ನಾಯಿ ಸಾಕುತ್ತೀರಾ?

ನಾಯಿ ಸಾಕುತ್ತೀರಾ?

ಪ್ರಾಮಾಣಿಕತೆ, ಸ್ವಾಮಿ ನಿಷ್ಟತೆಗೆ ಹೆಸರುವಾಸಿಯಾದ ಪ್ರಾಣಿ ನಾಯಿ. ಒಮ್ಮೆ ನೀವು ನಾಯಿಗೆ ಒಂದು ತುಂಡು ತಿಂಡಿ ಕೊಟ್ಟರೂ ಅದು ಜೀವನ ಪರ್ಯಂತ ನಿಮ್ಮ ನೆನಪು ಇಟ್ಟುಕೊಂಡಿರುತ್ತದೆ. ಅತ್ಯಂತ ಬುದ್ಧಿವಂತ ಎಂದು ಹೆಸರಾದ ಮಾನವನಲ್ಲೂ ಈ ಬುದ್ದಿ ಕೆಲವು ಸಲ ಮಾಯವಾಗುತ್ತದೆ. ಆದರೆ ನಾಯಿ ಹಾಗಲ್ಲ. ತನ್ನ ಯಜಮಾನನಿಗೆ ನಿಷ್ಟೆಯಿಂದ ಇರುತ್ತದೆ. ಅವನ ಮನೆ, ತೋಟ ಕಾಯುತ್ತದೆ. ಈ ಕಾರಣದಿಂದಲೇ ಹಲವಾರು ಮಂದಿ ತಮ್ಮ ಮನೆಯಲ್ಲಿ ನಾಯಿ ಸಾಕುತ್ತಾರೆ. ನಾಯಿ ಸಾಕುವವರಿಗಾಗಿ ಕೆಲವೊಂದು ಮಾಹಿತಿ,ಸಲಹೆ ಹಾಗೂ ಸೂಚನೆಗಳು ಇಲ್ಲಿವೆ…

ನಾಯಿಗಳಲ್ಲಿ ಎಷ್ಟು ವಿಧ ಎಂದು ಕೇಳಿದರೆ ಹಲವರು ಹೇಳುವ ಉತ್ತರ ಎರಡು, ಒಂದು ಕಂತ್ರಿ (ಕಾಟು) ನಾಯಿ ಮತ್ತೊಂದು ಜಾತಿ ನಾಯಿ. ಬೀದಿಯಲ್ಲಿರುವ ನಾಯಿ ಕಂತ್ರಿ ನಾಯಿ ಹಾಗೂ ಮನೆಯಲ್ಲಿ ರಾಜಾತಿಥ್ಯದಲ್ಲಿ ಬೆಳೆಯುವ ನಾಯಿ ಜಾತಿ ನಾಯಿ. ಆದರೆ ಇವೆರಡಕ್ಕೂ ಬುದ್ಧಿಯಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲವಾದರೂ ಕೆಲವು ತಳಿಯ ನಾಯಿಗಳು ವಿಶೇಷ ಗುಣ ಲಕ್ಷಣಗಳನ್ನು ಹೊಂದಿರುತ್ತದೆ ಎನ್ನುವುದೂ ತಪ್ಪಲ್ಲ. ಉದಾಹರಣೆಗೆ ಪೋಲೀಸ್ ಹಾಗೂ ಮಿಲಿಟರಿ ಸೇವೆಯಲ್ಲಿ ಬಳಸುವ ನಾಯಿಗಳು ತಮಗೆ ಸಿಗುವ ತರಭೇತಿಗೆ ಸ್ಪಂದಿಸಿ ಅದರಂತೆ ಬುದ್ದಿವಂತಿಕೆಯಿಂದ ಕಾರ್ಯ ನಿರ್ವಹಿಸುತ್ತದೆ. ಕೆಲವು ನಾಯಿಗಳನ್ನು ಬಾಂಬ್ ನಿಷ್ಕ್ರಿಯ ದಳ, ನೆಲ ಬಾಂಬ್ ಹುಡುಕಲು, ಕೊಲೆ ರಹಸ್ಯ ಭೇಧಿಸಲು ಹಾಗೂ ಕಳ್ಳತನವನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ. 

