ನಾರಿ ಶಕ್ತಿಗೆ ಗೌರವ ನೀಡಿದ ೭೫ನೇ ಗಣರಾಜ್ಯೋತ್ಸವ

ನಾರಿ ಶಕ್ತಿಗೆ ಗೌರವ ನೀಡಿದ ೭೫ನೇ ಗಣರಾಜ್ಯೋತ್ಸವ

ದೇಶದ ಗಣರಾಜ್ಯೋತ್ಸವದ ೭೫ನೇ ವರ್ಷಾಚರಣೆಯ ಈ ವರ್ಷ ಕೇಂದ್ರ ಸರಕಾರ ನಾರಿ ಶಕ್ತಿಗೆ ಹೆಚ್ಚಿನ ಗೌರವ ನೀಡುವ ನಿಟ್ಟಿನಲ್ಲಿ ಕರ್ತವ್ಯ ಪಥ (ಮೊದಲು ರಾಜಪಥ) ದಲ್ಲಿ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ಬಹಳಷ್ಟು ಮಂದಿ ಮಹಿಳೆಯರಿಗೆ ಗೌರವ ನೀಡಿದೆ. ಈ ಮೂಲಕ ಭಾರತೀಯ ನಾರಿಶಕ್ತಿಗೆ ಮನ್ನಣೆ ನೀಡಿದೆ. ಮಹಿಳೆಯರ ಬ್ಯಾಂಡ್, ಮೂರೂ ಸೇನಾ ಪಡೆ ಮೊದಲಾದ ಕಡೆ ಸ್ತ್ರೀಶಕ್ತಿಗೆ ಪ್ರಾಶಸ್ತ್ಯ ನೀಡಿದೆ. ಮಹಿಳಾ ಸೇನಾ ಅಧಿಕಾರಿಗಳಾದ ಆರ್ಟಿಲರಿ ರೆಜಿಮೆಂಟ್ ನ ಲೆ. ದೀಪ್ತಿ ರಾಣಾ, ಲೆ. ಪ್ರಿಯಾಂಕಾ ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ. ಇವರ ಜೊತೆ ಸಿಎಪಿಎಫ್ ಮತ್ತು ಐಎ ಎಫ್  ನ ಮಹಿಳಾ ಯೋಧರು ಭಾಗಿಯಾಗಿದ್ದಾರೆ. ಈ ರೀತಿ ಸ್ತ್ರೀ ಪ್ರಾಬಲ್ಯದಿಂದ ದೇಶಕ್ಕೆ ಬಲ ಸಿಗುತ್ತದೆ ಎಂದು ಹಿರಿಯರು ಅಂದು ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂದುಕೊಂಡದ್ದು ನಿಜವಾಗುವತ್ತ ಸಾಗಿದೆ. ಸುಮಾರು ನೂರು ಮಂದಿ ಮಹಿಳಾ ಕಲಾವಿದರು ಮತ್ತು ಹದಿನೈದು ಮಹಿಳಾ ಪೈಲೆಟ್ ಗಳು ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ.

ಡಾ. ಬಿ ಆರ್ ಅಂಬೇಡ್ಕರ್ ಅಂದು ಸಂವಿಧಾನ ರಚನೆಯ ಸಂದರ್ಭದಲ್ಲಿ ಬಲಿಷ್ಟವಾದ ಸರಕಾರ ದೇಶವನ್ನಾಳಲು ಸಂವಿಧಾನದ ಬಲಬೇಕೇ ಬೇಕು ಎಂದು ಧೃಢವಾಗಿ ನಂಬಿದ್ದರು. ಅವರು ಸಂವಿಧಾನ ರಚನೆಯ ಸಮಯದಲ್ಲಿ ಮಾತನಾಡುತ್ತಾ “ಈಗಷ್ಟೇ ತೊಲಗಿರುವ ಪರತಂತ್ರವನ್ನು ಭಾರತ ಇನ್ನೆಂದೂ ಮರು ಅನುಭವಿಸಬಾರದೆಂದರೆ, ಈ ದೇಶಕ್ಕೆ ಬಲಿಷ್ಟ ಕೇಂದ್ರ ಸರಕಾರದ ಪದ್ಧತಿಯನ್ನು ಜಾರಿಗೆ ತರಬೇಕು.” ಎಂದು ಸವಿವರವಾಗಿ ಅವರ ತಂಡದ ಜೊತೆ ವಿಮರ್ಶೆ ಮಾಡಿ ಸಂವಿಧಾನವನ್ನು ರಚನೆ ಮಾಡಿದ್ದರು. ಅಂಬೇಡ್ಕರ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ “ಸುಮಾರು ೫೪೦ಕ್ಕೂ ಹೆಚ್ಚು ಪ್ರಾಂತಗಳಾಗಿ ವಿಘಟಿತವಾಗಿರುವ ಪೂರ್ಣ ಭಾರತವನ್ನು ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ ಒಟ್ಟುಗೂಡಿಸಲಾಗಿದೆ. ಎಲ್ಲ ರಾಜ್ಯಗಳು ಸಂವಿಧಾನದ ಅಡಿಯಲ್ಲಿ ಕೇಂದ್ರದ ಪ್ರಭುತ್ವದಲ್ಲಿ ಅಥವಾ ಮುಂದಾಳತ್ವದಲ್ಲಿ ಒಟ್ಟುಗೂಡಿವೆ. ಈ ಎಲ್ಲಾ ಒಳಿತುಗಳು ಹೀಗೆಯೇ ಮುಂದುವರಿಯಲು ಪ್ರಬಲ ಕೇಂದ್ರ ಸರಕಾರದ ಅಗತ್ಯತೆ ಇದ್ಡೇ ಇದೆ." ಎಂದಿದ್ದರು.

