ನಾಯಿ ಬಂದಾವೋ ಬೆನ್ನು ಹತ್ತಿ

ನಾಯಿ ಬಂದಾವೋ ಬೆನ್ನು ಹತ್ತಿ

ಪ್ರತಿದಿನ ಮುಂಜಾನೆ ನನಗೆ ಭೇಟಿಯಾಗುವ ಬೀದಿನಾಯಿಗಳಿಂದ ಪ್ರೇರಿತವಾದ ಒಂದು ಲಘು ಬರಹ.

ಮಳೆ ಮುಗಿದು, ಛಳಿ ಶುರುವಾಗಬೇಕಾದ ಕಾಲ. ರಾತ್ರಿ ಸ್ವಲ್ಪ ಮಳೆ ಬಿದ್ದು ಹವೆ ತಂಪಾಗಿತ್ತು. ಅಕ್ಟೊಬರ್ ತಿಂಗಳ ಕೊನೆ. ಕತ್ತಲು ಹೆಚ್ಚು. ಜತೆಗೆ ಮುಂಜಾನೆ ನಸುಕಿನಲ್ಲಿ ಇಬ್ಬನಿ ಬೀಳಲು ಪ್ರಾರಂಭವಾಗಿತ್ತು. ಆರೂವರೆಯ ನಂತರವೇ ಬೆಳಕಾಯಿತೆನ್ನಿಸುವುದು. ಅದರಲ್ಲೂ ನಾನು ಬೆಳಗ್ಗೆ ತಿರುಗಾಡಲು ಹೋಗುವ ರಸ್ತೆಯಲ್ಲಿ ಅಕ್ಕ ಪಕ್ಕ ಇನ್ನೂ ಮರಗಳು ಉಳಿದಿರುವುದರಿಂದ ಬೀದಿ ದೀಪಗಳಿದ್ದರೂ ರಸ್ತೆ ಬಹುಪಾಲು ಕತ್ತಲೇ. ರಸ್ತೆಯಲ್ಲಿ ಮನೆಗಳು ವಿರಳ. ವಾಹನ ಸಂಚಾರ ಇಲ್ಲವೆಂದೇ ಹೇಳಬಹುದು. ಹಕ್ಕಿಗಳು ಐದಕ್ಕೇ ಎದ್ದು ಕಲರವಮಾಡಿ ಮತ್ತೆ ನಿದ್ದೆಯ ಗುಂಗಿಗೆ ಮರಳಿದ್ದವೇನೋ? ಸುತ್ತಲೂ ನಿಶ್ಯಬ್ದ. ಮುಂಜಾವಿನ ಐದೂವರೆಗೆ ಪರಿಸರ ಆಹ್ಲಾದಕರವಾಗಿತ್ತು. ನನ್ನ ಪಾಡಿಗೆ ನಾನು ಏನೋ ಯೋಚಿಸುತ್ತಾ, ಮತ್ತೇನೋ ಗುನುಗಿಕೊಳ್ಳುತ್ತಾ, ಹೆಚ್ಚುಕಡಿಮೆ ಸಮಾಧಿ ಸ್ಥಿತಿಯಲ್ಲಿ ಹೆಜ್ಜೆಹಾಕುತ್ತಿದ್ದೆ. ಅದೆಲ್ಲಿ ಮಲಗಿತ್ತೋ? ಗವ್ವೆಂದು ಬೊಗಳುತ್ತಾ ಇದ್ದಕ್ಕಿದ್ದಂತೆ ನನ್ನೆಡೆ ಎಗರಿ ಬಂತೊಂದು ನಾಯಿ. ನಾನು ಬೆಚ್ಚಿಬಿದ್ದು ಒಂದುಮಾರು ಪಕ್ಕಕ್ಕೆ ಹಾರಿದೆ. ಅರೆಕ್ಷಣದಲ್ಲಿ ಆಹ್ಲಾದಕರ ಪರಿಸರ ಮಾಯವಾಗಿ, ಭಯಂಕರ ಪರಿಸರ ಸೃಷ್ಟಿಯಾಗಿ, ನನ್ನ ಯೋಚನೆ ಗುನುಗಾಟಗಳು ಸ್ಥಗಿತವಾಗಿ, ಎದೆ ಬಡಿತ ನೂರಿಪ್ಪತ್ತಾಗಿ, ಮೈ ಬೆವರಿಟ್ಟಿತು. ನಾನು ಸಾವರಿಸಿಕೊಂಡು ನನ್ನ ಕೈಲಿದ್ದ ಕೋಲನ್ನು ಟಿಪ್ಪುಸುಲ್ತಾನನ ಕತ್ತಿಯಂತೆ (ನೀವು ಬಿ ಜೆ ಪಿ ಯಾಗಿದ್ದರೆ ನನ್ನ ಮೇಲೆ ಎಗರಬೇಡಿ. ‘ಕೃಷ್ಣದೇವರಾಯನ’ ಎಂದು ಒಂದು ಪದ ಬದಲಾಯಿಸಿಕೊಳ್ಳಿ) ಝಳಪಿಸುತ್ತಾ ನಾಯಿಯೊಡನೆ ಯುಧ್ದಕ್ಕೆ ತಯಾರಾಗುವುದರಲ್ಲಿ ನಾಯಿ ಥಣ್ಣಗಾಗಿ ಏನೂ ಆಗಿಲ್ಲದಂತೆ ವಾಪಸು ತಿರುಗಿ ರಸ್ತೆ ಬದಿಯ ದೀಪದ ಕೆಳಗಿನ ತನ್ನ ಸ್ಥಾನಕ್ಕೆ ಹೋಗಿ ಮಲಗಿಕೊಂಡಿತು. ನಾನು ಒಂದುಕ್ಷಣ ನಿಂತು, ಅದು ಮುದುರಿಕೊಳ್ಳುವವರೆಗೆ ಕಾದು, ನನಗೆ ಆಘಾತವೇನೂ ಆಗಿಲ್ಲವೆಂದು ಖಚಿತಪಡಿಸಿಕೊಂಡು ಮುಂದುವರೆದೆ. ಆದರೆ ನನ್ನ ಸಮಾಧಿ ಸ್ಥಿತಿ ಹಾಳಾಗಿತ್ತು. ನನ್ನ ಯೋಚನೆ, ಗುನುಗಾಟಗಳು ಮತ್ತೆ ಶುರುವಾಗಲು ನಿರಾಕರಿಸಿದವು. ಮೈ ಬೆವರಿದ್ದು ನಿಲ್ಲಲಿಲ್ಲ. ನಾನು ಮತ್ತೆ ಮತ್ತೆ ಹೆದರಿ ಹಿಂತಿರುಗಿ ನೋಡುತ್ತಾ ನನ್ನ ವಾಕಿಂಗ್ ಮುಂದುವರೆಸಿದೆ. ನನ್ನ ಮುಂಜಾನೆಯ ತಿರುಗಾಟದ ಉತ್ಸಾಹ ಅಡಗಿಹೋಗಿತ್ತು. “ಸ್ಮಾಲ್ ಪ್ಲೆಷರ್ಸ್ ಆಫ್ ಲೈಫ್” ಎನ್ನುತ್ತಾರಲ್ಲಾ, ಜೀವನದ ಸಣ್ಣ ಸಣ್ಣ ಸಂತೋಷದ ಕ್ಷಣಗಳು, ಅವುಗಳಲ್ಲಿ ನನ್ನ ಮುಂಜಾನೆಯ ತಿರುಗಾಟ ಒಂದು. ನಾನು ಬೆಳಗ್ಗೆ ಬಹಳ ಬೇಗ ಏಳುವುದರಿಂದ ಒಮ್ಮೊಮ್ಮೆ ಐದರ ಹೊತ್ತಿಗೇ ರಸ್ತೆಯಲ್ಲಿರುತ್ತೇನೆ. ಮುಂಜಾನೆಯ ತಂಪಾದ ಹಾಗೂ ಶಾಂತ ಪರಿಸರ ನನಗೆ ಬಹಳ ಪ್ರಿಯವಾದದ್ದು. ಆದರೆ ನಮ್ಮ ರಸ್ತೆಯ ನಾಯಿಗಳು ನನ್ನ ತಿರುಗಾಟದ ‘ಕಬಾಬ್’ ನಲ್ಲಿನ ‘ಹಡ್ಡಿ’ಗಳು. ಕೆಲವು ನಾನು ದೂರದಲ್ಲಿರುವಾಗಲೇ ನನ್ನನ್ನು ಗಮನಿಸಿ ಗುರುಗಟ್ಟಲು ಪ್ರಾರಂಭಿಸಿ ಒಂದೆರಡು ಕ್ಷಣ ಗುರುಗುಟ್ಟಿ ಹಾಗೆಯೇ ಮಲಗುತ್ತವೆ. ಕೆಲವು ನನ್ನನ್ನು ಕಂಡೊಡನೆ ತಾವು ಬೊಗಳುವುದಷ್ಟೇ ಅಲ್ಲದೆ ಮಲಗಿರುವ ಇತರ ನಾಯಿಗಳಿಗೂ ನನ್ನ ಇರುವನ್ನು ತಿಳಿಸಿಕೊಟ್ಟು ಎಲ್ಲವನ್ನೂ ಎಚ್ಚರಿಸಿ ನಾಲ್ಕೂದಿಕ್ಕಿನಿಂದ ರಣಕಹಳೆ ಮೊಳಗಿಸಲು ಅನುವುಮಾಡಿಕೊಡುತ್ತವೆ. ಕೆಲವು ನಾಯಿಗಳು ಹೀಗೆ ದೂರದಿಂದ ಬೊಗಳಿ ಸುಮ್ಮನಾದರೆ ಕೆಲವು ನನ್ನ ಹತ್ತಿರಬಂದು ಮೇಲೆ ಹಾರುತ್ತಾ ಕೆಲಕಾಲ ನನಗೆ ಕತ್ತಿ(ಕೋಲು)ವರಸೆಯ ಅಭ್ಯಾಸ ಮಾಡಿಸಿಯೇ ವಾಪಸಾಗುತ್ತವೆ. ಒಟ್ಟಿನಲ್ಲಿ ಈ ಬೀದಿನಾಯಿಗಳ ದೆಸೆಯಿಂದ ನಾನು ಮುಂಜಾನೆ ನಿರಾಳವಾಗಿ ತಿರುಗಾಡುವಂತಿಲ್ಲ. ಮಹಾಭಾರತದ ನಕುಲನೋ ಸಹದೇವನೋ ಯಾರೋ ಒಬ್ಬ ಅಶ್ವ ಹೃದಯ ಬಲ್ಲವನಂತೆ. ಅಂದರೆ ಕುದುರೆಗಳ ಮನಸ್ಸನ್ನರಿತು ಅವುಗಳನ್ನು ನೋಡಿಕೊಳ್ಳುವುದರಲ್ಲಿ ನಿಷ್ಣಾತನಂತೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಅವನು ವಿರಾಟರಾಜನ ಕುದುರೆಗಳನ್ನು ನೋಡಿಕೊಳ್ಳುತ್ತಿದ್ದನಂತೆ. ಹೀಗೆ ಯಾವಾಗಲೋ ಓದಿದ ನೆನಪು. ಹಾಗೆ ನನ್ನ ಸ್ನೇಹಿತರು ಕೆಲವರು ಶ್ವಾನಹೃದಯ ಬಲ್ಲವರಿದ್ದಾರೆ. ಅವರ ಪ್ರಕಾರ ಈ ಬೀದಿನಾಯಿಗಳಿಗೆ ನನ್ನ ಮೇಲೇನೂ ದ್ವೇಷವಿಲ್ಲವಂತೆ. ಮನುಷ್ಯನ ಪರಮಮಿತ್ರರಾದ ಅವುಗಳಿಗೆ ರಾತ್ರಿಯಿಡೀ ತಮ್ಮ ಮಿತ್ರರು ಜತೆಗಿಲ್ಲದೆ ಕಳೆದು ಬೇಜಾರಾಗಿದ್ದು, ನನ್ನನ್ನು