ಪ್ರಾಚೀನ ಕಾಲದಲ್ಲಿ ಮಾನವ ನಾಯಿಯನ್ನು ತನ್ನ ಸಂಗಾತಿಯನ್ನಾಗಿ ಮಾಡಿಕೊಂಡಾಗ ಅವನು ಹೆಚ್ಚಾಗಿ ಬಳಸಿದ್ದು ತನ್ನ ಜಾನುವಾರುಗಳ ರಕ್ಷಣೆಗೆ. ತನ್ನ ದನ ಅಥವಾ ಕುರಿಗಳನ್ನು ಮೇಯಲು ಬಿಟ್ಟಾಗ ಅದರ ಮೇಲೆ ನಿಗಾ ವಹಿಸಲು ಬಳಸಿದ್ದೇ ನಾಯಿ. ಕಾಡು ಪ್ರಾಣಿಗಳಿಂದ ಎಚ್ಚರಿಸಲು ನಾಯಿ ಬಹಳ ಸಹಕಾರಿಯಾಗಿತ್ತು. ಕ್ರಮೇಣ ನಾಯಿಗೆ ತರಭೇತಿ ನೀಡಿ ತನಗೆ ಬೇಕಾದ ಸಣ್ಣ ಪುಟ್ಟ ಬೇಟೆಯನ್ನು ಹಿಡಿಯಲು ಬಳಸಿಕೊಳ್ಳಲಾಯಿತು. 

ಪ್ರಪಂಚದಲ್ಲಿ ಅನೇಕ ವಿಧದ ತಳಿಯ ನಾಯಿಯ ಜಾತಿಗಳಿವೆ. ಒಂದು ನಾಯಿಯ ದೇಹರಚನೆ ಹಾಗೂ  ಇತರ ಕೆಲವು ಗುಣ ಲಕ್ಷಣಗಳ ಆಧಾರದ ಮೇಲೆ ಯಾವ ಜಾತಿಗೆ ಸೇರಿದ ನಾಯಿ ಎಂದು ನಿರ್ಧಾರ ಮಾಡಲಾಗುತ್ತದೆ. ಮುಖ್ಯವಾದ ಜಾತಿ ನಾಯಿಯೆಂದರೆ ಆಲ್ಸೇಶಿಯನ್, ಸೇಂಟ್ ಬರ್ನಾರ್ಡ್, ಪೊಡಲ್, ಪೊಮೆರಿಯನ್, ಡಾಶೋಂಡ್, ಕಾಲಿ, ಹಸ್ಸಿ, ಜರ್ಮನ್ ಶೆಪರ್ಡ್, ಬುಲ್ ಡಾಗ್, ಹಲವಾರು ನಮೂನೆಯ ಟೆರಿಯರ್ ಗಳು, ರೋಟ್ ವೀಲರ್, ಡಾಬರ್ ಮೆನ್, ಗೋಲ್ಡನ್ ರಿಟ್ರೀವರ್ ಇತ್ಯಾದಿ ತಳಿಗಳಲ್ಲದೇ ಈಗ ಜನಪ್ರಿಯವಾಗುತ್ತಿರುವ 'ಪಗ್' ಎಂಬ ತಳಿಯೂ ಸೇರಿದೆ. ನೀವು ಜೇಬಿನಲ್ಲಿ ಹಾಕಿಕೊಂಡು ಹೋಗುವಂತಹ ನಾಯಿಗಳೂ ಇವೆ ಹಾಗೆಯೇ ದನದ ಎತ್ತರಕ್ಕೆ ಬೆಳೆಯುವ ಬಹಳ ದೊಡ್ಡ ಗಾತ್ರದ ನಾಯಿಗಳೂ ಇರುತ್ತವೆ.

