋಕ್ ಖೇಣಿಯ ಜನ್ಮದಿನಾಚರಣೆಯ ಅಂಗವಾಗಿ ದಾವಣಗೆರೆಯಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ’ಭಾರತ ವಾಹನ ಚಾಲಕರ ಟ್ರೇಡ್ ಯೂನಿಯನ್’ ಮತ್ತು ’ವಿಶ್ವ ಕನ್ನಡಿಗರ ಕಣ್ಮಣಿ ಅಶೋಕ್ ಖೇಣಿ ಸೇನಾ’ ಎಂಬೆರಡು ಸಂಘಟನೆಗಳು ಈ ಕುರಿತು ಪತ್ರಿಕಾ ಜಾಹಿರಾತನ್ನು ನೀಡಿವೆ. ತಾನು ವಿಶ್ವ ಕನ್ನಡಿಗರ ಕಣ್ಮಣಿಯೆಂದು ಸ್ವಯಂ ಖೇಣಿಯೇ ನಿರ್ಧರಿಸಿಕೊಂಡಂತಿದೆ!
ಸರ್ವಧರ್ಮ ಸಮ್ಮೇಳನದ ಜೊತೆಗೇ ಅಂದು ಅದೇ ವೇದಿಕೆಯಲ್ಲೇ ಸೋನು ನಿಗಮ್ ತಂಡ ಮತ್ತು ಗುರುಕಿರಣ್ ತಂಡಗಳಿಂದ ಸಂಗೀತ-ನೃತ್ಯ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ! ಜೊತೆಗೆ, ಕನ್ನಡದ ಹಲವು ಚಿತ್ರತಾರೆಯರು ವೇದಿಕೆಯಲ್ಲಿ ರಾರಾಜಿಸಲಿದ್ದಾರೆ. ಸರ್ವಸಂಗಪರಿತ್ಯಾಗಿಗಳಾಗಿರಬೇಕಾದ ಧರ್ಮಗುರುಗಳನೇಕರು ಅಂದು ಸಂಗೀತ-ನೃತ್ಯ-ತಾರಾ ಮೇಳವನ್ನು ಸವಿಯಲಿದ್ದಾರೆ!
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪೆಂಡಾಲನ್ನು ಹಾಕಲಾಗಿದೆ. ಊರಿಡೀ ಖೇಣಿ, ಧರ್ಮಗುರುಗಳು, ರಾಜಕಾರಣಿಗಳು, ಸ್ಥಳೀಯ ಪುಢಾರಿಗಳು ಮೊದಲಾದವರ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಈ ಎಲ್ಲ ಹಂಗಾಮಾಕ್ಕೆ ಕೋಟಿ ಲೆಕ್ಕದಲ್ಲಿ ಖರ್ಚಾಗಲಿರುವ ಹಣವನ್ನು ತನ್ನ ಅಭಿಮಾನಿ ಸಂಘಟನೆ ಮತ್ತು ದಾವಣಗೆರೆಯ ಜನರೇ ಭರಿಸುತ್ತಿದ್ದಾರೆಂಬುದು ಖೇಣಿ ಮಹಾಶಯ ಹೇಳುತ್ತಿರುವ ಹಸಿ ಸುಳ್ಳು. ಅಷ್ಟೊಂದು ಹಣವನ್ನು ಅಭಿಮಾನಿಗಳು ತಮ್ಮ ಕಿಸೆಯಿಂದಾಗಲೀ ದೇಣಿಗೆ ಸಂಗ್ರಹದ ಮೂಲಕವಾಗಲೀ ಲಭ್ಯವಾಗಿಸಿಕೊಂಡಿರುವ ಯಾವ ಕುರುಹೂ ಕಾಣುತ್ತಿಲ್ಲ. ಪ್ರಸ್ತುತ ಬೆಂಗಳೂರಿನಲ್ಲಿದ್ದರೂ ದಾವಣಗೆರೆಯವನೇ ಆಗಿರುವ ನನಗೆ ಈ ಬಗ್ಗೆ ಖಚಿತ ಮಾಹಿತಿಗಳಿವೆ.