ಕಂಡೊಡನೆ ಸಂತೋಷ ಉಕ್ಕಿಬಂದು ತಮ್ಮ ಪ್ರೀತಿ ತೋರಿಸಲೋಸ್ಕರ ನನ್ನ ಮೇಲೆ ಎಗರುತ್ತವಂತೆ. ಅದನ್ನು ನಾನು ತಪ್ಪುತಿಳಿದು ಅವುಗಳ ಮೇಲೆ ಕೋಲು ಝಳಪಿಸಿ ಅವುಗಳನ್ನು ಜಗಳಕ್ಕೆ ಪ್ರೇರೇಪಿಸುತ್ತೇನೆಂದು ಅವರ ಆಪಾದನೆ. ನಾಯಿಗಳು ಬೊಗಳುತ್ತಾ ಮೇಲೆ ಬಿದ್ದರೆ ನಾನು ಎಗರಾಡದೆ ನಿಂತು, ಅವುಗಳ ಬಾಲವನ್ನು ಗಮನಿಸಬೇಕಂತೆ. ನಾಯಿಗಳು ಬಾಲವಾಡಿಸುತ್ತಿದ್ದರೆ ಅವು ನನ್ನ ಮೇಲಿನ ಪ್ರೀತಿಯಿಂದ ಮೇಲೆ ಹಾರುತ್ತಿವೆ ಎಂದರ್ಥ ವಂತೆ. ಆಗ ನಾನು ಅವುಗಳನ್ನು ಅಪ್ಪಿಕೊಂಡು, ಮೈದಡವಿ ಕಳಿಸಬೇಕಂತೆ. ನನಗೆ ಅಂಥ ಪ್ರಸಂಗಾವಧಾನವಿಲ್ಲ. ನಾಯಿ ಹಲ್ಲುತೋರಿಸುತ್ತಾ ಮೇಲೆಹಾರಿದರೆ ಕೈಯಲ್ಲಿ ಕೋಲಿದ್ದರೆ ಕೋಲು, ಕಲ್ಲಿದ್ದರೆ ಕಲ್ಲು, ಯಾವುದು ಇರುತ್ತದೋ ಅದರ ಉಪಯೋಗಮಾಡಿ ಬಚಾವಾಗುವುದಷ್ಟೇ ನನಗೆ ತಿಳಿದಿರುವುದು. ಆದ್ದರಿಂದ ನಾನು ಕೋಲುಹಿಡಿದೇ ತಿರುಗಾಟಕ್ಕೆ ಹೊರಡುವುದು. ಆದರೆ ಶ್ವಾನಹೃದಯ ಬಲ್ಲವರು ಇರುವುದು ನಿಜ. ಅಥವಾ ಏನಾದರೂ ಮಂತ್ರಶಕ್ತಿ ಇದ್ದರೂ ಇರಬಹುದು. ಒಮ್ಮೊಮ್ಮೆ ನಾನು ಹೊರಬೀಳುವುದು ತಡವಾದಾಗ ರಸ್ತೆಯಲ್ಲಿ ಮತ್ತೂ ಒಬ್ಬಿಬ್ಬರು ಕಾಣಬರುತ್ತಾರೆ. ನನ್ನಿಂದ ಕೊಂಚ ಮುಂದೆ ನಡೆಯುವ ಅವರು ರಸ್ತೆಬದಿಯಲ್ಲಿ ಮಲಗಿರುವ ನಾಯಿಗಳ ಪಕ್ಕದಲ್ಲೇ ಹಾದುಹೋದರೂ ಅವರ ಕಡೆ ತಿರುಗಿ ಕೂಡ ನೋಡದೆ ಮಲಗಿರುವ ನಾಯಿಗಳು, ನಾನು ಹೆಜ್ಜೆ ಮೇಲೆ ಹೆಜ್ಜೆ ಯಿಟ್ಟು ರಸ್ತೆದಾಟಿ ಮತ್ತೊಂದು ಬದಿ ತಲುಪಿ, ಸದ್ದುಮಾಡದೆ ದೂರದಿಂದ ನಡೆದರೂ, ಅದು