ವರ್ಣದಲ್ಲೂ ನಾಯಿಗಳು ವಿಭಿನ್ನ ಕಪ್ಪು, ಬಿಳಿ, ಬೂದು, ತಿಳಿ ಹಳದಿ, ಬಂಗಾರದ ಬಣ್ಣ, ಕಿತ್ತಳೆ ಬಣ್ಣದ ನಾಯಿಗಳು ಇವೆ. ಯಾರ್ಕ್ ಶೈರ್ ಟೆರಿಯರ್ ಎಂಬ ಜಾತಿಯ ನಾಯಿಯೊಂದಿದೆ. ಇದು ನೋಡಲು ಬೆಕ್ಕಿನಂತೆಯೇ ಇರುತ್ತದೆ. ಅದರ ದೇಹದ ಮೇಲಿನ ರೋಮಗಳು ಉದ್ದವಾಗಿರುತ್ತವೆ. ಅದರ ಬಾಲವನ್ನು ನೋಡಲು ಹುಡುಕಾಡಬೇಕು. ಅದರ ಕಾಲುಗಳೂ ಕೂದಲಿನ ಹಿಂದೆ ಅಡಗಿರುತ್ತವೆ.

ಮಂಜು ಬೀಳುವ ಶೀತ ಪ್ರದೇಶದಲ್ಲೂ ಕೆಲವು ಜಾತಿಯ ನಾಯಿಗಳು ವಾಸಿಸುತ್ತವೆ. ಇವುಗಳಲ್ಲಿ ಕೆಲವು ಸಣ್ಣ ಪುಟ್ಟ ಗಾಡಿ (ಸ್ಲೆಜ್) ಗಳನ್ನು ಎಳೆದೊಯ್ಯಲು ಬಳಸುತ್ತಾರೆ. ಈ ನಾಯಿಗಳು ಹಸ್ಕಿ ಜಾತಿಗೆ ಸೇರಿದವುಗಳಾಗಿರುತ್ತವೆ. ಹಿಮದ ಸಮಯದಲ್ಲಿ ಈ ಹಸ್ಕಿ ನಾಯಿಗಳ ಕಷ್ಟದ ಬದುಕಿನ ಬಗ್ಗೆ ಜಾಕ್ ಲಂಡನ್ ಎಂಬಾತ ಒಂದು ಸುಂದರ ಕಾದಂಬರಿಯನ್ನೂ ಬರೆದಿದ್ದಾನೆ. ‘ಕಾಡಿನ ಕರೆ' ಎಂಬ ಹೆಸರಿನಲ್ಲಿ ಅದು ಕನ್ನಡಕ್ಕೂ ಅನುವಾದಗೊಂಡಿದೆ. 

ನಾಯಿಗಳು ನಮ್ಮ ಬದುಕಿನ ಅವಿಭಾಜ್ಯ ಅಂಗದಂತೆ ಆಗಿಹೋಗಿದೆ. ನಾಯಿಗಳಿಂದ ನಮಗೆ ಬಹಳ ಉಪಯೋಗವಿದೆ. ಒಂದು ರೀತಿಯಲ್ಲಿ ನಮ್ಮ ಉತ್ತಮ ಸ್ನೇಹಿತರಂತೆ ಇರುತ್ತದೆ. ಕಳ್ಳರಿಂದ ರಕ್ಷಣೆಗೆ, ಇತರ ಸಣ್ಣ ಪುಟ್ಟ ಪ್ರಾಣಿಗಳನ್ನು ಓಡಿಸಲು ನಾಯಿ ಉಪಯುಕ್ತ. ನಾಯಿಯ ಗ್ರಹಣ ಶಕ್ತಿ ತುಂಬಾ ತೀಕ್ಷ್ಣವಾಗಿರುವುದರಿಂದ ಇವುಗಳನ್ನು ಕಳೆದು ಹೋದ ವಸ್ತು ಅಥವಾ ಮಾನವರನ್ನು ಹುಡುಕಲು ಉಪಯೋಗಿಸುತ್ತಾರೆ. 