ಡಿಸೆಂಬರ್ ೧೭, ೧೯೪೬ರಂದು ಸಂವಿಧಾನ ರಚನಾ ಸಭೆಯಲ್ಲಿ ತಮ್ಮ ಮಾತುಗಳನ್ನಾಡಿದ ಅಂಬೇಡ್ಕರ್ ಅವರು ತೀವ್ರ ಪ್ರಾಮುಖ್ಯತೆ ನೀಡಿದ ವಿಷಯ ಕೇಂದ್ರ ಸರಕಾರದ ಬಲವರ್ಧನೆ. ಆ ಸಂದರ್ಭದಲ್ಲಿ ತಮ್ಮ ಮಾತುಗಳನ್ನು ಮುಂದುವರೆಸುತ್ತಾ, ನೆಹರೂರವರು ಮಂಡಿಸಿದ ಗಣರಾಜ್ಯ ನಿರ್ಣಯವನ್ನು ವಿಮರ್ಶಿಸುತ್ತಾ “ಮಂಡನೆಯಾಗಿರುವ ಈ ನಿರ್ಣಯದಲ್ಲಿ ಒಂದು ಕಡೆ ಕೇಂದ್ರಕ್ಕೂ, ಇನ್ನೊಂದು ಕಡೆ ಪ್ರಾಂತ್ಯಗಳಿಗೂ ನಡುವೆ ಮಧ್ಯಂತರ ಸಂಚಲನೆ ಕಾಣುತ್ತದೆ. ಸಂಪುಟ ನಿಯೋಗದ ಹೇಳಿಕೆಯ ಬೆಳಕಿನಲ್ಲಿ ಈ ಕಂಡಿಕೆಯನ್ನು ಓದಿದಾಗ ಅಥವಾ ವಾರ್ಧಾ ಅಧಿವೇಶನದಲ್ಲಿ ಕಾಂಗ್ರೆಸ್ ಅಂಗೀಕರಿಸಿದ ನಿರ್ಣಯದ ಬೆಳಕಿನಲ್ಲಿ ಗುರುತಿಸಿದಾಗ, ಗುಂಪುಗೂಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖವು ಇಲ್ಲದಿರುವುದಕ್ಕೆ ನನಗೆ ಅಪಾರವಾದ ಆಶ್ಚರ್ಯವಾಯಿತು ಎಂದು ನಾನು ಒಪ್ಪಿಕೊಳ್ಳಲೇಬೇಕು. ನಾನು ವೈಯಕ್ತಿಕವಾಗಿ ಹೇಳುವುದಾದರೆ, ಗುಂಪುಗೂಡಿಸುವ ವಿಚಾರವನ್ನು ನಾನು ಇಷ್ಟಪಡುವುದಿಲ್ಲ. ನಾನು ಬಲಿಷ್ಟ ಸಂಯುಕ್ತ ಕೇಂದ್ರ ಸರಕಾರವನ್ನು ಇಷ್ಟಪಡುತ್ತೇನೆ.” ಎಂದಿದ್ದರು. ಈ ಕಾರಣದಿಂದಲೇ ಅಂಬೇಡ್ಕರ್ ಅವರು ಬಲಿಷ್ಟ ಕೇಂದ್ರ ಸರಕಾರವನ್ನು ಸೃಜಿಸುವ ಸಂವಿಧಾನವನ್ನು ರಚಿಸಲು ಬಯಸಿದ್ದರು. 