ಇಷ್ಟಕ್ಕೂ, ಆ ಅಭಿಮಾನಿಗಳೆಂಬುವವರು ನಿಜಕ್ಕೂ ಅಭಿಮಾನಿಗಳೇ ಅಥವಾ ಸ್ವಹಿತಾಸಕ್ತರೇ ಎಂಬುದನ್ನು ಯಾರೂ ಊಹಿಸಬಹುದು. ಇವರ ಹೆಸರಿನಲ್ಲಿ ಖೇಣಿಯ ಕಪ್ಪು ಹಣದ ಹೊಳೆ ಹರಿದಿರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಕಳೆದ ವರ್ಷ ಇದೇ ಖೇಣಿ ಮೈಸೂರಿನಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಆ ಸಮಾರಂಭಕ್ಕೆ ಕನ್ನಡ ಚಿತ್ರತಾರೆಯರ ಸಮೂಹವೇ ಹಾಜರಾಗಿತ್ತು!
ಈ ಸಂದರ್ಭದಲ್ಲಿ ನನಗೆ ಬಸವಣ್ಣನವರ ವಚನವೊಂದು ನೆನಪಾಗುತ್ತಿದೆ. ’ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ, ನಾಯಿಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯ’ ಎಂದಿದ್ದಾರೆ ಬಸವಣ್ಣನವರು. ಖೇಣಿ ಪುಣ್ಯಶಾಲಿ. ಆದರೆ ಆತ ಗಳಿಸಿರುವ ಹಣ ಎಂತಹದು? ನೈಸ್ ರಸ್ತೆಯ ಹೆಸರಿನಲ್ಲಿ ಸಹಸ್ರಾರು ಬಡ ರೈತರ ಮತ್ತು ಮಧ್ಯಮವರ್ಗದ ನಿವೇಶನದಾರರ ಭೂಮಿಯನ್ನು ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಶಪಡಿಸಿಕೊಂಡು ತನ್ಮೂಲಕ ಅರ್ಜಿಸುತ್ತಿರುವ ಹಣವಲ್ಲವೆ ಅದು? ಅಂದಮೇಲೆ ಅದು ಪುಣ್ಯದ ಗಳಿಕೆಯಂತೂ ಅಲ್ಲವೇ ಅಲ್ಲ. ಪಾಪಕ್ಕೆ ಹತ್ತಿರವಾದ ಗಳಿಕೆ ಅದು. ಈ ಹಣದಿಂದ ಆತ ಧರ್ಮಸಮ್ಮೇಳನ ಏರ್ಪಡಿಸಿದರೆ ಅದು ಸತ್ಪಾತ್ರಕ್ಕೆ ಸಲ್ಲದ ಧನವಿನಿಯೋಗವೇ ಸರಿ.
ಮೇಲಾಗಿ, ಆತ ಪ್ರಾಯಶ್ಚಿತ್ತರೂಪವಾಗಿ ಈ ಸಮ್ಮೇಳನ ಏರ್ಪಡಿಸಿಲ್ಲ. ತಾನು ಜನಪ್ರಿಯ ವ್ಯಕ್ತಿ ಎಂದು ತೋರಿಸಿಕೊಳ್ಳಲು ಆಡಂಬರದ ಹುಟ್ಟುಹಬ್ಬವನ್ನು ಮತ್ತು ತಾನು ಮಹಾನ್ ಶರಣ ಎಂದು ತೋರಿಸಿಕೊಳ್ಳಲು ಸರ್ವಧರ್ಮ ಸಮ್ಮೇಳನದ ಸೋಗಿನ ಕಾರ್ಯಕ್ರಮವನ್ನು ಸ್ವಯಂಪೋಷಿತ ಬ್ಯಾನರಿನಡಿ ಹಮ್ಮಿಕೊಂಡಿದ್ದಾರೆ. ಸರ್ವಧರ್ಮ ಸಮ್ಮೇಳನವೆಂಬುದೇನೋ ಇಂದಿನ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಸ್ವಾಗತಾರ್ಹವೇ. ಆದರೆ, ಅದನ್ನು ಏರ್ಪಡಿಸುವವರ ಆತ್ಮ ಮತ್ತು ವಿನಿಯೋಗವಾಗಲಿರುವ ದ್ರವ್ಯದ ಮೂಲ ಇವು ಶುದ್ಧವಾಗಿರಬೇಕಲ್ಲವೆ?