ನಾಯಿಗಳ ನೆನಪಿಗಾಗಿ ಹಲವಾರು ಸ್ಮಾರಕಗಳನ್ನೂ ನಿರ್ಮಿಸಲಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಾಯಿಗಳನ್ನು ಖರೀದಿಸಿ ಸಾಕುವುದೂ ಇದೆ. ಅದಕ್ಕಾಗಿಯೇ ಏಸಿ ಕೊಠಡಿಗಳನ್ನು ನಿರ್ಮಾಣ ಮಾಡಿದವರೂ ಇದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಏಕೈಕ ಭಾರತೀಯ ತಳಿ ಎಂದರೆ ಅದು ಮುಧೋಳ ನಾಯಿ ತಳಿ. ಮುಧೋಳ ಎಂಬ ಊರು ಇರುವುದು ಕರ್ನಾಟಕದ ವಿಜಯಪುರದಲ್ಲಿ ಎಂಬುವುದು ನಮ್ಮ ಹೆಮ್ಮೆ. ಇದು ಬೇಟೆ ನಾಯಿ. ನೋಡಲು ಅಷ್ಟೇನೂ ಸುಂದರವಾಗಿಲ್ಲದ (ಚಿತ್ರವನ್ನು ಗಮನಿಸಿ) ಇದರ ಕಾಲುಗಳು ಸಪೂರವಾಗಿ ಉದ್ದ ಇರುತ್ತವೆ. ವೇಗವಾಗಿ ಓಡಲು ಹಾಗೂ ಬೇಟೆಯನ್ನು ಹಿಡಿಯಲು ಈ ಮುಧೋಳ ನಾಯಿ ಬಹಳ ಪ್ರಸಿದ್ಧ. ಹಳೆಯ ಕಾಲದ ರಾಜರು ಬೇಟೆಯಾಡಲು ಹೋಗುವಾಗ ಮುಧೋಳ ನಾಯಿಗಳನ್ನು ಕರೆದುಕೊಂಡು ಹೋಗುತ್ತಿದ್ದರು.

ನಾಯಿ ಬಗ್ಗೆ ಜಾಗೃತೆ: ನಾಯಿಗಳನ್ನು ಸಾಕುವವರು ಬಹಳಷ್ಟು ಜಾಗರೂಕತೆಯನ್ನೂ ವಹಿಸಬೇಕಾಗುತ್ತದೆ. ಏಕೆಂದರೆ ನಾಯಿಗೆ ಬರುವ ಹುಚ್ಚು ರೋಗ ಪ್ರಾಣಾಂತಿಕ. ಒಮ್ಮೆ ಮಾನವನಿಗೆ ಇದು ಬಂತೋ ಮತ್ತೆ ಗುಣ ಪಡಿಸಲು ಸಾಧ್ಯವಿಲ್ಲ. ಈ ರೋಗಕ್ಕೆ ‘ರಾಬಿಸ್' ಎನ್ನುತ್ತಾರೆ. ಆದರೆ ಇದಕ್ಕೆ ಪರಿಣಾಮಕಾರೀ ಲಸಿಕೆ ಇದೆ. ರಾಬಿಸ್ ರೋಗ ಕೇವಲ ನಾಯಿಗಳಿಂದ ಮಾತ್ರ ಅಲ್ಲ ಕುದುರೆ, ತೋಳ, ನರಿಗಳ ಕಡಿತದಿಂದಲೂ ಬರುವ ಸಾಧ್ಯತೆ ಇದೆ. ಯಾವುದೇ ಅಪರಿಚಿತ ನಾಯಿ ನಿಮಗೆ ಕಡಿದಾಗ ಆಂಟಿ ರಾಬಿಸ್ ಚುಚ್ಚು ಮದ್ದನ್ನು ಪಡೆದುಕೊಳ್ಳಲೇಬೇಕು. ನಿಮ್ಮ ಪರಿಚಯದ ನಾಯಿಯಾದರೆ ಒಂದೆರಡು ದಿನ ಕಾದು, ಇಲ್ಲವೇ ಅದರ ಮಾಲಿಕರ ಬಳಿ ಅದಕ್ಕೆ ಲಸಿಕೆ ನೀಡಿದೆಯಾ ಎಂದು ವಿಚಾರಿಸಿ ನೀವು ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ನೀವು ಸಾಕಿರುವ ನಾಯಿಗೆ ಸಮಯಕ್ಕೆ ಸರಿಯಾಗಿ ಆಂಟಿ ರಾಬಿಸ್ ಲಸಿಕೆ ಹಾಕಿಸಬೇಕು. ಇದರಿಂದ ನಾವು ನಮ್ಮ ನಾಯಿಯನ್ನೂ ಸುರಕ್ಷಿತವಾಗಿಡುವ ಜೊತೆಗೆ ನಮ್ಮ ಮನೆಯ ಸದಸ್ಯರನ್ನೂ, ಬರುವ ಅತಿಥಿಗಳನ್ನೂ ಸುರಕ್ಷಿತರನ್ನಾಗಿಸಬಹುದು. ಈ ರಾಬಿಸ್ ಕಾಯಿಲೆ ನಾಯಿಯ ಬಾಯಿಯಿಂದ ಸುರಿಯುವ ಜೊಲ್ಲಿನಿಂದ ಹರಡುತ್ತದೆ. ಆ ಕಾರಣದಿಂದ ಯಾವುದೇ ನಾಯಿಯನ್ನು ವಿಪರೀತ ಮುದ್ದು ಮಾಡಲು ಹೋಗಬಾರದು. ಜೊಲ್ಲು ರಸ ನಮ್ಮ ಮೈಗೆ ತಾಗದಂತೆ (ಗಾಯಗಳಿದ್ದರೆ ತುಂಬಾ ಅಪಾಯ) ಎಚ್ಚರವಹಿಸಬೇಕಾದುದು ಅತ್ಯಗತ್ಯ. 