ಹೇಗೋ ನನ್ನ ಇರುವನ್ನು ತಿಳಿದುಕೊಂಡು ಎಚ್ಚೆತ್ತುಕೊಂಡು ಬೊಗಳುತ್ತಾ ನನ್ನ ಮೇಲೆ ಹಾರಿ ಬರುತ್ತವೆ! ನಮ್ಮ ರಸ್ತೆಯಲ್ಲಿ ಸಾಮಾನ್ಯ ನನಗೆ ಕಾಣಸಿಗುವ ಒಬ್ಬನ ಮೇಲಂತೂ ಅದೇನೋ ಪ್ರೀತಿಯೋ ಅವುಗಳಿಗೆ. ಅವನು ಕಾಣುತ್ತಲೇ ಬಾಲವಾಡಿಸುತ್ತಾ ಅವನಬಳಿಸಾರಿ ಅವನ ಕಾಲಿಗೆ ಎರಗುತ್ತವೆ. ಅವನು ಬಗ್ಗಿ ಅವುಗಳ ಮೈದಡವಿ ಮುತ್ತಿಕ್ಕಿ ಮುಂದೆ ಹೋಗುತ್ತಾನೆ. ನನಗಂತೂ ಆಶ್ಚರ್ಯ. ನಾನು ಈ ನಾಯಿಗಳಿಗೆಂದೂ ದ್ವೇಷಬಗೆದಿಲ್ಲ. ಕಲ್ಲು ಬೀರಿಲ್ಲ. ಚಿಕ್ಕವನಿದ್ದಾಗ ನಮ್ಮ ಮನೆಯ ಬಳಿಯಿರುತ್ತಿದ್ದ ಬೀದಿನಾಯಿಯೊಂದನ್ನು ದತ್ತು ಪಡೆದು ನಿತ್ಯ ಅನ್ನ ಹಾಕಿ ಸಾಕಿದ್ದೇನೆ ಕೂಡ. ಆದರೂ ನನ್ನನ್ನು ಕಂಡರೆ ನಾಯಿಗಳೆಲ್ಲಾ ಗುರುಗುಟ್ಟುತ್ತವೆ. ಅದೇಕೋ ದೇವರೇ ಬಲ್ಲ. ಮೊನ್ನೆ ಏನಾಯಿತು ಹೇಳುತ್ತೇನೆ ಕೇಳಿ. ಎಂದಿನಂತೆ ನಾನು ಬೆಳಗ್ಗೆ ವಾಯುವಿಹಾರ ನಡೆಸಿದ್ದೆ. ಹಿತಚಿಂತಕರ ಮಾತುಕೇಳಿ ಕೈಲಿ ಕೋಲುಹಿಡಿಯದೆಯೇ ಹೊರಟಿದ್ದೆ. ಸುಮಾರು ಹತ್ತುನಿಮಿಷ ನಡೆದಿರಬಹುದು. ನಾಯಿಗಳು ಅದೇಕೋ ನನ್ನನ್ನು ಲಕ್ಷ್ಯ ಮಾಡದೆ ಸುಮ್ಮನೆ ಮಲಗಿದ್ದವು. ನಾನು ನಡೆಯುವ ರಸ್ತೆ ಸುಮಾರು ಒಂದು ಕಿ ಮೀ ಉದ್ದದ್ದು. ಅದರ ಎರಡೂ ತುದಿಗಳಲ್ಲಿ ಒಂದೊಂದು ಮತ್ತು ಮಧ್ಯದಲ್ಲೊಂದು ಒಟ್ಟು ಮೂರು ಬೀದಿ ನಾಯಿಗಳ ಗುಂಪಿವೆ. ಅವೆಲ್ಲಾ ತಮ್ಮದೇ ಆದ ಸರಹದ್ದುಗಳನ್ನು ಮಾಡಿಕೊಂಡು ಎಲ್ಲವೂ ತಮ್ಮ ತಮ್ಮ ಹದ್ದಿನೊಳಗೆ ತಮ್ಮ ಹಕ್ಕುಗಳನ್ನು ಕಾಯ್ದುಕೊಂಡು ಬದುಕಿರುತ್ತವೆ. ಏನಾದರೂ ಆಗಿ ಒಂದು ಗುಂಪಿನ ನಾಯಿ ಇನ್ನೊಂದು ಗುಂಪಿನ ಸರಹದ್ದು ದಾಟಿತೋ, ರಣಕಹಳೆ ಮೊಳಗಿ ಯುಧ್ದ ಶುರುವಾಗಿಬಿಡುತ್ತದೆ. ನಾನು ನಡೆಯುವ ರಸ್ತೆಪಕ್ಕದಲ್ಲಿ ಒಬ್ಬಾತ ಕೆಲವು ಎಮ್ಮೆ ಹಸುಗಳನ್ನು ಸಾಕಿಕೊಂಡಿದ್ದು, ಹಾಲು ಮಾರಿ ಜೀವನ ಸಾಗಿಸುತ್ತಾನೆ. ನಾನು ಈ ಲೇಖನದ ಶುರುವಿನಲ್ಲಿ ಬರೆದನಲ್ಲಾ, ನನ್ನ ಮೇಲೆ ಎಗರಿದ ನಾಯಿ, ಅದು ಅವನು ಸಾಕಿರುವ ಒಂಟಿ ನಾಯಿ. ಅದು ಯಾವ ಗುಂಪಿಗೂ ಸೇರಿದ್ದಲ್ಲ. ಪಕ್ಷೇತರ. ನಾನು ರಸ್ತೆಯಲ್ಲಿ ಸಾಗುತ್ತಿದ್ದಂತೆ ಈ ಹಾಲು ಮಾರುವವನು ಕೈಲಿ ಹಾಲಿನ ಕ್ಯಾನ್ ಹಿಡಿದು ಮನೆಯಿಂದ ಹೊರಬಿದ್ದ. ತನ್ನ ವರ್ತನೆಯ ಮನೆಗಳಿಗೆ ಹಾಲುಕೊಡಲು ಹೊರಟಿದ್ದಿರಬೇಕು. ಅವನ ಮುಂದೆ ಅವನನಾಯಿ ನಡೆದಿತ್ತು. ನಾನು ಅವರಿಬ್ಬರ ಹಿಂದೆ. ನಾಯಿ ಅದೇಕೋ ನನ್ನನ್ನು ಲಕ್ಷಿಸದೆ ಸುಮ್ಮನೆ ನಡೆಯುತ್ತಿತ್ತು. ಸ್ವಲ್ಪನಡೆದು ಅವರಿಬ್ಬರೂ ಮತ್ತೊಂದು ಶ್ವಾನಗುಂಪಿನ ಸರಹದ್ದು ಪ್ರವೇಶಿಸುತ್ತಿದ್ದಂತೆ ಆ ಗುಂಪಿನ ನಾಯಿಗಳೆಲ್ಲವೂ ಈ ಒಂಟಿನಾಯಿಯ ವಾಸನೆ ಹಿಡಿದು, ನಿದ್ದೆ ಝಾಡಿಸಿಕೊಂಡು ಎದ್ದು, ಅರಚುತ್ತಾ ಕಾಳಗಕ್ಕೆ ಸಿಧ್ದವಾಗಿಬಿಟ್ಟವು. ಅವೆಲ್ಲಾ ಸಿಧ್ಧವಾಗಿ ರಸ್ತೆಗಿಳಿಯುವಷ್ಟರಲ್ಲಿ ಹಾಲಿನವನು ಪಕ್ಕಕ್ಕೆ ತಿರುಗಿ ರಸ್ತೆಯಿಂದ ಕೊಂಚ ಒಳಗಿದ್ದ ಮನೆಯೊಂದಕ್ಕೆ ಹಾಲು ಹಾಕಲು ನಡೆದುಬಿಟ್ಟ. ಅವನೊಂದಿಗೆ ಅವನ ನಾಯಿಯೂ ಹೊರಟುಹೋಯಿತು. ನಿದ್ದೆ ಕೆಡಿಸಿಕೊಂಡು ಕಾಳಗಕ್ಕೆ ತಯಾರಾಗಿ ರಸ್ತೆಗಿಳಿದಿದ್ದ ನಾಯಿಗಳ ಚಕ್ರವ್ಯೂಹಕ್ಕೆ ಒಂಟಿನಾಯಿಯ ಬದಲು ನಾನು ಸಿಕ್ಕಿಬಿದ್ದೆ! ನನ್ನ ಕೈಯಲ್ಲಿ ಆಯುಧವಿಲ್ಲವೆಂದು ಅವೇನೂ ನನಗೆ ರಿಯಾಯಿತಿ ತೋರಿಸುವಂತೆ ಕಾಣಲಿಲ್ಲ. ನನ್ನ ಪುಣ್ಯಕ್ಕೆ ರಸ್ತೆ ಪಕ್ಕದಲ್ಲೇ ರಸ್ತೆ ರಿಪೇರಿಯವರು ಉಳಿಸಿಹೋಗಿದ್ದ ಕೆಲವು ಕಲ್ಲುಗಳು ಕೈಗೆ ಸಿಕ್ಕಿದವು. ನಾಲ್ಕೂ ದಿಕ್ಕಿಗೆ ಕಲ್ಲು ಬೀಸುತ್ತಾ ಹೇಗೋ ಮಾಡಿ ನಾಯಿಗಳ ದಾಳಿಯನ್ನು ನಿವಾರಿಸಿಕೊಂಡು, ಢವಗುಟ್ಟುತ್ತಿದ್ದ ಎದೆಯನ್ನು ಕೈಲಿಹಿಡಿದು ದೌಡಾಯಿಸಿ ಬದುಕಿಕೊಂಡೆ. ನಮ್ಮ ಶಿಶುನಾಳ ಶರೀಫರೂ ಸಹ ನನ್ನಂತೆಯೇ ನಾಯಿಗಳ ಕಾಟ ಅನುಭವಿಸಿ ಬಲ್ಲವರಿರಬೇಕು. ಅದರಿಂದಲೇ ಅವರು ಕಾರಣವಿಲ್ಲದೆ ತಮ್ಮ ಮೇಲೆ ಗುರುಗುಟ್ಟುತ್ತಿದ್ದ ಜನರನ್ನು ಬೀದಿನಾಯಿಗಳಿಗೆ ಹೋಲಿಸಿ ಪದ ಬರೆದರು. ದಾರಿಹಿಡಿದು ಬರುತಿರಲು, ವಾರಿಗಿ ನಾಯಿ ನೂರಾರು ಕೂಡಿರಲು, ಯಾರಕೇಳಲಿ ನಮ್ಮವರಾರು, ಸಾರಿ ಹೇಳುವರಿಲ್ಲವಾಯ್ತು ಗುರಗುಟ್ಟುತ ಮೇಲೆಬರಲು, ಕರವ ಮುಗಿದು ಬರುವಂಥ ನಾಯಿಬಂದಾವೋ ಬೆನ್ಹತ್ತಿ , ನಾರಾಯಣ ನಾಯಿಬಂದಾವೋ ಬೆನ್ಹತ್ತಿ. ನಾಯಿ ಅಂದರೆ ನಾಯಿ ಅಲ್ಲ ಮಾನವ ಜನ್ಮದ ಹೀನ ನಾಯಿ, ಜ್ಞಾನಾನಂದ ತಿಳಿಯದಂಥ, ಶ್ವಾನಾನಂದದೊಳು ದುಂಧೆ ನಾಯಿಬಂದಾವೋ ಬೆನ್ಹತ್ತಿ......... ಪಾಪ ನಾಯಿ ಜನ್ಮದ ನಾಯಿಗಳಲ್ಲದೆ, ಮಾನವ ಜನ್ಮದ ನಾಯಿಗಳನ್ನೂ ಸಹಿಸಿಕೊಳ್ಳಬೇಕಾಯಿತು ಅವರು. ನನಗೆ ಬರಿ ಬೀದಿ ನಾಯಿಗಳ ಕಾಟವಷ್ಟೇ. ಮಾನವ ಜನ್ಮದ ನಾಯಿಗಳಾವೂ ನನ್ನ ಹಿಂದೆ ಬಿದ್ದಿಲ್ಲ! ಅದೇ ಸಮಾಧಾನ.

Comments