ನಾರಾಯಣ ರೆಡ್ಡಿಯವರ ಮಾತಿನಲ್ಲಿ ಸಾವಯವ ಕೃಷಿಯ ಗುಟ್ಟು

ನಾರಾಯಣ ರೆಡ್ಡಿಯವರ ಮಾತಿನಲ್ಲಿ ಸಾವಯವ ಕೃಷಿಯ ಗುಟ್ಟು

“ಶತಮಾನಗಳಿಂದಲೂ ನಮ್ ದೇಶದಲ್ಲಿ ಕೃಷಿ ಮಾಡ್ತಿದ್ದರು. ಈ ರಾಸಾಯನಿಕ ಗೊಬ್ರಗಳು, ಪೆಸ್ಟಿಸೈಡ್‌ಗಳು, ಟ್ರಾಕ್ಟರ್ ಇದ್ಯಾವುದೂ ಆಗ ಇರಲಿಲ್ಲ. ಆದ್ರೂ ಚೆನ್ನಾಗಿ ಕೃಷಿ ಮಾಡ್ತಿದ್ದರು. ಚೆನ್ನಾಗಿ ಬಾಳುವೆ ಮಾಡ್ತಿದ್ದರು. ಆದ್ರೆ ಈಗ ಎಲ್ಲ ತಲೆಕೆಳಗಾಗಿದೆ.

೧೯೬೦ರಿಂದೀಚೆಗೆ ಬಂತು ನೋಡಿ - ಈ ರಾಸಾಯನಿಕ ಕೃಷಿ, ಈ ಯಾಂತ್ರಿಕ ಕೃಷಿ. ನಾನೂ ಇದನ್ನೆಲ್ಲ ಮಾಡಿದವನೇ. ಮಾಡಿ ನೋಡಿ, “ಸಾಕಪ್ಪಾ ಸಾಕು" ಅಂತ ಅದನ್ನೆಲ್ಲ ಬಿಟ್ ಬಿಟ್ಟಿದೀನಿ. ಇದೀಗ ಹೆಚ್ಚೆಚ್ಚು ಕೃಷಿಕರಿಗೆ ಇದೇ ಅನುಭವ ಆಗ್ತಿದೆ. ಅನುಭವದಿಂದಲೇ ನಾವು ಪಾಠ ಕಲೀಬೇಕಾಗ್ತದೆ.

ಟ್ರಾಕ್ಟರ್ ಮತ್ತು ಎರೆಹುಳಗಳ ಕೆಲಸದ ಹೋಲಿಕೆ ಮಾಡೋಣ. ಟ್ರಾಕ್ಟರ್ ಏನು ಮಾಡ್ತದೆ? ಭಾರಿ ಮಳೆ ಅಂದರೆ ನಾಲ್ಕಿಂಚು ಮಳೆ ಬಂದಾಗಲೂ ಅದು ಉಳೋದು ನಾಲ್ಕಿಂಚು ಆಳಕ್ಕೆ, ಅಷ್ಟೇ. ಎರೆಹುಳ ಹಾಗಲ್ಲ. ಒಂದು ಎರೆಹುಳ ದಿನಕ್ಕೆ ೩೫ ಅಡಿ ಆಳದ ವರೆಗೂ ಸುರಂಗ ಕೊರೀತದೆ. ಒಂದು ಎಕ್ರೆಗೆ ೮೦,೦೦೦ ಎರೆಹುಳ ಇರ್ತವೆ. ಇಷ್ಟು ಎರೆಹುಳಗಳು ದಿನವೂ ಸುರಂಗ ಕೊರೀತಿದ್ರೆ ವರ್ಷಕ್ಕೆ ಎಷ್ಟಾಯ್ತು ಅಂತ ಲೆಕ್ಕ ಹಾಕಿ. ಎರಡೂವರೆ ಲಕ್ಷ ಕಿಲೋಮೀಟರ್ ಆಗ್ತದೆ. ಇದಕ್ಕಿಂತ ಉತ್ತಮ ಉಳುವೆ ಬೇರೆ ಇಲ್ಲ.
 