ರಾಬಿಸ್ ರೋಗದ ಲಕ್ಷಣವೆಂದರೆ, ಜಲಭಯ ರೋಗ ಅಂದರೆ ನೀರನ್ನು ಕಂಡರೆ ರೋಗಿ ಹೆದರಲು ಪ್ರಾರಂಭಿಸುತ್ತಾನೆ. ಅವನ ಬಾಯಿಯಿಂದ ಸದಾ ಕಾಲ ಜೊಲ್ಲು ಸುರಿಯುತ್ತಿರುತ್ತದೆ. ರೋಗಿಯ ಮೆದುಳಿಗೆ ಈ ರೋಗ ಹಬ್ಬುವುದರಿಂದ ಅವನಿಗೆ ಹುಚ್ಚು ಹಿಡಿಯುವ ಸಾಧ್ಯತೆ ಅಧಿಕವಾಗಿರುತ್ತದೆ. ಈಗ ಹುಚ್ಚು ನಾಯಿಯ ಕಡಿತಕ್ಕೆ ಹೊಸ ಹೊಸ ವಿಧಾನದ ಲಸಿಕೆಗಳು ಬಂದಿವೆ. ಮೊದಲಿನಂತೆ ೧೪ ಚುಚ್ಚು ಮದ್ದನ್ನು ತೆಗೆದುಕೊಳ್ಳಬೇಕಾಗಿಲ್ಲ. 