ಅಂಬೇಡ್ಕರ್ ಅವರ ಈ ವಿಚಾರಧಾರೆಯನ್ನು ಸಮರ್ಥಿಸುತ್ತಾ ಅವರ ಸಂವಿಧಾನ ರಚನಾಸಭೆಯ ಸದಸ್ಯರಾಗಿದ್ದ ಗೋಕುಲ್ ದೌಲತ್ ರಾಮ ಭಟ್ ಅವರು ನವೆಂಬರ್ ೧೮, ೧೯೪೯ರಲ್ಲಿ ಒಂದು ಸಭೆಯಲ್ಲಿ ಮಾತನಾಡುತ್ತಾ “ಎಲ್ಲಾ ಅಧಿಕಾರಿಗಳನ್ನು ಕೇಂದ್ರಕ್ಕೆ ಒಪ್ಪಿಸಲಾಗಿದೆ ಎಂದು ನನ್ನ ಅನೇಕ ಸ್ನೇಹಿತರು ಹೇಳುತ್ತಾರೆ. ಅದಾಗಿಯೂ ಈ ದಿವಸ ಪ್ರಚಲಿತ ಸನ್ನಿವೇಶಗಳು ಹೇಗಿವೆ ಎಂದರೆ, ನಮ್ಮ ಎಲ್ಲಾ ಅಧಿಕಾರಗಳನ್ನು ಕಡೆಯ ಪಕ್ಷ ಹತ್ತು ಅಥವಾ ಹದಿನೈದು ವರ್ಷಗಳ ಕಾಲ ಕೇಂದ್ರಕ್ಕೆ ವಹಿಸಿಕೊಡದಿದ್ದಲ್ಲಿ ನಾವು ರಚನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಿರುವುದಿಲ್ಲ ಎಂದು ನಂಬಿದ್ದೇನೆ. ನಾವು ಯಾವುದನ್ನು ಮರುನಿರ್ಮಾಣ ಮಾಡಬೇಕೆಂದಿದ್ದೆವೋ ಅದು ಕೇಂದ್ರದ ಸಾಮಾನ್ಯ ನಿಯಂತ್ರಣ ಮತ್ತು ನಿರ್ದೇಶನದಲ್ಲಿ ಇದ್ದರೆ ಮಾತ್ರ ಮುಂದುವರೆಸಿಕೊಂಡುಹೋಗಬಹುದು. ಇದು ಅತ್ಯಂತ ಅಗತ್ಯವಾದ ವಿಷಯವಾಗಿದೆ ಮತ್ತು ಇತರೆ ಕ್ರಮಗಳು ನಮ್ಮನ್ನು ಕಲ್ಪನಾಲೋಕಕ್ಕೆ ಮಾತ್ರ ಕರೆದೊಯ್ಯಬಹುದೇ ಹಿರತು, ಉಳಿದ ಎಲ್ಲಿಗೂ ಅಲ್ಲ.” ಎಂದು ಬಲಿಷ್ಟ ಕೇಂದ್ರದ ಅಗತ್ಯತೆಯನ್ನು ಒತ್ತಿ ಹೇಳಿದ್ದರು.