ಎರೆಹುಳ ದಿನಕ್ಕೆ ಆರು ಸಲ ಸಾವಯವ ವಸ್ತು ತಿಂದು ಆರು ಸಲ ಹಿಕ್ಕೆ ಹಾಕ್ತದೆ. ಇದರಿಂದಾಗಿ ಮಣ್ಣಿನಲ್ಲಿ ಸಾರಜನಕದ ಪ್ರಮಾಣ ಐದು ಪಟ್ಟು ಜಾಸ್ತಿ ಆಗ್ತದೆ. ಅದೇ ರೀತಿ ರಂಜಕದ ಪ್ರಮಾಣ ಏಳು ಪಟ್ಟು ಜಾಸ್ತಿ ಆಗ್ತದೆ. ಎರೆಹುಳಗಳ ಹಿಕ್ಕೆಯಿಂದಾಗಿ ಮಣ್ಣಿನಲ್ಲಿ ಬೇರೆಬೇರೆ ಪೋಷಕಾಂಶಗಳೂ ೪-೫ ಪಟ್ಟು ಜಾಸ್ತಿ ಆಗ್ತವೆ. ಇದಕ್ಕಿಂತ ಒಳ್ಳೆ ಗೊಬ್ರ ಬೇರೆ ಯಾವುದಿದೆ? ಒಂದೆಕ್ರೆಯಲ್ಲಿ ಎರೆಹುಳಗಳನ್ನು ಬದುಕಲು ಬಿಟ್ರೆ ವರ್ಷಕ್ಕೆ ಮೂರು ಟನ್ ಗೊಬ್ರ ಮಾಡ್ತವೆ.

ಇಂಥ ಎರೆಹುಳಗಳನ್ನ ಮಣ್ಣಿನಲ್ಲಿ ಉಳಿಸಿದ್ರೆ, ನಮ್ಮ ಕೃಷಿ ಉಳೀತದೆ. ಯಾಕಂದ್ರೆ, ಬೇರೆ ಯಾವ ಗೊಬ್ರಾನೂ ಹಾಕಬೇಕಿಲ್ಲ.
ಅದರ ಬದಲಾಗಿ ರಾಸಾಯನಿಕ ಗೊಬ್ರ ಹಾಕ್ತಾ ಹೋದ್ರೆ, ಎರೆಹುಳಗಳೂ ಸಾಯ್ತವೆ, ಮಣ್ಣೂ ಸಾಯ್ತದೆ.

ಒಂದು ಚದರ ಮೀಟರ್ ಮಣ್ಣಿನಲ್ಲಿ ಎಂಟು ಟನ್ ಸಾರಜನಕ ಇರ್ತದೆ. ಅಂದರೆ ೨೦ ಮೂಟೆ ಯೂರಿಯಾದಲ್ಲಿ ಇರುವಷ್ಟು. ಈ ಅಗಾಧ ಪ್ರಮಾಣದ ಸಾರಜನಕ ಮಣ್ಣಿಗೆ ಸೇರೋದು ಮಳೆಯಿಂದಾಗಿ. ಸಿಡಿಲು-ಮಿಂಚು ಬಂದಾಗ ಅಮೋನಿಯಾ ಉತ್ಪಾದನೆ ಆಗ್ತದೆ. ಅದು ಮಳೆ ನೀರಿನ ಜೊತೆ ಮಣ್ಣಿಗೆ ಸೇರ್ತದೆ.

ಪ್ರಕೃತಿಯಲ್ಲಿ ತನ್ನಿಂತಾನೇ ಬೆಳೆಯುವ ಗಿಡಗಳು, ಯಾರಾದ್ರೂ ರಾಸಾಯನಿಕ ಗೊಬ್ರ ಹಾಕ್ತಾರಾ ಅಂತ ಕಾದು ಕೂರೋದಿಲ್ಲ. ಅವು ಗಾಳಿಯಿಂದ ಸಾರಜನಕ ಮತ್ತು ಕಸಕಡ್ಡಿಯಿಂದ ರಂಜಕ ಪಡೀತಾವೆ. ಸೊಂಪಾಗಿ ಬೆಳೀತಾವೆ.