ಪ್ರತೀ ವರ್ಷ ನಮ್ಮ ಮನೆಯ ನಾಯಿಯನ್ನು ಪಶು ವೈದ್ಯರಿಗೆ ತೋರಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದರ ಆಹಾರದ ಬಗ್ಗೆ ಗಮನವಹಿಸಬೇಕು. ಒಮ್ಮೆಲೇ ತುಂಬಾ ಮಾಂಸಹಾರವನ್ನು ನೀಡಬಾರದು. ಮನೆಯ ಎಲ್ಲಾ ಸದಸ್ಯರು ನಾಯಿಗೆ ಆಹಾರ ಹಾಕುವುದು ಒಳ್ಳೆಯದಲ್ಲ. ಯಾರಾದರೂ ಓರ್ವ ಸದಸ್ಯ ಮಾತ್ರ ನಿಯಮಿತವಾಗಿ ಆಹಾರ ಹಾಕಿದರೆ ನಾಯಿಯೂ ತನ್ನ ಯಜಮಾನನನ್ನು ಗೊಂದಲವಿಲ್ಲದೇ ಗುರುತಿಸಿಕೊಳ್ಳುತ್ತದೆ. ಅದು ಮಲಗುವ ಬಟ್ಟೆಯನ್ನು ಮತ್ತು ಸ್ಥಳವನ್ನು ಸದಾ ಕಾಲ ಸ್ವಚ್ಚವಾಗಿರುವಂತೆ ನೋಡಿಕೊಳ್ಳಬೇಕು. ಮಳೆಗಾಲದ ಸಂದರ್ಭದಲ್ಲಿ ನೀರು ಬೀಳದಂತೆ ಎಚ್ಚರವಹಿಸಬೇಕು. ನಾಯಿಯ ಮೈಮೇಲೆ ಹೇನು ಆಗುವುದಿದೆ. ಅದರ ಬಗ್ಗೆ ಗಮನ ನೀಡಬೇಕು. ಅದಕ್ಕೆ ಸೂಕ್ತ ಮದ್ದು ಮಾಡಬೇಕು. ನೀವು ನಾಯಿಗೆ ಮಾಂಸವನ್ನು ಕೊಡುವುದಾದರೆ ಹಸಿ ಮಾಂಸ ಅಥವಾ ಹಸಿ ಮೀನನ್ನು ಯಾವತ್ತೂ ಕೊಡಬೇಡಿ. ಮಾಂಸವನ್ನು ಬೇಯಿಸಿಕೊಡುವುದು ಒಳ್ಳೆಯದು. ಮಸಾಲೆ ಹಾಕದೇ ಇರುವುದು ಒಳಿತು. ಹಸಿ ಮಾಂಸದಿಂದ ನಾಯಿಯ ಹೊಟ್ಟೆಯಲ್ಲಿ ಹುಳಗಳಾಗುವುದನ್ನು ತಪ್ಪಿಸಬಹುದು. ನಾಯಿಗೆ ನಿಯಮಿತವಾಗಿ ಹುಳದ ಔಷಧಿ ಕೊಡಿ. 

ತುಂಬಾ ರೋಮಗಳಿರುವ ನಾಯಿಗಳು ವರ್ಷದ ಒಂದು ನಿಗದಿತ ಸಮಯದಲ್ಲಿ ಸ್ವಲ್ಪ ರೋಮವನ್ನು ಉದುರಿಸುತ್ತದೆ. ಆ ಸಮಯದಲ್ಲಿ ಆ ರೋಮ ನಿಮ್ಮ ಆಹಾರ ಪದಾರ್ಥಗಳಿಗೆ ಸೇರದಂತೆ ಎಚ್ಚರ ವಹಿಸಿ. ದೊಡ್ಡ ದೊಡ್ಡ ಜಾತಿಯ ನಾಯಿಯನ್ನು ಆದಷ್ಟು ಮನೆಯ ಒಳಗೆ ಬಿಡದೇ ಹೊರಗೇ ಗೂಡು ಅಥವಾ ಚೈನ್ ನಲ್ಲಿ ಕಟ್ಟಿ ಸಾಕುವುದು ಉತ್ತಮ. ನಿರ್ಧಾರಿತ ಸಮಯದಲ್ಲಿ ಪ್ರತೀ ದಿನ ನಾಯಿಯನ್ನು ಸ್ವಲ್ಪ ತಿರುಗಾಡಲು ಬಿಡುವುದು ಒಳ್ಳೆಯದು. ಇಡೀ ದಿನ ಕಟ್ಟಿ ಹಾಕಿ ಇಡುವುದು ನಾಯಿಯ ಆರೋಗ್ಯಕ್ಕೂ ಒಳ್ಳೆಯದಲ್ಲ. 