ಖೇಣಿ ಮಹಾಶಯರು ಮಾತನ್ನೇನೋ ಸಿಹಿಯಾಗಿ ಆಡುತ್ತಾರೆ. ಆದರೆ, ’ಶಬ್ದ ಸಂಭಾಷಣೆಯ ನುಡಿಯ ವರ್ತಿಸಿ ನುಡಿವೆ; ತೊಡಹದ ಬಣ್ಣದ ಕಡಿಹಕ್ಕು ಒರೆಗೆ ಬಾರದು ನೋಡಾ’ ಎಂಬ ಬಸವಣ್ಣನವರ ವಚನದಂತೆ, ಶಬ್ದ ಮಾತುಗಳನ್ನು ಬಹು ಆಕರ್ಷಕ ರೀತಿಯಲ್ಲಿ ಆಡುತ್ತೇವೆ, ಒರೆಗೆ ತಿಕ್ಕಿದಾಗ ಬಣ್ಣದ ಮೋಸ ಹೊರಬೀಳುವುದು. ಜನಮನದ ಒರೆಯಿಂದ ಈಗಾಗಲೇ ಖೇಣಿಯ ನಿಜಬಣ್ಣ ಹೊರಬಿದ್ದಿದೆ.
ಹೀಗಿರುವಾಗ, ಖೇಣಿಯು (ಅನ್ಯರ ಮುಖಾಂತರ) ಏರ್ಪಡಿಸಿರುವ ಈ ಅಭಿನಂದನೆ ಮತ್ತು ಸರ್ವಧರ್ಮ ಸಮ್ಮೇಳನಕ್ಕೆ ಧರ್ಮಗುರುಗಳು ಹಾಜರಾಗುವುದು ತರವಲ್ಲ. ಹಾಜರಾದ ಧರ್ಮಗುರುಗಳ ಬಗ್ಗೆ ನನ್ನನ್ನೂ ಒಳಗೊಂಡಂತೆ ಲಕ್ಷಾಂತರ ಜನಸಾಮಾನ್ಯರಿಗೆ ಗೌರವಭಾವ ಕಡಿಮೆಯಾಗುವುದು ನಿಶ್ಚಿತ.
’ಮಾತಿನಲ್ಲಿ ಶ್ರೋತೃಸುಖವ ನುಡಿಯಬಹುದಲ್ಲದೆ ಮಾಡುವ ಸತ್ಕ್ರಿಯೆಯಿಂದ ಭಕ್ತನೆನಿಸಬಾರದು.’ ಸವಿಮಾತುಗಳಿಂದ ಕಿವಿಗಿಂಪಾಗಿಸಬಹುದು, ಆದರೆ, ಸತ್ಕಾರ್ಯಗಳನ್ನು ಮಾಡಿದೊಡನೆ ’ನಾನು ಶರಣ’ ಎಂದುಕೊಳ್ಳಲಾಗದು. ಬಸವಣ್ಣನವರ ಈ ನುಡಿಯನ್ನು ಈ ಸಂದರ್ಭದಲ್ಲಿ ಮಾನ್ಯ ಅಶೋಕ್ ಖೇಣಿಯವರ ಗಮನಕ್ಕೆ ತರಲಿಚ್ಛಿಸುತ್ತೇನೆ.