ಬಲಿಷ್ಟ ಕೇಂದ್ರ ಸರಕಾರದ ಅಗತ್ಯತೆ ನಂತರದ ದಿನಗಳಲ್ಲಿ ಸತ್ಯ ಎಂದು ಅರಿವಾಗತೊಡಗಿತು. ಅತಂತ್ರ ಸರಕಾರದಿಂದ ಯಾವ ಪ್ರಗತಿಯೂ ಸಾಧ್ಯವಿಲ್ಲ ಎನ್ನುವ ಸತ್ಯ ಅರಿವಾಗತೊಡಗಿತು. ಇದನ್ನು ಬಾಬಾ ಸಾಹೇಬರು ೭೫ ವರ್ಷಗಳ ಹಿಂದೆಯೇ ಅರಿತಿದ್ದರು. ಅವರು ಉಲ್ಲೇಖಿಸಿದ ಕೇಂದ್ರ ಮತ್ತು ರಾಜ್ಯದ ಸಂಬಂಧ, ಜಮ್ಮು ಕಾಶ್ಮೀರದ ಮುಕ್ತಿಯ ಪ್ರಸ್ತಾಪ (೩೭೦ನೇ ವಿಧಿಯ ಬಗ್ಗೆ) ಗಳೆಲ್ಲವೂ ಸಂವಿಧಾನದಲ್ಲಿ ಅಡಕವಾಗಿದೆ. ಸಂವಿಧಾನ ಜಾರಿಗೊಂಡು ೭೫ ವರ್ಷಗಳಲ್ಲಿ ದೇಶ ಕಂಡ ಏಳು ಬೀಳುಗಳು ಹಲವಾರು. ಆದರೆ ಪ್ರತೀ ಬಾರಿ ಬಿದ್ದಾಗಲೂ ನಮ್ಮ ಬಲಿಷ್ಟ ಸಂವಿಧಾನ ನಮ್ಮನ್ನು ಮತ್ತೆ ಪುಟಿದೇಳುವಂತೆ ಮಾಡಿದೆ. ಈ ಕಾರಣದಿಂದಲೇ ನಾವಿಂದು ಗಣರಾಜ್ಯೋತ್ಸವದ ಅಮೃತ ಪಥದಲ್ಲಿದ್ದೇವೆ.

ಈ ವರ್ಷ ಪಥ ಸಂಚಲನದ ಕಾರ್ಯಕ್ರಮದಲ್ಲಿ ಬಹಳಷ್ಟು ಹೊಸತನವಿದೆ. ಅವುಗಳೆಂದರೆ,

* ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿರುವ ಮಹಿಳಾ ಯೋಧರ ಮೊದಲ ಬಾರಿಯ ಭಾಗವಹಿಸುವಿಕೆ.

* ಗಣರಾಜ್ಯೋತ್ಸವದ ಈ ವರ್ಷದ ಅತಿಥಿಯಾಗಿರುವ ಪ್ರಾನ್ಸ್ ಅಧ್ಯಕ್ಷರಾದ ಇಮ್ಮಾನುಯಲ್ ಮ್ಯಾಕ್ರನ್ ಮತ್ತು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ೪೦ ವರ್ಷಗಳ ಬಳಿಕ ಕುದುರೆ ಸಾರೋಟಿನಲ್ಲಿ ರಾಷ್ಟ್ರಪತಿ ಭವನದಿಂದ ಕರ್ತವ್ಯ ಪಥಕ್ಕೆ ಆಗಮನ.

* ಭಾರತದ ಹೆಮ್ಮೆಯ ಸಂಗತಿ ಇಸ್ರೋದ ಚಂದ್ರಯಾನ ೩ರ ಯಶಸ್ಸನ್ನು ಪ್ರತಿಬಿಂಬಿಸುವ ಸ್ಥಬ್ಧ ಚಿತ್ರ.

* ಕೃತಕ ಬುದ್ಧಿಮತ್ತೆಯ ಬಳಕೆಯ ಕುರಿತಾದ ಸ್ಥಬ್ಧ ಚಿತ್ರ.

* ಪಥ ಸಂಚಲನದ ಪ್ರಾರಂಭದಲ್ಲಿ ಮಹಿಳಾ ಕಲಾವಿದರಿಂದ ಭಾರತೀಯ ಪಾರಂಪರಿಕ ವಾದ್ಯಗೋಷ್ಟಿ.

* ಫ್ರಾನ್ಸ್ ದೇಶದ ೯೫ ಯೋಧರ ತುಕಡಿ ಮತ್ತು ವಾದ್ಯ ವೃಂದದವರು ಪಥ ಸಂಚಲನದಲ್ಲಿ ಭಾಗಿ. ಇದರ ಜೊತೆ ಫ್ರಾನ್ಸ್ ದೇಶದಿಂದ ಖರೀದಿಸಲಾದ ಯುದ್ಧ ವಿಮಾನ ರಫೇಲ್ ಹಾರಾಟ. ಏರ್ ಬಸ್ ಎ೩೩೦ ಎಂಬ ಸರಕು ಸಾಗಣೆ ವಿಮಾನದ ಪ್ರದರ್ಶನ.

* ದೇಶೀಯವಾಗಿ ನಿರ್ಮಾಣಗೊಂಡ ತೇಜಸ್ ಯುದ್ಧ ವಿಮಾನದ ಪ್ರದರ್ಶನ ನಡೆಯಲಿದೆ.

(ಮಾಹಿತಿ ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