ನಾಯಿಗಳನ್ನು ದಿನಾಲೂ ಸ್ನಾನ ಮಾಡಿಸುವ ಅಗತ್ಯವಿಲ್ಲ. ಹದಿನೈದು ದಿನಕ್ಕೊಮ್ಮೆ ಸ್ನಾನ ಮಾಡಿಸಿದರೆ ಸಾಕು. ಅದಕ್ಕಾಗಿ ನಾವು ಬಳಸುವ ಸಾಬೂನು ಬಳಸದೇ ನಾಯಿಗಳಿಗಾಗಿಯೇ ಸಿಗುವ ಕಾರ್ಬಾಲಿಕ್ ಸಾಬೂನುಗಳನ್ನು ಉಪಯೋಗಿಸಿ. ಈಗಂತೂ ನಾಯಿಗಳ ಸೌಕರ್ಯಕ್ಕಾಗಿ ಹಲವಾರು ಬಗೆಯ ಸಾಬೂನು, ಶಾಂಪೂ, ಬಾಚಣಿಕೆ, ತಿನ್ನಲು ಬಿಸ್ಕತ್ತು, ಮೂಳೆ ಎಲ್ಲಾ ಸಿಗುತ್ತದೆ. ತುಂಬಾ ಬಿಸಿಯಾದ ಅಥವಾ ತುಂಬಾ ತಂಪಾದ ನೀರು ಬಳಸಬೇಡಿ. ನಾಯಿಗೆ ಕುಡಿಯಲು ಯಥೇಚ್ಚ ನೀರು ಸಿಗುವಂತೆ ವ್ಯವಸ್ಥೆ ಮಾಡಿ. ನಾಯಿಯ ಮೈ ಬೆವರುವುದಿಲ್ಲ. ಅದರ ನಾಲಗೆ ಮಾತ್ರ ಬೆವರುತ್ತದೆ. ಆ ಕಾರಣದಿಂದ ಅದಕ್ಕೆ ತುಂಬಾ ಓಡಾಡಿದಾಗ ಹೆಚ್ಚು ಬಾಯಾರಿಕೆಯಾಗುತ್ತದೆ.

ನಾಯಿಯನ್ನು ತಿರುಗಾಡಿಸಲು ಕರೆದುಕೊಂಡು ಹೋಗುವುದಾದರೆ ಅದು ದಾರಿಯಲ್ಲಿ ಬಿದ್ದ ಹೇಸಿಗೆ, ಕಪ್ಪೆ, ಜಿರಲೆಗಳನ್ನು ತಿನ್ನದಂತೆ ಎಚ್ಚರ ವಹಿಸಿ. ಯಾವುದೇ ಕಾಯಿಲೆ ಬಂದರೆ, ಆಹಾರ ಸೇವನೆ ಮಾಡದೇ ಇದ್ದರೆ ಕೂಡಲೇ ನಾಯಿಯನ್ನು ಪಶು ವೈದ್ಯರಿಗೆ ತೋರಿಸಲು ಮರೆಯಬೇಡಿ. 

ನಾಯಿ ನಿಜಕ್ಕೂ ಅದ್ಭುತ ಪ್ರಾಣಿ. ಆದರೆ ನಾವು ಸಾಕುವಾಗ ನಮ್ಮ ಹಾಗೂ ನಮ್ಮ ಪರಿವಾರದ ಅದರಲ್ಲೂ ಮಕ್ಕಳ ಜಾಗ್ರತೆಯನ್ನು ನೋಡಿಕೊಳ್ಳಬೇಕು. ಸಣ್ಣ ಸಣ್ಣ ಮಕ್ಕಳನ್ನು ನಾಯಿಯ ಜೊತೆ ಆಟವಾಡಲು ಬಿಡುವುದು ಅಪಾಯಕಾರಿ. ಏಕೆಂದರೆ ಮಕ್ಕಳು ನೋವು ಮಾಡಿದರೆ ನಾಯಿಗಳು ತಕ್ಷಣ ಕಚ್ಚುವ ಸಾಧ್ಯತೆ ಇದ್ದೇ ಇರುತ್ತದೆ. ಪ್ರಾಮಾಣಿಕತೆಗೆ ಹೆಸರಾದ ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ, ಆಗ ಅದೂ ನಮ್ಮನ್ನು ರಕ್ಷಿಸುತ್ತದೆ.

ಚಿತ್ರಗಳ ವಿವರ: ೧. ಮನೆಯಲ್ಲಿ ಸಾಕಿದ ನಾಯಿ

೨. ಕರ್ನಾಟಕದ ಮುಧೋಳ ತಳಿ

೩. ಸೈಬೀರಿಯನ್ ಹಸ್ಕಿ ನಾಯಿಗಳು

೪. ಪಗ್ ಗಳು

೫. ಯೋರ್ಕ್ ಶೈರ್ ಟೆರಿಯರ್

೬. ವಿವಿಧ ತಳಿಗಳ ನಾಯಿಗಳು

ಚಿತ್ರ ಕೃಪೆ: ಅಂತರ್ಜಾಲ ತಾಣ