"ದ ಸೀಕ್ರೆಟ್ ಲೈಫ್ ಆಫ್ ಪ್ಲಾಂಟ್ಸ್” ಎಂಬ ಪುಸ್ತಕ ಓದಿದರೆ, ನಮಗೆ ಇಂತಹ ವಿಷಯಗಳೆಲ್ಲ ಅರ್ಥ ಆಗ್ತದೆ. ನಾವು ಇಂಥದ್ದನ್ನೆಲ್ಲ ಓದೋದಿಲ್ಲ. ನಮ್ಮ ಪೂರ್ವಿಕರ ಕೃಷಿ ವಿಧಾನಗಳನ್ನು ಅನುಸರಿಸೋದಿಲ್ಲ.

ನಾವು ಮಾಡೋದೇನು? ಈ ಕೃಷಿ ವಿಜ್ನಾನಿಗಳೂ ಕೃಷಿ ಇಲಾಖೆಯವರೂ ಹೇಳಿದ್ದನ್ನು ನಂಬಿ ಬಿಡೋದು. “ಎನ್‌ಪಿಕೆ ಹಾಕಿ" ಅಂದರು. ನಾವು ಹಾಕಿದೆವು. ಬೆಳೆಯೋ ಗಿಡಗಳಿಗೆ ಅಷ್ಟೇ ಸಾಕೇನು? ಸೂಕ್ಷ್ಮ ಪೋಷಕಾಂಶಗಳು ಬೇಡವೇ? ಇದನ್ನೆಲ್ಲಾ ನಾವು ಯೋಚನೆ ಮಾಡಲೇ ಇಲ್ಲ. ಎನ್‌ಪಿಕೆ ಹಾಕ್ತಾಹಾಕ್ತಾ ರೈತರಿಗೆ ಇದೇ ಸುಲಭ ಅನ್ನಿಸ್ತು. ಗುಡ್ಡದಿಂದ ಸೊಪ್ಪು ತರೋದೂ ಬೇಡ, ಕಂಪೋಸ್ಟ್ ಮಾಡೋದು ಬೇಡ ಅನ್ನಿಸ್ತು. ಅದನ್ನೆಲ್ಲಾ ಮರೆತೇ ಬಿಟ್ಟರು. ಇದರಿಂದ ನಷ್ಟ ಆದದ್ದು ರೈತರಿಗೇ ಹೊರತು ವಿಜ್ನಾನಿಗಳಿಗಲ್ಲ, ಅಧಿಕಾರಿಗಳಿಗಲ್ಲ.

ರಾಸಾಯನಿಕ ಕೃಷಿಯ ಪ್ರಚಾರ ಶುರು ಮಾಡಿದಾಗ ಎಕ್ರೆಗೆ ಒಂದು ಮೂಟೆ ಅಮೋನಿಯಮ್ ಸಲ್ಫೇಟ್ ಹಾಕಿ ಅಂದರು. ಆಗ ಒಂದು ಮೂಟೆಗೆ ೫೦ ರೂಪಾಯಿ ಬೆಲೆ. ವರ್ಷವರ್ಷಾನೂ ಜಾಸ್ತಿ ಹಾಕಿ ಅಂತಾ ಹೇಳ್ತಾ ಬಂದರು. ಈಗ ಅಮೋನಿಯಮ್ ಸಲ್ಫೇಟ್ ಹಾಕಲಿಕ್ಕೆ ಎಕ್ರೆಗೆ ಸಾವಿರಾರು ರೂಪಾಯಿ ಖರ್ಚು ಬರ್ತದೆ.

ಈ ರೀತಿ ಜಾಸ್ತಿಜಾಸ್ತಿ ರಾಸಾಯನಿಕ ಗೊಬ್ರ ಹಾಕಿದ್ರೆ ಒಂದು ಹಂತದ ವರೆಗೆ ಹೊಲದ ಬೆಳೆಗಳ ಇಳುವರಿ ಹೆಚ್ಚುತ್ತದೆ. ಅನಂತರ ಮಣ್ಣಿನ ಜೀವಂತಿಕೆ ನಾಶವಾಗ್ತದೆ. ಮಣ್ಣಿನ ಸೂಕ್ಷ್ಮ ಜೀವಿಗಳೂ ಎರೆಹುಳಗಳೂ ಸಾಯ್ತವೆ. ಸಸಿಗಳಿಗೆ ಸೂಕ್ಷ್ಮ ಪೋಷಕಾಂಶಗಳು ಸಿಗೋದಿಲ್ಲ. ಇದರಿಂದಾಗಿ, ಹೊಲದ ಬೆಳೆಗಳ ಇಳುವರಿ ಒಂದು ಹಂತದ ನಂತರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗ್ತಾ ಬರ್ತದೆ. ಹೀಗೆ ಇಳುವರಿ ಕಡಿಮೆ ಆಗುವಾಗ, ಹೊಲದಲ್ಲಿ ಕೃಷಿ ಮಾಡುವ ಖರ್ಚು ಹೆಚ್ಚುತ್ತಾ ಹೋಗ್ತದೆ. ಎಲ್ಲ ರಾಜ್ಯಗಳಲ್ಲಿಯೂ ಹೀಗೇ ಆಗ್ತಿದೆ. “ಗೋಧಿಯ ಕಣಜ” ಎನಿಸಿದ್ದ ಪಂಜಾಬಿನಲ್ಲಿ ಆದದ್ದೂ ಇದೇ. ೧೯೯೦ರಲ್ಲಿ ಪಂಜಾಬಿನ ೩೦೦ ಕೃಷಿ ಕುಟುಂಬಗಳ ಜೊತೆ ಒಡನಾಡಿ ಇದೆಲ್ಲ ಅನಾಹುತಗಳನ್ನು ಹತ್ತಿರದಿಂದ ಕಂಡಿದ್ದೇನೆ. ಇನ್ನಾದರೂ ನಾವು ಸಾವಯವ ಕೃಷಿಯ ಪಾಠ ಕಲಿಯಬೇಕಾಗ್ತದೆ.

ನಮಗಿಂತ ಜಾಸ್ತಿ ಜನಸಂಖ್ಯೆ ಇರುವ ಚೀನಾದ ಕೃಷಿಕರು ಏನು ಮಾಡ್ತಿದ್ದಾರೆ? ಅವರ ಬಹುಪಾಲು ಸಸ್ಯ ಪೋಷಕಾಂಶಗಳನ್ನು ಮನುಷ್ಯರ ಮಲಮೂತ್ರದಿಂದ ಪಡೀತಾರೆ. ನಾವೂ ಹಾಗೆ ಮಾಡಿದ್ರೆ ಮತ್ತು ಹೊಲದ ಬೆಳೆಗಳ ಸಾವಯವ ಉಳಿಕೆಗಳನ್ನು ಗೊಬ್ರವಾಗಿ ಬೆಳೆಸಿದ್ರೆ, ನಮಗೆ ಯಾವುದೇ ರಾಸಾಯನಿಕ ಗೊಬ್ರಗಳು ಬೇಕಾಗಿಲ್ಲ."

-ಇವು, “ಸಾವಯವ ಕೃಷಿ ಸಾಧಕ” ಎಲ್. ನಾರಾಯಣ ರೆಡ್ಡಿಯವರು ಮಂಗಳೂರಿನ ರೋಷನಿ ನಿಲಯದಲ್ಲಿ ೩೦ ಆಗಸ್ಟ್ ೨೦೦೫ರಂದು "ಸುಸ್ಥಿರ ಕೃಷಿ ಕಾರ್ಯಾಗಾರ”ದಲ್ಲಿ ನೀಡಿದ ಉಪನ್ಯಾಸದ ಮುಖ್ಯಾಂಶಗಳು.

ಅಂದು ಅವರ ದಶಕಗಳ ಅನುಭವ ಆಧಾರಿತ ಮಾತುಗಳನ್ನು ಕೇಳಿ ಹಲವು ಕೃಷಿಕರು ಪ್ರಭಾವಿತರಾಗಿದ್ದರು. ಇದಕ್ಕೆ ಪುರಾವೆ: ಆ ಕಾರ್ಯಾಗಾರದ ಫಾಲೋ ಅಪ್ ಆಗಿ, ೧೨ ನವಂಬರ್ ೨೦೦೫ರಂದು ಮಂಗಳೂರಿನ ಕೂಳೂರಿನ ಬಡ್ಡೂರು ಮನೆಯಲ್ಲಿ ಜರಗಿದ ಕೃಷಿಯ ಪ್ರಾತ್ಯಕ್ಷಿಕೆಗೆ ಹಲವಾರು ಕೃಷಿಕರು ಹಾಜರಾಗಿ, ಹೆಚ್ಚಿನ ಮಾಹಿತಿ ಪಡೆದದ್ದು.

ಇಂದು ನಾಡೋಜ ಎಲ್. ನಾರಾಯಣ ರೆಡ್ದಿಯವರು ನಮ್ಮೊಂದಿಗಿಲ್ಲ. 14 ಜನವರಿ 2019ರಂದು ಬೆಂಗಳೂರಿನ ಹತ್ತಿರದ ಮರಲೇನ ಹಳ್ಳಿಯ ತಮ್ಮ ಕೃಷಿಕ್ಷೇತ್ರದಲ್ಲಿ ನಮ್ಮನ್ನು ಅಗಲಿದರು. ಅವರ ಕೃಷಿ ಚಿಂತನೆಗಳು, ಪ್ರಯೋಗಗಳು, ಅನುಭವಗಳು, ಬೇಸಾಯದ ವಿವಿಧ ಸಮಸ್ಯೆಗಳಿಗೆ ಅವರ ಪರಿಹಾರಗಳು ಇವೆಲ್ಲ ಮಾಹಿತಿ ಅವರ ಜೀವನಕತೆ “ನೆಲದೊಡಲ ಚಿಗುರು” ಪುಸ್ತಕದಲ್ಲಿ ದಾಖಲಾಗಿವೆ (ಪ್ರಕಾಶಕರು: ನವಕರ್ನಾಟಕ ಪ್ರಕಾಶನ).

ಸಾವಯವ ಕೃಷಿಯ ತಮ್ಮ ಜೀವನಾನುಭವವನ್ನು ಆತ್ಮವಿಶ್ವಾಸದಿಂದ, ಸರಳ ಮಾತುಗಳಲ್ಲಿ, ಆಸಕ್ತರು ಎಲ್ಲಿಗೆ ಕರೆದರೂ ಅಲ್ಲಿಗೆ ಬಂದು ಧಾರೆ ಎರೆಯುತ್ತಿದ್ದ ನಾರಾಯಣ ರೆಡ್ದಿಯವರು ಮುಂದಿನ ತಲೆಮಾರುಗಳ ಕೃಷಿಕರಿಗೂ ಸಾವಯವ ಕೃಷಿಯ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ.

ಫೋಟೋ ೧: ನಾರಾಯಣ ರೆಡ್ಡಿಯವರು
ಫೋಟೋ ೨: ನಾರಾಯಣ ರೆಡ್ದಿಯವರಿಂದ ಯುವಕರಿಗೆ ಸಾವಯವ ಕೃಷಿ ಪಾಠ

Comments

Submitted by ಬರಹಗಾರರ ಬಳಗ Sat, 11/06/2021 - 08:42

ನಾರಾಯಣ ರೆಡ್ಡಿಯವರ ಪ್ರೇರಣಾದಾಯಕ ಮಾತುಗಳು

'ಸಂಪದ' ದ ಹಿಂದಿನ ಸಂಚಿಕೆಗಳಲ್ಲಿ ನಾರಾಯಣ ರೆಡ್ಡಿಯವರ ಮಾತುಗಳನ್ನು ಓದಿದ ನೆನಪು. ಮತ್ತೊಮ್ಮೆ ಅವರ ಪ್ರೇರಣಾದಾಯಕ ಮಾತುಗಳನ್ನು ಓದಿ ಆನಂದಿತನಾದೆ. ಸಾವಯವ ಕೃಷಿ ಎಂದರೆ ನಾರಾಯಣ ರೆಡ್ಡಿ ಎಂಬ ಮಾತೊಂದಿದೆ. ಹೊಸದಾಗಿ ಕೃಷಿಗೆ ಬರುವವರಿಗೆ, ಕೃಷಿ ಬಗ್ಗೆ ಆಸಕ್ತಿ ಇರುವವರಿಗೆ ಉಪಯುಕ್ತ ಲೇಖನವಿದು. ಲೇಖಕರಿಗೆ ಅಭಿನಂದನೆಗಳು

-ರತ್ನಾ ಭಟ್ ತಲಂಜೇರಿ